
ಕಲ್ಯಾಣ (ಕಾಣದ) ಕರ್ನಾಟಕ: ಕಡತಗಳಲ್ಲೇ ಸಿಲುಕಿದ 830 ಕೋಟಿ ರೂ. ಅನುದಾನ
2025-26ನೇ ಸಾಲಿನಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾಮಗಾರಿಗಳ ಪ್ರಸ್ತಾವನೆಯನ್ನು ಸಮರ್ಪಕವಾಗಿ ಸಲ್ಲಿಕೆಯಾಗದ ಕಾರಣ ಜಿಲ್ಲಾಡಳಿತಗಳಿಗೆ ಮರುಪರಿಶೀಲಿಸುವಂತೆ ಕೆಕೆಆರ್‌ಡಿಬಿ ವಾಪಸ್ ಕಳುಹಿಸಿದೆ.
ಸಂವಿಧಾನದ 371ಜೆ ಪ್ರಕಾರ ವಿಶೇಷ ಸ್ಥಾನಮಾನಕ್ಕೆ ಪಾತ್ರವಾದ ಉತ್ತರ ಕರ್ನಾಟಕದ ಅತೀ ಹಿಂದುಳಿದ ಕಲ್ಯಾಣ ಕರ್ನಾಟಕ (ಹಿಂದಿನ ಹೈದರಾಬಾದ್ ಕರ್ನಾಟಕ) ಜಿಲ್ಲೆಗಳ ಭಾಗದ ಅಭಿವೃದ್ಧಿಗೆ ಹಣದ ಕೊರತೆಯಿಲ್ಲದಿದ್ದರೂ, ಆಡಳಿತಾತ್ಮಕ ಸಮಸ್ಯೆಯಿಂದಾಗಿ 830 ಕೋಟಿ ರೂ. ಅನುದಾನವು ಬಳಕೆಯಾಗಿಲ್ಲ!
ಅಷ್ಟೂ ಅನುದಾನದ ಮೊತ್ತ, ಕರ್ನಾಟಕ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿಯಲ್ಲಿಯೇ (ಕೆಕೆಆರ್‌ಡಿಬಿ) ಉಳಿದಿದ್ದು, ಅಭಿವೃದ್ಧಿಗಾಗಿ ಖರ್ಚಾಗದೇ ಇರುವುದು ಪರಿಸ್ಥಿತಿಗೆ ಹಿಡಿದಿ ಕೈಗನ್ನಡಿಯಾಗಿದೆ.
ಕೆಕೆಆರ್‌ಡಿಬಿ ಐದು ಸಾವಿರ ಕೋಟಿ ರೂ. ಲಭ್ಯವಿದ್ದರೂ, ಕೇವಲ ತಾಂತ್ರಿಕ ಕಾರಣ ಮತ್ತು ಅಧಿಕಾರಿಗಳ ವಿಳಂಬ ಧೋರಣೆಯಿಂದಾಗಿ ಈ ಬೃಹತ್ ಮೊತ್ತವು ಅರ್ಹ ಜಿಲ್ಲೆಗಳಿಗೆ ತಲುಪದೆ ಬಾಕಿ ಉಳಿದಿರುವುದು ಈ ಭಾಗದ ಏಳು ಜಿಲ್ಲೆಗಳ ಪ್ರಗತಿಗೆ ಹಿನ್ನಡೆಯಾಗಿ ಪರಿಣಮಿಸಿದೆ.
ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಾದ ಕಲಬುರಗಿ, ಬೀದರ್, ರಾಯಚೂರು, ಯಾದಗಿರಿ, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಅಭಿವೃದ್ಧಿ ಚಟುವಟಿಕೆಗಳಿಗೆ 2025-26ನೇ ಸಾಲಿನ ಬಜೆಟ್ ಮತ್ತು ಹಿಂದಿನ ಬಾಕಿ ಸೇರಿ ಕೆಕೆಆರ್‌ಡಿಬಿಗೆ ಐದು ಸಾವಿರ ಕೋಟಿ ರೂ. ಮೊತ್ತದ ಅನುದಾನ ಲಭ್ಯವಿದೆ. ಆದರೆ, ಪ್ರಸ್ತುತ ಮಾಹಿತಿಯಂತೆ 830 ಕೋಟಿ ರೂ.ಗೂ ಅಧಿಕ ಮೊತ್ತ ಮಂಡಳಿಯಲ್ಲೇ ಉಳಿದುಕೊಂಡಿದೆ. ಇದು ಹಣದ ಕೊರತೆಯಿಂದಾದ ಹಿನ್ನಡೆಯಲ್ಲ, ಬದಲಾಗಿ ಹಣವಿದ್ದರೂ ಬಳಸಲಾಗದ ಆಡಳಿತಾತ್ಮಕ ಸಮಸ್ಯೆಯಾಗಿದೆ.
ಪ್ರಸ್ತಾವನೆ ಸಲ್ಲಿಕೆಯಲ್ಲಿ ನಿರ್ಲಕ್ಷ್ಯ ಧೋರಣೆ
ಮಂಡಳಿಯು ಹಣ ಬಿಡುಗಡೆ ಮಾಡಲು ಆಯಾ ಕ್ಷೇತ್ರದ ಶಾಸಕರು ಮತ್ತು ಉಸ್ತುವಾರಿ ಸಚಿವರು ವೈಜ್ಞಾನಿಕವಾದ ಕ್ರಿಯಾ ಯೋಜನೆಯನ್ನು ಸಲ್ಲಿಸುವುದು ಕಡ್ಡಾಯ. ಆದರೆ ಅನೇಕ ಶಾಸಕರು ತಮ್ಮ ಕ್ಷೇತ್ರಗಳ ನೈಜ ಅಗತ್ಯತೆಗಳನ್ನು ಗುರುತಿಸಿ ಪ್ರಸ್ತಾವನೆ ಸಲ್ಲಿಸುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ 2025-26ನೇ ಸಾಲಿನಲ್ಲಿ ಕೈಗೊಳ್ಳಬೇಕಾದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಸಲ್ಲಿಸಲಾದ ಪ್ರಸ್ತಾವನೆಗಳನ್ನು ಕೆಕೆಆರ್‌ಡಿಬಿ ಜಿಲ್ಲಾಡಳಿತಗಳಿಗೆ ಮರುಪರಿಶೀಲಿಸುವಂತೆ ವಾಪಸ್ ಕಳುಹಿಸಿದೆ. ಈ ಪ್ರಕ್ರಿಯೆಯು ಅಭಿವೃದ್ಧಿ ವೇಗಕ್ಕೆ ತಡೆಯೊಡ್ಡಿದೆ. ಆಯಾ ಕ್ಷೇತ್ರದ ಶಾಸಕರು ಮತ್ತು ಉಸ್ತುವಾರಿ ಸಚಿವರು ಸೂಕ್ತವಾದ ಕ್ರಿಯಾ ಯೋಜನೆಯನ್ನು ಸಕಾಲದಲ್ಲಿ ರೂಪಿಸಿ ಸಲ್ಲಿಸದಿರುವುದು ಒಂದು ಪ್ರಮುಖ ಕಾರಣವಾಗಿದೆ. ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಹಣವಿದ್ದರೂ ಅದನ್ನು ಬಳಸಲು ಸಾಧ್ಯವಾಗುತ್ತಿಲ್ಲ ಎಂಬ ಟೀಕೆ ಕೇಳಿಬರುತ್ತಿದೆ. ಜಿಲ್ಲಾಡಳಿತಗಳು ಸಲ್ಲಿಸುವ ಪ್ರಸ್ತಾವನೆಗಳಿಗೆ ಮಂಡಳಿಯು ನಾನಾ ತಾಂತ್ರಿಕ ಪ್ರಶ್ನೆಗಳನ್ನು ಎತ್ತುತ್ತಿದೆ. ಉದಾಹರಣೆಗೆ, ಅಂಗನವಾಡಿ, ಶಾಲಾ ಕಟ್ಟಡಗಳ ನಿರ್ಮಾಣ, ಹೆಚ್ಚುವರಿ ಕೊಠಡಿಗಳ ನಿರ್ಮಾಣದಂತಹ ಅತ್ಯಗತ್ಯ ಕಾಮಗಾರಿಗಳಿಗೂ 'ಇ-ಖಾತಾ' ಅಥವಾ 'ಯುಡಿಐಎಸ್‌ಇ' ಸಂಖ್ಯೆಯಂತಹ ದಾಖಲೆಗಳನ್ನು ಕೇಳುತ್ತಿರುವುದು ವಿಳಂಬಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ.
ಕೇವಲ ಸಮುದಾಯ ಭವನ ಅಥವಾ ವೈಯಕ್ತಿಕ ಲಾಭದ ಸಣ್ಣಪುಟ್ಟ ಕೆಲಸಗಳಿಗೆ ಆದ್ಯತೆ ನೀಡುವ ಶಾಸಕರು, ಶಿಕ್ಷಣ ಮತ್ತು ಆರೋಗ್ಯದಂತಹ ಮೂಲಭೂತ ಕ್ಷೇತ್ರಗಳಿಗೆ ಒತ್ತು ನೀಡುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರ ನಡುವಿನ ಸಮನ್ವಯದ ಕೊರತೆಯಿಂದಾಗಿ ಕ್ರಿಯಾ ಯೋಜನೆಗಳು ವಿಳಂಬವಾಗುತ್ತಿವೆ. ಇದು ಅಂತಿಮವಾಗಿ ಅನುದಾನದ ಮೇಲೆ ತಡೆ ಉಂಟುಮಾಡಿದೆ ಎಂಬ ಆರೋಪಗಳು ಸಹ ಕೇಳಿಬಂದಿವೆ.
ಅಭಿವೃದ್ಧಿ ಕಾಮಗಾರಿಗಳ ಮೇಲಿನ ಪರಿಣಾಮ
ಅನುದಾನ ಬಿಡುಗಡೆಯಾಗದ ಕಾರಣ ಹಲವು ಕಾಮಗಾರಿಗಳ ಮೇಲೆ ಪರಿಣಾಮ ಬೀರಿವೆ. ಶಾಲಾ ಕಟ್ಟಡಗಳ ನಿರ್ಮಾಣ, ಹೆಚ್ಚುವರಿ ಕೊಠಡಿಗಳು ಮತ್ತು ಅಂಗನವಾಡಿಗಳಂತಹ ಅತ್ಯಗತ್ಯ ಕಾಮಗಾರಿಗಳಿಗೂ ಮಂಡಳಿಯು ತಾಂತ್ರಿಕ ಪ್ರಶ್ನೆಗಳನ್ನು ಎತ್ತುತ್ತಿದೆ. ಗಣಕಯಂತ್ರಗಳ ಖರೀದಿ ಅಥವಾ ಕಾಂಕ್ರೀಟ್ ರಸ್ತೆ ನಿರ್ಮಾಣದಂತಹ ಸಾಮಾನ್ಯ ಪ್ರಸ್ತಾವನೆಗಳಿಗೂ ಹತ್ತು ಹಲವು ತಕರಾರುಗಳನ್ನು ತೆಗೆಯುವುದು ಅಭಿವೃದ್ಧಿ ವಿರೋಧಿ ಧೋರಣೆಯಂತೆ ಕಂಡುಬರುತ್ತಿದೆ. ಗ್ರಾಮೀಣ ಭಾಗದ ಶಾಲೆಗಳಿಗೆ ಒದಗಿಸಬೇಕಾದ ಪ್ರಯೋಗಾಲಯ ಮತ್ತು ಪೀಠೋಪಕರಣಗಳ ಪ್ರಸ್ತಾವನೆಗಳು ಕಡತಗಳಲ್ಲಿ ಸಿಲುಕಿವೆ. ಕಾಂಕ್ರೀಟ್ ರಸ್ತೆಗಳ ನಿರ್ಮಾಣ ಮತ್ತು ಸಮುದಾಯ ಭವನಗಳ ನಿರ್ಮಾಣಕ್ಕೆ ಮಂಡಳಿಯು ತಾಂತ್ರಿಕ ಕಾರಣ ನೀಡಿ ತಡೆ ಹಿಡಿದಿದೆ. ಅಂಗನವಾಡಿಗಳ ನಿರ್ಮಾಣವು ಮಕ್ಕಳು ಮತ್ತು ಗರ್ಭಿಣಿಯರ ಪೌಷ್ಟಿಕಾಂಶದ ಮೇಲೆ ನೇರ ಪರಿಣಾಮ ಬೀರುತ್ತದೆ. ಇಂತಹ ಸೂಕ್ಷ್ಮ ಯೋಜನೆಗಳಿಗೂ ಮರುಪರಿಶೀಲನೆಯ ಪತ್ರ ಬರೆಯುತ್ತಿರುವುದು ಆಡಳಿತಾತ್ಮಕ ಅಸೂಕ್ಷ್ಮತೆಯನ್ನು ತೋರಿಸುತ್ತದೆ ಎನ್ನಲಾಗಿದೆ.
ಸಾಮಾಜಿಕ - ಆರ್ಥಿಕ ಪರಿಣಾಮಗಳು
ಅನುದಾನ ಬಳಕೆಯಾಗದೆ ಉಳಿದಿರುವುದರಿಂದ ಈ ಭಾಗದ ಜನರ ಜೀವನಮಟ್ಟದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಕಲ್ಯಾಣ ಕರ್ನಾಟಕದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಫಲಿತಾಂಶಗಳು ರಾಜ್ಯದ ಇತರ ಭಾಗಗಳಿಗಿಂತ ಕಡಿಮೆ ಇರಲು ಮೂಲಭೂತ ಸೌಕರ್ಯಗಳ ಕೊರತೆಯೇ ಮುಖ್ಯ ಕಾರಣವಾಗಿದೆ. ಶಾಲಾ ಕೊಠಡಿಗಳಿಲ್ಲದೆ ಮಕ್ಕಳು ಮರದ ಕೆಳಗೆ ಕುಳಿತು ಕಲಿಯುವ ಪರಿಸ್ಥಿತಿ ಇರುವಾಗ, 830 ಕೋಟಿ ರೂ. ಬ್ಯಾಂಕಿನಲ್ಲಿ ಉಳಿದಿರುವುದು ದುರದೃಷ್ಟಕರ. ಆರೋಗ್ಯ ಕೇಂದ್ರಗಳ ಆಧುನೀಕರಣಕ್ಕೆ ಹಣ ಬಳಕೆಯಾಗದ ಕಾರಣ, ಬಡ ಜನರು ಚಿಕಿತ್ಸೆಗಾಗಿ ನೆರೆಯ ತೆಲಂಗಾಣ ಅಥವಾ ಮಹಾರಾಷ್ಟ್ರದ ನಗರಗಳಿಗೆ ಹೋಗುವಂತಾಗಿದೆ. ಗ್ರಾಮೀಣ ಭಾಗದಲ್ಲಿ ರಸ್ತೆ, ನೀರು ಮತ್ತು ಉದ್ಯೋಗ ಸೃಷ್ಟಿಯ ಕಾಮಗಾರಿಗಳು ನಡೆಯದ ಕಾರಣ, ಯುವಜನತೆ ಬೆಂಗಳೂರು ಅಥವಾ ಪುಣೆಯಂತಹ ನಗರಗಳಿಗೆ ವಲಸೆ ಹೋಗುವುದು ನಿಂತಿಲ್ಲ ಎಂಬುದು ಕಲ್ಯಾಣ ಕರ್ನಾಟಕ ಭಾಗದ ಜನತೆಯ ನೋವಾಗಿದೆ.
ಸಂವಿಧಾನದ ವಿಶೇಷ ಸ್ಥಾನಮಾನದ ಮುಖ್ಯ ಉದ್ದೇಶವೇ ಹಿಂದುಳಿದಿರುವಿಕೆಯನ್ನು ನೀಗಿಸುವುದು. ಆದರೆ, ಕೆಕೆಆರ್‌ಡಿಬಿ ಕೇವಲ ಒಂದು ಆಡಳಿತಾತ್ಮಕ ಕಚೇರಿಯಾಗಿ ಉಳಿದಿದೆಯೇ ಹೊರತು, ಬದಲಾವಣೆಯ ಕೇಂದ್ರವಾಗಿ ಕೆಲಸ ಮಾಡುತ್ತಿಲ್ಲ. ಪ್ರಸ್ತಾವನೆಗಳನ್ನು ಸಾರಾಸಗಟಾಗಿ ತಿರಸ್ಕರಿಸುವುದು ಅಥವಾ ಅನಗತ್ಯವಾಗಿ ಮರುಪರಿಶೀಲನೆಗೆ ಕಳುಹಿಸುವುದು ಈ ಭಾಗದ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ದ ಫೆಡರಲ್ ಕರ್ನಾಟಕಕ್ಕೆ ಸ್ಥಳೀಯ ಹೋರಾಟಗಾರ ನೀಲಕಂಠ ಕುಲಕರ್ಣಿ ಹೇಳಿದ್ದಾರೆ.
ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್ ಸಿಂಗ್ ಮಾತನಾಡಿ, ಹಣ ದುರ್ಬಳಕೆಯಾಗಬಾರದು ಎಂಬ ಕಾರಣಕ್ಕೆ ಪ್ರತಿ ಯೋಜನೆಯನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದೆ. ಈ ಪರಿಶೀಲನೆಯು ವಿಳಂಬ ನೀತಿಯಾಗಿ ಬದಲಾಗಬಾರದು ಎಂಬುದು ಸಹ ನಮ್ಮ ಕಳಕಳಿಯಾಗಿದೆ. ಆದರೆ ಶಾಸಕರು ಸಲ್ಲಿಕೆ ಮಾಡುವ ಪ್ರಸ್ತಾವನೆ ಕ್ರಮಬದ್ಧವಾಗಿ ಇರುವುದು ಮುಖ್ಯವಾಗಿರುತ್ತದೆ. ಸರಿಯಾದ ಪ್ರಸ್ತಾವನೆ ಇಲ್ಲದಿರುವ ಕಾರಣ ಮತ್ತೊಮ್ಮೆ ಸಲ್ಲಿಕೆಗೆ ಅವಕಾಶ ಸಲ್ಲಿಕೆಗೆ ತಿಳಿಸಲಾಗಿದೆ ಎಂದರು.
ಲೋಪದೋಷಗಳನ್ನು ಸರಿಪಡಿಸಬೇಕು
ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಮೀಸಲಿಟ್ಟ ಹಣವು ಆರ್ಥಿಕ ವರ್ಷದ ಅಂತ್ಯದೊಳಗೆ ಬಳಕೆಯಾಗದಿದ್ದರೆ, ಅದು ವ್ಯರ್ಥವಾಗಲಿದೆ ಅಥವಾ ಮುಂದಿನ ವರ್ಷಕ್ಕೆ ವರ್ಗಾವಣೆಯಾಗುವ ಸಾಧ್ಯತೆಯಿರುತ್ತದೆ. ಇದು ಪ್ರಗತಿಯ ವೇಗವನ್ನು ಕುಂಠಿತಗೊಳಿಸುತ್ತದೆ. ಈ ಕುರಿತು ದ ಫೆಡರಲ್ ಕರ್ನಾಟಕ ಜತೆ ಮಾತನಾಡಿದ ಶಾಸಕ ಶರಣಗೌಡ ಕಂದಕೂರು, ಮಂಡಳಿಯು ನಿಯಮಗಳನ್ನು ಸರಳಗೊಳಿಸಬೇಕಿದೆ. ಗ್ರಾಮೀಣ ಭಾಗದ ನೈಜ ಪರಿಸ್ಥಿತಿಯನ್ನು ಅರಿತು ತಾಂತ್ರಿಕ ದಾಖಲೆಗಳ ಸಲ್ಲಿಕೆಯಲ್ಲಿ ರಿಯಾಯಿತಿ ಅಥವಾ ಪರ್ಯಾಯ ಮಾರ್ಗಗಳನ್ನು ಹುಡುಕಬೇಕು. ಜಿಲ್ಲಾಧಿಕಾರಿಗಳು ಮತ್ತು ಕೆಕೆಆರ್‌ಡಿಬಿ ಅಧಿಕಾರಿಗಳ ನಡುವೆ ಸಮನ್ವಯದ ಕೊರತೆಯಿದೆ. ಬಾಕಿ ಇರುವ ಪ್ರಸ್ತಾವನೆಗಳನ್ನು ವಿಲೇವಾರಿ ಮಾಡಲು ಪ್ರತಿ ಜಿಲ್ಲೆಯಲ್ಲಿ ವಿಶೇಷ ಅದಾಲತ್ ಅಥವಾ ಸಭೆಗಳನ್ನು ಆಯೋಜಿಸಬೇಕು. ಪ್ರಸ್ತಾವನೆ ಸಲ್ಲಿಸಿದ ಎಷ್ಟು ದಿನಗಳಲ್ಲಿ ಅನುಮೋದನೆ ನೀಡಬೇಕು ಎಂಬ ಬಗ್ಗೆ ಕಾಲಮಿತಿಯನ್ನು ನಿಗದಿಪಡಿಸಬೇಕು. ಇಲ್ಲದಿದ್ದರೆ ಅಧಿಕಾರಿಗಳ ವಿಳಂಬ ಧೋರಣೆಗೆ ಅಂತ್ಯವಿರುವುದಿಲ್ಲ ಎಂದು ತಿಳಿಸಿದರು.
ಜಿಲ್ಲಾಡಳಿತಗಳು ಸಲ್ಲಿಸುವ ಪ್ರಸ್ತಾವನೆಗಳಿಗೆ ಕೆಕೆಆರ್‌ಡಿಬಿಯು ಗರಿಷ್ಠ 15 ದಿನಗಳಲ್ಲಿ ತಾಂತ್ರಿಕ ಅನುಮೋದನೆ ನೀಡಬೇಕು. ಪದೇ ಪದೇ ಮರುಪರಿಶೀಲನೆಗೆ ಕಳುಹಿಸುವ ಪದ್ಧತಿಗೆ ಅಂತ್ಯ ಹಾಡಬೇಕು. ಮುಖ್ಯಮಂತ್ರಿಗಳು ಅಥವಾ ಪ್ರಾದೇಶಿಕ ಆಯುಕ್ತರು ತುರ್ತು ಸಭೆ ಕರೆದು, ಬಾಕಿ ಇರುವ 830 ಕೋಟಿ ರೂ.ಗಳನ್ನು ಮುಂದಿನ 3-4 ತಿಂಗಳೊಳಗೆ ಕಾಮಗಾರಿಗಳಿಗೆ ಬಿಡುಗಡೆ ಮಾಡಲು ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಮಂಡಳಿಯಲ್ಲಿ ತಾಂತ್ರಿಕ ಪರಿಶೀಲನೆ ನಡೆಸಲು ಸಿಬ್ಬಂದಿ ಕೊರತೆಯಿದ್ದರೆ, ಅದನ್ನು ತಕ್ಷಣ ಭರ್ತಿ ಮಾಡಿ ಕಡತಗಳ ವಿಲೇವಾರಿ ವೇಗಗೊಳಿಸಬೇಕು ಎಂದು ಆಗ್ರಹಿಸಿದರು.
371ಜೆ ವಿಶೇಷ ಸ್ಥಾನಮಾನದ ಉದ್ದೇಶ
ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಾದ ಕಲಬುರಗಿ, ಬೀದರ್, ರಾಯಚೂರು, ಯಾದಗಿರಿ, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಸರ್ವತೋಮುಖ ಅಭಿವೃದ್ಧಿಗಾಗಿ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಸ್ಥಾಪನೆ ಮಾಡಲಾಯಿತು. ಸಂವಿಧಾನದ 371ಜೆ ಅಡಿ ವಿಶೇಷ ಸ್ಥಾನಮಾನ ಕಲ್ಪಿಸಲಾಗಿದೆ. ದಶಕಗಳ ಕಾಲದ ಹೋರಾಟದ ಫಲವಾಗಿ, 2012ರಲ್ಲಿ ಸಂವಿಧಾನಕ್ಕೆ 118ನೇ ತಿದ್ದುಪಡಿ ತರುವ ಮೂಲಕ 371(ಜೆ) ವಿಧಿಯನ್ನು ಸೇರಿಸಲಾಯಿತು.
ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಂಸ್ಥೆಗಳಲ್ಲಿ ಮೀಸಲಾತಿ ನೀಡುವುದು ಮತ್ತು ಹೊಸ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಅವಕಾಶ ಕಲ್ಪಿಸಲಾಗಿದೆ. ಸರ್ಕಾರಿ ಉದ್ಯೋಗಗಳಲ್ಲಿ ಈ ಭಾಗದ ಅಭ್ಯರ್ಥಿಗಳಿಗೆ ವಿಶೇಷ ಮೀಸಲಾತಿ ನೀಡುವುದು. ಇದರಿಂದ ಸ್ಥಳೀಯ ಯುವಕರಿಗೆ ಉದ್ಯೋಗ ಭದ್ರತೆ ಸಿಗುತ್ತದೆ. ಈ ಭಾಗದಲ್ಲಿ ಕೈಗಾರಿಕೆಗಳು ಮತ್ತು ಉದ್ಯಮಗಳನ್ನು ಪ್ರೋತ್ಸಾಹಿಸುವ ಮೂಲಕ ಬಡತನ ನಿರ್ಮೂಲನೆ ಮಾಡುವುದು ಇದರ ಉದ್ದೇಶವಾಗಿದೆ.

