ಕಲ್ಯಾಣ ಕರ್ನಾಟಕಕ್ಕೆ ಮತ್ತಷ್ಟು ಪೊಲೀಸ್ ಪವರ್​!:  ರಾಯಚೂರಿನಲ್ಲಿ ಹೊಸ ಕೆಎಸ್‌ಆರ್‌ಪಿ ಪಡೆ ಸ್ಥಾಪನೆ
x

ಕಲ್ಯಾಣ ಕರ್ನಾಟಕಕ್ಕೆ ಮತ್ತಷ್ಟು ಪೊಲೀಸ್ ಪವರ್​!: ರಾಯಚೂರಿನಲ್ಲಿ ಹೊಸ ಕೆಎಸ್‌ಆರ್‌ಪಿ ಪಡೆ ಸ್ಥಾಪನೆ

ಕೆಎಸ್‌ಆರ್‌ಪಿ ಪಡೆ ಸ್ಥಾಪನೆಗಾಗಿ 175 ಎಕರೆ ವಿಶಾಲವಾದ ಭೂಮಿಯನ್ನು ಗುರುತಿಸಲಾಗಿದೆ. ದ್ದು, ಕಟ್ಟಡ ನಿರ್ಮಾಣ ಮತ್ತು ಇತರ ವೆಚ್ಚಗಳಿಗಾಗಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ವತಿಯಿಂದ ಅನುದಾನ ನೀಡಲು ಸಿದ್ಧ ಎಂದು ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ.


Click the Play button to hear this message in audio format

ರಾಯಚೂರು ಜಿಲ್ಲೆಯ ಭದ್ರತೆ ಮತ್ತು ಕಾನೂನು ಸುವ್ಯವಸ್ಥೆಯನ್ನು ಬಲಪಡಿಸುವ ದೃಷ್ಟಿಯಿಂದ ಜಿಲ್ಲೆಯಲ್ಲಿ ಹೊಸದಾಗಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (ಕೆಎಸ್‌ಆರ್‌ಪಿ) ಪಡೆಯನ್ನು ಸ್ಥಾಪಿಸುವ ಪ್ರಸ್ತಾವನೆ ಸರ್ಕಾರದ ಮುಂದಿದೆ. ಕಲ್ಯಾಣ ಕರ್ನಾಟಕ ಭಾಗದ ಜನರ ಬಹುಕಾಲದ ಬೇಡಿಕೆಯಾದ ಈ ಯೋಜನೆಯು ಈಗ ಆರ್ಥಿಕ ಇಲಾಖೆಯ ಅನುಮೋದನೆಯ ಹಂತದಲ್ಲಿದೆ. ಈ ಬಗ್ಗೆ ವಿಧಾನಸಭೆಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದ್ದು, ಪ್ರಸ್ತಾಪ ಸರ್ಕಾರ ಮುಂದೆ ಪರಿಶೀಲನೆಯಲ್ಲಿದೆ ಎಂದು ತಿಳಿಸಿದರು.

ಮಸ್ಕಿ ಕ್ಷೇತ್ರದ ಶಾಸಕ ಬಸನಗೌಡ ತುರುವಿಹಾಳ್ ರಾಯಚೂರು ಜಿಲ್ಲೆಯಲ್ಲಿ ಕೆ.ಎಸ್.ಆರ್.ಪಿ ಪಡೆಯ ಅಗತ್ಯತೆ ಕುರಿತು ಸದನದಲ್ಲಿ ಪ್ರಸ್ತಾಪಿಸಿದರು. ಕಲ್ಯಾಣ ಕರ್ನಾಟಕ ಭಾಗವು ಭೌಗೋಳಿಕವಾಗಿ ವಿಸ್ತಾರವಾಗಿದ್ದು, ಇಲ್ಲಿನ ಭದ್ರತಾ ಸವಾಲುಗಳನ್ನು ಎದುರಿಸಲು ಪ್ರತ್ಯೇಕ ಪಡೆಯ ಅಗತ್ಯವಿದೆ ಎಂದು ತಿಳಿಸಿದರು. ಈ ಬೇಡಿಕೆಗೆ ಪೂರಕವಾಗಿ ರಾಯಚೂರು ಭಾಗದ ಸುಮಾರು 30 ಶಾಸಕರು ಒಮ್ಮತದಿಂದ ಸಹಿ ಮಾಡಿದ ಮನವಿಯನ್ನು ಈಗಾಗಲೇ ಗೃಹ ಸಚಿವರಿಗೆ ಸಲ್ಲಿಸಲಾಗಿದೆ. ಯೋಜನೆಗಾಗಿ ಅಗತ್ಯವಿರುವ ಮೂಲಸೌಕರ್ಯಗಳ ಲಭ್ಯ ಇದೆ. ಕೆಎಸ್‌ಆರ್‌ಪಿ ಪಡೆ ಸ್ಥಾಪನೆಗಾಗಿ ಸುಮಾರು 175 ಎಕರೆ ವಿಶಾಲವಾದ ಭೂಮಿಯನ್ನು ಗುರುತಿಸಲಾಗಿದ್ದು, ಕಟ್ಟಡ ನಿರ್ಮಾಣ ಮತ್ತು ಇತರ ವೆಚ್ಚಗಳಿಗಾಗಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ವತಿಯಿಂದ ಅನುದಾನ ನೀಡಲು ಸಿದ್ಧರಿರುವುದಾಗಿ ತಿಳಿಸಿದರು.

ಡ್ಯಾಮ್​​ಗಳಿಗೆ ಕಾವಲು ಹೆಚ್ಚಳ

ಜಿಲ್ಲೆಯಲ್ಲಿ ಕೃಷ್ಣಾ ಮತ್ತು ತುಂಗಭದ್ರಾ ನದಿಗಳಿಗೆ ನಿರ್ಮಿಸಲಾದ ಪ್ರಮುಖ ಅಣೆಕಟ್ಟುಗಳಿವೆ. ಇವುಗಳ ಸುರಕ್ಷತೆಯ ದೃಷ್ಟಿಯಿಂದ ನಿರಂತರ ಕಾವಲು ಅತ್ಯಗತ್ಯ ಇದೆ. ರಾಯಚೂರು ಜಿಲ್ಲೆಯು ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತೆಲಂಗಾಣದೊಂದಿಗೆ ಗಡಿಯನ್ನು ಹಂಚಿಕೊಂಡಿದೆ. ಗಡಿ ಭಾಗದಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳ ತಡೆಗೆ ಕೆಎಸ್ಆರ್‌ಪಿ ಪಡೆ ಸಹಕಾರಿಯಾಗಲಿದೆ. ನೈಸರ್ಗಿಕ ವಿಕೋಪಗಳು ಅಥವಾ ಕಾನೂನು ಸುವ್ಯವಸ್ಥೆ ಹದಗೆಟ್ಟ ಸಂದರ್ಭದಲ್ಲಿ ಸ್ಥಳೀಯ ಪೊಲೀಸರಿಗೆ ಬೆಂಬಲ ನೀಡಲು ಮೀಸಲು ಪಡೆ ಧಾವಿಸಬಹುದಾಗಿದೆ. ಅಲ್ಲದೇ, ಮಂತ್ರಾಲಯದಂತಹ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಿದ್ದು, ಇಲ್ಲಿಗೆ ಪ್ರತಿನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಾರೆ. ಜನದಟ್ಟಣೆಯ ನಿಯಂತ್ರಣ ಮತ್ತು ಭದ್ರತೆಗೆ ಮೀಸಲು ಪಡೆಯ ಅಗತ್ಯವಿದೆ ಎಂದು ಆಗ್ರಹಿಸಿದರು.

ಶಾಸಕರ ಪ್ರಶ್ನೆಗೆ ಉತ್ತರಿಸಿದ ಸಚಿವ ಡಾ. ಜಿ. ಪರಮೇಶ್ವರ್, ಪ್ರಸ್ತುತ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ 12 ಕೆ.ಎಸ್.ಆರ್.ಪಿ ಪಡೆಗಳು ಕಾರ್ಯನಿರ್ವಹಿಸುತ್ತಿವೆ. ರಾಯಚೂರು ಭಾಗದ ಶಾಸಕರ ಮನವಿ ಮತ್ತು ಜಿಲ್ಲೆಯ ಭೌಗೋಳಿಕ ಪ್ರಾಮುಖ್ಯತೆಯನ್ನು ಪರಿಗಣಿಸಿ, ಈಗಾಗಲೇ ಗೃಹ ಇಲಾಖೆಯು ವಿಸ್ತೃತ ಪ್ರಸ್ತಾವನೆಯನ್ನು ಸಿದ್ಧಪಡಿಸಿ ಆರ್ಥಿಕ ಇಲಾಖೆಗೆ ರವಾನಿಸಿದೆ. ಆರ್ಥಿಕ ಇಲಾಖೆಯು ಈ ಯೋಜನೆಯ ಆರ್ಥಿಕ ಹೊರೆ ಮತ್ತು ಅಗತ್ಯತೆಯನ್ನು ಪರಿಶೀಲಿಸಿ ಅನುಮೋದನೆ ನೀಡಿದ ತಕ್ಷಣ, ಕೆ.ಎಸ್.ಆರ್.ಪಿ ಪಡೆಯ ಸ್ಥಾಪನೆಗೆ ಅಧಿಕೃತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

Read More
Next Story