
Karnataka Budget 2026| ಅಸಮಾನತೆಯ ಸುಳಿಯಲ್ಲಿ ʼಉತ್ತರʼ ; ತಾರತಮ್ಯಕ್ಕೆ ಸಿಗಲಿದೆಯೇ ಪರಿಹಾರ?
ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಾವಿರಾರು ಕೋಟಿ ರೂ. ಘೋಷಣೆಯಾಗುತ್ತದೆ. ಆದರೆ, ಈ ಘೋಷಣೆಗಳು ಕೇವಲ ಅಂಕಿ-ಅಂಶಗಳಾಗಿ ಉಳಿಯುತ್ತಿವೆಯೇ ಹೊರತು ಅದರ ಪ್ರತಿಫಲ ಕಾಣಿಸುತ್ತಿಲ್ಲ ಎಂಬುದು ಈ ಭಾಗದ ಜನರ ಆರೋಪವಾಗಿದೆ.
ರಾಜ್ಯದ ಭೂಭಾಗದಲ್ಲಿ ಅರ್ಧಕ್ಕಿಂತ ಹೆಚ್ಚು ಪಾಲು ಹೊಂದಿರುವ ಉತ್ತರ ಕರ್ನಾಟಕವು ದಶಕಗಳಿಂದಲೂ ಪ್ರಾದೇಶಿಕ ಅಸಮಾನತೆಯ ಸುಳಿಯಲ್ಲಿ ಸಿಲುಕಿದೆ. ಪ್ರತಿ ಬಾರಿ ಬಜೆಟ್ ಮಂಡನೆಯಾದಾಗಲೂ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸರ್ಕಾರ, ಸಾವಿರಾರು ಕೋಟಿ ಅನುದಾನ ಘೋಷಿಸುತ್ತದೆ. ಆದರೆ, ಆ ಘೋಷಣೆಗಳು ಅಂಕಿ-ಅಂಶಗಳಾಗಿ ಉಳಿಯುತ್ತಿವೆಯೇ ಹೊರತು ಕಾರ್ಯರೂಪಕ್ಕೆ ಬರುವುದಿಲ್ಲ.
ಡಾ. ಡಿ.ಎಂ. ನಂಜುಂಡಪ್ಪ ವರದಿ ಜಾರಿಗೊಳಿಸಿ ಎರಡು ದಶಕ ಕಳೆದರೂ ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕದ ಜಿಲ್ಲೆಗಳು ಅಭಿವೃದ್ಧಿ ಸೂಚ್ಯಂಕದಲ್ಲಿ ಇಂದಿಗೂ ಹಿಂದುಳಿದಿವೆ. 2023-24 ಮತ್ತು 2024-25ರ ಆಯವ್ಯಯಗಳಲ್ಲಿ ಉತ್ತರ ಕರ್ನಾಟಕಕ್ಕೆ ಹತ್ತಾರು ಯೋಜನೆಗಳನ್ನು ಪ್ರಕಟಿಸಿತ್ತು. ಕಳೆದ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ವರ್ಷಕ್ಕೆ 5 ಸಾವಿರ ಕೋಟಿ ರೂ. ನೀಡುವುದಾಗಿ ಹೇಳಿದ್ದರು.
ಧಾರವಾಡ-ಬೆಳಗಾವಿ ರೈಲ್ವೆ ಯೋಜನೆ ಮತ್ತು ಕೈಗಾರಿಕಾ ಕಾರಿಡಾರ್‌ಗಳಿಗೆ ಹಣ ಮೀಸಲಿಡಲಾಗಿತ್ತು. ಆದರೆ, ಹಣ ಬಿಡುಗಡೆಯಾದರೂ ಬಳಕೆ ಆಗಿರಲಿಲ್ಲ. ಮೂಲಗಳ ಪ್ರಕಾರ, ಕಲ್ಯಾಣ ಕರ್ನಾಟಕಕ್ಕೆ ಘೋಷಿಸಿದ 5 ಸಾವಿರ ಕೋಟಿ ರೂ.ಗಳಲ್ಲಿ ವರ್ಷದ ಅಂತ್ಯದ ವೇಳೆಗೆ ಬಿಡುಗಡೆಯಾಗುವುದು ಶೇ. 60 ರಿಂದ 70ರಷ್ಟು ಮಾತ್ರ. ಅದರಲ್ಲಿಯೂ ತಾಂತ್ರಿಕ ಕಾರಣ, ಕ್ರಿಯಾ ಯೋಜನೆ ಅನುಮೋದನೆ ವಿಳಂಬ ಮತ್ತು ಆಡಳಿತಾತ್ಮಕ ಅಡೆತಡೆಗಳಿಂದಾಗಿ ವಾಸ್ತವವಾಗಿ ಖರ್ಚಾಗುವ ಮೊತ್ತ ಶೇ. 50ಕ್ಕಿಂತ ಕಡಿಮೆ ಇರುತ್ತದೆ. ಕಳೆದ ವರ್ಷದ ಅಂಕಿ-ಅಂಶ ಗಮನಿಸಿದರೆ, ಕಲ್ಯಾಣ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಶೇ.40ರಷ್ಟು ಅನುದಾನ ಮಾತ್ರ ಬಳಕೆಯಾಗಿದೆ ಎಂಬ ಆರೋಪಗಳಿವೆ. ಇದಕ್ಕೆ ಮುಖ್ಯ ಕಾರಣ ಎಂಜಿನಿಯರ್‌ಗಳ ಕೊರತೆ, ಗುತ್ತಿಗೆದಾರರ ವಿಳಂಬ ನೀತಿ ಎಂದು ಹೇಳಲಾಗಿದೆ.
ಉತ್ತರ ಕರ್ನಾಟಕದ ನಿರೀಕ್ಷೆಗಳು
ಕಿತ್ತೂರು ಕರ್ನಾಟಕ ಭಾಗವಾದ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಬಾಗಲಕೋಟೆ, ವಿಜಯಪುರ ಜಿಲ್ಲೆಯ ಜನರಿಗೆ ಈ ಬಜೆಟ್‌ನಲ್ಲಿ ಬೆಟ್ಟದಷ್ಟು ನಿರೀಕ್ಷೆಗಳಿವೆ. ಮಹದಾಯಿ (ಕಳಸಾ-ಬಂಡೂರಿ) ಯೋಜನೆಗೆ ಈ ಬಾರಿ ಹೆಚ್ಚಿನ ಅನುದಾನದ ನಿರೀಕ್ಷೆ ಇದೆ. ಅಲ್ಲದೇ, ಕೇಂದ್ರ ಸರ್ಕಾರದ ಒಪ್ಪಿಗೆ ನಂತರ ಕಾಮಗಾರಿ ಆರಂಭಿಸಲು ತುರ್ತು ಹಣದ ಅವಶ್ಯಕತೆ ಇದೆ. ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿಯನ್ನು ಅಂತಾರಾಷ್ಟ್ರೀಯ ಮಟ್ಟದ ಕೈಗಾರಿಕಾ ಹಬ್‌ಗಳಾಗಿ ರೂಪಿಸಲು ವಿಶೇಷ ಪ್ಯಾಕೇಜ್ ನಿರೀಕ್ಷಿಸಲಾಗಿದೆ.
ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸುವ ಮತ್ತು ಭೂಸ್ವಾಧೀನ ಪ್ರಕ್ರಿಯೆಗೆ ಕನಿಷ್ಠ 10ಸಾವಿರ ಕೋಟಿ ರೂಪಾಯಿಗಳ ತುರ್ತು ಅಗತ್ಯವಿದೆ. ಇದನ್ನು ಸರ್ಕಾರ ಹೇಗೆ ಸರಿದೂಗಿಸುತ್ತದೆ ಎಂಬುದು ಕುತೂಹಲ ಮೂಡಿಸಿದೆ. ಬಾದಾಮಿ, ಐಹೊಳೆ, ಪಟ್ಟದಕಲ್ಲು ಮತ್ತು ಹಂಪಿಯನ್ನು ಸಂಪರ್ಕಿಸುವ ವಿಶೇಷ ಪ್ರವಾಸೋದ್ಯಮ ಸರ್ಕ್ಯೂಟ್ ಘೋಷಣೆಯ ನಿರೀಕ್ಷೆಯಿದೆ.
ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಾದ ಕಲಬುರಗಿ, ಬೀದರ್, ರಾಯಚೂರು, ಕೊಪ್ಪಳ, ಯಾದಗಿರಿ, ಬಳ್ಳಾರಿ, ವಿಜಯನಗರ ಅಭಿವೃದ್ಧಿಗೆ ಹಲವು ನಿರೀಕ್ಷೆಗಳನ್ನು ಹೊಂದಲಾಗಿದೆ. 371(ಜೆ) ಅಡಿಯಲ್ಲಿ ಖಾಲಿ ಇರುವ ಸುಮಾರು 30 ಸಾವಿರಕ್ಕೂ ಹೆಚ್ಚು ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿಗೆ ಬಜೆಟ್‌ನಲ್ಲಿ ಹಸಿರು ನಿಶಾನೆ ಬೇಕಿದೆ.
ದಶಕಗಳ ಬೇಡಿಕೆಯಾದ ಏಮ್ಸ್ ಮಾದರಿಯ ಆಸ್ಪತ್ರೆ ಕಲಬುರಗಿಗೆ ಮಂಜೂರಾಗಬೇಕಿದೆ. ತೊಗರಿ ಕಣಜ ಕಲಬುರಗಿ ಮತ್ತು ಮೆಣಸಿನಕಾಯಿ ಮಾರುಕಟ್ಟೆ ಬ್ಯಾಡಗಿಯಂತಹ ಪ್ರದೇಶಗಳಲ್ಲಿ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಹೆಚ್ಚಿನ ಒತ್ತು ನೀಡಬೇಕು ಎಂಬ ಬೇಡಿಕೆ ಇದೆ.
ಸರ್ಕಾರದ ಮುಂದಿರುವ ಸವಾಲುಗಳು
ಉತ್ತರ ಕರ್ನಾಟಕದ ಅಭಿವೃದ್ಧಿ ಕುಂಠಿತವಾಗಲು ಕೇವಲ ಅನುದಾನದ ಕೊರತೆಯಲ್ಲ, ಬದಲಿಗೆ ರಾಜಕೀಯ ಇಚ್ಛಾಶಕ್ತಿ ಕೊರತೆಯೂ ಕಾರಣ ಎಂಬುದು ತಜ್ಞರ ಅಭಿಪ್ರಾಯ. ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಗೆ ಸುಮಾರು 50 -60 ಸಾವಿರ ಕೋಟಿ ರೂ. ವ್ಯಯವಾಗುತ್ತಿರುವುದರಿಂದ ಉತ್ತರ ಕರ್ನಾಟಕದ ನೀರಾವರಿ ಮತ್ತು ಮೂಲಸೌಕರ್ಯ ಯೋಜನೆಗಳಿಗೆ ಹಣದ ಕೊರತೆ ಉಂಟಾಗಬಹುದು ಎಂಬ ಆತಂಕ ಜನರಲ್ಲಿದೆ.
ಸುವರ್ಣಸೌಧ ಬೆಳಗಾವಿಯಲ್ಲಿದ್ದರೂ, ಪ್ರಮುಖ ಕಚೇರಿಗಳು ಇನ್ನೂ ಬೆಂಗಳೂರಿನಲ್ಲೇ ಇವೆ. ಇದರಿಂದಾಗಿ ಕಡತಗಳ ವಿಲೇವಾರಿ ವಿಳಂಬವಾಗುತ್ತಿದೆ. ಉತ್ತರ ಕರ್ನಾಟಕದ ಜೀವನದಿಗಳಾದ ಕೃಷ್ಣಾ ಮತ್ತು ಮಲಪ್ರಭಾ ನದಿಗಳ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಬೇಕಾದ ವಿತರಣಾ ಕಾಲುವೆಗಳ ನಿರ್ಮಾಣ ಆಮೆಗತಿಯಲ್ಲಿ ಸಾಗುತ್ತಿದೆ.
ʼದ ಫೆಡರಲ್ ಕರ್ನಾಟಕʼ ಜತೆ ಮಾತನಾಡಿದ ಜೆಡಿಎಸ್ ನಾಯಕ ಶರಣಪ್ಪ ಹುಲಿಗೇರಿ, ಯಾವುದೇ ಸರ್ಕಾರ ಇದ್ದರೂ ಉತ್ತರ ಕರ್ನಾಟಕಕ್ಕೆ ಬಜೆಟ್‌ನಲ್ಲಿ ಅನುದಾನ ಘೋಷಣೆ ಮಾಡುತ್ತದೆ. ಆದರೆ, ಆ ಅನುದಾನ ಯಾವ ರೀತಿಯಲ್ಲಿ ಬಳಕೆಯಾಗುತ್ತಿದೆ ಎಂಬುದರ ಬಗ್ಗೆ ಗಮನಹರಿಸುವುದಿಲ್ಲ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಬೇಕು. ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು. ಮೂಲಸೌಕರ್ಯ ಕೊರತೆ ಹೆಚ್ಚಾಗಿದ್ದು, ಅವುಗಳ ಅಭಿವೃದ್ಧಿಗೆ ಅನುದಾನ ಒದಗಿಸಬೇಕು. ಸರ್ಕಾರವು ಎಷ್ಟು ಅನುದಾನ ನೀಡಿದೆ, ಎಷ್ಟರ ಮಟ್ಟಿಗೆ ಅನುಷ್ಠಾನಗೊಂಡಿದೆ ಎಂಬುದರ ಪರಿಶೀಲನೆ ನಡೆಸಬೇಕು ಎಂದು ಹೇಳಿದರು.
ಬಿಜೆಪಿ ನಾಯಕ ಮಹಾಂತೇಶ ವಕ್ಕುಂದ ಪ್ರತಿಕ್ರಿಯಿಸಿ, ಬೆಳಗಾವಿ-ಧಾರವಾಡ ನಡುವೆ ನೇರ ರೈಲು ಇಲ್ಲ. ಕೇಂದ್ರದಿಂದ ಮಂಜೂರಾಗಿ ನಾಲ್ಕು ವರ್ಷ ಕಳೆದರೂ ಭೂಸ್ವಾಧೀನವಾಗಿಲ್ಲ. ಇದನ್ನು ರಾಜ್ಯ ಸರ್ಕಾರವೇ ಮಾಡಬೇಕು. ವೃತ್ತಿಪರ ಕೋರ್ಸ್ ಕಾಲೇಜುಗಳಿವೆ. ಆದರೆ, ಉದ್ಯೋಗ ಸೃಷ್ಟಿ ಇಲ್ಲ. ಉದ್ಯೋಗಕ್ಕಾಗಿ ಬೆಂಗಳೂರು ಅಥವಾ ಪುಣೆಗೆ ಹೋಗುವ ಅನಿವಾರ್ಯತೆ ಇದೆ ಎಂದು ಹೇಳಿದರು.

