ನಮ್ಮೂರಲ್ಲಿ ಹುಟ್ಟೋದು ಬೇಡ, ಕನಕಪುರ-ವರುಣಾಗೆ ಬಫೆ ಊಟ, ನಮಗೆ ಪಂಕ್ತಿ ಊಟ: ಡಿಕೆಶಿಗೆ ಖರ್ಗೆ ಪಂಚ್
x

ನಮ್ಮೂರಲ್ಲಿ ಹುಟ್ಟೋದು ಬೇಡ, ಕನಕಪುರ-ವರುಣಾಗೆ ಬಫೆ ಊಟ, ನಮಗೆ ಪಂಕ್ತಿ ಊಟ': ಡಿಕೆಶಿಗೆ ಖರ್ಗೆ ಪಂಚ್

ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ವಿಶೇಷ ಸ್ಥಾನಮಾನವಿದ್ದರೂ, ನಿರೀಕ್ಷಿತ ಮಟ್ಟದಲ್ಲಿ ಅನುದಾನ ಹಂಚಿಕೆಯಾಗದಿರುವ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಅವರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


Click the Play button to hear this message in audio format

ಕಾಂಗ್ರೆಸ್​​ ಹಿರಿಯ ನಾಯಕರಾಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಸ್ವಪಕ್ಷದ ಸರ್ಕಾರದ ಆಡಳಿತ ವೈಖರಿ ಮತ್ತು ಅನುದಾನ ಹಂಚಿಕೆಯ ತಾರತಮ್ಯದ ಬಗ್ಗೆ ವೇದಿಕೆಯಲ್ಲೇ ಅಸಮಾಧಾನ ಹೊರಹಾಕಿರುವ ಪ್ರಸಂಗ ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನವನ್ನು ಕೊಂಡೊಯ್ಯುತ್ತಿದ್ದಾರೆ ಎಂಬುದನ್ನು ಖರ್ಗೆ ಅವರು ಅತ್ಯಂತ ನಾಜೂಕಾಗಿ, ಹಾಸ್ಯದ ಲೇಪನದಲ್ಲಿಯೇ ಚಾಟಿ ಬೀಸುವ ಮೂಲಕ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಹಿನ್ನಡೆಯನ್ನು ಎತ್ತಿ ತೋರಿಸಿದ್ದಾರೆ.

ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದಲ್ಲಿ ಕೆಕೆಆರ್‌ಡಿಬಿ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾಡಳಿತದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಸೌಲಭ್ಯ ವಿತರಣಾ ಸಮಾರಂಭದಲ್ಲಿ ಈ ಸ್ವಾರಸ್ಯಕರ ಪ್ರಸಂಗ ನಡೆದಿದೆ. ಈ ವೇಳೆ ಮಾತನಾಡಿದ ಖರ್ಗೆ, ಅಭಿವೃದ್ಧಿಯ ವಿಚಾರದಲ್ಲಿ ಉತ್ತರ ಕರ್ನಾಟಕವನ್ನು ಕಡೆಗಣಿಸಲಾಗುತ್ತಿದೆ ಎಂಬ ನೋವನ್ನು ಹೊರಹಾಕಿದರು.

ನಮ್ಮೂರಲ್ಲಿ ಹುಟ್ಟುವುದು ಬೇಡ

ಕಾರ್ಯಕ್ರಮದಲ್ಲಿ ಮಾತನಾಡಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, "ನಾನು ಕಲ್ಯಾಣ ಕರ್ನಾಟಕ ಭಾಗದಲ್ಲಿ ಹುಟ್ಟಿದ್ದರೆ ಇನ್ನಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲು ಪ್ರಯತ್ನಿಸುತ್ತಿದ್ದೆ" ಎಂದು ಹೇಳಿದ್ದರು. ಡಿಕೆಶಿ ಅವರ ಈ ಮಾತುಗಳಿಗೆ ತಮ್ಮ ಭಾಷಣದಲ್ಲಿ ತಿರುಗೇಟು ನೀಡಿದ ಮಲ್ಲಿಕಾರ್ಜುನ ಖರ್ಗೆ, "ಶಿವಕುಮಾರ್ ಅವರೇ, ದಯವಿಟ್ಟು ನೀವು ನಮ್ಮ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಾತ್ರ ಹುಟ್ಟಬೇಡಿ. ನಮ್ಮಲ್ಲಿ ಹುಟ್ಟಿದ್ದರೆ ನಿಮಗೆ ಈ ರೀತಿಯ ಅಭಿವೃದ್ಧಿ ಭಾಗ್ಯ ಸಿಗುತ್ತಿರಲಿಲ್ಲ. ನೀವು ಅಲ್ಲಿಯೇ ಹುಟ್ಟಿ ಬೆಳೆದಿರುವುದು ಒಳ್ಳೆಯದಾಯಿತು. ಅಲ್ಲಿಯೇ ಇದ್ದು ನಮ್ಮ ಭಾಗಕ್ಕೆ ಹೆಚ್ಚಿನ ಅನುದಾನ ಕೊಡಿ, ಅಷ್ಟೇ ಸಾಕು" ಎಂದು ಹೇಳುವ ಮೂಲಕ ಪರೋಕ್ಷವಾಗಿ ಈ ಭಾಗದ ನಾಯಕರಿಗೆ ಅಧಿಕಾರವಿದ್ದರೂ ಸಂಪನ್ಮೂಲ ಸಿಗುತ್ತಿಲ್ಲ ಎಂಬ ವಾಸ್ತವವನ್ನು ಬಿಚ್ಚಿಟ್ಟರು.

ವರುಣಾ-ಕನಕಪುರಕ್ಕೆ 'ಬಫೆ', ನಮಗೆ 'ಪಂಕ್ತಿ ಊಟ'

ಅನುದಾನ ಹಂಚಿಕೆಯಲ್ಲಿ ಪ್ರಾದೇಶಿಕ ಅಸಮತೋಲನ ಎದ್ದು ಕಾಣುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ಖರ್ಗೆ, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ಕ್ಷೇತ್ರಗಳಿಗೆ ಸಿಂಹಪಾಲು ಅನುದಾನ ಹೋಗುತ್ತಿರುವುದನ್ನು ವಿವರಿಸಲು 'ಬಫೆ ಊಟ'ದ ಉದಾಹರಣೆ ನೀಡಿದರು. "ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ತಮಗೆ ಬೇಕಾದ ಅನುದಾನವನ್ನು ತಾವೇ ಬಡಿಸಿಕೊಳ್ಳುತ್ತಿದ್ದಾರೆ. ಇದು ನಿಂತು ತಮಗೆ ಬೇಕಾದ್ದನ್ನು ತಟ್ಟೆಗೆ ಹಾಕಿಕೊಳ್ಳುವ 'ಬಫೆ' ಸಿಸ್ಟಮ್‌ನಂತಿದೆ. ನೀವಿಬ್ಬರೂ ಬಫೆ ಸಿಸ್ಟಮ್‌ನಲ್ಲಿ ತಮಗೆ ಬೇಕಾದ್ದನ್ನು ಯಥೇಚ್ಛವಾಗಿ ಪಡೆದುಕೊಳ್ಳುತ್ತಿದ್ದೀರಿ. ಆದರೆ ರಾಜ್ಯದ ಉಳಿದ ಭಾಗದ ಶಾಸಕರು ಮತ್ತು ಜನರು ಸಾಲಾಗಿ ಕುಳಿತು, ಯಾರಾದರೂ ಬಂದು ಬಡಿಸುವುದನ್ನು ಕಾಯುವ 'ಪಂಕ್ತಿ ಊಟ'ದ ವ್ಯವಸ್ಥೆಯಲ್ಲಿದ್ದಾರೆ" ಎಂದು ವ್ಯಂಗ್ಯವಾಡಿದರು.

ಈ ಹೇಳಿಕೆಯ ಮೂಲಕ ವರುಣಾ ಮತ್ತು ಕನಕಪುರ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ಹರಿದು ಹೋಗುತ್ತಿದ್ದು, ಕಲ್ಯಾಣ ಕರ್ನಾಟಕದಂತಹ ಹಿಂದುಳಿದ ಪ್ರದೇಶಗಳಿಗೆ ಅನುದಾನಕ್ಕಾಗಿ ಕೈಯೊಡ್ಡುವ ಪರಿಸ್ಥಿತಿ ಇದೆ ಎಂಬುದನ್ನು ಖರ್ಗೆ ಮಾರ್ಮಿಕವಾಗಿ ತಿಳಿಸಿದರು.

ನಮಗೆ ಶೇ. 70ರಷ್ಟು ಅನುದಾನ ಕೊಡಿ

ಮುಂದುವರಿದು ಮಾತನಾಡಿದ ಖರ್ಗೆ, "ನಿಮ್ಮ ಕನಕಪುರ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿಗಳಾಗಿವೆ. ಅದೇ ರೀತಿ ಸಿಎಂ ಸಿದ್ದರಾಮಯ್ಯ ಅವರ ಕ್ಷೇತ್ರ ಹಾಗೂ ಮೈಸೂರು ಜಿಲ್ಲೆಗೆ ಸಾಕಷ್ಟು ಅನುದಾನಗಳು ಸಿಗುತ್ತಿವೆ. ಅಲ್ಲಿನ ಅಭಿವೃದ್ಧಿಗೆ ನಮ್ಮ ವಿರೋಧವಿಲ್ಲ. ಆದರೆ, ಅಲ್ಲಿಗೆ ಸಿಗುವ ಅನುದಾನದ ಶೇಕಡಾ 70ರಷ್ಟನ್ನಾದರೂ ನಮ್ಮ ಪ್ರದೇಶಕ್ಕೂ ಕೊಡಿ" ಎಂದು ಆಗ್ರಹಿಸಿದರು. ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ವಿಶೇಷ ಸ್ಥಾನಮಾನವಿದ್ದರೂ, ನಿರೀಕ್ಷಿತ ಮಟ್ಟದಲ್ಲಿ ಅನುದಾನ ಹಂಚಿಕೆಯಾಗದಿರುವ ಬಗ್ಗೆ ಹಿರಿಯ ನಾಯಕರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಈ ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಕೆಕೆಆರ್‌ಡಿಬಿ ಅಧ್ಯಕ್ಷ ಅಜಯ್ ಸಿಂಗ್, ವಿಧಾನ ಪರಿಷತ್ ಸದಸ್ಯರಾದ ಜಗದೇವ ಗುತ್ತೇದಾರ್, ಚಂದ್ರಶೇಖರ್ ಪಾಟೀಲ್ ಸೇರಿದಂತೆ ಹಲವು ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Read More
Next Story