
ಶಾಸಕ ಜನಾರ್ದನ ರೆಡ್ಡಿ ಹಾಗೂ ಸಚಿವ ಎಂ.ಬಿ. ಪಾಟೀಲ್
ಬ್ಯಾನರ್ ಜಗಳಕ್ಕೆ ಪಾದಯಾತ್ರೆಯೇ? ಲೂಟಿ ಮಾಡಿದವರಿಗೆ ಜನರೇ ಬುದ್ಧಿ ಕಲಿಸುತ್ತಾರೆ: ಎಂ.ಬಿ. ಪಾಟೀಲ್
ಅಧಿಕಾರ ಹಾಗೂ ಹಣದ ದುರಾಸೆಯಿಂದ ಈ ಹಿಂದೆ ಶಾಸಕ ಜನಾರ್ದನ ರೆಡ್ಡಿ ರಿಪಬ್ಲಿಕ್ ಆಫ್ ಬಳ್ಳಾರಿ ಮಾಡಿದ್ದರು. ಗಣಿಗಾರಿಕೆ ನಡೆಸುವವರಿಂದ ಪಾಲು ಪಡೆದಿದ್ದರು ಎಂದು ಸಚಿವ ಎಂ.ಬಿ. ಪಾಟೀಲ್ ಆರೋಪ ಮಾಡಿದರು.
ಶಾಸಕ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಹಣದ ದುರಾಸೆಗಾಗಿ ಅಕ್ರಮ ಗಣಿಗಾರಿಕೆ ನಡೆಸಿ ರಾಜ್ಯದ ಗಡಿಯನ್ನೇ ಕಿತ್ತು ಹಾಕಿ, ದೇವಾಲಯವನ್ನೇ ನಾಶಪಡಿಸಿದ್ದರು. ಇದರ ವಿರುದ್ಧ ಕಾಂಗ್ರೆಸ್ ಬಳ್ಳಾರಿ ಪಾದಯಾತ್ರೆ ನಡೆಸಿ ಯಶಸ್ವಿಯಾಗಿತ್ತು. ಆದರೆ ಇಬ್ಬರ ಜಗಳಕ್ಕಾಗಿ ಜನಾರ್ದನ ರೆಡ್ಡಿ ಪಾದಯಾತ್ರೆ ನಡೆಸುತ್ತಿರುವುದು ಹಾಸ್ಯಸ್ಪದ ಎಂದು ಸಚಿವ ಎಂ.ಬಿ. ಪಾಟೀಲ್ ವ್ಯಂಗ್ಯವಾಡಿದರು.
ಸೋಮವಾರ(ಜ.12) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಧಿಕಾರ ಹಾಗೂ ಹಣದ ದುರಾಸೆಯಿಂದ ಈ ಹಿಂದೆ ಶಾಸಕ ಜನಾರ್ದನ ರೆಡ್ಡಿ ರಿಪಬ್ಲಿಕ್ ಆಫ್ ಬಳ್ಳಾರಿ ಮಾಡಿದ್ದರು. ಗಣಿಗಾರಿಕೆ ನಡೆಸುವವರಿಂದ ಪಾಲು ಪಡೆದಿದ್ದರು. ರಾಜ್ಯದ ಅತ್ಯಮೂಲ್ಯ ಅರಣ್ಯ ಪ್ರದೇಶದಲ್ಲೂ ಅಕ್ರಮ ಗಣಿಗಾರಿಕೆ ನಡೆಸಿ ಲೂಟಿ ಮಾಡಿದ್ದರು ಎಂದು ಕಿಡಿಕಾರಿದರು.
ಇಬ್ಬರ ಸಮಸ್ಯೆಗೆ ಪಾದಯಾತ್ರೆ
ಸಮಸ್ಯೆಗಳ ಪರಿಹಾರಕ್ಕಾಗಿ ಹಲವರು ಪಾದಯಾತ್ರೆ ಮಾಡುತ್ತಾರೆ. ಆದರೆ ಬಳ್ಳಾರಿಯಲ್ಲಿ ಬ್ಯಾನರ್ ಕಟ್ಟುವ ವಿಚಾರ ಕೇವಲ ಇಬ್ಬರ ನಡುವೆ ನಡೆದ ಗಲಾಟೆಯಾಗಿದ್ದು, ಇದಕ್ಕಾಗಿ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಪಾದಯಾತ್ರೆಗೆ ಮುಂದಾಗಿರುವುದು ಸರಿಯಲ್ಲ. ಇದೆಲ್ಲಾ ಜನರಿಗೆ ಅರ್ಥವಾಗುತ್ತದೆ ಎಂದು ತಿಳಿಸಿದರು.
ಕೇಂದ್ರ ಸಚಿವ ಎಚ್‌ಡಿಕೆ ಚರ್ಚೆಗೆ ಬರಲಿ
ಮನೇರಾಗ ವಿಷಯದ ಬಗ್ಗೆ ಚರ್ಚಿಸಲು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ದಿನಾಂಕ ನಿಗದಿಪಡಿಸಲಿ. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ನಾವು ಒಪ್ಪಿಸುತ್ತೇವೆ. ರಾಷ್ಟ್ರೀಯ ಹಾಗೂ ರಾಜ್ಯ ಮಾಧ್ಯಮಗಳ ಮುಂದೆ ಚರ್ಚಿಸಲಿ. ಬಿಜೆಪಿ ಹಾಗೂ ಜೆಡಿಎಸ್ ಎಚ್.ಡಿ. ಕುಮಾರಸ್ವಾಮಿಯವರನ್ನು ಚರ್ಚೆಗೆ ಒಪ್ಪಿಸಲಿ. ಯಾವ ದಿನಾಂಕ ಬೇಕೋ ಅದನ್ನು ಅವರೇ ಹೇಳಲಿ ಎಂದು ಆಹ್ವಾನ ನೀಡಿದರು.
ಏನಿದು ಚರ್ಚೆ ?
ಇತ್ತೀಚೆಗೆ ಸಭೆ ನಡೆಸಿದ್ದ ಎನ್‌ಡಿಎ ನಾಯಕರು, ಕಾಂಗ್ರೆಸ್ ʼವಿಬಿ ಜಿ ರಾಮ್ ಜಿʼ ಯೋಜನೆಯ ಬಗ್ಗೆ ಜನರಿಗೆ ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದರು. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ʼಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆʼಯಲ್ಲಿ ಅಕ್ರಮ ನಡೆದಿರುವುದು ಲೆಕ್ಕಪರಿಶೋಧನೆಯಿಂದ ತಿಳಿದುಬಂದ ಕಾರಣಕ್ಕಾಗಿ ʼಮನೇರಗಾʼ ಯೋಜನೆಗೆ ತಿದ್ದುಪಡಿ ಮಾಡಲಾಗಿದೆ. ಈ ವಿಚಾರವಾಗಿ ಬಿಜೆಪಿ ನಾಯಕರ ಬದಲಿಗೆ ನಾನೇ ಚರ್ಚೆಯಲ್ಲಿ ಪಾಲ್ಗೊಳ್ಳುತ್ತೇನೆ. ಕಾಂಗ್ರೆಸ್ ನಾಯಕರೂ ಚರ್ಚೆಗೆ ಬರಲಿ ಎಂದು ತಿಳಿಸಿದ್ದರು.
ಹೋರಾಟ ನಿರಂತರ: ಮಲ್ಲಿಕಾರ್ಜುನ ಖರ್ಗೆ
ನರೇಗಾ ಯೋಜನೆ ಕುರಿತು ಇತ್ತೀಚೆಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ನೀಡಿದ್ದ ಹೇಳಿಕೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ(ಜ.12) ಸದಾಶಿವನಗರದಲ್ಲಿ ಪ್ರತಿಕ್ರಿಯಿಸಿ, "ಬಡವರು ಹಾಗೂ ನಿರುದ್ಯೋಗಿಗಳಿಗೆ ಅನುಕೂಲವಾಗಲಿ ಎಂದೇ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ತರಲಾಗಿತ್ತು. ಬಡವರಿಗೆ ಸಹಾಯ ಮಾಡುವ ಕಾನೂನಿಗೆ ಕೇಂದ್ರ ಸರ್ಕಾರ ಕೊಡಲಿ ಪೆಟ್ಟು ಹಾಕುತ್ತಿದೆ. ಪಂಚಾಯಿತಿಯಲ್ಲಿ ನಡೆಯುವ ಕೆಲಸಗಳಿಗೆ ಅಡ್ಡಗಾಲು ಹಾಕುವ ಯೋಜನೆ ಮಾಡುತ್ತಿದ್ದಾರೆ. ಹಣಕಾಸಿನಲ್ಲಿ ಶೇ.60:40 ಅನುಪಾತ ಮಾಡಿ ರಾಜ್ಯದ ಮೇಲೆ ಶೇ. 30 ಹೆಚ್ಚಿನ ಹಣಕಾಸು ಭಾರವನ್ನು ಹಾಕುತ್ತಿದ್ದಾರೆ. ಪ್ರಧಾನಿ ಮೋದಿ ಬಡವರಿಗೆ ಸಹಾಯ ಮಾಡುವ ಬದಲು, ಕಾರ್ಪೊರೇಟ್‌ಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಕಾಂಗ್ರೆಸ್ ನಿರಂತರ ಹೋರಾಟ ಮಾಡಲಿದೆ" ಎಂದು ತಿಳಿಸಿದರು.

