
ಬಳ್ಳಾರಿ ಗಲಾಟೆ; ಜನಾರ್ದನ ರೆಡ್ಡಿ- ರಾಮುಲು ಪುನರ್ಮಿಲನ; ರಾಜಕಾರಣದ ಹೊಸ ಸಮೀಕರಣ
ಸಂಕಷ್ಟದ ಸಮಯದಲ್ಲಿ ತನ್ನ ಹಳೆಯ ಗೆಳೆಯನ ಪರವಾಗಿ ಶ್ರೀರಾಮುಲು ನಿಂತಿರುವ ರೀತಿ, ಗಣಿ ನಾಡಿನ ರಾಜಕೀಯ ಸಮೀಕರಣಗಳನ್ನು ಬದಲಿಸುವ ಮುನ್ಸೂಚನೆ ನೀಡುತ್ತಿದೆ. ಇದು ನಾಯಕರನ್ನು ಮತ್ತೆ ಒಂದೇ ವೇದಿಕೆಗೆ ತಂದಿದೆ.
ರಾಜಕೀಯದಲ್ಲಿ ಶಾಶ್ವತ ಶತ್ರುಗಳೂ ಇಲ್ಲ, ಮಿತ್ರರೂ ಇಲ್ಲ ಎಂಬ ಮಾತಿಗೆ ಬಳ್ಳಾರಿಯ ಗಾಲಿ ಜನಾರ್ದನ ರೆಡ್ಡಿ ಮತ್ತು ಬಿ. ಶ್ರೀರಾಮುಲು ಅವರ ಸ್ನೇಹದ ಇತಿಹಾಸವೇ ಸಾಕ್ಷಿ. ದಶಕಗಳ ಕಾಲ ಅವಿನಾಭಾವ ಸಂಬಂಧ ಹೊಂದಿದ್ದ ಈ ಜೋಡಿ, ಕಳೆದ ಕೆಲವು ವರ್ಷಗಳಿಂದ ರಾಜಕೀಯ ಅನಿವಾರ್ಯತೆ ಮತ್ತು ವೈಯಕ್ತಿಕ ಮಹತ್ವಾಕಾಂಕ್ಷೆಗಳ ಕಾರಣದಿಂದ ಅಂತರ ಕಾಯ್ದುಕೊಂಡಿತ್ತು. ಆದರೆ, ಇತ್ತೀಚೆಗೆ ಬಳ್ಳಾರಿಯಲ್ಲಿ ನಡೆದ ಬ್ಯಾನರ್ ಸಂಘರ್ಷ ಮತ್ತು ಶೂಟೌಟ್ ಪ್ರಕರಣವು ಈ ಇಬ್ಬರು ನಾಯಕರನ್ನು ಮತ್ತೆ ಒಂದೇ ವೇದಿಕೆಗೆ ತಂದು ನಿಲ್ಲಿಸಿದೆ.
ಬಳ್ಳಾರಿಯ ರಾಜಕೀಯ ಇತಿಹಾಸದಲ್ಲಿ ಈ ಇಬ್ಬರ ಹೆಸರುಗಳನ್ನು ಬೇರೆಬೇರೆ ಹೇಳಲು ಸಾಧ್ಯವೇ ಇಲ್ಲ. ಜನಾರ್ದನ ರೆಡ್ಡಿಯವರ ಹಣಕಾಸಿನ ಬಲ ಮತ್ತು ಶ್ರೀರಾಮುಲು ಅವರ ವಾಲ್ಮೀಕಿ ಸಮುದಾಯದ ವ್ಯಾಪಕ ಹಿಡಿತವು 2000ರ ದಶಕದ ಪ್ರಾರಂಭದಲ್ಲಿ ಬಿಜೆಪಿ ಪಕ್ಷಕ್ಕೆ ಆನೆಬಲ ತಂದಿತ್ತು. 1999ರಲ್ಲಿ ಸುಷ್ಮಾ ಸ್ವರಾಜ್ ಅವರು ಬಳ್ಳಾರಿಯಿಂದ ಸೋನಿಯಾ ಗಾಂಧಿ ವಿರುದ್ಧ ಸ್ಪರ್ಧಿಸಿದಾಗ ನಡೆದ ಆ ಹೋರಾಟದಿಂದಲೇ ಇವರ ಜೋಡಿಯು ಭಾರತದ ರಾಜಕೀಯ ನಕ್ಷೆಯಲ್ಲಿ ಗುರುತು ಮೂಡಿಸಿತ್ತು.
2008ರ ಚುನಾವಣೆಯಲ್ಲಿ ಬಿಜೆಪಿ ಮೊದಲ ಬಾರಿಗೆ ಅಧಿಕಾರದ ಅಂಗಳ ಪ್ರವೇಶಿಸಲು ಕಾರಣವಾದ “ಆಪರೇಷನ್ ಕಮಲ”ದ ರೂವಾರಿಗಳು ಇವರೇ.. ಬಿಜೆಪಿ ಬಹುಮತಕ್ಕೆ ಬೇಕಾದ ಸಂಖ್ಯಾಬಲವನ್ನು ಹೇಗಾದರೂ ಸಾಧಿಸಲೇಬೇಕು ಎಂಬ ಉತ್ಸಾಹದಲ್ಲಿ ಇವರು ಹಗಲಿರುಳು ಓಡಾಡಿದ್ದರು. ಆ ಕಾಲದಲ್ಲಿ ರಾಜ್ಯದ ರಾಜಕಾರಣದಲ್ಲಿ ಇವರನ್ನು ‘ಜೋಡಿ ಎತ್ತುಗಳು’ ಎಂದೇ ಕರೆಯಲಾಗುತ್ತಿತ್ತು. ಹೊಂದಾಣಿಕೆಯೇ ಇವರ ಶಕ್ತಿ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದರು.
ಶೀತಲ ಸಮರ ಮತ್ತು ಎರಡು ತೀರ
ಕಾಲದ ಚಕ್ರ ಉರುಳಿದಂತೆ ಅವರ ಸ್ನೇಹದ ದಾರಿಯಲ್ಲೂ ಬಿರುಕು ಮೂಡಿತು. ಜನಾರ್ದನ ರೆಡ್ಡಿ ಅವರು ಕಾನೂನು ಪ್ರಕರಣಗಳಲ್ಲಿ ಸಿಲುಕಿ ಜೈಲು ಸೇರಿದರು. ಆ ಸಮಯದಲ್ಲಿ ಶ್ರೀರಾಮುಲು ಅವರು ಬಿಎಸ್‌ಆರ್ ಕಾಂಗ್ರೆಸ್ ಎಂಬ ಹೊಸ ಪಕ್ಷ ಕಟ್ಟಿದರು. ಆ ಸಂದರ್ಭದಲ್ಲೂ ರೆಡ್ಡಿಯವರ ಬೆಂಬಲ ರಾಮುಲು ಅವರ ಬದಿಯಲ್ಲಿತ್ತು. ಆದರೆ, ನಂತರ ದಿನಗಳಲ್ಲಿ ರಾಮುಲು ಬಿಜೆಪಿ ಸೇರಿ ಕೇಂದ್ರ ನಾಯಕರ ವಿಶ್ವಾಸ ಪಡೆದರು. ರೆಡ್ಡಿ ಅವರು ಹೊರಗೆ ಬಂದಾಗ ಬಿಜೆಪಿ ಬಾಗಿಲು ಅವರಿಗಿಲ್ಲದಂತಿತ್ತು. ಈ ಘಟನೆ ಅವರ ಸಂಬಂಧದ ಶೀತಲ ಸಮರದ ಮೊದಲ ಅಧ್ಯಾಯ.
2023ರ ವಿಧಾನಸಭಾ ಚುನಾವಣೆಯಲ್ಲಿ ರೆಡ್ಡಿ “ಕಲ್ಯಾಣ ರಾಜ್ಯ ಪ್ರಗತಿ ಪಕ್ಷ” ಸ್ಥಾಪಿಸಿದಾಗ ರಾಮುಲು ಅವರು ಬಿಜೆಪಿಯಲ್ಲೇ ಉಳಿದರು. ಈ ನಿರ್ಧಾರ ರೆಡ್ಡಿಯವರಿಗೂ ನೋವು ತಂದಿತ್ತೆಂದು ಅವರ ಆಪ್ತರು ಹೇಳುತ್ತಾರೆ. ಬಳ್ಳಾರಿಯಲ್ಲಿ ಇಬ್ಬರು ವಿಭಿನ್ನ ರಾಜಕೀಯ ಧ್ಯೇಯಗಳತ್ತ ನಡೆದರು. ಕೆಲ ಸ್ಥಳೀಯ ಚುನಾವಣೆಗಳಲ್ಲಿ ಪರಸ್ಪರ ಸ್ಪರ್ಧಿಸುವಂತ ಪರಿಸ್ಥಿತಿಯೂ ಉಂಟಾಯಿತು.
ಶೂಟಿಂಗ್ ಪ್ರಕರಣದ ನಂತರ ಹೊಸ ತಿರುವು
ಇತ್ತೀಚೆಗೆ ಬಳ್ಳಾರಿಯಲ್ಲಿ ನಡೆದ ಬ್ಯಾನರ್ ಸಂಘರ್ಷ ಮತ್ತು ಗುಂಡಿನ ದಾಳಿ ಘಟನೆಯು ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಯ ಮೇಲೆ ದೊಡ್ಡ ಹೊಡೆತ ಕೊಟ್ಟಿತು. ಘಟನೆಯ ನಂತರ ಜನಾರ್ದನ ರೆಡ್ಡಿಯ ವರ್ಚಸ್ಸಿಗೆ ಧಕ್ಕೆ ತರುವ ಶಕ್ತಿಗಳು ಕಾರ್ಯನಿರ್ವಹಿಸುತ್ತಿವೆ ಎಂಬ ಅಭಿಪ್ರಾಯ ಬೆಳೆಯುತ್ತಿದ್ದಾಗ, ಬಿ. ಶ್ರೀರಾಮುಲು ಅದನ್ನು ತಪ್ಪಿಸಲು ಯತ್ನಿಸಿದರು. ದಶಕಗಳ ಮುನಿಸನ್ನು ಬದಿಗಿಟ್ಟು ಅವರು ತಮ್ಮ ಹಳೆಯ ಸ್ನೇಹಿತನ ಪರವಾಗಿ ನಿಂತರು. ಸರ್ಕಾರದ ಕ್ರಮಗಳು ಮತ್ತು ಪೊಲೀಸ್ ಅಧಿಕಾರಿಗಳ ಅಮಾನತು ಕುರಿತು ಅವರು ಟೀಕಿಸಿದರು. “ನನ್ನ ಗೆಳೆಯನಿಗೆ ಅನ್ಯಾಯವಾದಾಗ ನಾನು ಮೌನವಾಗಿರಲಾರೆ” ಎಂದು ಬಳ್ಳಾರಿ ಸಾರ್ವಜನಿಕ ಸಭೆಯಲ್ಲಿ ಘೋಷಿಸಿದ ಶ್ರೀರಾಮುಲು ಹಳೆಯ ಸ್ನೇಹಕ್ಕೆ ಹೊಸ ಚೈತನ್ಯ ಕೊಟ್ಟರು.
ರಾಜಕೀಯ ಲೆಕ್ಕಾಚಾರ ಮತ್ತು ಭವಿಷ್ಯದ ಮುನ್ಸೂಚನೆ
ಜನಾರ್ದನ ರೆಡ್ಡಿ ಮತ್ತು ಬಿ. ಶ್ರೀರಾಮುಲು ಅವರ ಈ ಪುನರ್ಮಿಲನ ಕೇವಲ ಭಾವನಾತ್ಮಕ ನಿರ್ಧಾರವಲ್ಲ; ಇದರ ಹಿಂದೆ ಗಟ್ಟಿಯಾದ ರಾಜಕೀಯ ತಂತ್ರಗಾರಿಕೆಯೂ ಇದೆ. ಬಳ್ಳಾರಿಯಲ್ಲಿ ಕಾಂಗ್ರೆಸ್ ಪ್ರಾಬಲ್ಯ ಹೆಚ್ಚುತ್ತಿರುವ ಸಂದರ್ಭದಲ್ಲಿ, ರೆಡ್ಡಿ ಸಮುದಾಯ ಮತ್ತು ವಾಲ್ಮೀಕಿ ಸಮುದಾಯದ ಮತಗಳನ್ನು ಒಗ್ಗೂಡಿಸಲು ಈ ಜೋಡಿ ಒಂದಾಗುವುದು ಬಿಜೆಪಿಗೆ ಅನಿವಾರ್ಯವಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಹತ್ತಿರ ಬರುತ್ತಿರುವ ಈ ಸಮಯದಲ್ಲಿ, ಈ ಜೋಡಿ ಎತ್ತುಗಳ ಪುನರ್ಮಿಲನವು ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಕಠಿಣ ಸವಾಲು ಒಡ್ಡುವುದರಲ್ಲಿ ಸಂಶಯವಿಲ್ಲ.
ಕಾಂಗ್ರೆಸ್ ಪ್ರಾಬಲ್ಯ ಹೆಚ್ಚುತ್ತಿರುವ ಈ ಸಮಯದಲ್ಲಿ ಅವರ ಪುನರ್ಮಿಲನ ಬಿಜೆಪಿ ಶಿಬಿರಕ್ಕೆ ಶಕ್ತಿ ತುಂಬಿದಂತಾಗಿದೆ. ಇಬ್ಬರ ಒಗ್ಗಟ್ಟಿನಿಂದ ಬಳ್ಳಾರಿಯ ಕ್ಷೇತ್ರ ರಾಜಕೀಯ ಮಾತ್ರವಲ್ಲ, ಜಿಲ್ಲಾ ಪಂಚಾಯಿತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಸಮೀಕರಣಗಳೂ ಬದಲಾಗುವ ಸಾಧ್ಯತೆ ಇದೆ.

