
ಬಳ್ಳಾರಿ ಸಂಘರ್ಷ: ಜನಾರ್ದನ ರೆಡ್ಡಿ, ಶ್ರೀರಾಮುಲು ಸೇರಿ 33 ಮಂದಿಗೆ ನೋಟಿಸ್
ಬ್ರೂಸ್‌ಪೇಟೆ ಪೊಲೀಸ್ ಇನ್‌ಸ್ಪೆಕ್ಟರ್ ನೀಡಿದ ವರದಿ ಆಧಾರದ ಮೇಲೆ ತಹಶೀಲ್ದಾರ್ ಅವರು ನೊಟೀಸ್ ಜಾರಿ ಮಾಡಿದ್ದಾರೆ. ಈ ಪೈಕಿ 33 ಮಂದಿ ಪೈಕಿ ಮೇಘನಾ ಮತ್ತು ಚಾಂದನಿ ಇಬ್ಬರು ತೃತೀಯ ಲಿಂಗಿಗಳಾಗಿರುವುದು ವಿಶೇಷ.
ಬಳ್ಳಾರಿ ಬ್ಯಾನರ್ ಸಂಘರ್ಷಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ, ಮಾಜಿ ಸಚಿವ ಬಿ.ಶ್ರೀರಾಮುಲು, ಮಾಜಿ ಶಾಸಕ ಸೋಮಶೇಖರ್ ರೆಡ್ಡಿ, ಇಬ್ಬರು ತೃತೀಯ ಲಿಂಗಿಗಳು ಸೇರಿ 33 ಮಂದಿಗೆ ತಹಶೀಲ್ದಾರ್ ನೊಟೀಸ್ ಜಾರಿ ಮಾಡಿದ್ದಾರೆ. ಇತ್ತೀಚೆಗೆ ಹೊಸ ವರ್ಷದ ಆರಂಭದಲ್ಲಿ ನಡೆದ ಬ್ಯಾನರ್ ಸಂಘರ್ಷವು ಜಿಲ್ಲೆಯ ಕಾನೂನು ಮತ್ತು ಸುವ್ಯವಸ್ಥೆಗೆ ಸವಾಲಾಗಿ ಪರಿಣಮಿಸಿತ್ತು.
ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಳ್ಳಾರಿಯ ಬ್ರೂಸ್‌ಪೇಟೆ ಪೊಲೀಸ್ ಇನ್‌ಸ್ಪೆಕ್ಟರ್ ಅವರು ತಹಶೀಲ್ದಾರ್ ಅವರಿಗೆ ವರದಿ ಸಲ್ಲಿಸಿದ್ದರು. ಈ ವರದಿ ಆಧರಿಸಿ, ತಹಶೀಲ್ದಾರ್ ಅವರು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್) 126ನೇ ಕಲಂ ಅಡಿಯಲ್ಲಿ ನೋಟಿಸ್ ಜಾರಿ ಮಾಡಿದ್ದಾರೆ. ಮಾಜಿ ಸಚಿವರಾದ ಜನಾರ್ದನ ರೆಡ್ಡಿ, ಶ್ರೀರಾಮುಲು, ಮಾಜಿ ಶಾಸಕ ಸೋಮಶೇಖರ್ ರೆಡ್ಡಿ, ಸುರೇಶ ಬಾಬು, ಜನಾರ್ದನ ರೆಡ್ಡಿ ಆಪ್ತ ಅಲಿಖಾನ್ ಸೇರಿದಂತೆ 33 ಮಂದಿಗೆ ನೊಟೀಸ್ ನೀಡಿದ್ದಾರೆ. ನೊಟೀಸ್ ಜಾರಿಯಾಗಿರುವ ಪೈಕಿ ಮೇಘನಾ ಮತ್ತು ಚಾಂದನಿ ಇಬ್ಬರು ತೃತೀಯ ಲಿಂಗಿಗಳಾಗಿರುವುದು ವಿಶೇಷ.
ಸಮಾಜದಲ್ಲಿ ಶಾಂತಿ ಭಂಗ ಉಂಟು ಮಾಡುವ ಸಾಧ್ಯತೆ ಇರುವ ವ್ಯಕ್ತಿಗಳನ್ನು ಕರೆಸಿ, ಮುಂದಿನ ಒಂದು ವರ್ಷದವರೆಗೆ ಯಾವುದೇ ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗುವುದಿಲ್ಲ ಎಂದು ಮುಚ್ಚಳಿಕೆ ಪತ್ರ ಬರೆಸಿಕೊಳ್ಳುವ ಅಧಿಕಾರ ತಹಶೀಲ್ದಾರ್ ಅವರಿಗೆ ಇರುತ್ತದೆ. ಈ ನೋಟಿಸ್ ಮೂಲಕ ಹಾಜರಾಗಿ ತಮ್ಮ ವರ್ತನೆಯ ಬಗ್ಗೆ ಸ್ಪಷ್ಟನೆ ನೀಡಬೇಕಾಗುತ್ತದೆ. ಹೀಗಾಗಿ ನೊಟೀಸ್ ನೀಡಿ ಹಾಜರಾಗುವಂತೆ ಸೂಚನೆ ನೀಡಲಾಗಿದೆ.
ನೋಟಿಸ್ ಪಡೆದಿರುವ 33 ಮಂದಿ ತಹಶೀಲ್ದಾರ್ ಮುಂದೆ ಹಾಜರಾಗಿ ಸಮಜಾಯಿಷಿ ನೀಡಬೇಕಿದೆ. ಒಂದು ವೇಳೆ ಇವರು ಶಾಂತಿ ಕಾಪಾಡುವ ಬಾಂಡ್ ನೀಡಲು ನಿರಾಕರಿಸಿದರೆ ಅಥವಾ ವಿಚಾರಣೆಗೆ ಗೈರಾದರೆ, ದಂಡಾಧಿಕಾರಿಗಳಿಗೆ ಇವರನ್ನು ಬಂಧಿಸುವಂತೆ ಆದೇಶಿಸುವ ಅಧಿಕಾರವೂ ಇರುತ್ತದೆ. ಜ.1 ಮತ್ತು 2ರಂದು ಬಳ್ಳಾರಿ ನಗರದಲ್ಲಿ ಹೊಸ ವರ್ಷದ ಶುಭಾಶಯ ಕೋರುವ ಬ್ಯಾನರ್‌ಗಳನ್ನು ಹಚ್ಚುವ ವಿಚಾರದಲ್ಲಿ ಘರ್ಷಣೆ ಪ್ರಾರಂಭವಾಯಿತು.
ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಅವರ ಬೆಂಬಲಿಗರು ಮತ್ತು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹಾಗೂ ಬಿ. ಶ್ರೀರಾಮುಲು ಅವರ ಬೆಂಬಲಿಗರ ನಡುವೆ ಬ್ಯಾನರ್ ಹಚ್ಚುವ ಜಾಗದ ಕುರಿತು ವಿವಾದ ಉಂಟಾಯಿತು. ಇದು ಕೇವಲ ಮಾತಿನ ಚಕಮಕಿಗೆ ಸೀಮಿತವಾಗದೆ, ಬ್ರೂಸ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಲ್ಲು ತೂರಾಟ ಮತ್ತು ಹಿಂಸಾಚಾರಕ್ಕೆ ತಿರುಗಿತು. ಘಟನೆಯಲ್ಲಿ ಓರ್ವ ಯುವಕ ಮೃತಪಟ್ಟಿದ್ದು, ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ನೊಟೀಸ್ ನೀಡಲಾಗಿದೆ.
ಹಿಂದಿನ ಕ್ರಿಮಿನಲ್ ಪ್ರೊಸೀಜರ್ ಕೋಡ್ (ಸಿಆರ್‌ಪಿಸಿ) 107ನೇ ಕಲಂಗೆ ಪರ್ಯಾಯವಾಗಿ ಈ ಹೊಸ ಕಾನೂನನ್ನು ಜಾರಿಗೆ ತರಲಾಗಿದೆ. ಸಮಾಜದಲ್ಲಿ ಶಾಂತಿ ಭಂಗ ಉಂಟುಮಾಡುವ ಸಾಧ್ಯತೆ ಇರುವ ವ್ಯಕ್ತಿಗಳನ್ನು ಕರೆಸಿ, ಮುಂದಿನ ಒಂದು ವರ್ಷದವರೆಗೆ ಯಾವುದೇ ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗುವುದಿಲ್ಲ ಎಂದು 'ಮುಚ್ಚಳಿಕೆ ಪತ್ರ' ಬರೆಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

