Greater Bangalore Authority | A mantra of development or a strategy of centralization of power?
x

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಕೇಂದ್ರ ಕಚೇರಿ

GBA Elections| ನ್ಯಾಯಾಲಯ ಮೆಟ್ಟಿಲೇರುವ ತಂತ್ರ: ಗ್ರೇಟರ್‌ ಬೆಂಗಳೂರು ಚುನಾವಣೆ ಮತ್ತೆ ಮುಂದಕ್ಕೆ?

ಕಳೆದ ಆರು ವರ್ಷಗಳಿಂದ ಜನಪ್ರತಿನಿಧಿಗಳನ್ನು ಕಾಣದೆ ಅನಾಥವಾಗಿರುವ ಪಾಲಿಕೆಗೆ ಈ ವರ್ಷವೂ ಚುನಾವಣೆ ನಡೆಯುವುದು ಅನುಮಾನವೇ? ಮೂಲಸೌಕರ್ಯಗಳ ಕೊರತೆ ಅಡ್ಡಿಯಾಗುವ ಸಾಧ್ಯತೆ ಇದೆ.


Click the Play button to hear this message in audio format

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ಅಡಿಯಲ್ಲಿ ಐದು ಪ್ರತ್ಯೇಕ ಪಾಲಿಕೆಯನ್ನು ವಿಂಗಡಿಸಲಾಗಿದ್ದು, ರಾಜ್ಯ ಚುನಾವಣಾ ಆಯೋಗವು ಚುನಾವಣೆ ನಡೆಸಲು ಸಜ್ಜಾಗಿದೆ. ಆದರೆ, ಕಳೆದ ಆರು ವರ್ಷಗಳಿಂದ ಜನಪ್ರತಿನಿಧಿಗಳನ್ನು ಕಾಣದೆ ಅನಾಥವಾಗಿರುವ ಪಾಲಿಕೆಗೆ ಈ ವರ್ಷವೂ ಚುನಾವಣೆ ನಡೆಯುವುದು ಅನುಮಾನವೇ?

ಹೌದು. ಯಾಕಂದರೆ ಚುನಾವಣೆಗೆ ಮೂಲಸೌಕರ್ಯಗಳ ಕೊರತೆ ಅಡ್ಡಿಯಾಗುವ ಸಾಧ್ಯತೆ ಇದ್ದು, ಇದೇ ವಿಚಾರವನ್ನು ಮುಂದಿಟ್ಟುಕೊಂಡು ನ್ಯಾಯಾಲಯ ಕದ ತಟ್ಟಲು ಕೆಲವರು ಸಜ್ಜಾಗಿದ್ದಾರೆ.

ರಾಜ್ಯ ಚುನಾವಣಾ ಆಯೋಗವು ತನ್ನ ಸಾಂವಿಧಾನಿಕ ಜವಾಬ್ದಾರಿಯನ್ನು ಪೂರೈಸಲು ಮುಂದಾಗಿದೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಕರಡು ಮತದಾರರ ಪಟ್ಟಿಯು ಚುನಾವಣಾ ಪ್ರಕ್ರಿಯೆಯ ಮೊದಲ ಅಧಿಕೃತ ಹೆಜ್ಜೆಯಾಗಿದೆ. ವಾರ್ಡ್‌ಗಳ ಪುನರ್ ವಿಂಗಡಣೆ ಮತ್ತು ಮೀಸಲಾತಿ ಪ್ರಕ್ರಿಯೆಗಳು ಪೂರ್ಣಗೊಂಡ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ. ಮೇ ತಿಂಗಳಿನಲ್ಲಿ ಚುನಾವಣೆ ನಡೆಸಿದರೆ ಜೂನ್ ವೇಳೆಗೆ ಹೊಸ ಕೌನ್ಸಿಲ್ ಅಸ್ತಿತ್ವಕ್ಕೆ ಬರಬಹುದು ಎಂಬುದು ಆಯೋಗದ ಲೆಕ್ಕಾಚಾರವಾಗಿದೆ. ಆದರೆ, ಪಾಲಿಕೆಗಳಿಗೆ ಅಗತ್ಯ ಇರುವ ಕಟ್ಟಡ ಸೇರಿದಂತೆ ಮೂಲಸೌಕರ್ಯಗಳಿಲ್ಲದೆ ಚುನಾವಣೆ ನಡೆಸುವುದು ಎಷ್ಟು ಸಮಂಜಸ ಎಂಬ ಪ್ರಶ್ನೆ ಎದುರಾಗಿದೆ.

ಜಿಬಿಎ ಪರಿಕಲ್ಪನೆಯ ಮೂಲ ಉದ್ದೇಶ ಆಡಳಿತ ವಿಕೇಂದ್ರೀಕರಣವಾಗಿದೆ. ಬೆಂಗಳೂರನ್ನು ಐದು ಸ್ವತಂತ್ರ ಆಡಳಿತಾತ್ಮಕ ವಲಯಗಳನ್ನಾಗಿ ವಿಂಗಡಿಸಲಾಗಿದೆ. ಇದರ ಪ್ರಕಾರ, ಪ್ರತಿ ವಲಯಕ್ಕೂ ಒಬ್ಬರು ಮೇಯರ್‌, ಆಯುಕ್ತರು, ಪ್ರತ್ಯೇಕ ಎಂಜಿನಿಯರಿಂಗ್ ವಿಭಾಗ, ಆರೋಗ್ಯ ವಿಭಾಗ ಮತ್ತು ಕೌನ್ಸಿಲ್ ಹಾಲ್ ಅಗತ್ಯವಿದೆ. ಪ್ರಸ್ತುತ ಇರುವ ಕೇಂದ್ರ ಕಚೇರಿ ಕೇಂದ್ರ ವಲಯಕ್ಕೆ ಲಭ್ಯವಾಗಲಿದೆ. ಇಲ್ಲಿ ಸಕಲ ಸೌಲಭ್ಯಗಳಿವೆ. ಉಳಿದ ನಾಲ್ಕು ವಲಯಗಳಾದ ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮ ವಲಯಗಳಿಗೆ ಸ್ವತಂತ್ರ ಅಸ್ತಿತ್ವ ಬೇಕಾಗಿದೆ. ಆದರೆ, ಈ ವಲಯಗಳಿಗೆ ಕನಿಷ್ಠ ಪಕ್ಷ ಮೇಯರ್‌, ಉಪಮೇಯರ್‌, ಆಯುಕ್ತರು ಕುಳಿತುಕೊಳ್ಳಲು ಒಂದು ಸುಸಜ್ಜಿತ ಕಚೇರಿಯೂ ಸಿದ್ಧವಾಗಿಲ್ಲ. ಒಂದು ವೇಳೆ ಚುನಾವಣೆ ನಡೆದು ಪಾಲಿಕೆ ಸದಸ್ಯರು ಆಯ್ಕೆಯಾಗಿ ಬಂದರೆ ಅವರ ಸಭೆ ನಡೆಸಲು ಕೌನ್ಸಿಲ್ ಹಾಲ್ ಎಲ್ಲಿದೆ?, ಮೂಲಸೌಕರ್ಯಗಳು ಎಲ್ಲಿವೆ? ಎಂಬುದು ಯಕ್ಷಪ್ರಶ್ನೆಯಾಗಿದೆ ಎಂದು ಮೂಲಗಳು ಹೇಳಿವೆ.

ಕೇವಲ ಕಟ್ಟಡವಲ್ಲ, ಆಡಳಿತಾತ್ಮಕ ಬಿಕ್ಕಟ್ಟು

ಕಚೇರಿ ಇಲ್ಲದಿರುವುದು ಎಂದರೆ ಕೇವಲ ನಾಲ್ಕು ಗೋಡೆಗಳಿಲ್ಲ ಎಂದರ್ಥವಲ್ಲ, ಒಂದು ಮಹಾನಗರ ಪಾಲಿಕೆಯ ಕಚೇರಿ ಎಂದರೆ ಅಲ್ಲಿ ವಿವಿಧ ವಿಭಾಗಗಳ ಕೇಂದ್ರಗಳಿರಬೇಕು. ಕಂದಾಯ ವಸೂಲಾತಿಯ ವ್ಯವಸ್ಥೆ ಇರಬೇಕು, ಸಾರ್ವಜನಿಕರ ಕುಂದುಕೊರತೆ ಆಲಿಸುವ ವಿಭಾಗವಿರಬೇಕು. ಪ್ರಸ್ತುತ ಕೇಂದ್ರ ಕಚೇರಿಗಳಲ್ಲಿಯೇ ಕೆಲಸ ಮಾಡುವ ಉದ್ದೇಶ ಇದ್ದರೆ ಐದು ವಲಯಗಳ ವಿಭಜನೆಯ ಉದ್ದೇಶವೇ ಸೋತುಹೋಗುತ್ತದೆ.

ಕಡತಗಳ ವರ್ಗಾವಣೆ, ಆಸ್ತಿ ದಾಖಲೆಗಳ ಹಂಚಿಕೆ ಮತ್ತು ಹಣಕಾಸಿನ ವಿಂಗಡಣೆ ಇನ್ನೂ ಪೂರ್ಣಪ್ರಮಾಣದಲ್ಲಿ ನಡೆದಿಲ್ಲ. ಇಂತಹ ಅಸ್ತವ್ಯಸ್ತ ಸ್ಥಿತಿಯಲ್ಲಿ ಚುನಾವಣೆ ನಡೆಸಿದರೆ ಅದು ಆಡಳಿತಾತ್ಮಕ ಅರಾಜಕತೆಗೆ ದಾರಿ ಮಾಡಿಕೊಡಬಹುದು ಎಂದು ಹೇಳಲಾಗಿದೆ.

ಮೂಲಸೌಕರ್ಯದ ಈ ಬೃಹತ್ ಕೊರತೆಯನ್ನೇ ಅಸ್ತ್ರವಾಗಿಟ್ಟುಕೊಂಡು ಕೆಲವು ಸಂಘಟನೆಗಳು ಹಾಗೂ ರಾಜಕೀಯ ಹಿತಾಸಕ್ತಿಗಳು ನ್ಯಾಯಾಲಯದ ಮೊರೆ ಹೋಗಲು ಸಜ್ಜಾಗಿವೆ. ಆಡಳಿತಾತ್ಮಕವಾಗಿ ಕಾರ್ಯನಿರ್ವಹಿಸಲು ಸಿದ್ಧವಿಲ್ಲದ ವ್ಯವಸ್ಥೆಗೆ ಚುನಾವಣೆ ನಡೆಸುವುದು ತೆರಿಗೆದಾರರ ಹಣದ ಪೋಲು ಎಂಬುದು ಅವರ ವಾದವಾಗಿದೆ. ಸಂವಿಧಾನದ ೭೪ನೇ ತಿದ್ದುಪಡಿಯ ಆಶಯದಂತೆ ಸ್ಥಳೀಯ ಸಂಸ್ಥೆಗಳು ಸ್ವಾಯತ್ತವಾಗಿ ಕಾರ್ಯನಿರ್ವಹಿಸಬೇಕು. ಆದರೆ ಕಚೇರಿ, ಸಿಬ್ಬಂದಿ ಮತ್ತು ತಾಂತ್ರಿಕ ಸೌಲಭ್ಯಗಳಿಲ್ಲದೆ ಈ ಸ್ವಾಯತ್ತತೆ ಸಾಧ್ಯವಿಲ್ಲ. ಇದು ನ್ಯಾಯಾಲಯದಲ್ಲಿ ಚುನಾವಣೆಗೆ ತಡೆಯಾಜ್ಞೆ ತರಲು ಪ್ರಬಲ ಕಾರಣವಾಗಬಹುದು. ಚುನಾವಣೆ ನಡೆಸಲು ಸಾವಿರಾರು ಸಿಬ್ಬಂದಿ ಬೇಕು. ಈಗಾಗಲೇ ಬಿಬಿಎಂಪಿ ವಿಭಜನೆಯ ಗೊಂದಲದಲ್ಲಿರುವ ಅಧಿಕಾರಿಗಳಿಗೆ ಈಗ ಹೊಸ ಜವಾಬ್ದಾರಿ ಹೊರಿಸಲಾಗುತ್ತಿದೆ.

ಐದು ವಲಯಗಳಿಗೆ ಪ್ರತ್ಯೇಕವಾಗಿ ಅಧಿಕಾರಿಗಳನ್ನು ಹಂಚಿಕೆ ಮಾಡುವ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಯಾವ ಅಧಿಕಾರಿ ಯಾವ ವಲಯಕ್ಕೆ ಸೇರುತ್ತಾರೆ ಎಂಬ ಸ್ಪಷ್ಟತೆ ಇಲ್ಲದೆ, ಚುನಾವಣಾ ಕರ್ತವ್ಯ ನಿರ್ವಹಿಸುವುದು ಸಿಬ್ಬಂದಿಗೂ ತಲೆನೋವಾಗಿದೆ.

ರಾಜ್ಯ ಕಾಂಗ್ರೆಸ್‌ ಸರ್ಕಾರಕ್ಕೆ ಈ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ನಗರದ ಅಭಿವೃದ್ಧಿಗೆ ಹೊಸ ರೂಪ ನೀಡಲು ಜಿಬಿಎ ಅಗತ್ಯ ಎಂದು ಸರ್ಕಾರ ಪ್ರತಿಪಾದಿಸುತ್ತಿದೆ. ಆದರೆ ವಿರೋಧ ಪಕ್ಷಗಳು ಇದೊಂದು ಚುನಾವಣಾ ಗಿಮಿಕ್ ಎಂದು ಟೀಕಿಸುತ್ತಿವೆ. ಈ ನಡುವೆ ಮೂಲಸೌಕರ್ಯವಿಲ್ಲದ ಹೊಸ ವ್ಯವಸ್ಥೆಯಲ್ಲಿ ಯಾವ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕು ಎಂಬುದು ತಲೆಬಿಸಿಯಾಗಿದೆ.

ನ್ಯಾಯಾಲಯದ ಆದೇಶದ ಸಾಧಕ-ಬಾಧಕ

ಒಂದು ವೇಳೆ ಯಾರಾದರೂ ನ್ಯಾಯಾಲಯ ಮೊರೆ ಹೋದರೆ ಚುನಾವಣೆ ನಡೆಯುವುದು ಅನುಮಾನವಾಗಲಿದೆ. ಅರ್ಜಿಯನ್ನು ತಿರಸ್ಕರಿಸದರೆ ರಾಜ್ಯ ಚುನಾವಣಾ ಆಯೋಗವು ಸಿದ್ಧತೆ ಕೈಗೊಂಡಿರುವಂತೆ ಯಾವುದೇ ಆತಂಕ ಇಲ್ಲದೆ ಮೇ ತಿಂಗಳಲ್ಲಿ ಚುನಾವಣೆ ನಡೆಯಲಿದೆ. ಆದರೆ, ಅರ್ಜಿಯನ್ನು ಪುರಸ್ಕರಿಸಿದರೆ ಚುನಾವಣೆ ಮುಂದೂಡಿಕೆಯಾಗಲಿದೆ. ನ್ಯಾಯಾಲಯ ತಡೆ ನೀಡಿದರೆ ತಕ್ಷಣ ರಾಜ್ಯ ಚುನಾವಣಾ ಆಯೋಗವು ತನ್ನೆಲ್ಲಾ ಚಟುವಟಿಕೆಗಳನ್ನು ನಿಲ್ಲಿಸಬೇಕಾಗುತ್ತದೆ. ಕರಡು ಮತದಾರರ ಪಟ್ಟಿ ಸಿದ್ಧಪಡಿಸುವುದು, ಚುನಾವಣಾ ದಿನಾಂಕ ಘೋಷಿಸುವ ಪ್ರಕ್ರಿಯೆಗಳನ್ನು ಸ್ಥಗಿತ ಮಾಡಬೇಕಾಗುತ್ತದೆ. ಪಾಲಿಕೆಯ ಅಧಿಕಾರವು ಜನಪ್ರತಿನಿಧಿಗಳ ಕೈಗೆ ಸಿಗುವ ಬದಲು ಮತ್ತೆ ಐಎಎಸ್ ಅಧಿಕಾರಿಗಳ ಕೈಯಲ್ಲೇ ಉಳಿಯುತ್ತದೆ. ಇದರಿಂದ ಸ್ಥಳೀಯ ಮಟ್ಟದ ಸಮಸ್ಯೆಗಳಿಗೆ ಸ್ಪಂದಿಸುವ ಜನಪ್ರತಿನಿಧಿಗಳಿಲ್ಲದಂತಾಗುತ್ತದೆ.

ಪಾಲಿಕೆಗೆ ಕಚೇರಿಗಳಿಲ್ಲ, ಮೂಲಸೌಕರ್ಯವಿಲ್ಲ ಎಂಬ ಕಾರಣಕ್ಕೆ ತಡೆ ನೀಡಿದರೆ, ಸರ್ಕಾರಕ್ಕೆ ತನ್ನ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಸಮಯ ಸಿಗುತ್ತದೆ. ಆ ಅವಧಿಯಲ್ಲಿ ಸರ್ಕಾರ ಐದು ವಲಯಗಳಿಗೆ ಬೇಕಾದ ಕಚೇರಿಗಳು, ಕೌನ್ಸಿಲ್ ಹಾಲ್ ಮತ್ತು ಸಿಬ್ಬಂದಿ ನೇಮಕಾತಿಯನ್ನು ಪೂರ್ಣಗೊಳಿಸಬೇಕಾಗುತ್ತದೆ.

ಚುನಾವಣೆ ಮುಂದೂಡಿಕೆಯಾದರೆ ರಾಜಕೀಯ ಪಕ್ಷಗಳ ನಡುವೆ ಸಂಘರ್ಷ ಪ್ರಾರಂಭವಾಗಲಿದೆ. ಆಡಳಿತ ಪಕ್ಷವು ವಿರೋಧ ಪಕ್ಷದವರು ಅಭಿವೃದ್ಧಿ ತಡೆಯುತ್ತಿದ್ದಾರೆ ಎಂದು ಆರೋಪಿಸಿದರೆ, ವಿರೋಧ ಪಕ್ಷಗಳು ಸರ್ಕಾರವೇ ವ್ಯವಸ್ಥಿತವಾಗಿ ಚುನಾವಣೆ ತಪ್ಪಿಸಲು ಸಂಚು ಮಾಡಿದೆ ಎಂದು ವಾದಿಸಬಹುದು.

ಈ ಬಗ್ಗೆ ದ ಫೆಡರಲ್‌ ಕರ್ನಾಟಕ ಜತೆ ಮಾತನಾಡಿದ ಬಿಜೆಪಿ ಮುಖಂಡ ಎನ್‌.ಆರ್‌.ರಮೇಶ್‌, ರಾಜ್ಯ ಚುನಾವಣಾ ಆಯೋಗವು ಜಿಬಿಎ ಚುನಾವಣೆ ನಡೆಸಲು ಸಕಲ ರೀತಿಯಲ್ಲಿ ಸಜ್ಜಾಗಿದೆ. ಆದರೆ ಚುನಾವಣೆ ಬಳಿಕ ಬೇಕಾಗುವ ಅಗತ್ಯ ಮೂಲಸೌಕರ್ಯಗಳನ್ನು ರಾಜ್ಯ ಸರ್ಕಾರ ಕೈಗೊಂಡಿಲ್ಲ. ಯಾರಾದರೂ ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದರೆ ಸಹಜವಾಗಿ ಮತ್ತೆ ಚುನಾವಣೆ ಮುಂದೂಡಿಕೆಯಾಗುವ ಸಾಧ್ಯತೆ ಇರುತ್ತದೆ. ಪಾಲಿಕೆಯ ಕೇಂದ್ರ ಕಚೇರಿ ಹೊರತುಪಡಿಸಿ ಇತರೆ ವಲಯಗಳಿಗೆ ಕಟ್ಟಡ ಸೇರಿದಂತೆ ಯಾವುದೇ ರೀತಿಯಲ್ಲಿಯೂ ಮೂಲಸೌಕರ್ಯಗಳು ಇಲ್ಲ. ಸರ್ಕಾರವೂ ಸಹ ಈ ಬಗ್ಗೆ ನೀಲನಕ್ಷೆ ಯಾವ ರೀತಿಯಲ್ಲಿ ರೂಪಿಸಿಕೊಂಡಿದೆ ಎಂಬುದು ಗೊತ್ತಿಲ್ಲ. ಈ ಬಗ್ಗೆ ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಹೇಳಿದರು.

Read More
Next Story