
ನಗರ ಜಿಲ್ಲಾ ಚುನಾವಣಾ ಅಧಿಕಾರಿ, ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಸೋಮವಾರ ಸಭೆ ನಡೆಸಿದರು.
ಜಿಬಿಎ ಚುನಾವಣೆ: ಕರಡು ಮತದಾರರ ಪಟ್ಟಿ ಪರಿಶೀಲನೆ, ಮಹೇಶ್ವರ್ ರಾವ್ ನೇತೃತ್ವದಲ್ಲಿ ಮಹತ್ವದ ಸಭೆ
ಮುಂಬರುವ 2026ರ ಚುನಾವಣಾ ದೃಷ್ಟಿಯಿಂದ, ಪಾರದರ್ಶಕ ಮತ್ತು ನಿಖರವಾದ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವಂತೆ ಮಹೇಶ್ವರ್ ರಾವ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಿದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯಲ್ಲಿ ಬರುವ ಬೆಂಗಳೂರಿನ ಎಲ್ಲಾ ಐದು ನಗರ ಪಾಲಿಕೆಗಳ ಚುನಾವಣೆಗೆ ಸಂಬಂಧಿಸಿದಂತೆ ಆಡಳಿತ ಯಂತ್ರ ಸಿದ್ಧತೆಗಳನ್ನು ಚುರುಕುಗೊಳಿಸಿದೆ. ಈ ನಿಟ್ಟಿನಲ್ಲಿ ಕರಡು ಮತದಾರರ ಪಟ್ಟಿ ಕುರಿತು ಬೆಂಗಳೂರು ನಗರ ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಸೋಮವಾರ ಸಭೆ ನಡೆಸಿದರು.
ನಗರದ ಐದೂ ಪಾಲಿಕೆಗಳ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ, ದೋಷಗಳ ತಿದ್ದುಪಡಿ ಮತ್ತು ಕರಡು ಪಟ್ಟಿಯ ಸಿದ್ಧತೆ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಮುಂಬರುವ 2026ರ ಚುನಾವಣಾ ದೃಷ್ಟಿಯಿಂದ, ಪಾರದರ್ಶಕ ಮತ್ತು ನಿಖರವಾದ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವಂತೆ ಮಹೇಶ್ವರ್ ರಾವ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಿದರು.
ಸಭೆಯಲ್ಲಿ ಯಾರ್ಯಾರು ಭಾಗಿ?
ಸಭೆಯಲ್ಲಿ ಚುನಾವಣಾ ವಿಭಾಗದ ವಿಶೇಷ ಆಯುಕ್ತರಾದ ಆರ್. ರಾಮಚಂದ್ರನ್, ನಗರ ಪಾಲಿಕೆಗಳ ಆಯುಕ್ತರುಗಳಾದ ರಾಜೇಂದ್ರ ಚೋಳನ್, ಪೊಮ್ಮಲ ಸುನೀಲ್ ಕುಮಾರ್, ರಮೇಶ್ ಡಿ.ಎಸ್, ರಮೇಶ್ ಕೆ.ಎನ್ ಹಾಗೂ ಸಹಾಯಕ ಆಯುಕ್ತರಾದ ಎಂ. ಶ್ರೀನಿವಾಸ್ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು. ಅಲ್ಲದೆ, ಎಲ್ಲಾ ಕಂದಾಯ ವಿಭಾಗದ ಅಪರ ಆಯುಕ್ತರು ಮತ್ತು ಇತರೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದು, ತಮ್ಮ ವ್ಯಾಪ್ತಿಯ ವಿವರಗಳನ್ನು ಹಂಚಿಕೊಂಡರು.
88.9 ಲಕ್ಷ ಮಂದಿಗೆ ಮತದಾನದ ಹಕ್ಕು
ಪಾಲಿಕೆ ಚುನಾವಣೆಗಳಿಗೆ ರಾಜ್ಯ ಚುನಾವಣಾ ಆಯೋಗವು ಜನವರಿ 18ರಂದು ಮತದಾರರ ಕರಡು ಪಟ್ಟಿಯನ್ನು ಪ್ರಕಟಿಸಿತ್ತು. ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್. ಸಂಗ್ರೇಶಿ ಅವರು ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಐದು ಕಾರ್ಪೊರೇಷನ್‌ಗಳ 369 ವಾರ್ಡ್‌ಗಳಲ್ಲಿ ಒಟ್ಟು 88.91 ಲಕ್ಷ ಮತದಾರರಿದ್ದಾರೆ. ಇದರಲ್ಲಿ 45.69 ಲಕ್ಷ ಪುರುಷರು ಮತ್ತು 43.20 ಲಕ್ಷ ಮಹಿಳಾ ಮತದಾರರಿದ್ದು, ಒಟ್ಟು 8,045 ಮತಗಟ್ಟೆಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಸುಪ್ರೀಂ ಕೋರ್ಟ್ ಜೂನ್ 30 ಒಳಗೆ ಚುನಾವಣೆ ನಡೆಸುವಂತೆ ಕಟ್ಟುನಿಟ್ಟಿನ ಗಡುವು ನೀಡಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಮಹತ್ವ ಪಡೆದುಕೊಂಡಿದೆ.
ಆಯೋಗವು ಜನವರಿ 18 ರಂದೇ ಕರಡು ಪಟ್ಟಿ ಪ್ರಕಟಿಸಿ, ಸಾರ್ವಜನಿಕರಿಗೆ ಪರಿಶೀಲನೆಗೆ ಮುಕ್ತ ಅವಕಾಶ ಕಲ್ಪಿಸಿತ್ತು. 2025ರ ಅಕ್ಟೋಬರ್ 1ನ್ನು ಅರ್ಹತಾ ದಿನಾಂಕವನ್ನಾಗಿ ಪರಿಗಣಿಸಿ ಸಿದ್ಧಪಡಿಸಲಾದ ಈ ಪಟ್ಟಿಯಲ್ಲಿ ಹೆಸರು ಬಿಟ್ಟುಹೋಗಿದ್ದರೆ ಅಥವಾ ದೋಷಗಳಿದ್ದರೆ ಆಕ್ಷೇಪಣೆ ಸಲ್ಲಿಸಲು ಫೆಬ್ರವರಿ 6ರವರೆಗೆ ಕಾಲಾವಕಾಶ ನೀಡಲಾಗಿತ್ತು. ಸದ್ಯ ಸಲ್ಲಿಕೆಯಾದ ಆಕ್ಷೇಪಣೆಗಳ ವಿಲೇವಾರಿ ಪ್ರಕ್ರಿಯೆ ನಡೆಯುತ್ತಿದ್ದು, ಫೆಬ್ರವರಿ 16ರೊಳಗೆ ಇದನ್ನು ಪೂರ್ಣಗೊಳಿಸಿ, ಮಾರ್ಚ್ 16ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸುವುದಾಗಿ ಆಯೋಗವು ಸ್ಪಷ್ಟಪಡಿಸಿತ್ತು.
ಹೊಸದಾಗಿ ಜಾರಿಗೆ ಬಂದಿರುವ 'ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ' ಅನ್ವಯ, ಹಿಂದಿನ ಬಿಬಿಎಂಪಿಯನ್ನು ವಿಭಜಿಸಿ ವಾರ್ಡ್‌ಗಳ ಮರುವಿಂಗಡಣೆ ಮಾಡಲಾಗಿದೆ. ಈ ಬಾರಿ ಬೆಂಗಳೂರು ಉತ್ತರ ವಲಯದಲ್ಲಿ ಅತಿ ಹೆಚ್ಚು ಅಂದರೆ 72 ವಾರ್ಡ್‌ಗಳಿದ್ದರೆ (19.54 ಲಕ್ಷ ಮತದಾರರು), ಉಳಿದ ವಲಯಗಳಲ್ಲೂ ಜನಸಂಖ್ಯೆಗೆ ಅನುಗುಣವಾಗಿ ವಾರ್ಡ್‌ಗಳನ್ನು ಹಂಚಿಕೆ ಮಾಡಲಾಗಿದೆ. ಅಂತಿಮ ಪಟ್ಟಿ ಪ್ರಕಟಗೊಂಡ ಬಳಿಕ ಚುನಾವಣೆ ದಿನಾಂಕ ಘೋಷಣೆಯಾಗುವ ನಿರೀಕ್ಷೆಯಿದ್ದು, ರಾಜಕೀಯ ಪಕ್ಷಗಳು ಈಗಾಗಲೆ ತಾಲೀಮು ಆರಂಭಿಸಿವೆ.

