ವೈಎಸ್‌ಆರ್‌ನಿಂದ ಅಜಿತ್ ಪವಾರ್‌ವರೆಗೆ: ರಾಜಕಾರಣಿಗಳ ವಿಮಾನ ದುರಂತಗಳ ಹಿಂದೆ ಪಿತೂರಿಯ ನೆರಳು
x

ಡಿಸಿಎಂ ಡಿ.ಕೆ. ಶಿವಕುಮಾರ್‌, ಮಹಾರಾಷ್ಟ್ರ ಡಿಸಿಎಂ ದಿವಂಗತ ಅಜಿತ್‌ ಪವಾರ್‌ ಹಾಗೂ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ

ವೈಎಸ್‌ಆರ್‌ನಿಂದ ಅಜಿತ್ ಪವಾರ್‌ವರೆಗೆ: ರಾಜಕಾರಣಿಗಳ ವಿಮಾನ ದುರಂತಗಳ ಹಿಂದೆ ಪಿತೂರಿಯ ನೆರಳು

ದೇಶದಲ್ಲಿ ಗಣ್ಯರ ವಿಮಾನ ಹಾಗೂ ಹೆಲಿಕಾಪ್ಟರ್‌ಗಳು ಪತನವಾದಾಗ ಸಂಶಯಗಳು ಸಹಜವಾಗಿ ವ್ಯಕ್ತವಾಗುತ್ತವೆ. ಇದೀಗ ಮಹಾರಾಷ್ಟ್ರದ ಡಿಸಿಎಂ ಅಜಿತ್‌ ಪವಾರ್‌ ಸಾವಿನ ಸುತ್ತಲೂ ಅನುಮಾನಗಳು ವ್ಯಕ್ತವಾಗಿವೆ.


Click the Play button to hear this message in audio format

ಮಹಾರಾಷ್ಟ್ರ ಡಿಸಿಎಂ ಅಜಿತ್‌ ಪವಾರ್‌ ಸೇರಿ ಐವರ ಸಾವಿಗೆ ಕಾರಣವಾಗಿ ಲಘು ವಿಮಾನ ಅಪಘಾತ ಇಡೀ ದೇಶವನ್ನೇ ಬಿಚ್ಚಿ ಬೀಳಿಸಿದೆ. ಘಟನೆಯ ಸುತ್ತ ಅನುಮಾನಗಳ ಹುತ್ತ ಬೆಳೆದಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿ ಹಲವರು ಘಟನೆಯ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಇದು ಅಪಘಾತವೋ, ಪಿತೂರಿಯೋ ಎಂಬ ಚರ್ಚೆಗಳು ಆರಂಭವಾಗಿವೆ.

ಪ್ರತಿ ಬಾರಿ ವಿಮಾನ ಹಾಗೂ ಹೆಲಿಕಾಪ್ಟರ್‌ ಅಪಘಾತವಾದಾಗ ಕೆಲವು ಆತಂಕ, ಸಂಶಯಗಳು ಉದ್ಭವಿಸುತ್ತವೆ. ಸುರಕ್ಷತೆಯ ಗರಿಷ್ಠ ಮಾನದಂಡಗಳನ್ನು ಪಾಲಿಸುವ ವಿಮಾನಗಳು ಅಪಘಾತಕ್ಕೆ ಈಡಾಗಲು ಕಾರಣವೇನು ಎಂಬುದೇ ಮೂಲ ಪ್ರಶ್ನೆ. ಅದರಲ್ಲೂ ಸಿಎಂ, ಡಿಸಿಎಂಗಳು ಪ್ರಯಾಣಿಸುವ ವಿಮಾನಗಳ ಬಗ್ಗೆ ಇನ್ನಷ್ಟ ಜತನ ವಹಿಸಲಾಗುತ್ತದೆ. ಹೀಗಿರುವಾಗ ಘಟನೆ ನಡೆಯಲು ಹೇಗೆ ಸಾಧ್ಯ ಎಂಬ ಪ್ರಶ್ನೆಗಳು ಭುಗಿಲೇಳುತ್ತವೆ.

ಅದರ ಜತೆಗೆ, ಸಾವಿನ ಹಿನ್ನೆಲೆಯಲ್ಲಿ ಏನಾದರೂ ಪಿತೂರಿಗಳು ಹಾಗೂ ರಾಜಕೀಯ ದ್ವೇಷಗಳು ಇವೆಯೇ ಎಂಬ ಚರ್ಚೆಗಳು ಶುರುವಾಗುತ್ತವೆ. ಅಜಿತ್ ಪವಾರ್​ ಅವರ ಮೃತಪಟ್ಟ ಘಟನೆಯ ಬಗ್ಗೆಯೂ ಇದೇ ಮಾದರಿಯ ಚರ್ಚೆಗಳು ನಡೆದಿವೆ. ಪ್ರಮುಖವಾಗಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಈ ದುರ್ಘಟನೆಯ ಹಿಂದೆ ರಾಜಕೀಯವಿದ್ದು, ಅಜಿತ್​ ಪವಾರ್ ಅವರನ್ನು ಅವಘಡಕ್ಕೆ ಸಿಲುಕಿಸಲಾಗಿದೆ ಎಂಬರ್ಥದಲ್ಲಿ ನೇರವಾಗಿ ಹೇಳಿಕೆ ನೀಡಿದ್ದಾರೆ.

ದೇಶದ ನಾನಾ ಕಡೆ ರಾಜಕಾರಣಿಗಳು ಇಂಥ ಕೆಲವು ಹೇಳಿಕೆಗಳನ್ನು ತೇಲಿ ಬಿಟ್ಟಿದ್ದೂ ಆಗಿದೆ. ಕರ್ನಾಟಕದ ರಾಜಕಾರಣಿಗಳ ವಿಷಯಕ್ಕೆ ಬರುವುದಾದರೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ''ರಾಜಕಾರಣಿಗಳು ಹೆಚ್ಚು ಮುನ್ನೆಚ್ಚರಿಕೆ ವಹಿಸಬೇಕು'' ಎಂದು ಹೇಳಿಕೆ ನೀಡಿದ್ದಾರೆ. ಅದು ಮುಂಜಾಗ್ರತೆಯೊ ಅಥವಾ ಗೂಢಾರ್ಥವಿದೆಯೇ ಎಂಬುದೇ ಸದ್ಯದ ಚರ್ಚೆ.

ಮಮತಾ ಬ್ಯಾನರ್ಜಿ ಹೇಳಿದ್ದೇನು?

ಅಜಿತ್​ ಪವಾರ್ ಅವರ ಸಾವಿನ ಬಗ್ಗೆ ಪ್ರತಿಕ್ರಿಯೆ ನೀಡಿದ ಮಮತಾ ಬ್ಯಾನರ್ಜಿ "ಈ ದೇಶದಲ್ಲಿ ಜನರಿಗೆ ಸುರಕ್ಷತೆ ಮತ್ತು ಭದ್ರತೆ ಇಲ್ಲದಂತಾಗಿದೆ. ವಿರೋಧ ಪಕ್ಷಗಳ ಭವಿಷ್ಯ ಏನಾಗಲಿದೆ ಎಂದು ಗೊತ್ತಿಲ್ಲ. ಅಜಿತ್ ಪವಾರ್ ಅವರು ಸರ್ಕಾರದ ಭಾಗವಾಗಿದ್ದರು. ಆದರೂ, ಅವರು ಬಿಜೆಪಿ ಬಿಡಲು ಬಯಸಿದ್ದರು ಎಂಬುದು ನನಗೆ ಕೆಲ ದಿನಗಳ ಹಿಂದೆ ತಿಳಿದಿತ್ತು. ಈಗ ನೋಡಿದರೆ, ಇಂತಹ ದುರಂತ ಸಂಭವಿಸಿದೆ. ಇದು ನನಗೆ ಆಘಾತ ತಂದಿದೆ," ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಮುಂದುವರಿದ ಅವರು ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ. "ಇತರ ತನಿಖಾ ಸಂಸ್ಥೆಗಳ ಮೇಲಿನ ನಂಬಿಕೆ ಕಳೆದುಹೋಗಿದೆ. ನಮಗೆ ಸುಪ್ರೀಂಕೋರ್ಟ್ ಮೇಲೆ ಮಾತ್ರ ನಂಬಿಕೆ ಉಳಿದಿದೆ. ಬೇರೆಲ್ಲಾ ತನಿಖಾ ಸಂಸ್ಥೆಗಳನ್ನು 'ಖರೀದಿಸಲಾಗಿದೆ'. ಆದ್ದರಿಂದ ಸುಪ್ರೀಂಕೋರ್ಟ್ ಉಸ್ತುವಾರಿಯಲ್ಲೇ ವಿಮಾನ ದುರಂತದ ತನಿಖೆಯಾಗಬೇಕು," ಎಂದು ಮಮತಾ ಬ್ಯಾನರ್ಜಿ ಒತ್ತಾಯಿಸಿದ್ದಾರೆ.

ಬಿಡುಬೀಸಿನ ಹಾಗೂ ವಿವಾದಾತ್ಮಕ ಹೇಳಿಕೆಗಳ ಮೂಲಕ ಮಮತಾ ಬ್ಯಾನರ್ಜಿ ಹೆಚ್ಚು ಪ್ರಚಲಿತದಲ್ಲಿರುವ ರಾಜಕಾರಣಿಯಾಗಿರುವ ಕಾರಣ ಅವರ ಹೇಳಿಕೆ ಎಷ್ಟರ ಮಟ್ಟಿಗೆ ಸರಿ ಎಂಬುದು ಕೂಡ ಚರ್ಚಗೆ ಹೇತುವಾಗಿದೆ. ಮಿಗಿಲಾಗಿ ಪಶ್ಚಿಮ ಬಂಗಾಳಕ್ಕೆ ಇದು ಚುನಾವಣಾ ವರ್ಷ. ಕಳೆದ ಬಾರಿ ೭೦ಕ್ಕೂ ಅಧಿಕ ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ಈ ಬಾರಿ ಮ್ಯಾಜಿಕ್ ನಂಬರ್ ದಾಟಲು ನಾನಾ ಕಸರತ್ತು ಮಾಡುತ್ತಿದೆ. ಅಲ್ಲದೆ, ಬಿಜೆಪಿಯ ಮುಂದಿನ ನಡೆಗಳು ಇನ್ನೂ ಕುತೂಹಲಕಾರಿ ಎಂಬುದಂತೂ ಸತ್ಯ. ಹೀಗಾಗಿ ಆಡಳಿತಾರೂಢ ಸರ್ಕಾರದ ನಾಯಕರಾಗಿರುವ ಮಮತಾ, ಬಿಜೆಪಿಗೆ ಸೆಡ್ಡು ಹೊಡೆಯಲು ನಾನಾ ತಂತ್ರಗಳನ್ನು ಬಳಸಿಕೊಳ್ಳುತ್ತಿದ್ದಾರೆ.

ಹೀಗಾಗಿ ಸಿಗುವ ಅವಕಾಶವನ್ನು ಬಾಚಿಕೊಳ್ಳುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಬಿಜೆಪಿ 'ಪವರ್​ ಫುಲ್' ಹಾಗೂ ರಾಜ್ಯ ಸರ್ಕಾರದಲ್ಲಿ ಅಜಿತ್ ಪವಾರ್ ಅವರ ಎನ್​ಸಿಪಿ ಪಾಲುದಾರ ಪಕ್ಷವಾಗಿರುವ ಕಾರಣ ಪರೋಕ್ಷವಾಗಿ ವಿಮಾನ ಅವಘಡದ ಘಟನೆ ಹಿಂದೆ ಬಿಜೆಪಿ ಇದೆ ಎಂಬುದನ್ನು ವ್ಯಕ್ತಪಡಿಸಲು ಮಮತಾ ಈ ಹೇಳಿಕೆ ನೀಡಿದ್ದಾರೆ ಎಂಬುದೇ ರಾಜಕೀಯ ಪರಿಣತರ ಅಂಬೋಣ. ​

ಡಿಸಿಎಂ ಡಿ.ಕೆ. ಶಿಕುಮಾರ್‌ ಹೇಳಿದ್ದೇನು ?

ಮಹಾರಾಷ್ಟ್ರ ಡಿಸಿಎಂ ಅಜಿತ್‌ ಪವಾರ್‌ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿರುವ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು, "ರಾಜಕಾರಣಿಗಳು ಹೆಲಿಕಾಪ್ಟರ್ ಅಥವಾ ವಿಮಾನದಲ್ಲಿ ಹೆಚ್ಚಾಗಿ ಪ್ರಯಾಣಿಸುತ್ತಿರುತ್ತಾರೆ. ನಾವು ಅತ್ಯಂತ ಎಚ್ಚರಿಕೆ ಹಾಗೂ ಜಾಗರೂಕರಾಗಿರಬೇಕು. ಹೀಗೆ ನಾವು ಅನೇಕ ನಾಯಕರನ್ನು ಕಳೆದುಕೊಂಡಿದ್ದೇವೆ," ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಡಿಕೆ ಶಿವಕುಮಾರ್​ ಈ ರೀತಿ ಹೇಳಲು ಏನು ಕಾರಣ ಎಂಬುದು ಎಲ್ಲರ ಪ್ರಶ್ನೆ.

ಯಾಕೆಂದರೆ, ರಾಜಕಾರಣಿಗಳು ಮಾತ್ರವಲ್ಲ, ಉದ್ಯಮಿಗಳು, ಸೆಲೆಬ್ರಿಟಿಗಳು ಹಾಗೂ ಸೇರಿದಂತೆ ಸಮಾಜದ ಪ್ರತಿಷ್ಠಿತ ವರ್ಗದ ಲಕ್ಷಾಂತರ ಮಂದಿ ವಿಮಾನಗಳ ಮೂಲಕ ಪ್ರತಿನಿತ್ಯ ಪ್ರಯಾಣ ಮಾಡುತ್ತಾರೆ. ಹೀಗಾಗಿ ರಾಜಕಾರಣಿಗಳು ಮಾತ್ರ ಹೆಚ್ಚು ಮುಂಜಾಗ್ರತೆ ವಹಿಸುವಂಥದ್ದು ಏನೂ ಎಲ್ಲ ಎಂಬ ಅಭಿಪ್ರಾಯ ಜನರದ್ದು. ಹೀಗಾಗಿ ಅವರ ಹೇಳಿಕೆಯಲ್ಲಿ ರಾಜಕೀಯ ಉಂಟೇ ಎಂಬ 'ಪರಿಶೋಧನೆ' ಜೋರಾಗಿ ನಡೆದಿತ್ತು.​

ರಾಜಕಾರಣಿಗಳು ಚಾರ್ಟರ್ಡ್​​ ಫ್ಲೈಟ್​​ಗಳನ್ನು ಹಾಗೂ ಖಾಸಗಿ ಕಂಪನಿಗಳ ಹೆಲಿಕಾಪ್ಟರ್​ಗಳನ್ನು ಬಳಸುತ್ತಾರೆ. ಇಂಡಿಗೊ, ಏರ್​ಇಂಡಿಯಾದಂಥ ಕಮರ್ಷಿಯಲ್ ಏರ್​ವೇಸ್​ ಕಂಪನಿಗಳು ತಮ್ಮ ವಿಮಾನಗಳ ಸುರಕ್ಷತೆಯ ಬಗ್ಗೆ ಹೆಚ್ಚು ಗಮನ ಹರಿಸುತ್ತವೆ ಎಂಬುದು ಗೊತ್ತಿರುವ ಸಂಗತಿ. ಈ ಖಾಸಗಿ ಕಂಪನಿಗಳು ಅಷ್ಟೊಂದು ಜತನ ವಹಿಸುತ್ತವೆಯೇ ಎಂಬುದು ಸಾಮಾನ್ಯ ಜನರಿಗೆ ಗೊತ್ತಿಲ್ಲದ ವಿಷಯ. ಹೀಗಾಗಿ ಡಿಕೆಶಿ ಹೇಳಿಕೆಯಲ್ಲಿ ಈ ಅರ್ಥವನ್ನೂ ಗ್ರಹಿಸಬಹುದು ಎಂಬುದು ರಾಜಕೀಯ ಪಡಸಾಲೆಯಲ್ಲಿನ ಚರ್ಚೆ. ​

ವೈಎಸ್‌ಆರ್‌ ಹೆಲಿಕಾಪ್ಟರ್‌ ಪತನ

ಅಂದ ಹಾಗೆ, ವಿಮಾನಗಳ ಅವಘಡದಲ್ಲಿ ರಾಜಕಾರಣಿಗಳು ಮೃತಪಟ್ಟಾಗ ಅದರ ಹಿಂದೆ ಪಿತೂರಿಯ ತರ್ಕಗಳು ಈ ಹಿಂದೆ ಹಲವು ಬಾರಿ ಬಂದಿವೆ. ಅದಕ್ಕೆ ತತಕ್ಷಣದ ಉದಾಹರಣೆ ಎಂದರೆ ಆಂಧ್ರಪ್ರದೇಶದ ಸಿಎಂ ರಾಜಶೇಖರ ರೆಡ್ಡಿ ದುರ್ಮರಣ. 2009 ಸೆ.2ರಂದು ಬೆಳಿಗ್ಗೆ ಸುಮಾರು 8.38ಕ್ಕೆ ಆಂಧ್ರಪ್ರದೇಶದ ಸಿಎಂ ವೈ.ಎಸ್‌. ರಾಜಶೇಖರ್‌ ರೆಡ್ಡಿ ಅವರಿದ್ದ ಬೆಲ್ 430 ಹೆಲಿಕಾಪ್ಟರ್, ಹೈದರಾಬಾದ್‌ನ ಬೇಗಂಪೇಟೆ ವಿಮಾನ ನಿಲ್ದಾಣದಿಂದ ಚಿತ್ತೂರಿಗೆ ಹೊರಟಿತ್ತು. ಈ ವೇಳೆ ಕರ್ನೂಲ್ ಜಿಲ್ಲೆಯ ನಲ್ಲಮಲ ಅರಣ್ಯ ಪ್ರದೇಶದ ರುದ್ರಾಕೊಂಡ ಗುಡ್ಡದ ಮೇಲೆ ಪತನವಾಗಿತ್ತು. ಹೆಲಿಕಾಪ್ಟರ್ ನಾಪತ್ತೆಯಾದ ಸುಮಾರು 24 ಗಂಟೆಗಳ ನಂತರ, ಸೆಪ್ಟೆಂಬರ್ 3 ರಂದು ಬೆಳಿಗ್ಗೆ ಧ್ವಂಸಗೊಂಡ ಅವಶೇಷಗಳು ಮತ್ತು ಐವರು ಮೃತದೇಹಗಳು ಪತ್ತೆಯಾಗಿದ್ದವು. ಅಧಿಕೃತ ತನಿಖಾ ವರದಿಗಳು ಇದನ್ನು ಅಪಘಾತ ಎಂದು ಹೇಳಿದ್ದರೂ, ಜನಪ್ರಿಯ ಸಿಎಂ ಸಾವಿಗೆ ಪಿತೂರಿ ನಡೆದಿತ್ತೇ ಎಂಬ ಅನುಮಾನಗಳು ವ್ಯಕ್ತಗೊಂಡಿದ್ದವು.

ಅಧಿಕೃತ ತನಿಖೆಯ ಪ್ರಕಾರ, ಪ್ರತಿಕೂಲ ಹವಾಮಾನದ ನಡುವೆಯೂ ಹಾರಾಟ ಮುಂದುವರಿಸಿದ್ದು ಮತ್ತು ಟ್ರಾನ್ಸ್‌ಮಿಷನ್ ಆಯಿಲ್ ಒತ್ತಡದ ಸಮಸ್ಯೆ ಸರಿಪಡಿಸಲು ಹರಸಾಹಸ ಪಡುವಾಗ ಪೈಲಟ್‌ಗಳು ಹೆಲಿಕಾಪ್ಟರ್​ ನಿಯಂತ್ರಣ ಕಳೆದುಕೊಂಡಿದ್ದೇ ಘಟನೆಗೆ ನೈಜ ಕಾರಣ ಎಂದು ಹೇಳಿತ್ತು. ವೈ.ಎಸ್‌. ರಾಜಶೇಖರ್‌ ರೆಡ್ಡಿ ಅವರ ಕುಟುಂಬ ಸದಸ್ಯರು ಮತ್ತು ಅವರ ಬೆಂಬಲಿಗರು ಇದು ಕೇವಲ ಅಪಘಾತವಲ್ಲ, ಇದರಲ್ಲಿ ದೊಡ್ಡ ಮಟ್ಟದ ಪಿತೂರಿ ಅಡಗಿದೆ ಎಂದು ಸಂಶಯ ವ್ಯಕ್ತಪಡಿಸಿದ್ದರು.

ನಕ್ಸಲರು ಕೊಂದಿದ್ದರೇ?

ಅಪಘಾತ ಸಂಭವಿಸಿದ ನಲ್ಲಮಲ್ಲ ಅರಣ್ಯ ಪ್ರದೇಶವು ನಕ್ಸಲೀಯರ ಭದ್ರಕೋಟೆಯಾಗಿದ್ದರಿಂದ, ಅವರು ಹೆಲಿಕಾಪ್ಟರ್ ಅನ್ನು ಹೊಡೆದು ಉರುಳಿಸಿರಬಹುದು ಎಂಬ ಅನುಮಾನವಿತ್ತು. ಆದರೆ, ನಂತರ ಇದನ್ನು ತನಿಖಾ ಸಂಸ್ಥೆಗಳು ತಳ್ಳಿಹಾಕಿದ್ದವು. ಘಟನೆ ನಡೆದ ಸಮಯದಲ್ಲಿ ರಷ್ಯಾದ ಪತ್ರಿಕೆಯೊಂದು ಈ ಸಾವಿನ ಹಿಂದೆ ಭಾರತೀಯ ಉದ್ಯಮಿಗಳ ಗುಂಪಿನ ಕೈವಾಡವಿದೆ ಎಂಬ ವರದಿ ಪ್ರಕಟಿಸಿದ ನಂತರ ಆಂಧ್ರದಲ್ಲಿ ದೊಡ್ಡ ಮಟ್ಟದ ಗಲಭೆಗಳು ಎದ್ದಿದ್ದವು. ಆದಾಗ್ಯೂ, ಈ ಆರೋಪಗಳಿಗೆ ಯಾವುದೇ ಪುರಾವೆಗಳು ಸಿಕ್ಕಿರಲಿಲ್ಲ. ಕೇಂದ್ರ ತನಿಖಾ ದಳ (CBI) ಮತ್ತು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ನಡೆಸಿದ ಸುದೀರ್ಘ ತನಿಖೆಯ ನಂತರ, ಯಾವುದೇ ಸಂಚು ಅಥವಾ ವಿಧ್ವಂಸಕ ಕೃತ್ಯಗಳು ನಡೆದಿಲ್ಲ ಎಂದು ಸ್ಪಷ್ಟಪಡಿಸಲಾಗಿತ್ತು.

ಸಿಡಿಎಸ್‌ ಬಿಪಿನ್‌ ರಾವತ್‌ ಹೆಲಿಕಾಪ್ಟರ್‌ ದುರಂತದ ಬಗ್ಗೆ

ತಮಿಳುನಾಡಿನ ವೆಲ್ಲಿಂಗ್ಟನ್‌ನಲ್ಲಿರುವ ಸೇನಾ ಸಿಬ್ಬಂದಿ ಕಾಲೇಜಿಗೆ ಸೇನಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿ ರಾವತ್, ಅವರ ಪತ್ನಿ ಮಧುಲಿಕಾ ಹಾಗೂ ಸೇನೆಯ 11 ಯೋಧರನ್ನು ಹೊತ್ತ ಎಂಐ-17 ವಿ5 ಹೆಲಿಕಾಪ್ಟರ್ ಸೂಲೂರು ವಾಯುಸೇನೆ ನೆಲೆಯಿಂದ ಹಾರಾಟ ಆರಂಭಿಸಿತ್ತು. ಲ್ಯಾಂಡ್ ಆಗುವ ಕೆಲವೇ ನಿಮಿಷಗಳ ಮೊದಲು ಅದು ಪತನಗೊಂಡಿತ್ತು. ಈ ಅಪಘಾತವಾದ ನಂತರ ಹಲವು ಅನುಮಾನಗಳು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದ್ದವು.

ಈ ಘಟನೆ ಕುರಿತು ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ಮಾಹಿತಿ ನೀಡಿದ್ದು, ಕಣಿವೆ ಪ್ರದೇಶದಲ್ಲಿ ಅನಿರೀಕ್ಷಿತ ಹವಾಮಾನ ಬದಲಾವಣೆ ಹಾಗೂ ಮೋಡದೊಳಗೆ ಹೆಲಿಕಾಪ್ಟರ್ ಪ್ರವೇಶಿಸಿದ್ದೇ ಈ ಅಪಘಾತಕ್ಕೆ ಕಾರಣ ಎಂದು ಹೇಳಲಾಗಿತ್ತು. ಕಾಕ್‌ಪಿಟ್‌ನಲ್ಲಿ ದಾಖಲಾದ ಧ್ವನಿ ಹಾಗೂ ಹೆಲಿಕಾಪ್ಟರ್‌ನಿಂದ ಲಭ್ಯವಾದ ಮಾಹಿತಿ ವಿಶ್ಲೇಷಿಸಿ ಮತ್ತು ಲಭ್ಯವಿದ್ದ ಸಾಕ್ಷಿಗಳ ಹೇಳಿಕೆಯನ್ನು ದಾಖಲಿಸಲಾಗಿದೆ ಎಂದು ತನಿಖಾ ವರದಿಯಲ್ಲಿ ತಿಳಿಸಲಾಗಿತ್ತು. ಆದರೆ, ಇದರ ಹಿಂದೆ ಸೇನಾ ವಲಯ, ರಾಜಕೀಯ ಹಾಗೂ ವಿದೇಶಿ ಲಾಬಿ- ಪ್ರಮುಖವಾಗಿ ಚೀನಾ ಕೈವಾಡ ಇದೆ ಎಂದು ಹೇಳಲಾಗಿತ್ತು.

ಸಂಜಯ್​ ಗಾಂಧಿ ಸಾವಿನ ಹಿಂದೆಯೂ ಅನುಮಾನ

1980ರಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿಯ ಪುತ್ರ ಸಂಜಯ್​ ಗಾಂಧಿ ವಿಮಾನ ಅವಘಡದಲ್ಲಿ ಮೃತಪಟ್ಟಿದ್ದಾಗಲೂ ಇದೇ ರೀತಿಯ ಪಿತೂರಿ ಚರ್ಚೆ ಹಲವು ಮಗ್ಗುಲಲ್ಲಿ ನಡೆದಿದೆ. ತರಬೇತಿ ಪಡೆದ ಪೈಲೆಟ್ ಆಗಿದ್ದ ಅವರು ಜೆಟ್​ ವಿಮಾನ ಹಾರಿಸುವಾಗ ಅವಘಡಕ್ಕೆ ಒಳಗಾಗಿ ಮೃತಪಟ್ಟಿದ್ದರು. ಹೀಗಾಗಿ, ಅತ್ಯಂತ ಚತುರ ಹಾಗೂ ಹೆಚ್ಚು ಜನಪ್ರಿಯ ನಾಯಕರಾಗಿದ್ದ ಅವರನ್ನ ಸ್ವತಃ ಅವರ ತಾಯಿ ಇಂದಿರಾ ಅವರೇ ಕೊಲ್ಲಿಸಿದ್ದಾರೆ ಎಂಬ ಮಾತುಗಳು ಬಹುವಾಗಿ ಕೇಳಿ ಬಂದಿದ್ದವು. ಈ ವಿಷಯದ ಬಗ್ಗೆ ದೊಡ್ಡ ಚರ್ಚೆಗಳು ಆಗಿಂದಲೇ ನಡೆದಿವೆ ಹಾಗೂ ಈಗಲೂ ಮುಂದುವರಿದಿವೆ. ಆನ್​ಲೈನ್​ ಚರ್ಚಾ ವೇದಿಕೆ 'ಕ್ವಾರಾ' ದ ಮೂಲಕ ಈಗಲೂ ಚರ್ಚೆಗಳು ನಡೆಯುತ್ತಿವೆ. ಹೊಸ ಯುಗದ ಮಂದಿಯೂ ಈ ಪ್ರಶ್ನೆಯನ್ನು ಕೇಳುತ್ತಿದ್ದಾರೆ. ಪ್ರಮುಖವಾಗಿ ತಮ್ಮ ಮತ್ತೊಬ್ಬ ಪುತ್ರ ರಾಜೀವ್ ಗಾಂಧಿಗೆ ಮನ್ನಣೆ ನೀಡಲು ಇಂದಿರಾ ಆ ರೀತಿ ಮಾಡಿದ್ದರು ಎಂಬುದೇ ಪಿತೂರಿ ಥಿಯರಿಯ ಪ್ರಮುಖ ಅಂಶ. ಆದರೆ, ಇಂಥದ್ದೊಂದು ಹೇಳಿಕೆಯನ್ನು ಸಾಬೀತು ಮಾಡಲು ಯಾರಿಗೂ ಸಾಧ್ಯವಾಗಿಲ್ಲ.


Read More
Next Story