
ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಹಾಗೂ ದಿವಂಗತ ಅಜಿತ್ ಪವಾರ್
ಅಜಿತ್ ಪವಾರ್ ಸಾವು ಸಂಚು? ಮಮತಾ ಬ್ಯಾನರ್ಜಿ ಸ್ಫೋಟಕ ಹೇಳಿಕೆ
ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕು. ಇತರ ತನಿಖಾ ಸಂಸ್ಥೆಗಳ ಮೇಲಿನ ನಂಬಿಕೆ ಕಳೆದುಹೋಗಿದ್ದು, ನಮಗೆ ಸುಪ್ರೀಂ ಕೋರ್ಟ್ ಮೇಲೆ ಮಾತ್ರ ನಂಬಿಕೆ ಉಳಿದಿದೆ ಎಂದು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಹಠಾತ್ ನಿಧನದ ಹಿಂದೆ 'ಸಂಚು' ಇರುವ ಶಂಕೆ ವ್ಯಕ್ತಪಡಿಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಈ ಬಗ್ಗೆ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಬುಧವಾರ ಬೆಳಿಗ್ಗೆ ಬಾರಾಮತಿ ಬಳಿ ನಡೆದ ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ಮೃತಪಟ್ಟ ಬೆನ್ನಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ಮಮತಾ ಬ್ಯಾನರ್ಜಿ, "ಅಜಿತ್ ಪವಾರ್ ಅವರು ಇತ್ತೀಚೆಗೆ ಬಿಜೆಪಿ ಮೈತ್ರಿ ತೊರೆಯುವ ಯೋಚನೆಯಲ್ಲಿದ್ದರು ಎಂಬ ಮಾಹಿತಿ ನನಗಿತ್ತು," ಎಂದು ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.
ಮಮತಾ ಬ್ಯಾನರ್ಜಿ ಅವರ ಆರೋಪವೇನು?
"ಈ ದೇಶದಲ್ಲಿ ಜನರಿಗೆ ಸುರಕ್ಷತೆ ಮತ್ತು ಭದ್ರತೆ ಇಲ್ಲದಂತಾಗಿದೆ. ವಿರೋಧ ಪಕ್ಷಗಳ ಭವಿಷ್ಯ ಏನಾಗಲಿದೆ ಎಂದು ಗೊತ್ತಿಲ್ಲ. ಆದರೆ ಅಜಿತ್ ಪವಾರ್ ಅವರು ಸರ್ಕಾರದ ಭಾಗವಾಗಿದ್ದರು. ಆದರೂ, ಅವರು ಬಿಜೆಪಿ ಬಿಡಲು ಬಯಸಿದ್ದರು ಎಂಬುದು ನನಗೆ ಕೆಲ ದಿನಗಳ ಹಿಂದೆಯಷ್ಟೇ ತಿಳಿದಿತ್ತು. ಈಗ ನೋಡಿದರೆ, ಇಂತಹ ದುರಂತ ಸಂಭವಿಸಿದೆ. ಇದು ನನಗೆ ಆಘಾತ ತಂದಿದೆ," ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.
ಸುಪ್ರೀಂ ಕೋರ್ಟ್ ತನಿಖೆಗೆ ಪಟ್ಟು
ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕು ಎಂದು ಆಗ್ರಹಿಸಿರುವ ಅವರು, ಇತರ ತನಿಖಾ ಸಂಸ್ಥೆಗಳ ಮೇಲಿನ ನಂಬಿಕೆ ಕಳೆದುಹೋಗಿದೆ ಎಂದಿದ್ದಾರೆ. "ನಮಗೆ ಸುಪ್ರೀಂ ಕೋರ್ಟ್ ಮೇಲೆ ಮಾತ್ರ ನಂಬಿಕೆ ಉಳಿದಿದೆ. ಬೇರೆಲ್ಲಾ ತನಿಖಾ ಸಂಸ್ಥೆಗಳನ್ನು 'ಖರೀದಿಸಲಾಗಿದೆ'. ಆದ್ದರಿಂದ ಸುಪ್ರೀಂ ಕೋರ್ಟ್ ಉಸ್ತುವಾರಿಯಲ್ಲೇ ಈ ವಿಮಾನ ದುರಂತದ ತನಿಖೆಯಾಗಬೇಕು," ಎಂದು ಮಮತಾ ಒತ್ತಾಯಿಸಿದ್ದಾರೆ.
ಇದಕ್ಕೂ ಮುನ್ನ 'ಎಕ್ಸ್' (ಟ್ವಿಟರ್) ನಲ್ಲಿ ಪೋಸ್ಟ್ ಮಾಡಿದ್ದ ಅವರು, ಅಜಿತ್ ಪವಾರ್ ನಿಧನಕ್ಕೆ ಸಂತಾಪ ಸೂಚಿಸಿದ್ದರು ಮತ್ತು ಘಟನೆಯ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಹೇಳಿದ್ದರು. ಶರದ್ ಪವಾರ್ ಹಾಗೂ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
ಬುಧವಾರ ಬೆಳಿಗ್ಗೆ ಮುಂಬೈನಿಂದ ಬಾರಾಮತಿಗೆ ತೆರಳುತ್ತಿದ್ದಾಗ ವಿಮಾನ ಪತನಗೊಂಡು 66 ವರ್ಷದ ಅಜಿತ್ ಪವಾರ್ ಹಾಗೂ ಇತರ ನಾಲ್ವರು ಮೃತಪಟ್ಟಿದ್ದಾರೆ.

