
2023ರಲ್ಲೂ ಅಪಘಾತಕ್ಕೀಡಾಗಿದ್ದ ಅದೇ 'ಶಾಪಗ್ರಸ್ತ' ವಿಮಾನಕ್ಕೆ ಅಜಿತ್ ಪವಾರ್ ಬಲಿ
ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಬಾರಾಮತಿಯಲ್ಲಿ ನಡೆದ ಭೀಕರ ವಿಮಾನ ಅಪಘಾತದಲ್ಲಿ ನಿಧನರಾಗಿದ್ದಾರೆ.
ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಮತ್ತು ಎನ್‌ಸಿಪಿ (NCP) ಅಧ್ಯಕ್ಷ ಅಜಿತ್ ಪವಾರ್ ಅವರು ಬುಧವಾರ ಬೆಳಿಗ್ಗೆ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಆಘಾತಕಾರಿ ವಿಷಯವೆಂದರೆ, ಇಂದು ಪತನಗೊಂಡ ಅದೇ ವಿಮಾನವು 2023ರ ಸೆಪ್ಟೆಂಬರ್‌ನಲ್ಲಿಯೂ ಮುಂಬೈ ವಿಮಾನ ನಿಲ್ದಾಣದಲ್ಲಿ ಅಪಘಾತಕ್ಕೀಡಾಗಿತ್ತು.
ಘಟನೆ ನಡೆದಿದ್ದು ಹೇಗೆ?
ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ನಾಲ್ಕು ಪ್ರಮುಖ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಲು ಅಜಿತ್ ಪವಾರ್ ಅವರು ಇಂದು ಬೆಳಿಗ್ಗೆ 8 ಗಂಟೆಗೆ ಮುಂಬೈನಿಂದ ಹೊರಟಿದ್ದರು. ಅವರು ಪ್ರಯಾಣಿಸುತ್ತಿದ್ದ 'ಲಿಯರ್ ಜೆಟ್ 45' ವಿಮಾನವು 45 ನಿಮಿಷಗಳ ಪ್ರಯಾಣದ ನಂತರ ಬಾರಾಮತಿ ವಿಮಾನ ನಿಲ್ದಾಣದ ಬಳಿ ಲ್ಯಾಂಡಿಂಗ್ ಮಾಡಲು ಪ್ರಯತ್ನಿಸಿತು. ಈ ವೇಳೆ ನಿಯಂತ್ರಣ ತಪ್ಪಿದ ವಿಮಾನವು ಪತನಗೊಂಡು ಬೆಂಕಿ ಹೊತ್ತಿಕೊಂಡಿತು. ವಿಮಾನದಲ್ಲಿದ್ದ ಅಜಿತ್ ಪವಾರ್, ಪೈಲಟ್ ಮತ್ತು ಸಿಬ್ಬಂದಿ ಸೇರಿದಂತೆ ಒಟ್ಟು ಐವರು ಈ ದುರಂತದಲ್ಲಿ ಬಲಿಯಾಗಿದ್ದಾರೆ.
ಹವಾಮಾನ ವೈಪರೀತ್ಯವೇ ಕಾರಣ?
VSR ಏವಿಯೇಷನ್‌ನ ಕ್ಯಾಪ್ಟನ್ ವಿ.ಕೆ. ಸಿಂಗ್ ಅವರ ಪ್ರಕಾರ, "ಪ್ರಸ್ತುತ ಹವಾಮಾನ ವೈಪರೀತ್ಯ ಮತ್ತು ದಟ್ಟ ಮಂಜಿನಿಂದಾಗಿ ದೃಷ್ಟಿಗೋಚರತೆ ಕಡಿಮೆಯಾಗಿದ್ದೇ ಈ ಅಪಘಾತಕ್ಕೆ ಕಾರಣ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ." ವಿಮಾನವು ಗುಡ್ಡಗಾಡು ಪ್ರದೇಶದ ಕಲ್ಲಿನ ಏಣಿಗೆ ಅಪ್ಪಳಿಸಿದ ಪರಿಣಾಮ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.
2023ರಲ್ಲೂ ಇದೇ ವಿಮಾನ ಅಪಘಾತಕ್ಕೀಡಾಗಿತ್ತು!
ಇಂದು ಪತನಗೊಂಡ VSR ವೆಂಚರ್ಸ್ ಮಾಲೀಕತ್ವದ ಇದೇ ಲಿಯರ್ ಜೆಟ್ ವಿಮಾನವು ಸೆಪ್ಟೆಂಬರ್ 14, 2023 ರಂದು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಪಘಾತಕ್ಕೀಡಾಗಿತ್ತು. ಅಂದು ವಿಶಾಖಪಟ್ಟಣದಿಂದ ಮುಂಬೈಗೆ ಬರುತ್ತಿದ್ದಾಗ ಭಾರಿ ಮಳೆ ಮತ್ತು ದಟ್ಟ ಮಂಜಿನ ನಡುವೆ ರನ್‌ವೇಯಿಂದ ಜಾರಿ ವಿಮಾನವು ಎರಡು ತುಂಡಾಗಿತ್ತು. ಅಂದು ವಿಮಾನದಲ್ಲಿದ್ದ ಆರು ಪ್ರಯಾಣಿಕರು ಮತ್ತು ಪೈಲಟ್‌ಗಳು ಗಾಯಗಳೊಂದಿಗೆ ಪವಾಡಸದೃಶವಾಗಿ ಬದುಕುಳಿದಿದ್ದರು. ಆದರೆ, ಇಂದು ಅದೇ ವಿಮಾನ ಅಜಿತ್ ಪವಾರ್ ಅವರ ಪ್ರಾಣಪಕ್ಷಿಯನ್ನು ಹಾರಿಸಿದೆ.
ವಿಮಾನದ ಹಿನ್ನೆಲೆ ಮತ್ತು ಕಂಪನಿ ವಿವರ
ಲಿಯರ್ ಜೆಟ್ 45XR (Learjet 45XR) - ಇದನ್ನು 1990ರಲ್ಲಿ 'ಸೂಪರ್ ಲೈಟ್' ಬಿಸಿನೆಸ್ ವಿಭಾಗದಲ್ಲಿ ಸೆಸ್ನಾ ಸೈಟೇಶನ್ ಎಕ್ಸೆಲ್‌ಗೆ ಪೈಪೋಟಿ ನೀಡಲು ವಿನ್ಯಾಸಗೊಳಿಸಲಾಗಿತ್ತು. ನವದೆಹಲಿ ಮೂಲದ VSR ವೆಂಚರ್ಸ್ ಪ್ರೈವೇಟ್ ಲಿಮಿಟೆಡ್. ಈ ಕಂಪನಿಯು ಖಾಸಗಿ ಜೆಟ್ ಚಾರ್ಟರ್ ಮತ್ತು ವೈದ್ಯಕೀಯ ಸ್ಥಳಾಂತರಿಸುವಿಕೆ ಸೇವೆಗಳನ್ನು ನೀಡುತ್ತದೆ. ಇದೇ ಮಾದರಿಯ ವಿಮಾನವು ಫೆಬ್ರವರಿ 2021ರಲ್ಲಿ ಮೆಕ್ಸಿಕೋದಲ್ಲೂ ಅಪಘಾತಕ್ಕೀಡಾಗಿ ಆರು ಮಂದಿ ಸಾವನ್ನಪ್ಪಿದ್ದರು.

