‌Election 2024: ಹೆಣ್ಣುಮಕ್ಕಳಿಗೆ ಸಮಾನ ಅವಕಾಶ ವಿಡಿಯೋ ಹಂಚಿಕೊಂಡ ಪವಾರ್ ಬಣ
x

‌Election 2024: ಹೆಣ್ಣುಮಕ್ಕಳಿಗೆ 'ಸಮಾನ ಅವಕಾಶ' ವಿಡಿಯೋ ಹಂಚಿಕೊಂಡ ಪವಾರ್ ಬಣ

ʻಹೆಣ್ಣು ಮಗುವಿಗೆ ಸಮಾನ ಅವಕಾಶ ನೀಡಿ, ಆಕೆಯ ಆತ್ಮಸ್ಥೈರ್ಯವನ್ನು ಹೆಚ್ಚಿಸಬೇಕುʼ ಎಂದು ಶರದ್‌ ಪವಾರ್‌ ಹೇಳಿದ್ದಾರೆ.


ಮುಂಬೈ, ಏಪ್ರಿಲ್‌ 11- ಬಾರಾಮತಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸುಪ್ರಿಯಾ ಸುಳೆ ಅವರು ಶರದ್ ಪವಾರ್ ಅವರ ಹಳೆಯ ವಿಡಿಯೋ ಸಂದರ್ಶನವನ್ನು ಹಂಚಿಕೊಂಡಿದ್ದಾರೆ.

ವಿಡಿಯೋದಲ್ಲಿ ಹೆಣ್ಣುಮಕ್ಕಳಿಗೆ ಸಮಾನ ಅವಕಾಶ ನೀಡುವ ಬಗ್ಗೆ ಶರದ್‌ ಪವಾರ್‌ ಮಾತನಾಡಿದ್ದಾರೆ. ಚುನಾವಣೆಯಲ್ಲಿ ಬಾರಾಮತಿಯಲ್ಲಿ 'ಪವಾರ್' ಹೆಸರಿಗೆ ಮತ ಹಾಕುವಂತೆ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಮಾಡಿದ ಮನವಿಗೆ ಪ್ರತಿಕ್ರಿಯೆಯಾಗಿ ಎನ್‌ಸಿಪಿ (ಶರದ್ಚಂದ್ರ ಪವಾರ್) ಪಕ್ಷ ವಿಡಿಯೋ ಬಿಡುಗಡೆಗೊಳಿಸಿದೆ.

ಅಜಿತ್ ಪವಾರ್ ಶಾಸಕರಾಗಿರುವ ಬಾರಾಮತಿ, ಪವಾರ್ ಕುಟುಂಬದ ತವರುಮನೆ. ಶರದ್ ಪವಾರ್ ಅವರ ಪುತ್ರಿ ಸುಪ್ರಿಯಾ ಸುಳೆ ಅವರು ಮೂರು ಬಾರಿ ಬಾರಾಮತಿ ಲೋಕಸಭೆ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ ಮತ್ತು ನಾಲ್ಕನೇ ಬಾರಿಗೆ ಸ್ಪರ್ಧಿಸುತ್ತಿದ್ದಾರೆ. ಬಾರಾಮತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅಜಿತ್ ಪವಾರ್, ʻಮಗಳನ್ನು ಮೂರು ಬಾರಿ ಆಯ್ಕೆ ಮಾಡಿದ್ದೀರಿ. ಈ ಬಾರಿ ಸೊಸೆಯನ್ನು ಆಯ್ಕೆ ಮಾಡಿʼ ಎಂದು ಕೋರಿದ್ದರು. ʻನೀವು ಇಷ್ಟು ದಿನ ಪವಾರ್ ಜೊತೆ ಇದ್ದೀರಿ. ಈಗ ಒಂದೇ ಕುಟುಂಬದ ಇಬ್ಬರು ಅಭ್ಯರ್ಥಿಗಳು ಇರುವುದರಿಂದ, ಏನು ಮಾಡಬೇಕೆಂದು ಯೋಚಿಸಬೇಕು. ಈ ಬಾರಿ ಮತ್ತೊಬ್ಬ ಪವಾರ್‌ಗೆ ಮತ ಚಲಾಯಿಸಿʼ ಎಂದು ಹೇಳಿದ್ದರು.

ಪ್ರತಿಕ್ರಿಯೆ: ಹೆಸರಾಂತ ಚಲನಚಿತ್ರ ನಿರ್ಮಾಪಕ ಜಬ್ಬಾರ್ ಪಟೇಲ್ ಅವರ, ʻಶರದ್ ಪವಾರ್ ಅವರು ಮಗನಿಲ್ಲದ ಪ್ರಶ್ನೆಯನ್ನು ಹೇಗೆ ಎದುರಿಸುತ್ತಾರೆʼ ಎಂಬ ಪ್ರಶ್ನೆಗೆ ಉತ್ತರಿಸುವ ಹಳೆಯ ವೀಡಿಯೊವನ್ನು ಎನ್‌ಸಿಪಿ (ಎಸ್‌ಪಿ) ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ.

ʻಶರದ್ ಪವಾರ್ ಅವರಂತಹ ದೂರದೃಷ್ಟಿಯ ನಾಯಕ ಮಾತ್ರ ಮಗಳ ಬಗ್ಗೆ ಮಾತನಾಡಬಲ್ಲರು. ಹೆಣ್ಣುಮಕ್ಕಳು ಕುಟುಂಬದ ವಾರಸುದಾರಿಕೆ ಜೊತೆಗೆ ಸೈದ್ಧಾಂತಿಕ ಪರಂಪರೆಯನ್ನು ಮುಂದುವರಿಸುತ್ತಾರೆ. ಇದು ಮಹಾರಾಷ್ಟ್ರವನ್ನು ಇತರ ರಾಜ್ಯಗಳಿಂದ ಪ್ರತ್ಯೇಕಿ ಸುತ್ತದೆ. ಕೀಳರಿಮೆಯ ಜನ ಮಾತ್ರ ಉತ್ತರಾಧಿಕಾರಿ, ಉಪನಾಮ, ತಾಯಿ ಮನೆ ಮತ್ತು ಮಾವನ ಮನೆ ಬಗ್ಗೆ ಮಾತಾಡುತ್ತಾರೆ. ಅಂತಹವರು ಪ್ರಗತಿಪರ ಮಹಾರಾಷ್ಟ್ರವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲʼ ಎಂದು ಪವಾರ್‌ ಹೇಳಿರುವುದು ವಿಡಿಯೋದಲ್ಲಿದೆ.

ʻಗುಡ್ಡಗಾಡು ಪ್ರದೇಶಗಳಲ್ಲಿ ಇಂಥ ಪ್ರಶ್ನೆ ಎದುರಿಸುತ್ತೇನೆ. ಅಂತ್ಯಕ್ರಿಯೆ ನಡೆಸಲು ಮತ್ತು ಕುಟುಂಬದ ಹೆಸರು ಮುಂದುವರಿಸಲು ಮಗನಿದ್ದರೆ ಚೆನ್ನಾಗಿರುತ್ತಿತ್ತು ಎಂದು ನನಗೆ ಹೇಳಲಾಗುತ್ತದೆ. ಮಗ ಅಗ್ನಿಸ್ಪರ್ಶ ಮಾಡಿದರೆ, ಸ್ವರ್ಗದ ಬಾಗಿಲು ತೆರೆಯುತ್ತದಂತೆ. ಸಾವಿನ ಬಳಿಕ ಚಿತೆ ಹೊತ್ತಿಸುವವರು ಯಾರು ಎಂದು ಯೋಚಿಸಬೇಕೇ ಅಥವಾ ಬದುಕಿರುವಾಗ ಚೆನ್ನಾಗಿ ನೋಡಿಕೊಳ್ಳುವವರು ಯಾರು ಎಂದು ಚಿಂತಿಸಬೇಕೇ?ʼ ಎಂದು ಪವಾರ್ ಹೇಳುತ್ತಾರೆ.

ʻಹೆಣ್ಣು ಮಗುವಿಗೆ ಸಮಾನ ಅವಕಾಶ ನೀಡಿ, ಆಕೆಯ ಆತ್ಮಸ್ಥೈರ್ಯವನ್ನು ಹೆಚ್ಚಿಸಬೇಕುʼ ಎಂದಿದ್ದಾರೆ.

Read More
Next Story