
ಯತ್ನಾಳ್ ಹೊಸ ಹೇಳಿಕೆ : ಜೆಸಿಬಿ ಗುರುತಿನಲ್ಲಿ "ಕರ್ನಾಟಕ ಹಿಂದೂ ಪಕ್ಷ" ಸ್ಥಾಪನೆ, ನಾನೇ ಸಿಎಂ!
ಕರ್ನಾಟಕ ಬಿಜೆಪಿ ನಾಯಕರು ಹೊಂದಾಣಿಕೆ ಮಾಡಿಕೊಂಡಿದ್ದಾರೆ, ಅದಕ್ಕಾಗಿಯೇ ಅವರು ಹಿಂದೂಗಳ ಪರವಾಗಿ ಗಟ್ಟಿಯಾಗಿ ಧ್ವನಿ ಎತ್ತುವುದಿಲ್ಲ," ಎಂದು ಯತ್ನಾಳ್ ಆರೋಪಿಸಿದರು.
ರಾಜ್ಯ ಬಿಜೆಪಿಯಲ್ಲಿ "ಹೊಂದಾಣಿಕೆ ರಾಜಕಾರಣ"ದ ಇದೆ ಎಂದು ಮತ್ತೊಮ್ಮೆ ಹೇಳಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ತಮ್ಮನ್ನು ಗೌರವಯುತವಾಗಿ ನಡೆಸಿಕೊಳ್ಳದಿದ್ದರೆ 'ಕರ್ನಾಟಕ ಹಿಂದೂ ಪಕ್ಷ' ಎಂಬ ಹೊಸ ಪ್ರಾದೇಶಿಕ ಪಕ್ಷವನ್ನು ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ಮದ್ದೂರಿನಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಹೊಸ ಪಕ್ಷದ ಚಿಹ್ನೆ 'ಜೆಸಿಬಿ' ಎಂದು ಹೇಳುವ ಮೂಲಕ ತೀವ್ರ ಕುತೂಹಲ ಕೆರಳಿಸಿದ್ದಾರೆ.
"ನಾವು ಅಧಿಕಾರಕ್ಕೆ ಬಂದರೆ, ನಾನೇ ಮುಖ್ಯಮಂತ್ರಿಯಾಗಿ ಮುಸ್ಲಿಮರಿಗೆ ನೀಡಲಾಗಿರುವ ಮೀಸಲಾತಿ ರದ್ದುಗೊಳಿಸಿ, ಅದನ್ನು ಹಿಂದೂಗಳಿಗೆ ಹಂಚುತ್ತೇನೆ. ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಮಾದರಿಯಲ್ಲಿ 'ಬುಲ್ಡೋಜರ್ ಬಾಬಾ' ಆಡಳಿತವನ್ನು ಕರ್ನಾಟಕದಲ್ಲಿ ತರುತ್ತೇನೆ" ಎಂದು ಯತ್ನಾಳ್ ಭರವಸೆ ನೀಡಿದರು.
ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ
"ಕರ್ನಾಟಕ ಬಿಜೆಪಿ ನಾಯಕರು ಹೊಂದಾಣಿಕೆ ಮಾಡಿಕೊಂಡಿದ್ದಾರೆ, ಅದಕ್ಕಾಗಿಯೇ ಅವರು ಹಿಂದೂಗಳ ಪರವಾಗಿ ಗಟ್ಟಿಯಾಗಿ ಧ್ವನಿ ಎತ್ತುವುದಿಲ್ಲ," ಎಂದು ಯತ್ನಾಳ್ ಆರೋಪಿಸಿದರು. ಮಾಜಿ ಸಂಸದ ಪ್ರತಾಪ್ ಸಿಂಹ ಮತ್ತು ತಾವು ಸೇರಿ, ರಾಜ್ಯದಲ್ಲಿ ಅಪ್ಪ-ಮಕ್ಕಳ ರಾಜಕಾರಣವನ್ನು ಕೊನೆಗಾಣಿಸಿ, ಹಿಂದುತ್ವದ ಆಧಾರದ ಮೇಲೆ ಹೊಸ ರಾಜಕೀಯ ಶಕ್ತಿಯನ್ನು ರೂಪಿಸುವುದಾಗಿ ಅವರು ಹೇಳಿದರು.
ಈ ಹಿಂದೆ ವಿಧಾನಸಭೆಯಲ್ಲೂ, ತಮ್ಮನ್ನು ಹೊಂದಾಣಿಕೆ ಮಾಡಿಕೊಳ್ಳದ ವಿರೋಧ ಪಕ್ಷ ಎಂದು ಕರೆದುಕೊಂಡಿದ್ದ ಯತ್ನಾಳ್, ಈಗ ಹೊಸ ಪಕ್ಷದ ಮೂಲಕ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಲು ಸಿದ್ಧತೆ ನಡೆಸಿದ್ದಾರೆ. "2028ರ ವೇಳೆಗೆ ವಿಧಾನಸೌಧದ ಮುಂದೆ ಭಗವಧ್ವಜ ಹಾರಿಸುತ್ತೀರಾ? ನನ್ನನ್ನು ಸಿಎಂ ಮಾಡುತ್ತೀರಾ?" ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.