ಬಿಜೆಪಿ ಸೇರಲು ಯತ್ನಿಸಿದ್ದ ಡಿಕೆಶಿ- ಬಿಜೆಪಿ ಉಚ್ಚಾಟಿತ ಶಾಸಕ ಯತ್ನಾಳ್‌ ಗಂಭೀರ ಆರೋಪ
x

ಬಿಜೆಪಿ ಸೇರಲು ಯತ್ನಿಸಿದ್ದ ಡಿಕೆಶಿ- ಬಿಜೆಪಿ ಉಚ್ಚಾಟಿತ ಶಾಸಕ ಯತ್ನಾಳ್‌ ಗಂಭೀರ ಆರೋಪ

ಡಿ.ಕೆ. ಶಿವಕುಮಾರ್ ಅವರು ಬಿಜೆಪಿಯಲ್ಲೂ ಒಂದು ಕಾಲು ಇಟ್ಟಿದ್ದಾರೆ. ದೆಹಲಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಕೇಂದ್ರದ ಬಿಜೆಪಿ ನಾಯಕರ ಜೊತೆ ಬಿಜೆಪಿ ಸೇರುವ ಕುರಿತು ಚರ್ಚೆ ನಡೆಸಿದ್ದಾರೆ ಎಂದು ಯತ್ನಾಳ್‌ ಆರೋಪಿಸಿದ್ದಾರೆ.


ʼನಮಸ್ತೇ ಸದಾ ವಾತ್ಸಲೇ ಮಾತೃಭೂಮೇʼ ಎಂಬ ಆರ್‌ಎಸ್‌ಎಸ್‌ ಗೀತೆ ಹೇಳುವ ಮೂಲಕ ಕಾಂಗ್ರೆಸ್ ಪಕ್ಷದ ನಾಯಕರಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ಬಿಜೆಪಿ ಪಕ್ಷ ಸೇರುವ ಕುರಿತು ದೆಹಲಿ ನಾಯಕರೊಂದಿಗೆ ಚರ್ಚಿಸಿದ್ದರು ಎಂಬ ಬಿಜೆಪಿಯ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ ಸ್ಫೋಟಕ ಹೇಳಿಕೆ ತೀವ್ರ ಸಂಚಲನ ಮೂಡಿಸಿದೆ.

ಆದರೆ, ಯತ್ನಾಳ್‌ ಹೇಳಿಕೆಗೆ ತಿರುಗೇಟು ನೀಡಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ಸಗಣಿ ಮೇಲೆ ಕಲ್ಲು ಹಾಕಲು ನನಗೆ ಇಷ್ಟವಿಲ್ಲ ಎಂದು ಹೇಳಿ ಆರೋಪವನ್ನು ತಳ್ಳಿ ಹಾಕಿದ್ದಾರೆ. ಆದರೆ, ಇತ್ತೀಚಿಗೆ ಕಾಂಗ್ರೆಸ್‌ ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಅಂತಹ ಊಹಾಪೋಹಗಳಿಗೆ ಎಡೆ ಮಾಟಿಕೊಟ್ಟಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಯತ್ನಾಳ್‌ ಹೇಳಿದ್ದೇನು?

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಿಜೆಪಿಯಲ್ಲೂ ಒಂದು ಕಾಲು ಇಟ್ಟಿದ್ದಾರೆ. ಇತ್ತೀಚೆಗೆ ದೆಹಲಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಕೇಂದ್ರದ ಬಿಜೆಪಿ ನಾಯಕರ ಜೊತೆ ಬಿಜೆಪಿ ಸೇರುವ ಕುರಿತು ಚರ್ಚೆಯನ್ನೂ ನಡೆಸಿದ್ದಾರೆ. ಸುಮಾರು 60–70 ಕಾಂಗ್ರೆಸ್ ಶಾಸಕರೊಂದಿಗೆ ಬಿಜೆಪಿ ಸೇರುವ ಯೋಜನೆ ಹಾಕಿಕೊಂಡಿದ್ದರು. ಆದರೆ, ಆಂತರಿಕ ವರದಿಯಲ್ಲಿ ಡಿ.ಕೆ. ಶಿವಕುಮಾರ್‌ ಅವರಿಗೆ ಕೇವಲ 12–13 ಶಾಸಕರ ಬೆಂಬಲ ಮಾತ್ರ ಇದ್ದುದರಿಂದ ಯೋಜನೆ ವಿಫಲವಾಯಿತು ಎಂದು ಯತ್ನಾಳ್ ಆರೋಪಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರು ಮುಸ್ಲಿಮರನ್ನು ಓಲೈಕೆ ಮಾಡುತ್ತಿದ್ದಾರೆ. ಶಾಸಕರನ್ನು ಖರೀದಿಸಿ ಬಿಜೆಪಿಗೆ ಸೇರುವ ಮೂಲಕ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿ, ಬಿ.ವೈ. ವಿಜಯೇಂದ್ರ ಉಪ ಮುಖ್ಯಮಂತ್ರಿಯನ್ನಾಗಿ ಮಾಡುವ ಯೋಜನೆ ಇತ್ತು. ಈ ಇಬ್ಬರೂ ಸೇರಿದರೆ ಇಡೀ ಕರ್ನಾಟಕವನ್ನೇ ಮಾರಾಟ ಮಾಡುತ್ತಾರೆ ಎಂದು ಯತ್ನಾಳ್ ವಾಗ್ದಾಳಿ ನಡೆಸಿದರು.

ಯತ್ನಾಳ್‌ ಹೇಳಿಕೆಗೆ ಡಿಕೆಶಿ ತಿರುಗೇಟು

ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ಯತ್ನಾಳ್‌ ಹೇಳಿಕೆಗೂ, ತಮಗೂ ಸಂಬಂಧವಿಲ್ಲ. ಆ ಕಸ, ಸಗಣಿ ಮೇಲೆ ಕಲ್ಲು ಹಾಕಲು ನನಗೆ ಇಷ್ಟವಿಲ್ಲ ಎಂದು ಕಿಡಿಕಾರಿದ್ದಾರೆ.

ವಿಧಾನಸಭೆಯಲ್ಲಿ ಆರ್‌ಎಸ್‌ಎಸ್‌ ಗೀತೆಯನ್ನು ಹೇಳಿದ ಬಳಿಕ ಕಾಂಗ್ರೆಸ್‌ ಆಂತರಿಕ ವಲಯದಲ್ಲಿ ತೀವ್ರ ಅಸಮಾಧಾನ ಎದುರಾಗಿತ್ತು.

"ನಮಸ್ತೆ ಸದಾ ವತ್ಸಲೇ ಮಾತೃಭೂಮೇ" ಎಂಬ ಹಾಡು ಕಾಂಗ್ರೆಸ್‌ನ ಸೈದ್ಧಾಂತಿಕ ನಿಲುವಿಗೆ ವಿರುದ್ಧವಾಗಿದೆ. ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರಾಗಿದ್ದುಕೊಂಡು ಈ ರೀತಿ ವರ್ತಿಸಿದ್ದು ಸರಿಯಲ್ಲ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಮತ್ತು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಕಿಡಿಕಾರಿದ್ದರು. ಅಲ್ಲದೇ ಕಾಂಗ್ರೆಸ್‌ ನ ಹಲವು ನಾಯಕರು ಹೈಕಮಾಂಡ್‌ಗೆ ಈ ಬಗ್ಗೆ ದೂರು ನೀಡಿದ್ದರು.

ಮಹಾತ್ಮ ಗಾಂಧಿ ಹತ್ಯೆಗೆ ಕಾರಣವಾದ ಸಂಘಟನೆಯ ಗೀತೆ ಹಾಡಿದ್ದು ಸರಿಯಲ್ಲ. ಅವರು ಪಕ್ಷದ ಕಾರ್ಯಕರ್ತರ ಕ್ಷಮೆ ಕೇಳಬೇಕು ಎಂಬ ಆಗ್ರಹ ಕೇಳಿ ಬಂದಿತ್ತು. ಇದು ವಿವಾದವಾದ ಬಳಿಕ ಡಿ.ಕೆ. ಶಿವಕುಮಾರ್‌ ಬಹಿರಂಗ ಕ್ಷಮೆಯಾಚಿಸಿದ್ದರು.

Read More
Next Story