
ಕಾಂಗ್ರೆಸ್ ಮುಖಂಡ ರಾಜೀವ್ ಗೌಡ
ಶಿಡ್ಲಘಟ್ಟ ಪೌರಾಯುಕ್ತೆ ಮೇಲೆ ದರ್ಪ: ರಾಜೀವ್ ಗೌಡ ಕಾಂಗ್ರಸ್ನಿಂದ ಅಮಾನತು
ಅನುಮತಿಯಿಲ್ಲದೆ ಹಾಕಲಾಗಿದ್ದ ಫ್ಲೆಕ್ಸ್‌ಗಳನ್ನು ತೆರವುಗೊಳಿಸಿದ ಒಂದೇ ಕಾರಣಕ್ಕೆ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಗೌಡ ಅವರ ಮೇಲೆ ದರ್ಪ ತೋರಿದ್ದ ರಾಜೀವ್ ಗೌಡ ಪ್ರಸ್ತುತ ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಅಧಿಕಾರದ ಮದದಲ್ಲಿ ಸರಕಾರಿ ಮಹಿಳಾ ಅಧಿಕಾರಿಯೊಬ್ಬರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಚೇರಿಗೆ ಬೆಂಕಿ ಇಡುವುದಾಗಿ ಬೆದರಿಕೆ ಹಾಕಿದ್ದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವರ 'ಗೂಂಡಾ ವರ್ತನೆ'ಗೆ ರಾಜ್ಯಾದ್ಯಂತ ಆಕ್ರೋಶ ಮುಂದುವರಿದಿದೆ. ಘಟನೆಗೆ ಸಂಬಂಧಿಸಿದಂತೆ ಹೈಕೋರ್ಟ್ ಛೀಮಾರಿ ಹಾಕಿದ ಬೆನ್ನಲ್ಲೇ, ಮುಖಭಂಗ ಅನುಭವಿಸಿದ ಕಾಂಗ್ರೆಸ್ ಆರೋಪಿಯನ್ನು ಪಕ್ಷದಿಂದ ಅಮಾನತುಗೊಳಿಸಲು ನಿರ್ಧರಿಸಿದೆ.
ಅನುಮತಿಯಿಲ್ಲದೆ ಹಾಕಲಾಗಿದ್ದ ಫ್ಲೆಕ್ಸ್‌ಗಳನ್ನು ತೆರವುಗೊಳಿಸಿದ ಒಂದೇ ಕಾರಣಕ್ಕೆ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಗೌಡ ಅವರ ಮೇಲೆ ದರ್ಪ ತೋರಿದ್ದ ರಾಜೀವ್ ಗೌಡ ಪ್ರಸ್ತುತ ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಏನಿದು ಘಟನೆ?
ಶಿಡ್ಲಘಟ್ಟ ನಗರದಲ್ಲಿ ಅನುಮತಿ ಪಡೆಯದೆ ಹಾಕಲಾಗಿದ್ದ ರಾಜೀವ್ ಗೌಡ ಅವರ ಭಾವಚಿತ್ರವಿದ್ದ ಫ್ಲೆಕ್ಸ್ ಮತ್ತು ಬ್ಯಾನರ್‌ಗಳನ್ನು ನಗರಸಭೆ ಸಿಬ್ಬಂದಿ ತೆರವುಗೊಳಿಸಿದ್ದರು. ಕರ್ತವ್ಯ ನಿರ್ವಹಿಸಿದ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಕರೆ ಮಾಡಿದ ರಾಜೀವ್ ಗೌಡ, ಅಸಭ್ಯ ಭಾಷೆಯಲ್ಲಿ ನಿಂದಿಸಿದ್ದಾರೆ.
ವೈರಲ್ ಆಗಿರುವ ಆಡಿಯೋದಲ್ಲಿ, "ನನ್ನ ಬ್ಯಾನರ್ ಮುಟ್ಟಿದರೆ ಸುಮ್ಮನಿರಲ್ಲ. ನಗರಸಭೆಗೆ ಬಂದು ಬೆಂಕಿ ಹಚ್ಚುತ್ತೇನೆ. ನನ್ನ ಇನ್ನೊಂದು (ಕೆಟ್ಟ) ಮುಖ ನೋಡಿಲ್ಲ ನೀವು. ನಾಳೆಯಿಂದ 31 ವಾರ್ಡ್‌ಗಳಲ್ಲೂ ಗಲಾಟೆ ಮಾಡಿಸುತ್ತೇನೆ," ಎಂದು ಬೆದರಿಕೆ ಹಾಕಿರುವುದು ಸ್ಪಷ್ಟವಾಗಿ ದಾಖಲಾಗಿದೆ. ಮಹಿಳಾ ಅಧಿಕಾರಿಯೆಂದೂ ನೋಡದೆ ರಾಜೀವ್ ಗೌಡ ತೋರಿದ ವರ್ತನೆಗೆ ಭಾರೀ ವಿರೋಧ ವ್ಯಕ್ತವಾಗಿದೆ.
ಸಿಬ್ಬಂದಿಯ ಮುಷ್ಕರ
ರಾಜೀವ್ ಗೌಡ ಅವರ ಬೆದರಿಕೆಯಿಂದ ಆತಂಕಗೊಂಡ ಪೌರಾಯುಕ್ತೆ ಅಮೃತಾ ಗೌಡ ಕಚೇರಿಯಲ್ಲೇ ಕಣ್ಣೀರಿಟ್ಟ ಪ್ರಸಂಗ ನಡೆಯಿತು. ವಿಷಯ ತಿಳಿದ ನಗರಸಭೆಯ ಸಿಬ್ಬಂದಿ ಮತ್ತು ಪೌರಕಾರ್ಮಿಕರು ಒಗ್ಗಟ್ಟಾಗಿ ನಿಂತರು. ಕೂಡಲೇ ಕಚೇರಿ ಎದುರು ಧರಣಿ ಕುಳಿತ ನೌಕರರು, "ಅಧಿಕಾರಿಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಗೂಂಡಾಗಿರಿ ಮಾಡುವವರನ್ನು ಕೂಡಲೇ ಬಂಧಿಸಬೇಕು," ಎಂದು ಆಗ್ರಹಿಸಿ ಮುಷ್ಕರ ನಡೆಸಿದ್ದರು.
ಎರಡು ಎಫ್‌ಐಆರ್ ದಾಖಲು: ಆರೋಪಿ ಎಸ್ಕೇಪ್
ಘಟನೆಗೆ ಸಂಬಂಧಿಸಿದಂತೆ ಅಮೃತಾ ಗೌಡ ಅವರು ಶಿಡ್ಲಘಟ್ಟ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ರಾಜೀವ್ ಗೌಡ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (BNS) ಅಡಿಯಲ್ಲಿ ಸರಕಾರಿ ಕೆಲಸಕ್ಕೆ ಅಡ್ಡಿ (ಸೆಕ್ಷನ್ 132), ಪ್ರಾಣ ಬೆದರಿಕೆ (ಸೆಕ್ಷನ್ 351) ಸೇರಿದಂತೆ ವಿವಿಧ ಕಲಂಗಳಡಿ ಎಫ್‌ಐಆರ್ ದಾಖಲಿಸಿದ್ದಾರೆ.
ದೂರು ದಾಖಲಾಗುತ್ತಿದ್ದಂತೆಯೇ ರಾಜೀವ್ ಗೌಡ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ. ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದು, ಬಂಧನ ಭೀತಿಯಿಂದ ರಾಜೀವ್ ಗೌಡ ತಲೆಮರೆಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಹೈಕೋರ್ಟ್ ಗರಂ: "ಮಹಿಳೆಯರ ಬಗ್ಗೆ ಗೌರವ ಇಲ್ವಾ?"
ಈ ಪ್ರಕರಣವು ಹೈಕೋರ್ಟ್ ಮೆಟ್ಟಿಲೇರಿದ್ದು, ನ್ಯಾಯಾಲಯವು ರಾಜೀವ್ ಗೌಡ ವರ್ತನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. "ಸಾರ್ವಜನಿಕ ಜೀವನದಲ್ಲಿರುವವರಿಗೆ ಕನಿಷ್ಠ ಸೌಜನ್ಯ ಬೇಡವೇ? ಮಹಿಳಾ ಅಧಿಕಾರಿಯೊಂದಿಗೆ ಮಾತನಾಡುವ ರೀತಿ ಇದೇನಾ? ಮಹಿಳೆಯರ ಬಗ್ಗೆ ಗೌರವ ಇಲ್ಲವೇ?" ಎಂದು ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿದೆ. ಇದು ಪ್ರಕರಣದ ಗಾಂಭೀರ್ಯತೆಯನ್ನು ಹೆಚ್ಚಿಸಿದೆ.
ಕಾಂಗ್ರೆಸ್ ಪಕ್ಷಕ್ಕೆ ಮುಜುಗರ: ಅಮಾನತಿಗೆ ಶಿಫಾರಸು
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಿಡ್ಲಘಟ್ಟದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ರಾಜೀವ್ ಗೌಡ ಅವರ ಈ ವರ್ತನೆ ಆಡಳಿತಾರೂಢ ಕಾಂಗ್ರೆಸ್ ಸರ್ಕಾರಕ್ಕೆ ಮುಜುಗರ ತಂದೊಡ್ಡಿದೆ. ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್, "ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ, ಗೂಂಡಾಗಳ ದರ್ಬಾರ್ ನಡೆದಿದೆ," ಎಂದು ಟೀಕಾಪ್ರಹಾರ ನಡೆಸಿವೆ.
ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿರುವ ಕೆಪಿಸಿಸಿ, ರಾಜೀವ್ ಗೌಡ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್ ಅವರು, ರಾಜೀವ್ ಗೌಡ ಅವರನ್ನು ಪಕ್ಷದಿಂದ ಅಮಾನತುಗೊಳಿಸುವಂತೆ ಶಿಸ್ತು ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ ಅವರಿಗೆ ಅಧಿಕೃತವಾಗಿ ಶಿಫಾರಸು ಮಾಡಿದ್ದಾರೆ.

