ಅಕ್ಕ-ತಂಗಿ ಇದ್ದ ಹಾಗೆ ಕ್ಷಮಿಸಿ- ಪೌರಾಯುಕ್ತೆಗೆ ಧಮ್ಕಿ ಹಾಕಿ ಉಲ್ಟಾ ಹೊಡೆದ ರಾಜೀವ್ ಗೌಡ
x
ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಮತ್ತು ಪೌರಾಯುಕ್ತೆ ಅಮೃತಾಗೌಡ

"ಅಕ್ಕ-ತಂಗಿ ಇದ್ದ ಹಾಗೆ ಕ್ಷಮಿಸಿ"- ಪೌರಾಯುಕ್ತೆಗೆ ಧಮ್ಕಿ ಹಾಕಿ ಉಲ್ಟಾ ಹೊಡೆದ ರಾಜೀವ್ ಗೌಡ

ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾಗೌಡ ಅವರಿಗೆ ಅಶ್ಲೀಲವಾಗಿ ನಿಂದಿಸಿ ಚಪ್ಪಲಿಯಲ್ಲಿ ಹೊಡೆಯುವ ಬೆದರಿಕೆ ಹಾಕಿದ್ದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ವಿರುದ್ಧ FIR ದಾಖಲಾಗಿದೆ.


ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ನಗರಸಭೆಯ ಪೌರಾಯುಕ್ತೆ ಅಮೃತಾಗೌಡ ಅವರಿಗೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅಶ್ಲೀಲ ಪದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ ಪ್ರಕರಣ ಈಗ ರಾಜ್ಯಾದ್ಯಂತ ಕಿಚ್ಚು ಹಚ್ಚಿದೆ. ಮಹಿಳಾ ಅಧಿಕಾರಿಯೊಬ್ಬರಿಗೆ ಚಪ್ಪಲಿಯಿಂದ ಹೊಡೆಯುವ ಬೆದರಿಕೆ ಹಾಕಿದ್ದ ರಾಜೀವ್ ಗೌಡ ವಿರುದ್ಧ ಜನಕ್ರೋಶ ವ್ಯಕ್ತವಾಗುತ್ತಿದ್ದಂತೆ, ಈಗ ಅವರು ವಿಡಿಯೋ ಸಂದೇಶದ ಮೂಲಕ ಕ್ಷಮೆಯಾಚಿಸಿದ್ದಾರೆ.

ಏನಿದು ಘಟನೆ?

ಶಿಡ್ಲಘಟ್ಟ ನಗರಸಭೆಯ ಪೌರಾಯುಕ್ತೆ ಅಮೃತಾಗೌಡ ಅವರಿಗೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಜೀವಬೆದರಿಕೆ ಹಾಕಿರುವ ಪ್ರಕರಣವು ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ನಗರದಲ್ಲಿ ಅಕ್ರಮವಾಗಿ ಅಳವಡಿಸಲಾಗಿದ್ದ ಫ್ಲೆಕ್ಸ್ ಹಾಗೂ ಬ್ಯಾನರ್‌ಗಳನ್ನು ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಪೌರಾಯುಕ್ತರು ತೆರವುಗೊಳಿಸಿದ್ದರು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪೌರಾಯುಕ್ತರಿಗೆ ಫೋನ್ ಕರೆ ಮಾಡಿದ್ದ ಕೆಪಿಸಿಸಿ ರಾಜ್ಯ ಸಂಯೋಜಕ ರಾಜೀವ್ ಗೌಡ, ಅತ್ಯಂತ ಅಶ್ಲೀಲ ಪದಗಳಿಂದ ಮಹಿಳಾ ಅಧಿಕಾರಿಯನ್ನು ನಿಂದಿಸಿದ್ದಲ್ಲದೆ, ಜನರನ್ನು ಸೇರಿಸಿ ಚಪ್ಪಲಿಯಿಂದ ಹೊಡೆಸುವುದಾಗಿ ಮತ್ತು ತಾಲೂಕು ಬಿಟ್ಟು ಓಡಿಸುವುದಾಗಿ ಬೆದರಿಕೆ ಹಾಕಿದ್ದರು. ಈ ಸಂಭಾಷಣೆಯ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಸಾರ್ವಜನಿಕ ವಲಯದಲ್ಲಿ ಮತ್ತು ವಿರೋಧ ಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಯಿತು.

ಆಡಿಯೋದಲ್ಲಿ ಏನಿದೆ?

ಅಧಿಕಾರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವುದಲ್ಲದೆ, ಸ್ಥಳೀಯ ಶಾಸಕರನ್ನೂ ಏಕವಚನದಲ್ಲಿ ಬೈಯಲಾಗಿತ್ತು. ಅಷ್ಟೇ ಅಲ್ಲದೆ, "ಜನರನ್ನು ಸೇರಿಸಿ ನಿನಗೆ ಚಪ್ಪಲಿಯಿಂದ ಹೊಡೆಸುತ್ತೇನೆ" ಎಂಬ ಗಂಭೀರ ಬೆದರಿಕೆ ಹಾಕಿದ ಆಡಿಯೋ ಎಲ್ಲೆಡೆ ವೈರಲ್ ಆಗಿತ್ತು.

ರಾಜೀವ್ ಗೌಡ ನೀಡಿದ ಸ್ಪಷ್ಟನೆ ಮತ್ತು ಕ್ಷಮೆಯಾಚನೆ

ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ದಂತೆ ಎಚ್ಚೆತ್ತುಕೊಂಡ ರಾಜೀವ್ ಗೌಡ, ಈಗ 'ಅಕ್ಕ-ತಂಗಿ' ಮಂತ್ರ ಜಪಿಸುತ್ತಿದ್ದಾರೆ. "ಕಳೆದ ಬಾರಿಯೂ ನನ್ನ ಬ್ಯಾನರ್ ತೆಗೆದಿದ್ದರು. ಈ ಬಾರಿ ಪರ್ಮಿಷನ್ ಕೇಳಿದಾಗ ರಜೆಯಲ್ಲಿದ್ದೇನೆ ಬ್ಯಾನರ್ ಕಟ್ಟಿಕೊಳ್ಳಿ ಎಂದು ಪೌರಾಯುಕ್ತರೇ ಹೇಳಿದ್ದರು. ಆದರೆ ಏಕಾಏಕಿ ತೆರವು ಮಾಡಿದ್ದರಿಂದ ಆಕ್ರೋಶಗೊಂಡೆ. ನಾನು ಯಾವುದೇ ಕೆಟ್ಟ ಉದ್ದೇಶದಿಂದ ಬೈದಿಲ್ಲ. ಮಾತಿಗೆ ಮಾತು ಬೆಳೆದು ಆ ರೀತಿ ಮಾತನಾಡಬೇಕಾಯಿತು. ಅಮೃತಾಗೌಡ ಅವರು ನನಗೂ ಅಕ್ಕ-ತಂಗಿ ಇದ್ದಂತೆ, ನನ್ನ ಮಾತಿನಿಂದ ಅವರಿಗೆ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ" ಎಂದು ವಿಡಿಯೋ ಮೂಲಕ ತಿಳಿಸಿದ್ದಾರೆ.

Read More
Next Story