
ಮೃತ ಸಂಜಕುಮಾರ ಗುಂಡಪ್ಪ ಹೊಸಮನಿ
ಸಂಕ್ರಾಂತಿಯಂದೇ ಸೂತಕ; ವ್ಯಕ್ತಿಯ ಕುತ್ತಿಗೆ ಸೀಳಿದ ಚೀನಾ ಮಾಂಜಾ!
ಪ್ರಾಣಿ, ಪಕ್ಷಿಗಳು ಹಾಗೂ ಮನುಷ್ಯರ ಜೀವಕ್ಕೆ ಕಂಟಕವಾಗುತ್ತಿರುವ ನಿಷೇಧಿತ ಚೀನಾ ಮಾಂಜಾ ಬಳಕೆಯನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುವಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಸಂಕ್ರಾಂತಿ ಹಬ್ಬದ ಸಡಗರ ಹೆಚ್ಚಿಸಲು ಹಾರಿಸಿದ್ದ ಗಾಳಿಪಟದ ಮಾಂಜಾ ದಾರವೇ ವ್ಯಕ್ತಿಗೆ ಉರುಳಾಗಿ ಬಲಿ ಪಡೆದ ಘಟನೆ ಬೀದರ್ ಜಿಲ್ಲೆ ಚಿಟಗುಪ್ಪ ತಾಲೂಕಿನ ತಾಳಮಡಗಿ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಸಂಜಯಕುಮಾರ ಗುಂಡಪ್ಪ ಹೊಸಮನಿ (48) ಎಂದು ಗುರುತಿಸಲಾಗಿದೆ. ಹುಮನಾಬಾದ್ ಪಟ್ಟಣದ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ತಮ್ಮ ಮಗಳನ್ನು ಸಂಕ್ರಾಂತಿ ಹಬ್ಬಕ್ಕೆಂದು ಕರೆತರಲು ಬೈಕ್‌ನಲ್ಲಿ ತೆರಳುತ್ತಿದ್ದಾಗ ತಾಳಮಡಗಿ ಗ್ರಾಮದ ಸೇತುವೆ ಬಳಿ ಗಾಳಿಪಟದ ಮಾಂಜಾ ದಾರವು ಕುತ್ತಿಗೆ ಸೀಳಿದೆ.
ಕುತ್ತಿಗೆ ಸೀಳಿದ ಕೂಡಲೇ ಗುಂಡಪ್ಪ ಅವರು ಮಗಳಿಗೆ ಕರೆ ಮಾಡಿದರೂ ಪ್ರಯೋಜನವಾಗಲಿಲ್ಲ. ಸ್ಥಳೀಯ ವಾಹನ ಸವಾರರು ಕುತ್ತಿಗೆಗೆ ಬಟ್ಟೆ ಕಟ್ಟಿ ರಕ್ತಸ್ರಾವ ತಡೆಯಲು ಯತ್ನಿಸಿದ್ದು, ಆಂಬ್ಯುಲೆನ್ಸ್‌ಗೆ ಕರೆ ಮಾಡಿದ್ದಾರೆ. ಆಂಬ್ಯುಲೆನ್ಸ್ ತಡವಾಗಿ ಬಂದಿದ್ದರಿಂದ ಗುಂಡಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಗಾಳಿಪಟ ಹಾರಿಸಲು ನೈಲಾನ್ ದಾರ ಹಾಗೂ ಮಾಂಜಾ ಬಳಕೆ ತಡೆಗೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಆಂಬ್ಯುಲೆನ್ಸ್ ಕೂಡ ಸರಿಯಾದ ಸಮಯಕ್ಕೆ ಬರಲಿಲ್ಲ ಎಂದು ಆರೋಪಿಸಿ ಕುಟುಂಬದವರು ಪ್ರತಿಭಟನೆ ನಡೆಸಿದ್ದಾರೆ.
ಚಿಟಗುಪ್ಪ ತಾಲೂಕಿನಲ್ಲಿ ಸಂಕ್ರಾಂತಿ ಆಚರಣೆ ವೇಳೆ ಗಾಳಿಪಟ ಹಾರಿಸುವುದು ರೂಢಿ. ಎರಡು ದಿನಗಳ ಹಿಂದೆ ಬಾಲಕನೊಬ್ಬ ಕೈಗೆ ಗಾಳಿಪಟದ ದಾರ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ. ಘಟನೆ ಬಳಿಕ ತಹಶೀಲ್ದಾರ್ ಮಂಜುನಾಥ ಪಾಂಚಾಳ ಅವರು ತಾಲೂಕಿನಾದ್ಯಂತ ಗಾಳಿಪಟ ಹಾರಿಸುವ ವೈರ್ ಹಾಗೂ ಮಾಂಜಾ ದಾರ ಮಾರಾಟ ನಿಷೇಧಿಸಿದ್ದರು.
ಜನಜಾಗೃತಿ ಮೂಡಿಸಲು ಖಂಡ್ರೆ ಸೂಚನೆ
ಮಕರ ಸಂಕ್ರಾಂತಿ ಅಂಗವಾಗಿ ಜಿಲ್ಲೆಯಾದ್ಯಂತ ಗಾಳಿಪಟ ಹಾರಿಸಲು ನಿಷೇಧಿತ ಚೀನಾ ತಯಾರಿಕೆಯ ಮಾಂಜಾ ದಾರದ ಬಳಕೆ ಹಾಗೂ ಮಾರಾಟ ಮಾಡದಂತೆ ಜಾಗೃತಿ ಮೂಡಿಸಲು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸಚಿವ ಈಶ್ವರ್ ಖಂಡ್ರೆ ಸೂಚನೆ ನೀಡಿದ್ದಾರೆ. ಸಾಮಾಜಿಕ ತಾಣಗಳ ಮೂಲಕ ಸಂದೇಶ ರವಾನಿಸಿ ಜಾಗೃತಿ ಮೂಡಿಸಬೇಕು. ದ್ವಿಚಕ್ರ ವಾಹನ ಚಲಾಯಿಸುವಾಗ ಸವಾರರು ಕುತ್ತಿಗೆಗೆ ಒಂದು ವಸ್ತ್ರ ಸುತ್ತಿಕೊಳ್ಳುವಂತೆ ಮನವಿ ಮಾಡಿದ್ದಾರೆ.
ಪಕ್ಷಿ ಹಾಗೂ ಪ್ರಾಣಿಗಳಿಗೂ ಮಾರಕ
ಗಾಳಿಪಟ ಹಾರಿಸಲು ನಿಷೇಧಿತ ಮಾಂಜಾ ದಾರ ಬಳಸುವುದರಿಂದ ಕೇವಲ 12ದಿನದಲ್ಲಿ 300ಕ್ಕೂ ಹೆಚ್ಚು ಪಕ್ಷಿ, ಪ್ರಾಣಿಗಳಿಗೆ ತೊಂದರೆಯಾಗಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
2019ರಲ್ಲಿ 349, 2020ರಲ್ಲಿ 1,323, 2021ರಲ್ಲಿ 3,072, 2022ರಲ್ಲಿ 2,381, 2023ರಲ್ಲಿ 2,678, 2024ರಲ್ಲಿ 2,648, 2025ರಲ್ಲಿ 3,614 ಹಾಗೂ 2026ರ ಜ.12ರವರೆಗೆ 244 ಪಕ್ಷಿ ಹಾಗೂ ಪ್ರಾಣಿಗಳು ಗಾಯಗೊಂಡಿವೆ ಎಂದು ಹೇಳಿದೆ.

