
ಪೌರಾಯುಕ್ತೆಗೆ ನಿಂದನೆ-ಅಜ್ಞಾತ ಸ್ಥಳದಲ್ಲಿ ರಾಜೀವ್ ಗೌಡ; ಶಿಸ್ತುಕ್ರಮಕ್ಕೆ ಮುಂದಾದ KPCC
ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾಗೌಡ ನಿಂದನೆ ಪ್ರಕರಣದ ಆರೋಪಿ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ನಾಪತ್ತೆಯಾಗಿದ್ದಾರೆ. ಬೆಂಗಳೂರಿನ ಅವರ ನಿವಾಸದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾಗೌಡ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಪ್ರಾಣ ಬೆದರಿಕೆ ಹಾಕಿದ ಆರೋಪದ ಮೇಲೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಪ್ರಸ್ತುತ ಅವರು ಬಂಧನದ ಭೀತಿಯಲ್ಲಿದ್ದು, ತಲೆ ಮರೆಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ನಿರೀಕ್ಷಣಾ ಜಾಮೀನು ಪಡೆಯಲು ಮುಂದಾಗಿದ್ದಾರೆ.
ಅತ್ತ ರಾಜೀವ್ ಗೌಡ ವರ್ತನೆಗೆ ಸ್ವಪಕ್ಷದ ಮುಖಂಡರೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಬೆನ್ನಲ್ಲೇ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ರಾಜೀವ್ ಗೌಡಗೆ ನೋಟಿಸ್ (Notice)ಜಾರಿ ಮಾಡಿದೆ. ಒಂದು ವಾರದ ಒಳಗೆ ಸಮಜಾಯಿಷಿ ನೀಡಲು ನೋಟಿಸ್ನಲ್ಲಿ ಸೂಚಿಸಲಾಗಿದೆ.
ಕೆಪಿಸಿಸಿ ಶೋಕಾಸ್ ನೋಟಿಸ್
ರಾಜೀವ್ ಗೌಡ ಅವರ ವರ್ತನೆಯಿಂದ ಪಕ್ಷಕ್ಕೆ ಮುಜುಗರ ಉಂಟಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್ ಅವರು ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ. ಒಂದು ವಾರದೊಳಗೆ ಸೂಕ್ತ ಸಮಜಾಯಿಷಿ ನೀಡದಿದ್ದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಲಾಗಿದೆ.
ತಹಶೀಲ್ದಾರ್ ಮೇಲೂ ನಿಂದನೆ ಆರೋಪ: ಪೌರಾಯುಕ್ತರಷ್ಟೇ ಅಲ್ಲದೆ, ಶಿಡ್ಲಘಟ್ಟ ತಹಶೀಲ್ದಾರ್ ಗಗನ ಸಿಂಧೂ ಅವರಿಗೂ ಈ ಹಿಂದೆ ಕಡತವೊಂದರ ವಿಚಾರವಾಗಿ ರಾಜೀವ್ ಗೌಡ ನಿಂದಿಸಿದ್ದರು ಎಂಬ ಆರೋಪ ಕೇಳಿ ಬಂದಿದೆ. ಆದರೆ ತಹಶೀಲ್ದಾರ್ ಅವರು ಪೌರಾಯುಕ್ತರ ಮಟ್ಟಿಗೆ ತನಗೆ ನಿಂದಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರತಿಭಟನೆ: ಅಧಿಕಾರಿಯ ಮೇಲೆ ನಡೆದ ಈ ದೌರ್ಜನ್ಯವನ್ನು ಖಂಡಿಸಿ ನಗರಸಭೆ ಸಿಬ್ಬಂದಿಗಳು ಮತ್ತು ಪೌರಕಾರ್ಮಿಕರು ಪ್ರತಿಭಟನೆ ನಡೆಸಿದ್ದು, ಶೀಘ್ರವೇ ಆರೋಪಿಯನ್ನು ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ.
ಪ್ರಕರಣದ ಹಿನ್ನೆಲೆ
ಇತ್ತೀಚೆಗೆ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಪುತ್ರ ಜೈದ್ ಖಾನ್ ಅಭಿನಯದ 'ಕಲ್ಟ್' (Cult) ಚಿತ್ರದ ಪ್ರಚಾರಕ್ಕಾಗಿ ಶಿಡ್ಲಘಟ್ಟ ನಗರದ ವಿವಿಧೆಡೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವರ ಭಾವಚಿತ್ರವಿರುವ ಬ್ಯಾನರ್ ಮತ್ತು ಪೋಸ್ಟರ್‌ಗಳನ್ನು ಹಾಕಲಾಗಿತ್ತು.
ಈ ಬ್ಯಾನರ್‌ಗಳನ್ನು ರಸ್ತೆ ಮಧ್ಯೆ ಮತ್ತು ಅವೈಜ್ಞಾನಿಕವಾಗಿ ಅಳವಡಿಸಲಾಗಿದ್ದು, ಇದರಿಂದ ಅಪಘಾತಗಳು ಸಂಭವಿಸುತ್ತಿವೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ನಗರಸಭೆ ಪೌರಾಯುಕ್ತೆ ಅಮೃತಾಗೌಡ ಅವರು ಅವುಗಳನ್ನು ತೆರವುಗೊಳಿಸಲು ಆದೇಶಿಸಿದ್ದರು.
ಬ್ಯಾನರ್ ತೆರವುಗೊಳಿಸಿದ್ದಕ್ಕೆ ಆಕ್ರೋಶಗೊಂಡ ರಾಜೀವ್ ಗೌಡ ಅವರು ಜನವರಿ 12 ರಂದು ಪೌರಾಯುಕ್ತರಿಗೆ ಫೋನ್ ಮಾಡಿ ಅಶ್ಲೀಲ ಪದಗಳಿಂದ ನಿಂದಿಸಿ, "ನಗರಸಭೆಗೆ ಬೆಂಕಿ ಹಚ್ಚುತ್ತೇನೆ, ಚಪ್ಪಲಿಯಲ್ಲಿ ಹೊಡೆಸುತ್ತೇನೆ" ಎಂದು ಪ್ರಾಣ ಬೆದರಿಕೆ ಹಾಕಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ.
ಎಫ್‌ಐಆರ್ ದಾಖಲಾಗುತ್ತಿದ್ದಂತೆಯೇ ರಾಜೀವ್ ಗೌಡ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದಾರೆ. ಸದ್ಯ ಅವರು ತಮ್ಮ ಶಿಡ್ಲಘಟ್ಟದ ನಿವಾಸದಲ್ಲೂ ಇಲ್ಲ ಹಾಗೂ ಬೆಂಗಳೂರಿನ ಸಂಜಯ್ ನಗರದಲ್ಲಿರುವ ಮನೆಯಲ್ಲೂ ಪತ್ತೆಯಾಗಿಲ್ಲ.
ಶಿಡ್ಲಘಟ್ಟ ಇನ್ಸ್‌ಪೆಕ್ಟರ್ ಆನಂದ್ ಕುಮಾರ್ ನೇತೃತ್ವದ ಪೊಲೀಸ್ ತಂಡವು ಬೆಂಗಳೂರಿನ ಸಂಜಯ್ ನಗರದಲ್ಲಿರುವ ರಾಜೀವ್ ಗೌಡ ಅವರ ನಿವಾಸಕ್ಕೆ ತೆರಳಿ ಸತತ ಹುಡುಕಾಟ ನಡೆಸಿದೆ. ಮನೆಯಲ್ಲಿದ್ದವರನ್ನು ವಿಚಾರಣೆ ನಡೆಸಲಾಗಿದ್ದರೂ, ಅವರ ಇರುವಿಕೆಯ ಬಗ್ಗೆ ಯಾವುದೇ ಸುಳಿವು ಲಭ್ಯವಾಗಿಲ್ಲ.ರಾಜೀವ್ ಗೌಡ ಅವರ ಮೊಬೈಲ್ ಲೊಕೇಶನ್ ಆಧರಿಸಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಆಪ್ತರು ಮತ್ತು ಅವರ ಬೆಂಬಲಿಗರನ್ನು ಪೊಲೀಸರು ಕಣ್ಗಾವಲಿನಲ್ಲಿ ಇಟ್ಟಿದ್ದಾರೆ.

