
ಹೈಕೋರ್ಟ್
ಸದ್ಯಕ್ಕಿಲ್ಲ ನೇಮಕಾತಿ| ಶೇ.56 ಮೀಸಲಾತಿ ಕುರಿತು ವಿಚಾರಣೆ ಮುಂದೂಡಿದ ಹೈಕೋರ್ಟ್
ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿದ್ದು, ಶೇ.50 ಮೀಸಲಾತಿ ಅನ್ವಯ ನೇಮಕಾತಿ ನಡೆಸಲು ನಮ್ಮ ಅಭ್ಯಂತರವಿಲ್ಲ ಎಂದು ತಿಳಿಸಿತು.
ರಾಜ್ಯ ಸರ್ಕಾರದಲ್ಲಿ ಖಾಲಿ ಇರುವ 2.84 ಲಕ್ಷ ಖಾಲಿ ಹುದ್ದೆಗಳಿಗೆ ಶೀಘ್ರವೇ ಅಧಿಸೂಚನೆ ಹೊರಡಿಸಲಿದೆ ಎಂದು ಕಾಯುತ್ತಿದ್ದ ಲಕ್ಷಾಂತರ ಸ್ಪರ್ಧಾರ್ಥಿಗಳು ಮತ್ತಷ್ಟು ದಿನಗಳು ಕಾಯುವುದು ಅನಿವಾರ್ಯವಾಗಿದೆ. ಶೇ. 56 ಮೀಸಲಿನಂತೆ ನೇಮಕ ಪ್ರಕ್ರಿಯೆ ಮಾಡುವುದರ ಕುರಿತು ವಾದ-ವಿವಾದ ಆಲಿಸಿದ ಹೈಕೋರ್ಟ್ ವಿಚಾರಣೆಯನ್ನು ಫೆ.12ಕ್ಕೆ ಮುಂದೂಡಿ ಆದೇಶಿಸಿದೆ.
ರಾಜ್ಯ ಸರ್ಕಾರ ಶೇ.56ರ ಮೀಸಲಾತಿಯಂತೆ ನೇಮಕಾತಿ ನಡೆಸುವುದನ್ನು ವಿರೋಧಿಸಿ ಹಲವರು ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ವಿಭಾಗೀಯ ಪೀಠ, ಮಧ್ಯಂತರ ವ್ಯವಸ್ಥೆಗೆ ಸಂಬಂಧಿಸಿದಂತೆ ಅಡ್ವೊಕೆಟ್ ಜನರಲ್ ಕಾಲವಕಾಶ ಕೋರಿದ್ದು, ಸೂಕ್ತ ಅರ್ಜಿಯನ್ನು ಸಲ್ಲಿಸಬಹುದು ಎಂದು ತಿಳಿಸಿದೆ.
ಮಂಗಳವಾರ(ಜ.20) ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿದ್ದು, ಶೇ.50 ಮೀಸಲಾತಿ ಅನ್ವಯ ನೇಮಕಾತಿ ನಡೆಸಲು ನಮ್ಮ ಅಭ್ಯಂತರವಿಲ್ಲ ಎಂದು ತಿಳಿಸಿತು. ಇದಕ್ಕುತ್ತರಿಸಿದ ಅಡ್ವೊಕೆಟ್ ಜನರಲ್ ಶಶಿಕಿರಣ್ ಶೆಟ್ಟಿ, ಶೇ.56 ಮೀಸಲಾತಿಯಲ್ಲಿ 50 ಹುದ್ದೆಗಳಿಗೆ ಮಾತ್ರ ನೇಮಕ ಮಾಡಲಾಗುವುದು. ಉಳಿದ 6 ಹುದ್ದೆಗಳಿಗೆ ನ್ಯಾಯಾಲಯದ ಅಂತಿಮ ಆದೇಶ ಬಂದ ನಂತರ ಭರ್ತಿ ಮಾಡಲಾಗುವುದು ಎಂದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅರ್ಜಿದಾರರ ಪರ ವಕೀಲರು, ನೇಮಕಾತಿ ಕಾಯ್ದೆಯ ಸಕ್ಷನ್ 6ರಡಿ ನಿಯಮ ರೂಪಿಸದೆ ನೇಮಕ ಮಾಡಲಾಗದು, ಇದಕ್ಕಾಗಿ ಹೊಸ ಅಧಿಸೂಚನೆ ಹೊರಡಿಸಬೇಕಾಗುತ್ತದೆ. ಸರ್ಕಾರ ಹೊಸ ನೇಮಕಾತಿ ಹೊರಡಿಸಲು ಅನುಮತಿ ನೀಡಬಾರದು ಎಂದು ಮನವಿ ಮಾಡಿದರು.
ತಮಿಳುನಾಡು, ಮಧ್ಯಪ್ರದೇಶ, ಛತ್ತಿಸ್‌ಘಡ ರಾಜ್ಯಗಳು ಶೇ.50 ಮೀಸಲಾತಿಯನ್ನು ಮೀರಿದೆ. ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ಹಲವು ಅರ್ಜಿಗಳು ಸುಪ್ರೀಂ ಕೋರ್ಟ್‌ನಲ್ಲಿ ದಾಖಲಾಗಿದ್ದು, ಈ ತಿಂಗಳಲ್ಲಿ ವಿಚಾರಣೆಗೆ ಬರಲಿದೆ. ಕರ್ನಾಟಕದಲ್ಲಿನ ಸಮಸ್ಯೆಗೆ ಸಂಬಂಧಿಸಿದ ವಿಚಾರಗಳೇ ಅರ್ಜಿಗಳಲ್ಲಿ ಇರುವುದರಿಂದ ಅಲ್ಲಿನ ಆದೇಶಕ್ಕಾಗಿ ಕಾಯಲಾಗುತ್ತಿದೆ ಎಂದು ಎಜಿ ಹೇಳಿದ್ದಾರೆ. ಅಗತ್ಯವಿದ್ದರೆ ಸರ್ಕಾರ ಹೊಸ ಅರ್ಜಿ ಸಲ್ಲಿಸಬಹುದು ಎಂದು ವಿಭಾಗೀಯ ಪೀಠ ಆದೇಶಿಸಿದೆ.

