
ಸಚಿವ ಸತೀಶ್ ಜಾರಕಿಹೊಳಿ
ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಸಂಚಲನ: 21ಕ್ಕೆ ಜಾರಕಿಹೊಳಿ ದೆಹಲಿಗೆ
ನಾಯಕತ್ವದ ವಿಚಾರವಾಗಿ ಹಲವು ಸಚಿವರು ಹಾಗೂ ಶಾಸಕರು ವಿಭಿನ್ನ ಹೇಳಿಕೆಗಳು ಸರ್ಕಾರಕ್ಕೆ ತೊಂದರೆಯಾದಂತೆ ನೋಡಿಕೊಳ್ಳಬೇಕು. ನಾಯಕತ್ವದ ವಿಚಾರದಿಂದ ಸ್ಥಳೀಯ ಚುನಾವಣೆಗಳಿಗೆ ತೊಂದರೆಯಾಗುವುದಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ಸಂಕ್ರಾಂತಿ ನಂತರ ರಾಜ್ಯ ರಾಜಕಾರಣದಲ್ಲಿನ ನಾಯಕತ್ವ ಗೊಂದಲ ಹೆಚ್ಚಾಗುತ್ತಲೇ ಇದೆ. ಅಸ್ಸಾಂ ಚುನಾವಣೆಯ ನಿಮಿತ್ತ ಈಗಾಗಲೇ ಡಿಸಿಎಂ ಡಿ.ಕೆ. ಶಿವಕುಮಾರ್ ನವದೆಹಲಿಯಲ್ಲಿ ಠಿಕಾಣೆ ಹೂಡಿದ್ದು, ಇದೀಗ ಸಚಿವ ಸತೀಶ್ ಜಾರಕೊಹೊಳಿ ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಶನಿವಾರ(ಜ.17) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, " ನಾಯಕತ್ವದ ಗೊಂದಲ ಹೈಕಮಾಂಡ್ ಗಮನಕ್ಕೂ ಇದ್ದು, ನಾವು ಪದೇ ಪದೇ ಮನವಿ ಮಾಡುವ ಅವಶ್ಯಕತೆಯಿಲ್ಲ. ಜ.21ಕ್ಕೆ ದೆಹಲಿಗೆ ತೆರಳಲಿದ್ದು, ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ಹಲವು ವಿಷಯಗಳ ಬಗ್ಗೆ ಚರ್ಚಿಸಲಾಗುವುದು" ಎಂದು ತಿಳಿಸಿದರು.
ನಾಯಕತ್ವದ ವಿಚಾರವಾಗಿ ಹಲವು ಸಚಿವರು ಹಾಗೂ ಶಾಸಕರು ವಿಭಿನ್ನ ಹೇಳಿಕೆಗಳು ಸರ್ಕಾರಕ್ಕೆ ತೊಂದರೆಯಾದಂತೆ ನೋಡಿಕೊಳ್ಳಬೇಕು. ನಾಯಕತ್ವದ ವಿಚಾರದಿಂದ ಸ್ಥಳೀಯ ಚುನಾವಣೆಗಳಿಗೆ ತೊಂದರೆಯಾಗುವುದಿಲ್ಲ. ಸ್ಥಳೀಯ ನಾಯಕರನ್ನ ನೋಡಿ ಚುನಾವಣೆಯಲ್ಲಿ ಮತ ಹಾಕುತ್ತಾರೆ. ಎಂಎಲ್‌ಎಗಳು ಉತ್ತಮ ಸಂಬಂಧ ಇಟ್ಟುಕೊಂಡರೆ ಸಮಸ್ಯೆಯಾಗುವುದಿಲ್ಲ. ಅಭಿವೃದ್ಧಿ ಕಾರ್ಯಗಳಿಗೆ ಒಂದು ಲಕ್ಷ ಕೋಟಿ ರೂ. ಗೂ ಅಧಿಕ ಖರ್ಚು ಮಾಡುತ್ತೇವೆ. ಗ್ಯಾರೆಂಟಿಗಾಗಿಯೇ ಬೇರೆ ಹಣವಿದೆ ಎಂದರು.
ರಾಜಣ್ಣ ಮನೆಗೆ ಭೇಟಿ: ವಿಶೇಷ ಅರ್ಥ ಬೇಡ
ತುಮಕೂರಿನಲ್ಲಿ ನಡೆದ ಕ್ರೀಡಾಕೂಟ ಉದ್ಘಾಟನೆ ಮಾಡಿ ಮಾಜಿ ಸಚಿವ ಕೆ.ಎನ್ ರಾಜಣ್ಣನವರ ನಿವಾಸಕ್ಕೆ ಸಿಎಂ ಭೇಟಿ ನೀಡಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಿರ್ಧಾರ ಮಾಡುತ್ತಾರೆ. ಸಿಎಂ ಸೂಚನೆ ನೀಡದ ಮೇಲೆ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗವುದು ಎಂದು ತಿಳಿಸಿದರು.
ದೆಹಲಿಯಲ್ಲೇ ಬೀಡು ಬಿಟ್ಟ ಡಿಕೆಶಿ
ರಾಜ್ಯ ರಾಜಕೀಯದಲ್ಲಿನ ನಾಯಕತ್ವ ಸಂಬಂಧ ಸ್ಪಷ್ಟತೆ ಪಡೆಯಲು ಡಿಸಿಎಂ ಡಿ.ಕೆ. ಶಿವಕುಮಾರ್ ತಮ್ಮ ಪ್ರಯತ್ನವನ್ನು ಮುಂದುವರಿಸುತ್ತಲೇ ಇದ್ದಾರೆ. ಅಸ್ಸಾಂ ಚುನಾವಣಾ ವೀಕ್ಷಕರ ಸಭೆಯಲ್ಲಿ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿದ್ದು, ನಾಯಕತ್ವದ ಗೊಂದಲದ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ. ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿಯವರಿಗೆ ಅನಾರೋಗ್ಯದ ಕಾರಣ ಭೇಟಿ ಮಾಡಲು ಡಿಸಿಎಂಗೆ ಸಾಧ್ಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಮಾಜಿ ಸಚಿವ ಭೀಮಣ್ಣ ಖಂಡ್ರೆ ಅವರ ಅಂತಿಮ ದರ್ಶನಕ್ಕೆ ಶನಿವಾರ ಬೀದರ್‌ಗೆ ಆಗಮಿಸಲಿರುವ ಡಿ.ಕೆ. ಶಿವಕುಮಾರ್, ಹೈದರಾಬಾದ್ ಮಾರ್ಗವಾಗಿ ದೆಹಲಿಗೆ ವಾಪಸ್ ಆಗಿ ಸಂಸದೆ ಪ್ರಿಯಾಂಕ್ ಗಾಂಧಿ ಅವರನ್ನು ಭೇಟಿ ಮಾಡಲು ದೆಹಲಿಯಲ್ಲೇ ವಾಸ್ತವ್ಯ ಹೂಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

