
ಮಾಜಿ ಸಚಿವ ಕೆ.ಎನ್. ರಾಜಣ್ಣ ಹಾಗೂ ಎಂಎಲ್‌ಸಿ ಎಸ್.ರವಿ
ಸಹಕಾರಿ ವಲಯದಲ್ಲಿ ಸಿದ್ದು-ಡಿಕೆಶಿ ಬಣ ರಾಜಕೀಯ: ರಾಜಣ್ಣಗೆ ಡಿಸಿಎಂ 'ಚೆಕ್‌ಮೇಟ್'?
ಸದಾ ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ರಾಜಕೀಯ ವಿರೋಧಿ ಹೇಳಿಕೆ ನೀಡುತ್ತಿದ್ದ ಮಾಜಿ ಸಚಿವ ಕೆ.ಎನ್. ರಾಜಣ್ಣ ವಿರುದ್ಧ ಡಿಕೆಶಿಯೇ ಪರೋಕ್ಷವಾಗಿ ಅಭ್ಯರ್ಥಿಯನ್ನು ನಿಲ್ಲಿಸಿ ರಾಜಕೀಯವಾಗಿ ಹಣಿಯಲು ಸಿದ್ಧತೆ ನಡೆಸಿದ್ದಾರೆ ಎಂಬ ಮಾತು ಕೇಳಿಬರುತ್ತಿವೆ.
ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ನಾಯಕತ್ವದ ಗೊಂದಲಗಳ ನಡುವೆಯೇ ಈಗ ಪ್ರಭಾವಿ ಸಹಕಾರಿ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸಲು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಬಣಗಳ ನಡುವೆ ಶೀತಲ ಸಮರ ತಾರಕಕ್ಕೇರಿದೆ. ಕೆಎಂಎಫ್ (KMF) ಅಧ್ಯಕ್ಷ ಸ್ಥಾನದ ವಿವಾದ ತಣ್ಣಗಾಗುವ ಮೊದಲೇ, ಈಗ ರಾಜ್ಯದ ಸಹಕಾರಿ ರಂಗದ ಅತ್ಯುನ್ನತ ಸಂಸ್ಥೆಯಾದ ಅಪೆಕ್ಸ್ ಬ್ಯಾಂಕ್ (Apex Bank) ಅಧ್ಯಕ್ಷ ಪಟ್ಟಕ್ಕಾಗಿ ಬಣ ರಾಜಕೀಯದ ಕಾವು ರಂಗೇರಿದೆ.
ಅಪೆಕ್ಸ್ ಬ್ಯಾಂಕ್‌ಗೆ ಈಗಾಗಲೇ ಎರಡು ಬಾರಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಮಾಜಿ ಸಚಿವ ಹಾಗೂ ಸಿಎಂ ಸಿದ್ದರಾಮಯ್ಯನವರ ಆಪ್ತ ಶಾಸಕ ಕೆ.ಎನ್. ರಾಜಣ್ಣ ಇತ್ತೀಚೆಗೆ ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಇದೀಗ ಡಿಸಿಎಂ ಆಪ್ತ, ವಿಧಾನಪರಿಷತ್ ಸದಸ್ಯ ಎಸ್.ರವಿ ಅವರೂ ಶುಕ್ರವಾರ ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿರುವುದು ರಾಜ್ಯ ರಾಜಕಾರಣದಲ್ಲಿ ಬಣ ರಾಜಕೀಯಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ.
ಸದಾ ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ರಾಜಕೀಯ ಹೇಳಿಕೆ ನೀಡುತ್ತಿದ್ದ ಮಾಜಿ ಸಚಿವ ಕೆ.ಎನ್. ರಾಜಣ್ಣ ವಿರುದ್ಧ ಡಿಕೆಶಿಯೇ ಪರೋಕ್ಷವಾಗಿ ಅಭ್ಯರ್ಥಿಯನ್ನು ನಿಲ್ಲಿಸಿ ರಾಜಕೀಯವಾಗಿ ಹಣಿಯಲು ಸಿದ್ಧತೆ ನಡೆಸಿದ್ದಾರೆ. ಆ ಮೂಲಕ ಸಿಎಂ ಸಿದ್ದರಾಮಯ್ಯಗೂ ಚೆಕ್‌ಮೇಟ್ ನೀಡಲು ತಮ್ಮ ಸಂಬಂಧಿಯನ್ನೇ ನಿಲ್ಲಿಸಿದ್ದಾರೆ ಎಂಬ ಮಾತುಗಳು ರಾಜ್ಯ ರಾಜಕಾರಣದಲ್ಲಿ ಕೇಳಿ ಬರುತ್ತಿವೆ.
ಅಪೆಕ್ಸ್ ಆಡಳಿತದಲ್ಲಿ ರಾಜಣ್ಣಗೆ ಅನುಭವ
ಈಗಾಗಲೇ 110 ವರ್ಷಗಳಷ್ಟು ಹಳೆಯದಾದ ಅಪೆಕ್ಸ್ ಬ್ಯಾಂಕಿಗೆ ಎರಡು ಬಾರಿ ಕೆ.ಎನ್.ರಾಜಣ್ಣ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅಕ್ಟೋಬರ್ 2001 ರಿಂದ ಏಪ್ರಿಲ್ 2005 ಮತ್ತು ಆಗಸ್ಟ್ 2015 ರಿಂದ ಸೆಪ್ಟೆಂಬರ್ 2020 ರವರೆಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು, ಮತ್ತೊಂದು ಅವಧಿಗೆ ಅಧ್ಯಕ್ಷರಾಗಲು ನಿರ್ದೇಶಕ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದು, ಸಹಕಾರ ಸಚಿವ ಸ್ಥಾನ ಕಳೆದುಕೊಂಡಿರುವ ರಾಜಣ್ಣಗೆ ಅಧ್ಯಕ್ಷ ಸ್ಥಾನ ಸುಲಭವಾಗಿ ಒಲಿಯಲಿದೆಯೇ ಅಥವಾ ಡಿಕೆಶಿ ಚಕ್ರವ್ಯೂಹದೊಳಗೆ ಸಿಲುಕಲಿದ್ದಾರೆಯೇ ಎಂದು ಚುನಾವಣೆ ನಿರ್ಧರಿಸಲಿದೆ.
ಶುಕ್ರವಾರ ನಿರ್ದೇಶಕ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ ವಿಧಾನಪರಿಷತ್ ಸದಸ್ಯ ಎಸ್.ರವಿ
ಕೆಎಂಎಫ್ ಮೇಲು ಬಣ ರಾಜಕೀಯದ ಕಣ್ಣು
ಕರ್ನಾಟಕ ಹಾಲು ಮಹಾಮಂಡಲದ ಅಧ್ಯಕ್ಷ ಸ್ಥಾನದ ಮೇಲೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಬಣದ ನಾಯಕರು ಕಣ್ಣಿಟ್ಟಿದ್ದು ಈ ಸ್ಪರ್ಧೆ ಎರಡೂ ಬಣಗಳಿಗೂ ಮಹತ್ವದಾಗಿದೆ. ಕೆಎಂಎಫ್ ಅಧ್ಯಕ್ಷ ಸ್ಥಾನ ಪಡೆಯಲೇ ಬೇಕು ಎಂದು ಪಣ ತೊಟ್ಟು, ಬಮೂಲ್ ಅಧ್ಯಕ್ಷರಾಗಿ ಡಿಕೆಶಿ ಸಹೋದರ ಡಿ.ಕೆ. ಸುರೇಶ್ ಅಧಿಕಾರ ನಿರ್ವಹಿಸುತ್ತಿದ್ದಾರೆ. ಡಿಕೆಶಿ ಬಣಕ್ಕೆ ಪೆಟ್ಟು ನೀಡಬೇಕು ಎಂದು ಸಿಎಂ ಸಿದ್ದರಾಮಯ್ಯ ಬಣದಿಂದ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಅವರನ್ನು ರಾಬಕೊವಿ(ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯಪುರ) ಹಾಲು ಒಕ್ಕೂಟದ ಅಧ್ಯಕ್ಷರನ್ನಾಗಿ ಮಾಡಿದ್ದು, ಹಿಟ್ನಾಳ್ ಅವರನ್ನು ಕೆಎಂಎಫ್ ಅಧ್ಯಕ್ಷ ಸ್ಥಾನದಲ್ಲಿ ಕೂರಿಸಲೇ ಬೇಕು ಎಂದು ಸಿಎಂ ಆಪ್ತ ಬಣ ನಿರ್ಧರಿಸಿದೆ.
ಏನಿದು ಅಪೆಕ್ಸ್ ಬ್ಯಾಂಕ್
ಅಪೆಕ್ಸ್ ಬ್ಯಾಂಕ್ ಎಂಬುದು ರಾಜ್ಯದ ಸಹಕಾರ ಬ್ಯಾಂಕಿಂಗ್ ವ್ಯವಸ್ಥೆಯ ಉನ್ನತ ಬ್ಯಾಂಕ್ ಆಗಿದೆ. ಇದು ಜಿಲ್ಲಾ ಸಹಕಾರಿ ಬ್ಯಾಂಕ್‌ಗಳು ಮತ್ತು ಪ್ರಾಥಮಿಕ ಕೃಷಿ ಸಾಲ ಸಹಕಾರ ಸಂಘಗಳಿಗೆ ಹಣಕಾಸು ಒದಗಿಸುವ ಮೂಲಕ, ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿಗೆ ಸಾಲಗಳನ್ನು ನೀಡಿ, ರಾಜ್ಯದಾದ್ಯಂತ ಸಹಕಾರಿ ಚಲನವಲನಗಳ ಮೇಲೆ ಕಣ್ಣಿಡುತ್ತದೆ. ಇದು ನಬಾರ್ಡ್‌ನಂತಹ ಸಂಸ್ಥೆಗಳ ನೆರವಿನೊಂದಿಗೆ ಕಾರ್ಯನಿರ್ವಹಿಸುತ್ತದೆ. ಪ್ರಮುಖವಾಗಿ ರೈತರಿಗೆ ಮತ್ತು ಗ್ರಾಮೀಣ ಜನರಿಗೆ ಕೃಷಿ , ಗೃಹ ಮತ್ತು ಶಿಕ್ಷಣ ಸಾಲಗಳನ್ನು ಒದಗಿಸುತ್ತದೆ. ಜಿಲ್ಲಾ ಸಹಕಾರಿ ಬ್ಯಾಂಕ್‌ಗಳನ್ನು ನಿಯಂತ್ರಿಸುವುದಲ್ಲದೇ ಅವುಗಳಿಗೆ ನೆರವನ್ನು ನೀಡುತ್ತದೆ.

