Vote Chori| ವೋಟ್ ಚೋರಿಯಲ್ಲಿ ಪಕ್ಷ ನಿಂದನೆ ಕಳಂಕ; ಕೆ.ಎನ್.ರಾಜಣ್ಣ ಪತ್ರದ ಹಿಂದಿದೆ ಡಿಕೆಶಿ ಹೆಣೆಯುವ ತಂತ್ರ!
x

Vote Chori| ವೋಟ್ ಚೋರಿಯಲ್ಲಿ ಪಕ್ಷ ನಿಂದನೆ ಕಳಂಕ; ಕೆ.ಎನ್.ರಾಜಣ್ಣ ಪತ್ರದ ಹಿಂದಿದೆ ಡಿಕೆಶಿ ಹೆಣೆಯುವ ತಂತ್ರ!

ರಾಹುಲ್ ಗಾಂಧಿಗೆ ನೇರವಾಗಿ ಪತ್ರ ಬರೆದರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ದೆಹಲಿ ನಾಯಕರು ಇದನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಅಲ್ಲದೇ ರಾಜ್ಯ ಕಾಂಗ್ರೆಸ್ ನ ಆಂತರಿಕ ಕಚ್ಚಾಟವನ್ನು ವರಿಷ್ಠರ ಗಮನಕ್ಕೆ ತರಬಹುದು ಎಂಬುದು ರಾಜಣ್ಣ ಅವರ ಲೆಕ್ಕಾಚಾರವಾಗಿದೆ.


Click the Play button to hear this message in audio format

ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕತ್ವದ ಬಿಕ್ಕಟ್ಟು ಹೊಸ ತಿರುವು ಪಡೆದಿದೆ. ವೋಟ್‌ ಚೋರಿ ಕುರಿತಂತೆ ಪಕ್ಷದ ವಿರುದ್ಧವೇ ಹೇಳಿಕೆ ನೀಡುವ ಮೂಲಕ ಸಂಪುಟದಿಂದ ವಜಾಗೊಂಡಿದ್ದ ಕೆ.ಎನ್‌.ರಾಜಣ್ಣ ಅವರು ಇದೀಗ ಷಡ್ಯಂತ್ರದ ಆರೋಪ ಮಾಡಿದ್ದು, ಡಿಸಿಎಂ ಡಿ.ಕೆ. ಶಿವಕುಮಾರ್‌ ವಿರುದ್ಧ ಪರೋಕ್ಷ ಸಮರ ಸಾರಿದ್ದಾರೆ.

ಮತಗಳ್ಳತನದ ಕುರಿತ ತಮ್ಮ ಹೇಳಿಕೆ ತಿರುಚಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ನ.17 ರಂದು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರಿಗೆ ಎಂಟು ಪುಟಗಳ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆ, ಅದಕ್ಕೆ ನೀಡಿದ ಉತ್ತರವನ್ನು ನಮೂದಿಸಿದ್ದಾರೆ. ಅಲ್ಲದೇ ಸಂಘಟನೆ, ಬೂತ್‌ ಮಟ್ಟದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಲೋಕಸಭೆ ಚುನಾವಣೆಯಲ್ಲಿ ಕಡಿಮೆ ಸ್ಥಾನ ಪಡೆಯಬೇಕಾಯಿತು ಎಂದು ದೂರುವ ಮೂಲಕ ತಮ್ಮ ಪದಚ್ಯುತಿಗೆ ಕಾರಣ ಬಿಚ್ಚಿಟ್ಟು ಪರೋಕ್ಷವಾಗಿ ಡಿಕೆಶಿ ವಿರುದ್ಧ ಸಿಡಿದೆದ್ದಿದ್ದಾರೆ.

ರಾಹುಲ್‌ ಗಾಂಧಿಗೆ ಪತ್ರ ಬರೆದು ಒಂದು ತಿಂಗಳು ಕಳೆದ ಬಳಿಕ ಈಗ ಅದನ್ನು ಬಹಿರಂಗಪಡಿಸಿರುವುದು ಕುತೂಹಲ ಕೆರಳಿಸಿದೆ. ರಾಹುಲ್ ಗಾಂಧಿಗೆ ಪತ್ರ ಬರೆದಿರುವ ವಿಚಾರ ಕೇಂದ್ರದ ನಾಯಕರಿಂದ ತಿಳಿದ ಕೂಡಲೇ ಡಿ.ಕೆ.ಶಿವಕುಮಾರ್‌ ಅವರು ಕೆ.ಎನ್.ರಾಜಣ್ಣ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದರು.

ಈ ವೇಳೆ ಪ್ರತಿಕ್ರಿಯಿಸಿದ್ದ ಶಿವಕುಮಾರ್ ಅವರು, ರಾಜಣ್ಣನವರಿಗೆ ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷಗಿರಿ ಕೊಡಿಸಿದ್ದೇ ನಾನು ಎಂದು ಹೇಳಿದ್ದರು. ಈಗಾಗಲೇ ಮತಗಳ್ಳತನ ವಿಚಾರದಲ್ಲಿ ಪಕ್ಷ ವಿರೋಧಿ ಹೇಳಿಕೆಯ ಆಪಾದನೆ ಹೊತ್ತು ಸಚಿವ ಸ್ಥಾನ ಕಳೆದುಕೊಂಡಿದ್ದರಿಂದ ತಮ್ಮ ಹೇಳಿಕೆಯ ಅಸಲಿಯೆತ್ತಿನ ಕುರಿತು ತಿಳಿಸಲು ಪತ್ರ ಬಹಿರಂಗಪಡಿಸಿದ್ದಾರೆ ಎನ್ನಲಾಗಿದೆ.

ಮತಗಳ್ಳತನದ ಕುರಿತ‌ ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿ ಹೈಕಮಾಂಡ್ ಗೆ ಡಿಕೆಶಿ ದೂರು ನೀಡಿದ್ದರಿಂದಲೇ ಸಚಿವ ಸ್ಥಾನ ಕಳೆದುಕೊಂಡು ಕಳಂಕ ಹೊರಬೇಕಾಯಿತು. ಆದ್ದರಿಂದಲೇ ರಾಜಣ್ಣ ಅವರು ತಮ್ಮ ವಿರುದ್ಧದ ಷಡ್ಯಂತ್ರದ ಬಗ್ಗೆ ರಾಹುಲ್‌ ಗಾಂಧಿಗೆ ದೂರು ನೀಡಿದ್ದು, ಇದು ಪಕ್ಷದೊಳಗೆ ಮತ್ತೊಂದು ಸುತ್ತಿನ ಸಂಘರ್ಷಕ್ಕೆ ವೇದಿಕೆಯಾಗಿದೆ ಎಂದು ವಿಶ್ಲೇಷಿಸಲಾಗಿದೆ.

ರಾಜಣ್ಣರಿಂದ ಮನವರಿಕೆ ಯತ್ನ

ರಾಜಣ್ಣ ಅವರು ತಮಗಾದ ಅನ್ಯಾಯವನ್ನು ಹೈಕಮಾಂಡ್‌ ಮುಂದೆ ಪ್ರಸ್ತಾಪಿಸಿದ್ದು, ಇನ್ನಷ್ಟು ವಿಷಯಗಳನ್ನು ಚರ್ಚಿಸಲು ಭೇಟಿಗೆ ಅವಕಾಶ ನೀಡುವಂತೆ ಕೋರಿದ್ದಾರೆ. ರಾಹುಲ್‌ ಗಾಂಧಿಗೆ ಪತ್ರ ಬರೆದಿರುವ ವಿಷಯ ತಿಳಿಯುತ್ತಿದ್ದಂತೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ರಾಜಣ್ಣ ಅವರನ್ನು ಭೇಟಿ ನೀಡಿ ಚರ್ಚಿಸಿದರೂ ಅಸಮಾಧಾನ ದೂರ ಮಾಡಲಾಗಿಲ್ಲ. ಮಾತುಕತೆ ಫಲ ನೀಡದ ಕಾರಣ ಪತ್ರ ಬಹಿರಂಗಗೊಳಿಸಿ, ರಾಜಕೀಯ ಒತ್ತಡ ಸೃಷ್ಟಿಸಿದ್ದಾರೆ ಎನ್ನಲಾಗಿದೆ.

ತಮ್ಮ ಹೇಳಿಕೆ ತಿರುಚಿ ಹೈಕಮಾಂಡ್ ಗೆ ದೂರು ನೀಡಿರುವುದು ಪಕ್ಷದ ಆಂತರಿಕ ವಲಯದಲ್ಲಿ ಮಾತ್ರ ಕೇಳಿಬರುತ್ತಿತ್ತು. ಅದನ್ನು ಸಾರ್ವಜನಿಕಗೊಳಿಸಿ, ಸಚಿವ ಸ್ಥಾನ ಕಳೆದುಕೊಂಡ ಹಿನ್ನೆಲೆ ಕುರಿತು ತಿಳಿಸಲು ಪತ್ರದ ವಿಷಯವನ್ನು ಬಹಿರಂಗಪಡಿಸಲಾಗಿದೆ ಎಂದು ಕೇಳಿಬಂದಿದೆ. ತಮ್ಮ ವಿರುದ್ಧ ತೆಗೆದುಕೊಂಡ ಕ್ರಮ ನ್ಯಾಯಸಮ್ಮತವಲ್ಲ ಎಂಬ ಸಂದೇಶವನ್ನು ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರಿಗೆ ತಲುಪಿಸುವ ಉದ್ದೇಶವೂ ಇದರಲ್ಲಿ ಅಡಗಿದೆ ಎನ್ನಲಾಗಿದೆ.

ಹೈಕಮಾಂಡ್ ಮೇಲೆ ನೇರ ಒತ್ತಡ

ರಾಹುಲ್ ಗಾಂಧಿಗೆ ನೇರವಾಗಿ ಪತ್ರ ಬರೆದರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ದೆಹಲಿ ನಾಯಕರು ಇದನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಅಲ್ಲದೇ ರಾಜ್ಯ ಕಾಂಗ್ರೆಸ್ ನ ಆಂತರಿಕ ಕಚ್ಚಾಟವನ್ನು ವರಿಷ್ಠರ ಗಮನಕ್ಕೆ ತರಬಹುದು. ಪ್ರಸ್ತುತ, ನಾಯಕತ್ವ ಬದಲಾವಣೆ ಚರ್ಚೆ ನಡೆಯುತ್ತಿರುವಾಗಲೇ ಪತ್ರ ಬಹಿರಂಗಪಡಿಸುವುದರಿಂದ ಹೈಕಮಾಂಡ್ ಮೇಲೆ ಒತ್ತಡ ಹೇರಬಹುದು ಎಂಬ ಇಂಗಿತ ರಾಜಣ್ಣ ಅವರದ್ದಾಗಿರಬಹುದು ಎಂದು ವಿಶ್ಲೇಷಿಸಲಾಗಿದೆ.

ಸಾಮಾನ್ಯವಾಗಿ ಹೈಕಮಾಂಡ್ ಗೆ ಬರೆಯುವ ಪತ್ರಗಳನ್ನು ಗೌಪ್ಯವಾಗಿಡಲಾಗುತ್ತದೆ. ಅವುಗಳನ್ನು ಬಹಿರಂಗಪಡಿಸುವುದು ನಾಯಕರ ಕೊನೆಯ ರಾಜಕೀಯ ಆಯ್ಕೆ ಆಗಿರಲಿದೆ. ಕೆ.ಎನ್. ರಾಜಣ್ಣ ಪ್ರಕರಣದಲ್ಲೂ ಇದೇ ಆಗಿದೆ ಎನ್ನಲಾಗಿದೆ. ಸಚಿವ ಸ್ಥಾನ ಕಳೆದುಕೊಂಡ ಕೆ.ಎನ್‌.ರಾಜಣ್ಣ ನೇರವಾಗಿ ಹೈಕಮಾಂಡ್ ಗೆ ಪತ್ರ ಬರೆದು ಷಡ್ಯಂತ್ರ ಪ್ರಶ್ನಿಸಿರುವುದರಿಂದ ರಾಜ್ಯ ನಾಯಕತ್ವದ ಮೇಲೆ ದೆಹಲಿ ವರಿಷ್ಠರ ಹಸ್ತಕ್ಷೇಪ ಮತ್ತಷ್ಟು ಬಲವಾಗುವ ಸಾಧ್ಯತೆ ಇದೆ. ಜತೆಗೆ ಸಿಎಂ ಹಾಗೂ ಡಿಸಿಎಂ ಎರಡೂ ಬಣಗಳ ಮಧ್ಯೆ ಅಂತರ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎನ್ನಲಾಗಿದೆ.

ಸಿಎಂ ಪರ ವಕಾಲತು

ಸಿಎಂ ಸ್ಥಾನ ಬದಲಾವಣೆ ಕುರಿತ ಊಹಾಪೋಹಗಳು ಜೋರಾಗಿರುವ ಸಮಯದಲ್ಲೇ ಪತ್ರ ಬಹಿರಂಗವಾಗಿರುವುದು ತೀವ್ರ ಕುತೂಹಲ ಮೂಡಿಸಿದೆ. ಪಕ್ಷದೊಳಗಿನ ಅಸಮಾಧಾನ ಮತ್ತು ಒಳಜಗಳಗಳನ್ನು ಮುನ್ನೆಲೆಗೆ ತರುವ ಮೂಲಕ ನಾಯಕತ್ವ ಬದಲಾವಣೆ ಚರ್ಚೆಗೆ ಹೊಸ ಆಯಾಮ ನೀಡುವ ಉದ್ದೇಶ ಒಳಗೊಂಡಿದೆ ಎನ್ನಲಾಗಿದೆ.

ಕೆ.ಎನ್‌.ರಾಜಣ್ಣ ಅವರು ರಾಹುಲ್‌ ಗಾಂಧಿಗೆ ಬರೆದಿರುವ ಎಂಟು ಪುಟಗಳ ಪತ್ರದಲ್ಲಿ ಸಿಎಂ ಪರ ವಕಾತು ವಹಿಸಿರುವುದು ನಾಯಕತ್ವ ಬದಲಾವಣೆ ಬಿಕ್ಕಟ್ಟಿಗೆ ಪುಷ್ಠಿ ನೀಡುವಂತಿದೆ.

2013 ಹಾಗೂ 2023 ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲು ಅಹಿಂದ ವರ್ಗಗಳೇ ಕಾರಣ. ಸಿದ್ದರಾಮಯ್ಯ ಅವರಿಂದಲೇ ಅಧಿಕಾರ ಹಿಡಿಯಲು ಸಾಧ್ಯವಾಯಿತು. ಅವರನ್ನು ಅಧಿಕಾರದಿಂದ ಕೆಳಗಿಳಿಸಿದರೆ ಕಾಂಗ್ರೆಸ್‌ ಪಕ್ಷಕ್ಕೆ ದೊಡ್ಡ ಹಾನಿಯಾಗಲಿದೆ ಎಂದು ಉಲ್ಲೇಖಿಸುವ ಮೂಲಕ ಸಿಎಂ ಪರ ಬ್ಯಾಟಿಂಗ್ ಮಾಡಿರುವುದು ಸಿಎಂ ಸಿದ್ದರಾಮಯ್ಯ ಅವರ ರಾಜಕೀಯ ತಂತ್ರಗಾರಿಕೆ ಎನ್ನಲಾಗಿದೆ.

ಒಟ್ಟಾರೆ, ರಾಜಣ್ಣ ಅವರ ಪತ್ರವು ಕಾಂಗ್ರೆಸ್ ಪಕ್ಷದೊಳಗಿನ ಅಸಮಾಧಾನ, ಕುರ್ಚಿ ಕಿತ್ತಾಟ ಮತ್ತು ನಾಯಕತ್ವ ಪ್ರಶ್ನೆಗಳನ್ನು ಮತ್ತೊಮ್ಮೆ ಸಾರ್ವಜನಿಕ ಚರ್ಚೆಯ ಕೇಂದ್ರಬಿಂದುವಾಗುವಂತೆ ಮಾಡಿದೆ.

Read More
Next Story