Without Siddaramaiah, Congress has less chance: K.N. Rajannas indirect message
x

ಶಾಸಕ ಕೆ.ಎನ್‌. ರಾಜಣ್ಣ ಹಾಗೂ ಸಿಎಂ ಸಿದ್ದರಾಮಯ್ಯ 

ಸಿದ್ದರಾಮಯ್ಯ ಇಲ್ಲದಿದ್ದರೆ ಕಾಂಗ್ರೆಸ್‌ಗೆ ಅವಕಾಶ ಕಡಿಮೆ; ಕೆ.ಎನ್. ರಾಜಣ್ಣ ಪರೋಕ್ಷ ಸಂದೇಶ

ದೇವರಾಜ ಅರಸು ಅವರು ಭೂ ಸುಧಾರಣಾ ಕಾಯ್ದೆ ತಂದು ಮೂರು ಲಕ್ಷಕ್ಕೂ ಹೆಚ್ಚು ಜನರಿಗೆ ಭೂಮಿ ಹಂಚಿದ್ದರು. ಹಾವನೂರು ವರದಿ ಜಾರಿಗೆ ತಂದು ದಾಖಲೆ ಮಾಡಿದ್ದರು ಎಂದು ಕೆ.ಎನ್‌. ರಾಜಣ್ಣ ತಿಳಿಸಿದರು.


Click the Play button to hear this message in audio format

ಕಾಂಗ್ರೆಸ್‌ ಶಾಸಕಾಂಗ ಸಮಿತಿ ಅಭಿಪ್ರಾಯ ಪಡೆದೇ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ. ಮಾಜಿ ಸಿಎಂ ಯಡಿಯೂರಪ್ಪ ಇಲ್ಲದಿದ್ದರೆ ಬಿಜೆಪಿಯಿಲ್ಲ, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಇಲ್ಲದಿದ್ದರೆ ಜೆಡಿಎಸ್‌ ಇಲ್ಲ, ಅದೇ ರೀತಿ ಸಿದ್ದರಾಮಯ್ಯ ಅವರಿಲ್ಲದಿದ್ದರೆ ಕಾಂಗ್ರೆಸ್‌ಗೆ ಅವಕಾಶ ಕಡಿಮೆ ಎಂದು ಹೇಳುವ ಮೂಲಕ ಸಿಎಂ ಆಪ್ತನಾದ ಶಾಸಕ ಕೆ.ಎನ್‌. ರಾಜಣ್ಣ ಪರೋಕ್ಷವಾಗಿ ಡಿಸಿಎಂ ಡಿ.ಕೆ. ಶಿವಕುಮಾರ್‌ ಹಾಗೂ ಹೈಕಮಾಂಡ್‌ಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಮಂಗಳವಾರ(ಜ.6) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅನ್ನಭಾಗ್ಯ ನನ್ನ ಅಚ್ಚುಮೆಚ್ಚಿನ ಕಾರ್ಯಕ್ರಮ. ಸಿಎಂ ಸಿದ್ದರಾಮಯ್ಯ ಅವರಿಗೆ ಇನ್ನಷ್ಟು ಪುಣ್ಯ, ಶ್ರೇಯಸ್ಸು ಲಭಿಸಲಿ. ಅವರ ಪರವಾಗಿ ಹಾಗೂ ವಿರುದ್ದವಾಗಿ ಮಾತನಾಡುವವರಿದ್ದಾರೆ. ಸಿಎಂ ಆಗಲು ಸಿಎಲ್‌ಪಿ ಹಾಗೂ ಹೈಕಮಾಂಡ್ ಸಹಾನುಭೂತಿ ಎಲ್ಲವೂ ಇರಬೇಕು. ದೇವರಾಜ ಅರಸು ಸಿಎಂ ಆಗಿದ್ದಾಗ ಅವರು ಎಂಎಲ್ಎ ಆಗಿರಲೇ ಇಲ್ಲ. ಎಐಸಿಸಿ ವೀಕ್ಷಕರ ಅಭಿಪ್ರಾಯ ಪಡೆದು, ಶಾಸಕರ ಬೆಂಬಲದಿಂದ ಸಿಎಂ ಆಗಿದ್ದರು ಎಂದರು.

2028ಕ್ಕೂ ಸಿದ್ದರಾಮಯ್ಯ ಸಿಎಂ ಆಗಲಿ

ಸಿಎಂ ಸಿದ್ದರಾಮಯ್ಯ ಅವರು ಮಾಜಿ ಸಿಎಂ ದೇವರಾಜ ಅರಸು ಅವರ ದಾಖಲೆ ಮುರಿದಿದ್ದಾರೆ. ಅವರಿಗೆ ಶುಭಾಶಯ ಕೋರಿದ್ದು, 2028ಕ್ಕೂ ನೀವೇ ಸಿಎಂ ಆಗಬೇಕು ಎಂದು ಹೇಳಿದ್ದೇನೆ. ಈ ಹಿಂದೆ ಅರಸು ಅವರು ಭೂ ಸುಧಾರಣಾ ಕಾಯ್ದೆ ತಂದು ಮೂರು ಲಕ್ಷಕ್ಕೂ ಹೆಚ್ಚು ಜನರಿಗೆ ಭೂಮಿ ಹಂಚಿದ್ದರು. ಹಾವನೂರು ವರದಿ ಜಾರಿಗೆ ತಂದು ದಾಖಲೆ ಮಾಡಿದ್ದರು. ಮಾಜಿ ಸಿಎಂ ಬಂಗಾರಪ್ಪನವರು ಹಲವಾರು ಜನೋಪಯೋಗಿ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದರು. ಆದರೆ, ಸಿಎಂ ಸಿದ್ದರಾಮಯ್ಯ ಅವರು ಜಾರಿಗೆ ತಂದ ಅನ್ನಭಾಗ್ಯ ನನಗೆ ತೃಪ್ತಿಕೊಟ್ಟಿದೆ ಎಂದು ತಿಳಿಸಿದರು.

ವರಿಷ್ಠರ ತೀರ್ಮಾನವೇ ಅಂತಿಮ

ಕೇಂದ್ರ ಕಾಂಗ್ರೆಸ್‌ ಕಾರ್ಯಕಾರಿ ಸಭೆಗೆ ಸಿಎಂ ಸಿದ್ದರಾಮಯ್ಯ ಹಾಜರಾಗಿದ್ದರು. ಈ ವೇಳೆ ಸಂಪುಟ ಪುನರ್‌ ರಚನೆ ಬಗ್ಗೆ ವರಿಷ್ಠರ ಬಳಿ ಚರ್ಚೆ ನಡೆಸಿರುವ ಸಾಧ್ಯತೆ ಕಡಿಮೆ. ರಾಹುಲ್ ಗಾಂಧಿ ವಿದೇಶದಿಂದ ಮರಳಿ ಬಂದಾಗ ಕರೆಸಿ ಮಾತನಾಡುವ ಸಾಧ್ಯತೆ ಇದೆ. ವರಿಷ್ಠರು ಯಾವ ತೀರ್ಮಾನ ಮಾಡುತ್ತಾರೆ ಎಂಬುದು ತಿಳಿದಿಲ್ಲ ಎಂದರು.

ಸಿಎಂ ಸ್ಥಾನಕ್ಕೆ ಪರಮೇಶ್ವರ್‌ ಅರ್ಹರು

ನನ್ನ ಮಾತಿಗೆ ನಾನು ಈಗಲೂ ಬದ್ಧ, ರಾಹುಲ್ ಗಾಂಧಿಗೆ ಪತ್ರ ಬರೆದಿದ್ದೆ, ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಅವರು ಹುಟ್ಟುತ್ತಲೇ ಸೂಟು ಹೊಲೆಸಿಕೊಂಡವರು. ಈಗ ಸೂಟು ಹಾಕಿದರೆ ತಪ್ಪೇನು ಎಂದು ಪರೋಕ್ಷವಾಗಿ ಪರಮೇಶ್ವರ್ ಕೂಡ ಸಿಎಂ ರೇಸ್‌ನಲ್ಲಿದ್ದಾರೆ ಎಂದು ತಿಳಿಸಿದರು.

ಬಿಜೆಪಿಯಿಂದ ಮಹರ್ಷಿ ವಾಲ್ಮೀಕಿಗೆ ಅವಮಾನ

ಬಳ್ಳಾರಿಯಲ್ಲಿನ ವಾಲ್ಮೀಕಿ ಕಾರ್ಯಕ್ರಮಕ್ಕೆ ನಾನೂ ಹೋಗಬೇಕಾಗಿತ್ತು. ಬ್ಯಾನರ್‌ ಹಾಕುವುದಕ್ಕೆ ಜಗಳ ಮಾಡಬೇಕಾದ ಅವಶ್ಯಕತೆ ಇರಲಿಲ್ಲ. ಬ್ಯಾನರ್‌ ಹಾಕಿಯೇ ಕಾರ್ಯಕ್ರಮ ಮಾಡಬೇಕಾದ ಅವಶ್ಯಕತೆ ಇರಲಿಲ್ಲ. ಹಾಕಿದ ಮೇಲೆ ಅದನ್ನು ಕಿತ್ತು ಹಾಕಲೇಬೇಕು ಎಂದು ಹೊರಟಿದ್ದು ಕೂಡ ಸರಿಯಲ್ಲ. ಕಟ್ಟಿದ್ದು ಸರಿ ಅಂತಲೂ ಇಲ್ಲ, ತಪ್ಪು ಅಂತಲೂ ಅಲ್ಲ. ವಾಲ್ಮೀಕಿ ಬ್ಯಾನರ್ ಕಟ್ಟಿದ ಮೇಲೆ ಇರಲಿ ಬಿಡಿ ಎಂದು ಬಿಜೆಪಿಯವರು ಕೂಡ ದೊಡ್ಡತನ ಮೆರೆಯಬೇಕಿತ್ತು. ಆದರೆ ಈ ಘಟನೆಯಿಂದ ಬಿಜೆಪಿಯವರು ಮಹರ್ಷಿ ವಾಲ್ಮೀಕಿಗೆ ಅವಮಾನ ಮಾಡಿದ್ದಾರೆಂದೇ ಭಾವಿಸಬೇಕು ಎಂದರು.

Read More
Next Story