
ಗೃಹ ಸಚಿವ ಡಾ.ಜಿ. ಪರಮೇಶ್ವರ್, ಸಿಎಂ ಸಿದ್ದರಾಮಯ್ಯ ಹಾಗೂ ಶಾಸಕ ಕೆ.ಎನ್. ರಾಜಣ್ಣ
ಕಬ್ಬು ಬೆಳೆಗಾರರ ಜತೆ ಮುಗಿಯದ ಸಭೆ, ಶಾಸಕ ಕೆ.ಎನ್. ರಾಜಣ್ಣ ಮನೆಯ ಔತಣಕೂಟ ಮುಂದೂಡಿದ ಸಿಎಂ
ಶಾಸಕ ಕೆ.ಎನ್. ರಾಜಣ್ಣನವರ ಮನೆಯಲ್ಲಿ ಸಿಎಂ ಔತಣಕೂಟದಲ್ಲಿ ಪಾಲ್ಗೊಂಡರೆ ಅದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ, ಅಲ್ಲಿ ಯಾವುದೇ ರಾಜಕೀಯ ಚರ್ಚೆಗಳು ನಡೆಯುವುದಿಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಸಮರ್ಥಿಸಿಕೊಂಡಿದ್ದರು.
ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ನವೆಂಬರ್ ಕ್ರಾಂತಿ ಹಾಗೂ ಸಚಿವ ಸಂಪುಟ ಪುನಾರಚನೆ ಉಹಾಪೋಹಗಳ ನಡುವೆಯೇ ಸಿಎಂ ಸಿದ್ದರಾಮಯ್ಯ ತಮ್ಮ ಪರಮಾಪ್ತ ಶಾಸಕ ಕೆ.ಎನ್. ರಾಜಣ್ಣನವರ ಮನೆಯ ಔತಣಕೂಟದಲ್ಲಿ ಭಾಗವಹಿಸಬೇಕಿದ್ದ ಕಾರ್ಯಕ್ರಮ ಕೊನೆಯ ಹಂತದಲ್ಲಿ ರದ್ದುಗೊಂಡಿದೆ.
ಸಿಎಂ ಸಿದ್ದರಾಮಯ್ಯನವರ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಶುಕ್ರವಾರ(ನ.7) ನಡೆಯುತ್ತಿರುವ ಕಬ್ಬು ಬೆಳೆಗಾರರ ಸಭೆ ಇನ್ನೂ ಮುಗಿಯದ ಹಿನ್ನೆಲೆಯಲ್ಲಿ ಸಿಎಂ ತುಮಕೂರು ಪ್ರವಾಸ ರದ್ದುಗೊಳಿಸಿದ್ದು, ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಕೆ.ಎನ್.ರಾಜಣ್ಣನವರ ಮನೆಯಲ್ಲಿ ಔತಣಕೂಟ ಏರ್ಪಡಿಸುವ ಸಾಧ್ಯತೆ ಇದೆ.
ಔತಣಕೂಟದ ಹೆಸರಲ್ಲಿ ಸಿಎಂ ರಾಜಕೀಯ
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಬಣಗಳ ನಡುವೆ ನವೆಂಬರ್ ಕ್ರಾಂತಿ ಹಾಗೂ ಅಧಿಕಾರ ಹಂಚಿಕೆ ಕುರಿತಾಗಿ ಕಾಂಗ್ರೆಸ್‌ನ ಶಾಸಕರು ಮತ್ತು ಸಚಿವರು ವಿಭಿನ್ನ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದರ ನಡುವೆಯೇ ದಲಿತ ಸಿಎಂ ಹೇಳಿಕೆಯೂ ರಾಜ್ಯ ರಾಜಕೀಯದಲ್ಲಿ ಸದ್ದು ಮಾಡುತ್ತಿದ್ದು ಸಿಎಂ ಹಾಗೂ ಡಿಸಿಎಂ ಬಣಗಳ ಅಂತರ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ. ಈ ನಡುವೆಯೇ ಸಿಎಂ ಸಿದ್ದರಾಮಯ್ಯ ತನ್ನ ಆಪ್ತ ಶಾಸಕ ಕೆ.ಎನ್. ರಾಜಣ್ಣನವರ ಮನೆಯಲ್ಲಿ ಔತಣಕೂಟದ ಹೆಸರಿನಲ್ಲಿ ತಮ್ಮ ಬಣದ ನಾಯಕರೊಂದಿಗೆ ರಾಜಕೀಯ ತಂತ್ರ ರೂಪಿಸಲು ಸಿದ್ದರಾಗಿದ್ದರು. ಆದರೆ ಕೊನೆ ಕ್ಷಣದಲ್ಲಿ ಪ್ರವಾಸ ಮುಂದೂಡಿದ್ದಾರೆ.
ಔತಣಕೂಟ ಸಮರ್ಥಿಕೊಂಡಿದ್ದ ಗೃಹ ಸಚಿವ
ಶಾಸಕ ಕೆ.ಎನ್. ರಾಜಣ್ಣನವರ ಮನೆಯಲ್ಲಿ ಸಿಎಂ ಔತಣಕೂಟದಲ್ಲಿ ಪಾಲ್ಗೊಂಡರೆ ಅದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ, ಅಲ್ಲಿ ಯಾವುದೇ ರಾಜಕೀಯ ಚರ್ಚೆಗಳು ನಡೆಯುವುದಿಲ್ಲ. ತುಮಕೂರಿಗೆ ಸಿಎಂ ಬಹಳ ದಿನಗಳ ನಂತರ ಆಗಮಿಸುವುದರಿಂದ ಶಾಸಕರ ಮನೆಯಲ್ಲಿ ಸಿಎಂ ಭೋಜನ ಮಾಡಿದರೆ ತಪ್ಪೇನು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಸಮರ್ಥಸಿಕೊಂಡಿದ್ದರು.
ತುಮಕೂರು ಪ್ರವಾಸ ರದ್ಧು ಏಕೆ ?
ಶುಕ್ರವಾರ (ನ.7) ಸಿಎಂ ಸಿದ್ದರಾಮಯ್ಯ ತುಮಕೂರು ವಿಶ್ವವಿದ್ಯಾನಿಲಯದ ನೂತನ ಕ್ಯಾಂಪಸ್ ಉದ್ಘಾಟನೆಗೆ ತೆರಳಬೇಕಿತ್ತು. ಈ ಕಾರ್ಯಕ್ರಮದ ನಂತರ ಪರಮಾಪ್ತ ಶಾಸಕ ಕೆ.ಎನ್. ರಾಜಣ್ಣನವರ ಮನೆಯಲ್ಲಿ ಔತಣಕೂಟದಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ ರಾಜ್ಯದಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ಹೆಚ್ಚಾಗಿರುವುದರಿಂದ ಹಾಗೂ ರೈತರ ಜೊತೆ ಸಭೆ ಮುಗಿಯದ ಕಾರಣ ಕೊನೆ ಕ್ಷಣದಲ್ಲಿ ತುಮಕೂರು ಪ್ರವಾಸ ಮುಂದೂಡಿದ್ದಾರೆ.
ಏನಿದು ರೈತರ ಸಭೆ ?
ಮಹಾರಾಷ್ಟ್ರ ಮಾದರಿಯಲ್ಲಿ ಪ್ರತಿ ಟನ್ ಕಬ್ಬಿಗೆ 3,500 ರೂ. ನೀಡಬೇಕು ಎಂದು ಆಗ್ರಹಿಸಿ ಕಳೆದ ಎಂಟು ದಿನಗಳಿಂದ ಕಬ್ಬು ಬೆಳೆಗಾರರು ಹೋರಾಟ ಮಾಡುತ್ತಿದ್ದಾರೆ, ಪ್ರತಿಭಟನೆ ತೀವ್ರವಾದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಶುಕ್ರವಾರ(ನ.7) ವಿಧಾನಸೌಧದಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ಆಡಳಿತ ಮಂಡಳಿಯೊಂದಿಗೆ ಸಭೆ ನಡೆಸಿದ್ದರು. ನಂತರ ರೈತರ ಜೊತೆಗೂ ಸಭೆ ನಡೆಸಿದ್ದ ಸಿಎಂ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ.

