DKShivakumar to continue as KPCC president if high command agrees, no November revolution
x

ಡಿಸಿಎಂ ಡಿ.ಕೆ. ಶಿವಕುಮಾರ್‌ ಹಾಗೂ ಸಚಿವ ಸತೀಶ್‌ ಜಾರಕಿಹೊಳಿ

ಹೈಕಮಾಂಡ್‌ ಒಪ್ಪಿದರೆ ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆಶಿ ಮುಂದುವರಿಕೆ; ನವೆಂಬರ್‌ ಕ್ರಾಂತಿ ಇಲ್ಲ- ಸತೀಶ್‌ ಜಾರಕಿಹೊಳಿ

ರಾಜ್ಯ ಸರ್ಕಾರಕ್ಕೆ ಈಗ ಎರಡೂವರೆ ವರ್ಷ ತುಂಬಿದೆ. ಒಳ್ಳೆಯ ಕೆಲಸ ಮಾಡಿದ್ದೇವೆ. ಮುಂದೆ ಕೂಡ ಒಳ್ಳೆಯ ಕೆಲಸ ಮಾಡುತ್ತೇವೆ. ಗ್ಯಾರಂಟಿಗಳನ್ನು ನಾವು ಮುಂದುವರೆಸುತ್ತೇವೆ ಎಂದು ಸಚಿವ ಸತೀಶ್‌ ಜಾರಕಿಹೊಳಿ ತಿಳಿಸಿದ್ದಾರೆ.


Click the Play button to hear this message in audio format

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರಕ್ಕೆ 2.5 ವರ್ಷ ತುಂಬಿದ ಬೆನ್ನಲ್ಲೇ ಸಚಿವ ಸಂಪುಟ ಪುನಾರಚನೆ, ನಾಯಕತ್ವ ಬದಲಾವಣೆ ವಿಚಾರಗಳು ಮುನ್ನೆಲೆಗೆ ಬಂದಿವೆ. ಈ ಮಧ್ಯೆ, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಕುರಿತು ಸಚಿವ ಸತೀಶ್‌ ಜಾರಕಿಹೊಳಿ ಅವರ ಹೇಳಿಕೆ ರಾಜಕೀಯ ಪಡಸಾಲೆಯಲ್ಲಿ ಹೊಸ ಚರ್ಚೆಗೆ ಗ್ರಾಸವಾಗಿದೆ.

ಹೈಕಮಾಂಡ್‌ ನಾಯಕರು ಒಪ್ಪಿದರೆ ಮಾತ್ರ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುತ್ತಾರೆ. ಒಪ್ಪಿಗೆ ಇಲ್ಲದಿದ್ದರೆ ಮುಂದುವರಿಯಲು ಸಾಧ್ಯವಿಲ್ಲ. ನಮ್ಮ ಪಕ್ಷದವರೇ ನವೆಂಬರ್‌ ಕ್ರಾಂತಿ ಎನ್ನುತ್ತಿದ್ದರು. ಆದರೆ, ನವೆಂಬರ್‌ ಕ್ರಾಂತಿಯ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಹಾಗಾಗಿ ಸಿದ್ದರಾಮಯ್ಯನವರೇ ಐದು ವರ್ಷ ಆಡಳಿತ ನಡೆಸುತ್ತಾರೆ ಎಂದು ಹೇಳಿದ್ದಾರೆ.

ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ನಾಯಕತ್ವ ವಿಚಾರವಾಗಿ ಸಾಕಷ್ಟು ಬಾರಿ ಮಾತನಾಡಿದ್ದೇನೆ. ಮತ್ತೆ ಮಾತನಾಡಲು ಏನು ಇಲ್ಲ, ಸರ್ಕಾರಕ್ಕೆ ಎರಡೂವರೆ ವರ್ಷ ತುಂಬಿದೆ. ಒಳ್ಳೆಯ ಕೆಲಸ ಮಾಡಿದ್ದೇವೆ. ಮುಂದೆ ಕೂಡ ಒಳ್ಳೆಯ ಕೆಲಸ ಮಾಡುತ್ತೇವೆ. ಗ್ಯಾರಂಟಿಗಳನ್ನು ನಾವು ಮುಂದುವರೆಸುತ್ತೇವೆ, ಹಿಂದಿನ ಬಿಜೆಪಿ ಸರ್ಕಾರ ಅನುದಾನ ಒದಗಿಸದೇ ಟೆಂಡರ್‌ ಕರೆದು, ಕೆಲ ಕಾಮಗಾರಿಗಳನ್ನು ನಡೆಸಿದೆ. ಇದೇ ನಮಗೆ ದೊಡ್ಡ ಹೊರೆಯಾಗಿತ್ತು ಎಂದು ಹೇಳಿದ್ದಾರೆ.

"ಕೆಲಸ ಒಬ್ಬರು ಮಾಡಿದರೆ ಲಾಭ ಮತ್ತೊಬ್ಬರು ಪಡೆಯುತ್ತಿದ್ದಾರೆ ಎಂಬ ಡಿ‌.ಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಡಿಕೆಶಿ ಅವರು ಯಾರನ್ನು ಗುರಿಯಾಗಿಸಿ ಹೇಳಿದ್ದಾರೋ ಗೊತ್ತಿಲ್ಲ, ಈ ಹಿಂದೆ ಡಾ.ಜಿ ಪರಮೇಶ್ವರ್ ಎಂಟು ವರ್ಷ ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಈಗ ಡಿಕೆಶಿ ಅವರು ಮುಂದುವರೆಯಬಹುದು. ಎಂಟು ವರ್ಷ ಒಂದು ದಿನದವರೆಗೆ ಕೆಪಿಸಿಸಿ ಅಧ್ಯಕ್ಷರಾಗಿರಬಹುದು" ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.

"ದಿನದಿಂದ ದಿನಕ್ಕೆ ಬೆಂಗಳೂರು ಬೆಳೆಯುತ್ತಿದೆ, ಹೊಸ ರಸ್ತೆ ಮಾಡಿದ ಕೂಡಲೇ ಇನ್ನೊಂದು ಕಡೆ ಟ್ರಾಫಿಕ್ ಜಾಮ್ ಆಗುತ್ತಿದ್ದು, ಕುಡಿಯುವ ನೀರಿನ ಸಮಸ್ಯೆ ಕೂಡ ಕಂಡು ಬರುತ್ತಿದೆ. ಕಾವೇರಿ ಐದನೇ ಹಂತ ಪ್ರಗತಿಯಲ್ಲಿದೆ, ಶೀಘ್ರವೇ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ್ದಾರೆ.

Read More
Next Story