Permission Required for Prayers on Roads: Clarifies Priyank Kharge
x

ಸಚಿವ ಪ್ರಿಯಾಂಕ್‌ ಖರ್ಗೆ

ರಸ್ತೆ ಮೇಲೆ ಪ್ರಾರ್ಥನೆಗೆ ಅನುಮತಿ ಅಗತ್ಯ: ಪ್ರಿಯಾಂಕ್ ಖರ್ಗೆ ಸ್ಪಷ್ಟನೆ

"ಕುಮಾರಸ್ವಾಮಿಯವರು ಈ ಹಿಂದೆ ಆರ್‌ಎಸ್‌ಎಸ್‌ ಬಗ್ಗೆ ಏನು ಹೇಳಿದ್ದರು ಎಂಬುದನ್ನು ಒಮ್ಮೆ ನೋಡಿಕೊಳ್ಳಲಿ. ಈಗ ಅಧಿಕಾರದ ಆಸೆಗಾಗಿ ಸಿದ್ಧಾಂತವನ್ನು ಬದಲಿಸಿ ಬಿಜೆಪಿ ಜೊತೆ ಸೇರಿದ್ದಾರೆ," ಎಂದು ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದರು.


Click the Play button to hear this message in audio format

"ಸಾರ್ವಜನಿಕ ಸ್ಥಳಗಳಾದ ರಸ್ತೆ ಅಥವಾ ಮೈದಾನಗಳಲ್ಲಿ ಯಾವುದೇ ಧರ್ಮದವರು ಪ್ರಾರ್ಥನೆ ಸಲ್ಲಿಸಬೇಕಾದರೆ, ಸ್ಥಳೀಯ ಆಡಳಿತಕ್ಕೆ ಅರ್ಜಿ ಸಲ್ಲಿಸಿ ಪೂರ್ವಾನುಮತಿ ಪಡೆಯುವುದು ಕಡ್ಡಾಯ," ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ.

ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ರಸ್ತೆ ಮೇಲೆ ನಮಾಜ್ ಮಾಡಲು ಅನುಮತಿ ನೀಡಬಾರದು ಎಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಕುರಿತು ಪ್ರತಿಕ್ರಿಯಿಸಿದ ಅವರು, "ಯತ್ನಾಳ್ ಅವರು ಈ ಬಾರಿ ಇಂಗ್ಲಿಷ್‌ನಲ್ಲಿ ಪತ್ರ ಬರೆದಿರುವುದು ವಿಶೇಷ. ಈ ಮೂಲಕ ಅವರು ಯಾರಿಗೆ ಸಂದೇಶ ರವಾನಿಸಲು ಪ್ರಯತ್ನಿಸುತ್ತಿದ್ದಾರೆ ಎಂಬುದು ತಿಳಿದಿಲ್ಲ. ಅದು ಮುಖ್ಯಮಂತ್ರಿಗಳಿಗೋ, ಅಮಿತ್ ಶಾಗೋ ಅಥವಾ ಬೇರೆ ಯಾರಿಗೋ ಎಂಬುದು ಸ್ಪಷ್ಟವಿಲ್ಲ," ಎಂದು ವ್ಯಂಗ್ಯವಾಡಿದರು.

ಆರ್‌ಎಸ್‌ಎಸ್‌ ಚಟುವಟಿಕೆಗಳಿಗೆ ರಾಜ್ಯದಲ್ಲಿ ಅವಕಾಶವಿಲ್ಲ

ಇದೇ ಸಂದರ್ಭದಲ್ಲಿ ಆರ್‌ಎಸ್‌ಎಸ್‌ ಕುರಿತು ಮಾತನಾಡಿದ ಅವರು, "ಕೇಂದ್ರ ಸರ್ಕಾರವು ತನ್ನ ನೌಕರರು ಆರ್‌ಎಸ್‌ಎಸ್‌ ಚಟುವಟಿಕೆಗಳಲ್ಲಿ ಭಾಗವಹಿಸಲು ಕಾನೂನು ತಿದ್ದುಪಡಿ ತಂದಿರಬಹುದು. ಆದರೆ, ನಮ್ಮದು ಒಕ್ಕೂಟ ವ್ಯವಸ್ಥೆಯಾಗಿದ್ದು, ಕೇಂದ್ರದ ಎಲ್ಲಾ ನಿಯಮಗಳನ್ನು ರಾಜ್ಯದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಿಲ್ಲ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಆರ್‌ಎಸ್‌ಎಸ್‌ ಕಾರ್ಯಕ್ರಮ ಅಥವಾ ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶವಿಲ್ಲ," ಎಂದು ಖಡಾಖಂಡಿತವಾಗಿ ಹೇಳಿದರು.

"ಹೈಕೋರ್ಟ್ ಆದೇಶದಂತೆ ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಹೊಸದಾಗಿ ಅರ್ಜಿ ಸಲ್ಲಿಸಲಿ. ಅದರ ಬಗ್ಗೆ ಜಿಲ್ಲಾಡಳಿತವೇ ತೀರ್ಮಾನ ಕೈಗೊಳ್ಳಲಿದೆ. ಸರ್ಕಾರ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ," ಎಂದು ತಿಳಿಸಿದರು.

'ಸಿದ್ಧಾಂತ ಬದಲಿಸಿ ಬಿಜೆಪಿ ಸೇರಿದ ಕುಮಾರಸ್ವಾಮಿ'

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ಹೇಳಿಕೆಗಳಿಗೂ ತಿರುಗೇಟು ನೀಡಿದ ಪ್ರಿಯಾಂಕ್, "ಕುಮಾರಸ್ವಾಮಿಯವರು ಈ ಹಿಂದೆ ಆರ್‌ಎಸ್‌ಎಸ್‌ ಬಗ್ಗೆ ಏನು ಹೇಳಿದ್ದರು ಎಂಬುದನ್ನು ಒಮ್ಮೆ ನೋಡಿಕೊಳ್ಳಲಿ. ಈಗ ಅಧಿಕಾರದ ಆಸೆಗಾಗಿ ಸಿದ್ಧಾಂತವನ್ನು ಬದಲಿಸಿ ಬಿಜೆಪಿ ಜೊತೆ ಸೇರಿದ್ದಾರೆ," ಎಂದರು.

"ಜಗದೀಶ ಶೆಟ್ಟರ್ ಅವರು 'ನಾನು ಹೊರಡಿಸಿದ್ದ ಸುತ್ತೋಲೆಯಲ್ಲಿ ಆರ್‌ಎಸ್‌ಎಸ್‌ ಹೆಸರು ಪ್ರಸ್ತಾಪಿಸಿಲ್ಲ' ಎಂದು ಬಾಲಿಶ ಹೇಳಿಕೆ ನೀಡಿದ್ದಾರೆ. ಈಗ ನಮ್ಮ ಸರ್ಕಾರ ಹೊರಡಿಸಿರುವ ಆದೇಶದಲ್ಲೂ ಆರ್‌ಎಸ್‌ಎಸ್‌ಗೆ ನಿರ್ಬಂಧ ಎಂದು ಎಲ್ಲೂ ಹೇಳಿಲ್ಲ. ಅವರು ಹೊರಡಿಸಿದ್ದ ಆದೇಶವನ್ನೇ ನಾವೂ ಜಾರಿಗೆ ತಂದಿದ್ದೇವೆ," ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ, "ಬಿಜೆಪಿಯವರು 'ಆಪರೇಷನ್ ಕಮಲ'ಕ್ಕೆ ಹಣ ಎಲ್ಲಿಂದ ತಂದರು?" ಎಂದು ಪ್ರಶ್ನಿಸಿದ ಅವರು, "ಈ ಹಿಂದೆ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಲು ಹೈಕಮಾಂಡ್‌ಗೆ ಕಪ್ಪ ಕೊಡಬೇಕು ಎಂದು ಕಣ್ಣೀರು ಹಾಕಿದ್ದರು," ಎಂದು ಆರೋಪಿಸಿದರು.

Read More
Next Story