
ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥ ಸಂಚಲನ: ಕಾಂಗ್ರೆಸ್, ಬಿಜೆಪಿ ಮಧ್ಯೆ ಟ್ವೀಟ್ ವಾರ್
ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅನುಮತಿ ನೀಡುವಂತೆ ಹೈಕೋರ್ಟ್ ನೀಡಿರುವ ತೀರ್ಪು ಪ್ರಜಾಪ್ರಭುತ್ವದ ಪ್ರಬಲ ಜಯವಾಗಿದೆ. ಪಥಸಂಚಲನಕ್ಕೆ ನಿರ್ಬಂಧ ಹೇರಲು ಯತ್ನಿಸಿದ ಸರ್ಕಾರಕ್ಕೆ ಚಾಟಿ ಬೀಸಲಾಗಿದೆ ಎಂದು ಬಿಜೆಪಿ ಹೇಳಿದೆ.
ಕಲಬುರಗಿ ಜಿಲ್ಲೆ ಚಿತ್ತಾಪುರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಪಥಸಂಚಲನ ವಿಚಾರವಾಗಿ ಆಡಳಿತರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ ನಡುವೆ ನಡೆಯುತ್ತಿರುವ ಟ್ವೀಟ್ ಸಮರ ತಾರಕಕ್ಕೇರಿದ್ದು, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಟ್ವೀಟ್ ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿರುಗೇಟು ನೀಡಿದ್ದಾರೆ.
ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅನುಮತಿ ನೀಡುವಂತೆ ಹೈಕೋರ್ಟ್ ನೀಡಿರುವ ತೀರ್ಪು ಪ್ರಜಾಪ್ರಭುತ್ವದ ಪ್ರಬಲ ಜಯವಾಗಿದೆ. ಪಥಸಂಚಲನಕ್ಕೆ ನಿರ್ಬಂಧ ಹೇರಲು ಯತ್ನಿಸಿದ ರಾಜ್ಯ ಸರ್ಕಾರದ ಕ್ರಮವನ್ನು ನ್ಯಾಯಾಲಯ ಖಂಡಿಸಿದ್ದು, ಸಂವಿಧಾನದ ಮೌಲ್ಯಗಳಿಗೆ ಬದ್ಧವಾಗಿದೆ ಎಂಬುದನ್ನು ಪುನರುಚ್ಛರಿಸಿದೆ ಎಂದು ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ.
ಆರ್‌ಎಸ್‌ಎಸ್ ಪಥಸಂಚಲನವನ್ನು ನಿಷೇಧಿಸಲು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಮುಂದಾಗಿದ್ದಾಗ, ನ್ಯಾಯಾಲಯದ ಈ ತೀರ್ಪು ಸರ್ಕಾರದ ವಾದಗಳಿಗೆ ಮುಖಭಂಗವಾದಂತಾಗಿದೆ. ಜನತಂತ್ರ ವ್ಯವಸ್ಥೆಯಲ್ಲಿ ಸರ್ವಾಧಿಕಾರಿ ಆಡಳಿತಕ್ಕೆ ಅವಕಾಶವಿಲ್ಲ ಎಂಬುದು ಈ ತೀರ್ಪಿನಲ್ಲಿ ಸ್ಪಷ್ಟವಾಗಿದೆ. ಪ್ರಜಾತಂತ್ರದ ಹಕ್ಕು ಕಸಿಯಲು ಹೊರಟ ಕಾಂಗ್ರೆಸ್ ಸರ್ಕಾರಕ್ಕೆ ನ್ಯಾಯಾಲಯ ಚಾಟಿ ಬೀಸಿ ಸಂವಿಧಾನದ ಘನತೆಯನ್ನು ಎತ್ತಿ ಹಿಡಿದಿದೆ. ದಿನಬೆಳಗಾದರೆ ಸಂವಿಧಾನದ ಬಗ್ಗೆ ಬೊಗಳೆ ಮಾತನಾಡುವವರಿಗೆ ತಕ್ಕ ಪಾಠ ಹೇಳಿದೆ ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಟೀಕಾಪ್ರಹಾರ ನಡೆಸಿದ್ದಾರೆ.
ಸಾಂಸ್ಕೃತಿಕ ಹಾಗೂ ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳಿಗೆ ಕಾನೂನು ಸುವ್ಯವಸ್ಥೆಯ ಷರತ್ತು ವಿಧಿಸಿ ಅನುಮತಿ ನೀಡಬೇಕಾಗಿರುವುದು ಸರ್ಕಾರದ ಕರ್ತವ್ಯ. ಆದರೆ ಕಾನೂನು ಸುವ್ಯವಸ್ಥೆಯ ಹೆಸರಿನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಸಿರುಗಟ್ಟಿಸಲು ಹೋದರೆ ದೇಶದ ಸಂವಿಧಾನ ಅದಕ್ಕೆ ಅವಕಾಶ ಕೊಡುವುದಿಲ್ಲ ಎಂಬ ಸಂದೇಶ ತೀರ್ಪಿನ ಮೂಲಕ ರವಾನೆಯಾಗಿದೆ. ರಾಷ್ಟ್ರಭಕ್ತ ಸಂಘಟನೆಗಳನ್ನು ಮೆಟ್ಟಿ ನಿಲ್ಲುವ ಕಾಂಗ್ರೆಸ್‌ನ ಕುಟಿಲ ನೀತಿಯು ನ್ಯಾಯಾಲಯದ ತೀರ್ಪಿನಿಂದ ನಿಷ್ಕ್ರಿಯಗೊಂಡಂತಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸರ್ವಾಧಿಕಾರಿ ಕಿಂಗ್ ಜಾಂಗ್ ಉನ್ ಆಡಳಿತ ನೆನಪಿಸುತ್ತಿದೆ:
ಚಿತ್ತಾಪುರದಲ್ಲಿ ಸಂವಿಧಾನದ ಹೆಸರಿನಲ್ಲಿ ಬೊಗಳೆ ಬಿಡುವವರಿಂದಲೇ ಸಾಂವಿಧಾನಿಕ ಹಕ್ಕು ಕಸಿಯಲಾಗುತ್ತಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವದ ಸಂಭ್ರಮಾಚರಣೆಗೆ ತಹಶೀಲ್ದಾರರ ಮೂಲಕ 12 ಮಾಹಿತಿ ಹಾಗೂ ದಾಖಲೆಗಳನ್ನು ಸಲ್ಲಿಸಿಲ್ಲವೆಂದು ಅನುಮತಿ ನಿರಾಕರಿಸಿರುವ ಪರಿಯು ಉತ್ತರ ಕೊರಿಯಾದ ತಿಕ್ಕಲು ಸರ್ವಾಧಿಕಾರಿ ಕಿಂಗ್ ಜಾಂಗ್ ಉನ್ ಆಡಳಿತ ವೈಖರಿ ನೆನಪಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ್ದ ಕಾಂಗ್ರೆಸ್ ಪಕ್ಷದ ಕರಾಳ ಇತಿಹಾಸ ಅತ್ಯಂತ ಪ್ರಿಯವಾಗಿರುವಂತಿದೆ. ಈ ಕಾರಣಕ್ಕಾಗಿಯೇ ಕಲಬುರಗಿ ಜಿಲ್ಲೆಯಲ್ಲಿ ತುರ್ತುಪರಿಸ್ಥಿತಿ ನೆನಪಿಸುವ ರೀತಿಯ ಆಡಳಿತವನ್ನು ಜಾರಿಗೆ ತರಲು ಹೊರಟಿದ್ದಾರೆ. ಇದಕ್ಕಾಗಿ ಚಿತ್ತಾಪುರವನ್ನು ಚಿಮ್ಮುವ ಹಲಗೆಯಂತೆ ಪ್ರಯೋಗಿಸುತ್ತಿದ್ದಾರೆ. ಡಾ.ಬಾಬಾ ಸಾಹೇಬ್ ಅವರು ರಚಿಸಿದ ಸಂವಿಧಾನದ ಆಶಯ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕಿಸುವ ರೀತಿಯಲ್ಲಿ ಚಿತ್ತಾಪುರದಲ್ಲಿ ಉಸಿರುಗಟ್ಟಿಸುವ ವಾತಾವರಣ ನಿರ್ಮಾಣ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಆರ್‌ಎಸ್‌ಎಸ್ ಪಥಸಂಚಲನ ಹಾಗೂ ಕಾರ್ಯಕ್ರಮದ ಅನುಮತಿಗೆ ವಿಧಿಸಿರುವ ಷರತ್ತುಗಳನ್ನು ರಾಜ್ಯಕ್ಕೆ ಅನ್ವಯಿಸಿ ಬಿಟ್ಟರೆ ಕರ್ನಾಟಕದ ಯಾವುದೇ ಮೂಲೆಗಳಲ್ಲೂ ಯಾವುದೇ ಸಾಂಸ್ಕೃತಿಕ ಹಾಗೂ ರಾಷ್ಟ್ರಭಕ್ತಿಯ ಕಾರ್ಯಕ್ರಮಗಳನ್ನು ನಡೆಸಲು ಆಸ್ಪದವೇ ಇಲ್ಲದಂಥ ಪರಿಸ್ಥಿತಿ ನಿರ್ಮಾಣವಾಗಲಿದೆ. ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಮಾದರಿಯ ಆಡಳಿತ ಹೇರಲು ಕಾಂಗ್ರೆಸ್ ಸರ್ಕಾರ ಯೋಜನೆ ರೂಪಿಸುತ್ತಿದೆ ಅದಕ್ಕೆ ಚಿತ್ತಾಪುರವನ್ನು ಪ್ರಯೋಗಾಲಯ ಮಾಡಿಕೊಂಡಿದೆ. ಚಿತ್ತಾಪುರದಲ್ಲಿ ಸದ್ಯ ಆರಂಭವಾಗಿರುವುದು ಸರ್ವಾಧಿಕಾರಿ ಆಡಳಿತ ಮತ್ತು ಪ್ರಜಾಪ್ರಭುತ್ವದ ನಡುವಿನ ಸಮರವನ್ನು ಸವಾಲಾಗಿ ಸ್ವೀಕರಿಸಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಉಳಿಸಲು ಬಿಜೆಪಿ ಹೋರಾಟ ಕೈಗೆತ್ತಿಕೊಳ್ಳಲಿದೆ ಎಂದು ಹೇಳಿದ್ದಾರೆ.