Leadership confusion Ahinda leaders meeting CM Siddaramaiah DKShivakumar
x
ಆಪ್ತ ಸಚಿವರೊಂದಿಗೆ ಸಿಎಂ ಸಿದ್ದರಾಮಯ್ಯ

ಸತೀಶ್ ಮನೆಯಲ್ಲಿ ಅಹಿಂದ ನಾಯಕರ ಡಿನ್ನರ್ ಪಾಲಿಟಿಕ್ಸ್: ನಾಯಕತ್ವ ಬದಲಾವಣೆ ಚರ್ಚೆ, ಒತ್ತಡಕ್ಕೆ‌ ಮಣಿಯದಿರಲು ಸಿಎಂ ನಿರ್ಧಾರ

ಹೈಕಮಾಂಡ್ ಹೇಳಿದಂತೆ ಕೇಳುತ್ತೇನೆ. ಆದರೆ ರಾಜ್ಯದ ಪರಿಸ್ಥಿತಿಯನ್ನು ವಿವರಿಸುತ್ತೇನೆ. ಒಂದು ವೇಳೆ ಹೈಕಮಾಂಡ್ ಬೇರೆ ತಿರ್ಮಾನ ತೆಗೆದುಕೊಂಡರೆ ದಲಿತರಿಗೆ ಅವಕಾಶ ನೀಡುವ ಬಗ್ಗೆ ಒತ್ತಡ ಹೇರಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.


Click the Play button to hear this message in audio format

ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಗೊಂದಲ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಸಚಿವ ಸತೀಶ್‌ ಜಾರಕಿಹೊಳಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಸಚಿವರು, ಅಹಿಂದ ನಾಯಕರು ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಡಿನ್ನರ್ ಮೀಟಿಂಗ್ ನಡೆಸಿ ಚರ್ಚಿಸಿರುವುದು ರಾಜಕೀಯ ತಿರುವು ಪಡೆದುಕೊಂಡಿದೆ. ಸಭೆಯಲ್ಲಿ ನಾಯಕತ್ವ ಬದಲಾವಣೆ ಕುರಿತಂತೆ ಹೈಕಮಾಂಡ್ ನಾಯಕರಿಗೆ ಸ್ಪಷ್ಟ ಸಂದೇಶ ರವಾನಿಸಲು ಸಿಎಂ ಸಿದ್ದರಾಮಯ್ಯ ಅವರು ನಿರ್ಧರಿಸಿದ್ದಾರೆ. ಜತೆಗೆ ನಾಯಕತ್ವ ಬದಲಾವಣೆ ಅನಿವಾರ್ಯವಾದರೆ ಮುಂದಿನ ಹೆಜ್ಜೆಗಳ ಬಗ್ಗೆಯೂ ಚರ್ಚೆ ನಡೆದಿದೆ ಎನ್ನಲಾಗಿದೆ.

ಗುರುವಾರ(ಡಿ.19) ರಾತ್ರಿ ಆಪ್ತ ಬಣದ ನಾಯಕರ ಜೊತೆ ಡಿನ್ನರ್ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿ, "ಇಲ್ಲಿಯವರೆಗೂ ನನಗೆ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರು ನಾಯಕತ್ವ ಬದಲಾವಣೆ ಬಗ್ಗೆ ಯಾವುದೇ ಸೂಚನೆ ನೀಡಿಲ್ಲ, ನಾಯಕತ್ವ ವಿಚಾರದಲ್ಲಿ ಅನುಮಾನ ಬೇಡ. ನಾನು ಹೈಕಮಾಂಡ್ ವಿರುದ್ಧ ನಡೆದುಕೊಳ್ಳುವುದಿಲ್ಲ, ನನ್ನ ವಿರುದ್ಧ ಷಡ್ಯಂತ್ರ ಮಾಡಿದರೆ ಯಾರ ಒತ್ತಡಕ್ಕೂ ಮಣಿಯುವುದಿಲ್ಲ" ಎಂದು ಹೇಳಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹೈಕಮಾಂಡ್ ಹೇಳಿದಂತೆ ಕೇಳುತ್ತೇನೆ. ಅದಕ್ಕೂ ಮುನ್ನ, ರಾಜ್ಯದ ಪರಿಸ್ಥಿತಿಯನ್ನು ವಿವರಿಸುತ್ತೇನೆ. ಒಂದು ವೇಳೆ ಹೈಕಮಾಂಡ್ ಬೇರೆ ತೀರ್ಮಾನ ತೆಗೆದುಕೊಂಡರೆ ದಲಿತರಿಗೆ ಅವಕಾಶ ನೀಡುವ ಬಗ್ಗೆ ಒತ್ತಡ ಹೇರುತ್ತೇನೆ ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದರೆ ಅಹಿಂದ ಮತಗಳು ದೂರವಾಗುವ ಸಾಧ್ಯತೆ ಇದೆ. ಇದರಿಂದ ಸರ್ಕಾರ ಹಾಗೂ ಪಕ್ಷಕ್ಕೆ ಭಾರೀ ಹಾನಿಯಾಗುವ ಸಾಧ್ಯತೆ ಇದೆ ಎಂಬುದನ್ನು ರಾಹುಲ್ ಗಾಂಧಿ ಅವರಿಗೆ ಮನವರಿಕೆ ಮಾಡಿಕೊಡುವಂತೆ ಸಿಎಂ ಅವರಿಗೆ ನಾಯಕರು ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಪೂರಕವಾಗಿ ಕೆ.ಎನ್.ರಾಜಣ್ಣ ಸೇರಿದಂತೆ ಹಲವು ಅಹಿಂದ ನಾಯಕರಿಂದ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆಸುವ ಕುರಿತಾಗಿಯೂ ಚರ್ಚಿಸಲಾಗಿದೆ ಎಂದು ತಿಳಿದುಬಂದಿದೆ.

ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ತಿರುಗೇಟು ನೀಡಲು ಈ ಸಭೆ ನಡೆಸಲಾಗಿದೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.

ಯಾರೆಲ್ಲಾ ಭಾಗಿ ?

ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ತಡರಾತ್ರಿ ನಡೆದ ಭೋಜನಕೂಟದಲ್ಲಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಗೃಹ ಸಚಿವ ಡಾ.ಜಿ. ಪರಮೇಶ್ವರ್, ಸಮಾಜಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ, ಇಂಧನ ಸಚಿವ ಕೆ.ಜೆ.ಜಾರ್ಜ್, ವಸತಿ ಸಚಿವ ಜಮೀರ್ ಅಹಮದ್ ಖಾನ್, ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್, ಶಾಸಕ ಕೆ.ಎನ್.ರಾಜಣ್ಣ, ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್ ಅಹಮದ್ ಭಾಗವಹಿಸಿದ್ದರು.

ಬೆಳಗಾವಿಯಲ್ಲೇ ಔತಣಕೂಟ ಏರ್ಪಡಿಸಿದ್ದ ಡಿಸಿಎಂ

ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿರುವ ಸಂದರ್ಭವನ್ನೇ ಬಳಸಿಕೊಂಡ ಡಿಸಿಎಂ ಡಿ.ಕೆ. ಶಿವಕುಮಾರ್ ಇತ್ತೀಚೆಗೆ ಬೆಳಗಾವಿಯ ಹೊರವಲಯದಲ್ಲಿರುವ ಕಾಂಗ್ರೆಸ್ ಮುಖಂಡ ಪ್ರವೀಣ್ ದೊಡ್ಡಣ್ಣನವರ್ ಅವರ ತೋಟದ ಮನೆಯಲ್ಲಿ ವಿಶೇಷ ಔತಣಕೂಟವನ್ನು ಆಯೋಜಿಸಿದ್ದರು.

ಮೇಲ್ನೋಟಕ್ಕೆ ಇದೊಂದು ಸ್ನೇಹಕೂಟದಂತೆ ಕಂಡರೂ, ಆಂತರಿಕವಾಗಿ ಇದು ನಾಯಕತ್ವ ಬದಲಾವಣೆಗೆ ಪಟ್ಟು ಹಿಡಿದಿರುವ ಡಿಸಿಎಂ ಡಿ.ಕೆ.ಶಿ ಅವರ ಶಕ್ತಿ ಪ್ರದರ್ಶನದ ವೇದಿಕೆಯಾಗಿತ್ತು ಎಂದೇ ರಾಜಕೀಯವಲಯದಲ್ಲಿ ವಿಶ್ಲೇಷಿಸಲಾಗಿತ್ತು.

ತಮ್ಮ ಆಪ್ತ ಶಾಸಕರ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರನ್ನು ಒಗ್ಗೂಡಿಸಿ, ಹೈಕಮಾಂಡ್‌ಗೆ ಪರೋಕ್ಷ ಸಂದೇಶ ರವಾನಿಸುವುದು ಡಿ.ಕೆ.ಶಿ ಅವರ ತಂತ್ರವಾಗಿತ್ತು. ಇದಕ್ಕಾಗಿ ತಮ್ಮ ಮೂವರು ಆಪ್ತ ಶಾಸಕರಿಗೆ ಔತಣಕೂಟದ ಉಸ್ತುವಾರಿ ಮತ್ತು ಶಾಸಕರನ್ನು ಕರೆತರುವ ಜವಾಬ್ದಾರಿಯನ್ನು ಅವರು ನೀಡಿದ್ದರು ಎಂದು ಹೇಳಲಾಗಿದೆ. ಆದರೆ, ಮೂಲಗಳ ಪ್ರಕಾರ ಈ ಸಭೆಗೆ ನಿರೀಕ್ಷಿತ ಸ್ಪಂದನೆ ಸಿಕ್ಕಿಲ್ಲ.

ತಡರಾತ್ರಿಯವರೆಗೆ ನಡೆದ ಈ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಒಟ್ಟು ಭಾಗವಹಿಸಿದವರ ಸಂಖ್ಯೆ ಕೇವಲ 30ರ ಆಸುಪಾಸಿನಲ್ಲಿತ್ತು. ಇದರಲ್ಲಿ ಶಾಸಕರ ಸಂಖ್ಯೆ ಕೇವಲ 22 ಎಂದು ತಿಳಿದುಬಂದಿದೆ. 136 ಶಾಸಕರ ಬಲವಿರುವ ಆಡಳಿತ ಪಕ್ಷದ ಅಧ್ಯಕ್ಷರ ಕರೆಗೆ ಕೇವಲ 22 ಶಾಸಕರು ಹಾಜರಾಗಿರುವುದು ಡಿ.ಕೆ.ಶಿ ಬಣಕ್ಕೆ ಕೊಂಚ ಮುಜುಗರ ತಂದಿತ್ತು.

ಡಿಕೆಶಿ ಔತಣಕೂಟದಲ್ಲಿ ಯಾರೆಲ್ಲಾ ಇದ್ದರು?

ಈ ಔತಣಕೂಟದಲ್ಲಿ ಡಿ.ಕೆ.ಶಿ ಅವರ ಸಹೋದರ ಹಾಗೂ ಮಾಜಿ ಸಂಸದ ಡಿ.ಕೆ. ಸುರೇಶ್ ಪ್ರಮುಖವಾಗಿ ಭಾಗವಹಿಸಿದ್ದರು. ಇವರಲ್ಲದೆ, ಶಾಂತಿನಗರ ಶಾಸಕ ಎನ್.ಎ. ಹ್ಯಾರಿಸ್, ಮಾಗಡಿ ಶಾಸಕ ಬಾಲಕೃಷ್ಣ, ರಾಮನಗರದ ಇಕ್ಬಾಲ್ ಹುಸೇನ್, ಶಿವಗಂಗ ಬಸವರಾಜು ಸೇರಿದಂತೆ ಡಿ.ಕೆ.ಶಿ ಅವರ ಕಟ್ಟಾ ಬೆಂಬಲಿಗರು ಉಪಸ್ಥಿತರಿದ್ದರು. ವಿಶೇಷವೆಂದರೆ, ಬಿಜೆಪಿಯಿಂದ ಅಂತರ ಕಾಯ್ದುಕೊಂಡಿರುವ ಹಾಗೂ ಉಚ್ಚಾಟಿತಗೊಂಡಿರುವ ಶಾಸಕರಾದ ಎಸ್.ಟಿ. ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ಅವರು ಕೂಡ ಈ ಡಿನ್ನರ್ ಮೀಟಿಂಗ್‌ನಲ್ಲಿ ಕಾಣಿಸಿಕೊಂಡಿದ್ದು ರಾಜಕೀಯ ವಲಯದಲ್ಲಿ ಹುಬ್ಬೇರಿಸಿತ್ತು.

Read More
Next Story