ಆಳಂದ ಮತಕಳವು ಪ್ರಕರಣ: ರಾಹುಲ್ ಗಾಂಧಿ ನೇತೃತ್ವದ ಪ್ರತಿಭಟನೆಗೆ ಸಿಕ್ಕಿತು ‘ಬ್ರಹ್ಮಾಸ್ತ್ರʼ
x

ಆಳಂದ ಮತಕಳವು ಪ್ರಕರಣ: ರಾಹುಲ್ ಗಾಂಧಿ ನೇತೃತ್ವದ ಪ್ರತಿಭಟನೆಗೆ ಸಿಕ್ಕಿತು ‘ಬ್ರಹ್ಮಾಸ್ತ್ರʼ

ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುವ ಪ್ರತಿಭಟನೆಗೆ ಆರೋಪಪಟ್ಟಿ ಬಹುದೊಡ್ಡ ‘ಅಸ್ತ್ರ’ವನ್ನು ಒದಗಿಸಿದ್ದು, ಕಾಂಗ್ರೆಸ್‌ನ ಆರೋಪಗಳಿಗೆ ಮೊದಲ ಬಾರಿಗೆ ಅಧಿಕೃತ ‘ಪುರಾವೆ’ ಸಿಕ್ಕಂತಾಗಿದೆ.


Click the Play button to hear this message in audio format

ಕರ್ನಾಟಕದ ಕಲಬುರಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತದಾರರ ಪಟ್ಟಿ ತಿರುಚುವಿಕೆ ಪ್ರಕರಣದ ಬಗ್ಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯಕ್ಕೆ ಸಲ್ಲಿಸಿರುವ ಬರೋಬ್ಬರಿ 22 ಸಾವಿರ ಪುಟಗಳ ದೋಷಾರೋಪಣ ಪಟ್ಟಿಯು ಈಗ ರಾಷ್ಟ್ರ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸುವ ಮುನ್ಸೂಚನೆ ನೀಡಿದೆ. ಭಾನುವಾರ ದೆಹಲಿಯಲ್ಲಿ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನೆಗೆ ಈ ಆರೋಪಪಟ್ಟಿ ಬಹುದೊಡ್ಡ ‘ಅಸ್ತ್ರ’ವನ್ನು ಒದಗಿಸಿದ್ದು, ಕಾಂಗ್ರೆಸ್‌ನ ಆರೋಪಗಳಿಗೆ ಮೊದಲ ಬಾರಿಗೆ ಅಧಿಕೃತ ‘ಪುರಾವೆ’ ಸಿಕ್ಕಂತಾಗಿದೆ.

ಇಲ್ಲಿಯವರೆಗೆ ಮತಯಂತ್ರಗಳ ತಿರುಚುವಿಕೆ ಅಥವಾ ಮತದಾರರ ಪಟ್ಟಿಯಿಂದ ಹೆಸರು ಕೈಬಿಡುವ ಬಗ್ಗೆ ಪ್ರತಿಪಕ್ಷಗಳು ಕೇವಲ ಆರೋಪಗಳನ್ನು ಮಾಡುತ್ತಿದ್ದವು. ಆದರೆ, ಆಳಂದ ಪ್ರಕರಣದಲ್ಲಿ ಎಸ್‌ಐಟಿ ಸಲ್ಲಿಸಿರುವ ಆರೋಪಟ್ಟಿ ಈ ಆರೋಪಗಳಿಗೆ ಪ್ರಬಲ ಸಾಕ್ಷ್ಯಾಧಾರ ಒದಗಿಸಿದಂತಾಗಿದೆ. ಆಳಂದದ ಮಾಜಿ ಶಾಸಕ ಹಾಗೂ ಬಿಜೆಪಿ ನಾಯಕ ಸುಭಾಷ್ ಗುತ್ತೇದಾರ್ ಮತ್ತು ಅವರ ಪುತ್ರ ಹರ್ಷಾನಂದ ಗುತ್ತೇದಾರ್ ಪ್ರಮುಖ ಆರೋಪಿಗಳಾಗಿರುವುದು ಪ್ರಕರಣದ ಗಂಭೀರತೆಯನ್ನು ಹೆಚ್ಚಿಸಿದೆ.

ನಕಲಿ ಅರ್ಜಿ ಸಲ್ಲಿಕೆ

09-12-2022 ರಿಂದ 20-02-2023 ರ ನಡುವೆ, ಕಲಬುರಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಬೃಹತ್ ಪ್ರಮಾಣದ ಮತದಾರರ ಪಟ್ಟಿ ಅಕ್ರಮ ನಡೆದಿದೆ. ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಮೊದಲ ಆರೋಪಿಯಾಗಿದ್ದು, ಅವರ ರಾಜಕೀಯ ಲಾಭಕ್ಕಾಗಿ, ಅವರಿಗೆ ಮತ ಹಾಕದ ನಿರ್ದಿಷ್ಟ ಮತದಾರರನ್ನು ಗುರುತಿಸಿ, ಅವರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲು 'ನಮೂನೆ-7' ರ ಮೂಲಕ ನಕಲಿ ಅರ್ಜಿಗಳನ್ನು ಸಲ್ಲಿಕೆ ಮಾಡಲಾಗಿದೆ ಎಂಬುದು ಗೊತ್ತಾಗಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಕಲಬುರಗಿ ಜಿಲ್ಲೆ ಆಳಂದ ವಿಧಾನಸಭಾ ಕ್ಷೇತ್ರದ ಮತಕಳವು ಯತ್ನ ಕೃತ್ಯದ ಹಿಂದೆ ಕ್ಷೇತ್ರದ ಮಾಜಿ ಶಾಸಕ ಹಾಗೂ ಬಿಜೆಪಿ ಮುಖಂಡ ಸುಭಾಷ್ ಗುತ್ತೇದಾರ್, ಅವರ ಪುತ್ರನ ಪಾತ್ರವಿದೆ ಎಂದು ಎಸ್‌ಐಟಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ. ಇದು ಕಾಂಗ್ರೆಸ್‌ಗೆ ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಲು ದೊಡ್ಡ ಅಸ್ತ್ರ ಸಿಕ್ಕಂತಾಗಿದೆ.

ಮತದಾರರ ಪಟ್ಟಿಯಿಂದ ಹೆಸರು ತೆಗೆಯಲು ಇರುವ ಅರ್ಜಿಯನ್ನು (ಫಾರ್ಮ್‌-7) ದುರುಪಯೋಗಪಡಿಸಿಕೊಳ್ಳಲಾಗಿದೆ. ನಕಲಿ ಐಪಿ ವಿಳಾಸಗಳು, ವರ್ಚುವಲ್ ನಂಬರ್‌ಗಳು ಮತ್ತು ಅನ್ಯರಾಜ್ಯದ ಟೆಕ್ಕಿಗಳ ಸಹಾಯ ಪಡೆದಿರುವುದು, ಭಾರತದ ಚುನಾವಣಾ ವ್ಯವಸ್ಥೆಯ ದೋಷಗಳನ್ನು ಎತ್ತಿ ತೋರಿಸಿದೆ. ಇದು ಕೇವಲ ಒಂದು ಪಕ್ಷದ ಗೆಲುವು-ಸೋಲಿನ ವಿಚಾರವಲ್ಲ, ಬದಲಿಗೆ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುವ ವಿಷಯವಾಗಿದೆ.

ರಾಜಕೀಯ ಲಾಭಕ್ಕಾಗಿ ಕೃತ್ಯ

ಆಳಂದ ಕ್ಷೇತ್ರದಲ್ಲಿ 5,994 ಮತಗಳನ್ನು ಅಳಿಸಿ ಹಾಕಲು ಕಲಬುರಗಿಯ ಖಾಸಗಿ ಕಾಲ್‌ ಸೆಂಟರ್‌ವೊಂದನ್ನು ಸುಭಾಷ್ ಗುತ್ತೇದಾರ್ ಹಾಗೂ ಅವರ ಪುತ್ರ ಹರ್ಷಾನಂದ ಬಳಸಿಕೊಂಡಿದ್ದರು. ಈ ಮತ ಕಳವಿಗೆ ಮಾಜಿ ಶಾಸಕರು ಹಣ ಕೂಡ ಪಾವತಿಸಿದ್ದಾರೆ. ಈ ಕೃತ್ಯದಲ್ಲಿ ತಂದೆ-ಮಗ ಪ್ರಮುಖ ಆರೋಪಿಗಳು ಎಂದು ಎಸ್‌ಐಟಿ ಹೇಳಿದೆ. ಸುಭಾಷ್‌ ಗುತ್ತೇದಾರ್‌ ಮತ್ತು ಹರ್ಷಾನಂದ ಸೇರಿದಂತೆ ಏಳು ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಕೆ ಮಾಡಲಾಗಿದೆ. ಪ್ರಕರಣದಲ್ಲಿ ಪಶ್ಚಿಮ ಬಂಗಾಳದ ವ್ಯಕ್ತಿಯು ಸಹ ಭಾಗಿಯಾಗಿದ್ದಾರೆ. ಸುಭಾಷ್ ಗುತ್ತೇದಾರ್ ತಮ್ಮ ರಾಜಕೀಯ ಲಾಭಕ್ಕಾಗಿ ತಮಗೆ ಮತ ಹಾಕದ ಮತದಾರರನ್ನು ಗುರುತಿಸಿ ಪಟ್ಟಿಯಿಂದ ತೆಗೆಯಲು ಸಂಚು ರೂಪಿಸಿದ್ದರು. ಹರ್ಷಾನಂದ ಗುತ್ತೇದಾರ್ ತಂದೆಯ ರಾಜಕೀಯ ಭವಿಷ್ಯ ಮತ್ತು ತಮ್ಮ ವೈಯಕ್ತಿಕ ಲಾಭಕ್ಕಾಗಿ ಈ ಯೋಜನೆಯನ್ನು ಕಾರ್ಯಗತಗೊಳಿಸಲು ಉಸ್ತುವಾರಿ ವಹಿಸಿದ್ದರು. ಅವರ ಆಪ್ತ ಸಹಾಯಕ ತಿಪ್ಪೇರುದ್ರ, ಮತದಾರರ ಪಟ್ಟಿಯನ್ನು ಆಪರೇಟರ್‌ಗಳಿಗೆ ತಲುಪಿಸುವ ಕೊಂಡಿಯಾಗಿದ್ದರು. ಇನ್ನುಳಿದ ಕಲಬುರಗಿ ನಿವಾಸಿಗಳಾದ ಅಕ್ರಂ ಪಾಷಾ, ಅಸ್ಲಂ ಪಾಷಾ, ಮಹಮದ್ ಅಶ್ಚಾಕ್ ಅಹಮದ್ ಕಂಪ್ಯೂಟರ್ ಆಪರೇಟರ್‌ಗಳಾಗಿದ್ದು, ತಾಂತ್ರಿಕವಾಗಿ ಅರ್ಜಿಗಳನ್ನು ಅಪ್‌ಲೋಡ್ ಮಾಡುವ ಕೆಲಸ ನಿರ್ವಹಿಸಿದ್ದಾರೆ. ಇನ್ನು, ಪಶ್ಚಿಮ ಬಂಗಾಳ ಮೂಲದ ಬಾಪಿ ಅದ್ಯ ನಕಲಿ ಮೊಬೈಲ್ ಸಂಖ್ಯೆ ಮತ್ತು ಓಟಿಪಿ ಗಳನ್ನು ಒದಗಿಸಲು ಆರ್ಥಿಕ ಸಹಾಯ ಮತ್ತು ತಾಂತ್ರಿಕ ವೇದಿಕೆಯನ್ನು ಒದಗಿಸಿದ್ದಾರೆ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಹೈಟೆಕ್‌ ಮಾದರಿಯಲ್ಲಿ ಕೃತ್ಯ

ಆರೋಪಿಗಳು ಅತ್ಯಂತ ಹೈಟೆಕ್ ಮಾದರಿಯಲ್ಲಿ ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಎನ್‌ವಿಎಸ್‌ಪಿ (ನ್ಯಾಷನಲ್‌ ವೋಟರ್‌ ಸರ್ವಿಸ್‌ ಪೋರ್ಟಲ್‌), ವಿಎಚ್‌ಎ (ವೋಟರ್‌ ಹೆಲ್ಪ್‌ಲೈನ್‌ ಆ್ಯಪ್‌) ಮತ್ತು ಗರುಡ ಆ್ಯಪ್‌ಗಳನ್ನು ಬಳಸಲಾಗಿದೆ. ಮತದಾರರ ಪಟ್ಟಿಯಿಂದ ಹೆಸರು ತೆಗೆಯಲು ಅರ್ಜಿ ಸಲ್ಲಿಸಿದಾಗ, ಆ ಮತದಾರನ ಮೊಬೈಲ್‌ಗೆ ಒಟಿಪಿಗೆ ಹೋಗುತ್ತದೆ. ಇದನ್ನು ತಡೆಯಲು, ಆರೋಪಿಗಳು https://otpbazar.online ಮತ್ತು https://otp.online ಎಂಬ ವೆಬ್‌ಸೈಟ್‌ಗಳನ್ನು ಬಳಸಿದ್ದಾರೆ. ಇಲ್ಲಿ ನಕಲಿ ಮೊಬೈಲ್ ಸಂಖ್ಯೆಗಳನ್ನು ಸೃಷ್ಟಿಸಿ, ಅದಕ್ಕೆ ಬರುವ ಒಟಿಪಿ ಬಳಸಿ ಅರ್ಜಿ ಸಲ್ಲಿಸಿದ್ದಾರೆ. ಸಾವಿರಾರು ಅರ್ಜಿಗಳನ್ನು ಅಪ್‌ಲೋಡ್ ಮಾಡಲು ಒಂದೇ ರೀತಿಯ ಪಾಸ್‌ವರ್ಡ್ ಬಳಸಲಾಗಿದೆ ಮತ್ತು ಲಾಗಿನ್ ಆದ ಕೆಲವೇ ಸೆಕೆಂಡುಗಳಲ್ಲಿ ಅರ್ಜಿ ಸಲ್ಲಿಸಲಾಗಿದೆ. ಇದು 'ಬಾಟ್' ಅಥವಾ ಯಾಂತ್ರೀಕೃತ ಕೃತ್ಯದಂತಿದೆ ಎಂದು ಹೇಳಲಾಗಿದೆ.

ದೋಷಾರೋಪಣ ಪಟ್ಟಿಯು ಕೇವಲ ಚುನಾವಣಾ ಅಕ್ರಮದ ದಾಖಲೆಯಲ್ಲ, ಬದಲಿಗೆ ತಂತ್ರಜ್ಞಾನವನ್ನು ಬಳಸಿಕೊಂಡು ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಹೇಗೆ ಬುಡಮೇಲು ಮಾಡಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ. ಒಟಿಪಿ ಬಜರ್‌ ನಂತಹ ಥರ್ಡ್ ಪಾರ್ಟಿ ಆಪ್‌ಗಳ ಮೂಲಕ ಸರ್ಕಾರದ ಭದ್ರತಾ ವ್ಯವಸ್ಥೆಯನ್ನು ಭೇದಿಸಿರುವುದು ಆತಂಕಕಾರಿ ವಿಷಯ. ಪ್ರಯೋಗಾಲಯದ ವಿಶ್ಲೇಷಣೆ, ಡಿಜಿಟಲ್ ಫುಟ್‌ಪ್ರಿಂಟ್ ಮತ್ತು ಸಾಕ್ಷ್ಯ ನಾಶದ ಸಾಂದರ್ಭಿಕ ಸಾಕ್ಷ್ಯಗಳು ಆರೋಪಿಗಳ ವಿರುದ್ಧ ಪ್ರಬಲವಾಗಿವೆ.

ಆರೋಪಿಗಳು ಅತ್ಯಂತ ಯೋಜಿತವಾಗಿ ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಸುಭಾಷ್ ಗುತ್ತೇದಾರ್ ಅವರಿಗೆ ಮತ ನೀಡದಿರುವ ಸಂಭಾವ್ಯ ಮತದಾರರನ್ನು ಮೊದಲು ಗುರುತಿಸಲಾಗಿದೆ. ಪಶ್ಚಿಮ ಬಂಗಾಳ ಮೂಲದ ಬಾಪಿ ಅದ್ಯ ಎಂಬುವವರಿಂದ ನಕಲಿ ಮೊಬೈಲ್ ಸಂಖ್ಯೆಗಳು ಮತ್ತು ಒಟಿಪಿಗಳನ್ನು ಖರೀದಿಸಿ, ಎನ್‌ವಿಎಸ್‌ಪಿ ಪೋರ್ಟಲ್‌ನಲ್ಲಿ ಲಾಗಿನ್ ಐಡಿಗಳನ್ನು ಸೃಷ್ಟಿಸಲಾಗಿದೆ. ಅಕ್ರಂ ಪಾಷಾ ಮತ್ತು ಇತರರ ಸಹಾಯದಿಂದ, ಮತದಾರರ ಅನುಮತಿ ಇಲ್ಲದೆಯೇ ಅವರು ಸ್ವತಃ ತಮ್ಮ ಹೆಸರನ್ನು ತೆಗೆದುಹಾಕಲು ಕೋರುತ್ತಿದ್ದಾರೆ ಎಂಬಂತೆ ಬಿಂಬಿಸಿ ಸಾವಿರಾರು ಅರ್ಜಿಗಳನ್ನು ಅಪ್‌ಲೋಡ್ ಮಾಡಲಾಗಿದೆ. ನಂತರ ಕಂಪ್ಯೂಟರ್‌ ಆಪರೇಟರ್‌ಗಳು ಸೇರಿ ಸಾಕ್ಷ್ಯಗಳನ್ನು ಸುಟ್ಟು ನಾಶಪಡಿಸಲು ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಕಾಯ್ದೆ ಮತ್ತು ಸೆಕ್ಷನ್‌ಗಳು

ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ (ಐಟಿ ಕಾಯ್ದೆ) ಅಡಿಯಲ್ಲಿ ದೋಷಾರೋಪಣೆ ಮಾಡಲಾಗಿದೆ. ಐಪಿಸಿ ಸೆಕ್ಷನ್‌ 120(B) (ಒಳಸಂಚು), 182 (ಸುಳ್ಳು ಮಾಹಿತಿ), 419 (ವ್ಯಕ್ತಿತ್ವದ ಸೋಗು), 464, 465, 468, 471 (ನಕಲಿ ದಾಖಲೆ ಸೃಷ್ಟಿ ಮತ್ತು ಬಳಕೆ), 201, 204 (ಸಾಕ್ಷ್ಯ ನಾಶ) ಹಾಕಲಾಗಿದೆ. ಐಟಿ ಕಾಯ್ದೆ ಸೆಕ್ಷನ್ 66C ಮತ್ತು 84C ಉಲ್ಲೇಖ ಮಾಡಲಾಗಿದೆ.

ಕಾಂಗ್ರೆಸ್ ಪಾಲಿಗೆ ರಾಜಕೀಯ ಲಾಭ

ಇತ್ತೀಚಿನ ವಿಧಾನಸಭಾ ಚುನಾವಣೆಗಳಲ್ಲಿನ ಸೋಲಿನ ನಂತರ, ಮತಯಂತ್ರ ಮತ್ತು ಮತದಾರರ ಪಟ್ಟಿ ಬಗ್ಗೆ ಕಾಂಗ್ರೆಸ್ ದನಿ ಎತ್ತಿತ್ತು. ಇದನ್ನು ಬಿಜೆಪಿ 'ಸೋಲಿನ ಹತಾಶೆ' ಎಂದು ಟೀಕಿಸುತ್ತಿತ್ತು. ಈಗ ಆಳಂದದ ಆರೋಪ ಪಟ್ಟಿತೋರಿಸಿ, "ಇದು ಹತಾಶೆಯಲ್ಲ, ವಾಸ್ತವ" ಎಂದು ತಿರುಗೇಟು ನೀಡಲು ಕಾಂಗ್ರೆಸ್‌ಗೆ ಅವಕಾಶ ಸಿಕ್ಕಿದೆ. ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿಯೂ ಈ ವಿಷಯ ಪ್ರಸ್ತಾಪವಾಗುವುದು ಖಚಿತ. ಒಬ್ಬ ಮಾಜಿ ಶಾಸಕನೇ ತಂತ್ರಜ್ಞಾನ ಬಳಸಿ ಮತದಾರರ ಹೆಸರು ಡಿಲಿಟ್‌ ಮಾಡಿಸುವುದು ಸಾಬೀತಾದರೆ, ದೇಶದ ಇತರೆಡೆ ಈ ಮಾದರಿ ಬಳಕೆಯಾಗಿಲ್ಲ ಎಂದು ನಂಬುವುದಾದರೂ ಹೇಗೆ? ಎಂದು ಪ್ರತಿಪಕ್ಷಗಳು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲಿವೆ.

ಬಿಜೆಪಿಗೆ ಮುಜಗರ

ದೋಷಾರೋಪಣ ಪಟ್ಟಿ ಸಲ್ಲಿಕೆಯಾಗಿರುವುದರಿಂದ ಬಿಜೆಪಿ ತೀವ್ರ ಮುಜುಗರಕ್ಕೀಡಾಗಿದೆ. ತನ್ನದೇ ಪಕ್ಷದ ಹಿರಿಯ ನಾಯಕ ಮತ್ತು ಮಾಜಿ ಶಾಸಕ ಆರೋಪಿಯಾಗಿರುವುದರಿಂದ, ಪಕ್ಷವು ಇದನ್ನು ರಾಜಕೀಯ ದ್ವೇಷದ ತನಿಖೆ ಎಂದು ಕರೆದರೂ, 22 ಸಾವಿರ ಪುಟಗಳ ಸಾಕ್ಷ್ಯವನ್ನು ಅಲ್ಲಗಳೆಯುವುದು ಕಷ್ಟವಾಗಬಹುದು. ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ಆರಂಭವಾಗುತ್ತಿದ್ದಂತೆ, ಹೊರಬರುವ ಪ್ರತಿಯೊಂದು ಅಂಶವೂ ರಾಹುಲ್ ಗಾಂಧಿ ಅವರ ಸಂವಿಧಾನ ಉಳಿಸಿ ಅಭಿಯಾನಕ್ಕೆ ಕಚ್ಚಾ ವಸ್ತುವಾಗಲಿದೆ.

Read More
Next Story