
ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಶಾಸಕ ಇಕ್ಬಾಲ್ ಹುಸೇನ್
"ಜನವರಿ 6ಕ್ಕೆ ಡಿ.ಕೆ. ಶಿವಕುಮಾರ್‌ಗೆ ಸಿಎಂ ಪಟ್ಟಾಭಿಷೇಕ ಖಚಿತ": ಆಪ್ತ ಶಾಸಕ ಇಕ್ಬಾಲ್ ಹುಸೇನ್ ಭವಿಷ್ಯ
"ಶೇ. 99ರಷ್ಟು ಜನವರಿ 6ರಂದೇ ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಗುವ ವಿಶ್ವಾಸವಿದೆ. 6 ಮತ್ತು 9 ಅವರ ಅದೃಷ್ಟ ಸಂಖ್ಯೆಗಳಾಗಿವೆ. ಹಾಗಾಗಿ 6ನೇ ತಾರೀಖೇ ಅವರಿಗೆ ಅಧಿಕಾರ ಸಿಗಲಿದೆ," ಎಂದು ಭವಿಷ್ಯ ನುಡಿದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಬೇಕು ಎಂಬ ಒತ್ತಾಯಕ್ಕೆ ಪಕ್ಷದ ಹೈಕಮಾಂಡ್ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದು, ಬರುವ ಜನವರಿ 6ರಂದು ಅವರಿಗೆ 'ಸಿಎಂ ಪಟ್ಟಾಭಿಷೇಕ' ನೆರವೇರುವುದು ಬಹುತೇಕ ಖಚಿತ ಎಂದು ಶಾಸಕ ಹಾಗೂ ಡಿಕೆಶಿ ಅವರ ಆಪ್ತ ಎಚ್.ಎ. ಇಕ್ಬಾಲ್ ಹುಸೇನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶನಿವಾರ ರಾಮನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆ ವಿಷಯದ ಬಗ್ಗೆ ಸ್ಪಷ್ಟ ಹೇಳಿಕೆ ನೀಡಿದರು. "ಡಿ.ಕೆ. ಶಿವಕುಮಾರ್ ಅವರ ಹೋರಾಟ ಮತ್ತು ಪಕ್ಷಕ್ಕಾಗಿ ಪಟ್ಟಿರುವ ಶ್ರಮಕ್ಕೆ ಪ್ರತಿಫಲ ಸಿಗುವ ಸಮಯ ಬಂದಿದೆ. ಅವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಬೇಕು ಎಂಬುದು ನಮ್ಮೆಲ್ಲರ ಬೇಡಿಕೆಯಾಗಿದೆ," ಎಂದು ಅವರು ಹೇಳಿದರು.
ಅದೃಷ್ಟ ಸಂಖ್ಯೆ '6' ಮತ್ತು '9'
ದಿನಾಂಕದ ಬಗ್ಗೆ ನಿರ್ದಿಷ್ಟವಾಗಿ ಮಾತನಾಡಿದ ಇಕ್ಬಾಲ್ ಹುಸೇನ್, "ಶೇ. 99ರಷ್ಟು ಜನವರಿ 6ರಂದೇ ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಗುವ ವಿಶ್ವಾಸವಿದೆ. 6 ಮತ್ತು 9 ಅವರ ಅದೃಷ್ಟ ಸಂಖ್ಯೆಗಳಾಗಿವೆ. ಹಾಗಾಗಿ 6ನೇ ತಾರೀಖೇ ಅವರಿಗೆ ಅಧಿಕಾರ ಸಿಗಲಿದೆ," ಎಂದು ಭವಿಷ್ಯ ನುಡಿದರು.
ಬಣ ರಾಜಕೀಯದ ನಿರಾಕರಣೆ
ಯತೀಂದ್ರ ಸಿದ್ದರಾಮಯ್ಯ ಅವರು ನಾಯಕತ್ವ ಬದಲಾವಣೆ ಇಲ್ಲ ಎಂದು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, "ಯಾರು ಏನೇ ಹೇಳಲಿ, ರಾಜ್ಯದ ಜನರು ಮತ್ತು ಈ ಭಾಗದ ಶಾಸಕರು ಡಿಕೆಶಿಗೆ ಅವಕಾಶ ನೀಡುವಂತೆ ಕೇಳಿಕೊಂಡಿದ್ದೇವೆ. ನಮ್ಮಲ್ಲಿ ಯಾವುದೇ ಬಣಗಳಿಲ್ಲ. ಸಿದ್ದರಾಮಯ್ಯ ಮತ್ತು ಶಿವಕುಮಾರ್ ಇಬ್ಬರೂ ರಾಜ್ಯದ ಆಸ್ತಿ," ಎಂದು ಸ್ಪಷ್ಟಪಡಿಸಿದರು.
"ನಮ್ಮಲ್ಲಿ 140 ಜನ ಶಾಸಕರಿದ್ದಾರೆ. ಇಲ್ಲಿ ಸಂಖ್ಯಾಬಲದ ಪ್ರಶ್ನೆ ಬರುವುದಿಲ್ಲ. ಕಾಂಗ್ರೆಸ್ ಶಿಸ್ತಿನ ಪಕ್ಷವಾಗಿದ್ದು, ಅಂತಿಮವಾಗಿ ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ," ಎಂದು ಅವರು ಹೇಳಿದರು.

