kogilu encroachment | Congress is turning the state into a mini Bangladesh: R. Ashok alleges
x

ಕೋಗಿಲು ಕ್ರಾಸ್‌ ಒತ್ತುವರಿಯಾದ ಜಾಗಕ್ಕೆ ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌ ನೇತೃತ್ವದ ಬಿಜೆಪಿ ನಾಯಕರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೋಗಿಲು ಕ್ರಾಸ್‌ ಒತ್ತುವರಿ| ರಾಜ್ಯವನ್ನು ಮಿನಿ ಬಾಂಗ್ಲಾದೇಶ ಮಾಡುತ್ತಿರುವ ಕಾಂಗ್ರೆಸ್: ಆರ್. ಅಶೋಕ್ ಆರೋಪ

ನೆರೆಯಿಂದ ರಾಜ್ಯದಲ್ಲಿ 13 ಸಾವಿರ ಮನೆಗಳು ಬಿದ್ದಿವೆ. ಅವರಿಗಿನ್ನೂ ಸೂರು ಕೊಟ್ಟಿಲ್ಲ. 2.400 ಶಾಲೆಗಳ ಮೇಲ್ಛಾವಣಿಗಳು ಹಾರಿ ಹೋಗಿವೆ. ಅವರಿಗೆ ವ್ಯವಸ್ಥೆ ಮಾಡದೇ ಮರದ ಕೆಳಗೆ ಪಾಠ ಮಾಡುವ ಸ್ಥಿತಿಯಿದೆ ಎಂದು ಆರ್‌.ಅಶೋಕ್‌ ತಿಳಿಸಿದರು.


Click the Play button to hear this message in audio format

ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿರುವ ಕೋಗಿಲು ಕ್ರಾಸ್‌ ಒತ್ತುವರಿ ಪ್ರಕರಣ ಇದೀಗ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದ್ದು, ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಮಿನಿ ಬಾಂಗ್ಲಾದೇಶವನ್ನು ನಿರ್ಮಿಸುತ್ತಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.

ಒತ್ತುವರಿ ಹಿನ್ನೆಲೆಯಲ್ಲಿ ಅಕ್ರಮವಾಗಿ ವಾಸವಿದ್ದವರನ್ನು ತೆರವುಗೊಳಿಸಿದ ಯಲಹಂಕದ ಕೋಗಿಲು ಬಡಾವಣೆಗೆ ಬುಧವಾರ ಭೇಟಿ ನೀಡಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಬಂದ ಬಳಿಕ ರಾಜ್ಯವು ಮಿನಿ ಬಾಂಗ್ಲಾದೇಶೀಯರ ತಾಣವಾಗುತ್ತಿದೆ. ಇವರು ಯಾರು, ಎಲ್ಲಿಂದ ಬಂದರು ? ಗೂಗಲ್ ಮ್ಯಾಪ್‍ನಲ್ಲಿ ಒಂದು ವರ್ಷದ ಹಿಂದೆ ಈ ಜಾಗದಲ್ಲಿ ಮನೆಗಳಿರಲಿಲ್ಲ. ಈಗ ಮನೆಗಳಿವೆ. ಇವರೆಲ್ಲ ಬಂದು ಆರು ತಿಂಗಳಾಗಿಲ್ಲ. ಇವರಿಗೆಲ್ಲ ವಿದ್ಯುತ್ ಸಂಪರ್ಕ ಕೊಟ್ಟದ್ದು ಹೇಗೆ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಸುಮಾರು 4 ಲಕ್ಷ ಜನರು ಅನಧಿಕೃತ ಮನೆ ಎಂಬ ಕಾರಣಕ್ಕೆ ವಿದ್ಯುತ್ ಸಂಪರ್ಕವಿಲ್ಲದೇ ಬದುಕುತ್ತಿದ್ದಾರೆ. ತೆರಿಗೆದಾರರು ವಿದ್ಯುತ್ ಸಂಪರ್ಕವಿಲ್ಲದೇ ಜೀವನ ಸಾಗಿಸುತ್ತಿದ್ದರೆ, ಇಲ್ಲಿ ದುಬಾರಿ ಮೊತ್ತದ ಕೇಬಲ್ ಸಂಪರ್ಕ ಮಾಡಿ ವಿದ್ಯುತ್ ಬಳಸುತ್ತಿದ್ದಾರೆ. ಇವರೇನು ಸಿದ್ದರಾಮಯ್ಯನವರ ನೆಂಟರೇ ? ಇವರೆಲ್ಲ ಆಂಧ್ರದ ಪೆನುಗೊಂಡದಿಂದ ಬಂದವರೆಂದು ಹೇಳುತ್ತಾರೆ. 28 ವರ್ಷದವರು ಎನ್ನುತ್ತಾರೆ. 25-26 ವರ್ಷದಿಂದ ವಾಸವಿದ್ದರೆ 2 ವರ್ಷಕ್ಕೆ ಹೇಗೆ ಇಲ್ಲಿಗೆ ಆಗಮಿಸಿದರು ಎಂದರು.

ಆರ್‌. ಅಶೋಕ್‌ ಮನೆ ತೆರವುಗೊಳಿಸಿರುವ ಜಾಗ ಪರಿಶೀಲನೆ ನಡೆಸಿದರು.

2,400 ಶಾಲೆಗಳಿಗೆ ಮೇಲ್ಛಾವಣಿಯಿಲ್ಲ

ಇದು ಸುಮಾರು 600 ಕೋಟಿ ರೂ. ಬೆಲೆಯ ಜಮೀನು. ಇದನ್ನು ಸರ್ಕಾರ ಯಾವ ಕಾನೂನಿನಡಿ ಕೊಡಲಿದೆ ? ನೆರೆಯಿಂದ ರಾಜ್ಯದಲ್ಲಿ 13 ಸಾವಿರ ಮನೆಗಳು ಬಿದ್ದಿವೆ. ಅವರಿಗಿನ್ನೂ ಸೂರು ಕೊಟ್ಟಿಲ್ಲ. 2.400 ಶಾಲೆಗಳ ಮೇಲ್ಛಾವಣಿಗಳು ಹಾರಿ ಹೋಗಿವೆ. ಅವರಿಗೆ ವ್ಯವಸ್ಥೆ ಮಾಡದೇ ಮರದ ಕೆಳಗೆ ಪಾಠ ಮಾಡುವ ಸ್ಥಿತಿ ಇದೆ. ಇವರಿಗೆ ಪಟಾಪಟ್ ಎಂದು ಎರಡೇ ದಿನಗಳಲ್ಲಿ ಬಹುಮಹಡಿ ಮನೆಗಳಲ್ಲಿ ಜಾಗ ಕೊಡುತ್ತಿದ್ದಾರೆ. ಹೊಸ ವರ್ಷಕ್ಕೆ ಬಾಂಗ್ಲಾದೇಶದವರಿಗೆ ಉಡುಗೊರೆ ಕೊಡುತ್ತಾರೆ. ಕನ್ನಡಿಗರಿಗೆ ಏನು ಕೊಡುತ್ತೀರಿ? ಚಿಪ್ಪು ಕೊಡುತ್ತಿದ್ದೀರಾ ಎಂದು ವಾಗ್ದಾಳಿ ನಡೆಸಿದರು.

ಪ್ರಕರಣವನ್ನು ಎನ್‍ಐಎಗೆ ಒಪ್ಪಿಸಲಿ

ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಕೇರಳ ಸಿಎಂ ಪಿಣರಾಯಿ ವಿಜಯನ್ ತಮ್ಮ ಸಂಸದರನ್ನು ಕಳಿಸಿದ ಬಳಿಕ ರಾಜ್ಯ ಸರ್ಕಾರ ತನ್ನ ನಿರ್ಧಾರವನ್ನು ಬದಲಿಸಿ ಮನೆಗಳನ್ನು ನೀಡಲು ಸಿದ್ಧವಾಗಿದೆ. ಇಲ್ಲಿದ್ದ ಬಾಂಗ್ಲಾದೇಶೀಯರನ್ನು ಸಚಿವರೇ ಬಂದು ಸ್ಥಳಾಂತರ ಮಾಡಿದ್ದಾರೆ ಎಂದು ಕೆಲವರು ಆರೋಪಿಸಿದ್ದಾರೆ. ಈ ಪ್ರಕರಣವನ್ನು ಎನ್‍ಐಎಗೆ ಒಪ್ಪಿಸಿ ಮೂಲದಾಖಲೆ ಪರಿಶೀಲನೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

ರಾಜ್ಯದ 38 ಲಕ್ಷ ಜನರು ಅರ್ಜಿ ಸಲ್ಲಿಸಿ ಮನೆಗೆ ಕಾಯುತ್ತಿದ್ದಾರೆ. ಬೆಂಗಳೂರಿನಲ್ಲಿ 40 ಕಡೆ ಅಕ್ರಮ ಮನೆಗಳ ತೆರವು ಮಾಡಿದ್ದು, ಒಬ್ಬರಿಗೂ ಮನೆ ಕೊಟ್ಟಿಲ್ಲ. ಬಡವರಾದ ಅವರಿಗೆಲ್ಲ ಮನೆ ಕೊಡದೇ ಇವರಿಗೇನು ವಿಶೇಷ? ಅವರಿಗೂ ಮನೆ ಕೊಡಿ ಎಂದು ತಿಳಿಸಿದರು.

ಬಾಂಗ್ಲಾದೇಶೀಯರಲ್ಲ ಎಂದು ಮುಚ್ಚಿ ಹಾಕುವ ಯತ್ನ

ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಮಾತನಾಡಿ, ಬೆಂಗಳೂರಿನ ಸುರಕ್ಷತೆಗೆ ಧಕ್ಕೆಯಾಗುತ್ತಿದೆ. ಇವರು ಬಾಂಗ್ಲಾದೇಶೀಯರಲ್ಲ ಎಂದು ಮುಚ್ಚಿ ಹಾಕುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ. ಬಾಂಗ್ಲಾದೇಶೀಯರನ್ನು ಪತ್ತೆ ಹಚ್ಚಿ ಈ ದೇಶದಿಂದ ಹೊರ ಹಾಕುವ ಕೆಲಸವಾಗಬೇಕು. ಇಲ್ಲಿ ಮಲೆಯಾಳಿಗಳು ಇಲ್ಲದಿದ್ದರೂ ಕೇರಳದ ನಾಯಕರು ಇಲ್ಲಿಗೆ ಆಗಮಿಸಿದ್ದರು. ಇಲ್ಲಿ ವಸೀಂ ನಗರ, ಫಕೀರ್ ನಗರಗಳಿವೆ. ವಸೀಂ ಸ್ವಾತಂತ್ರ್ಯ ಹೋರಾಟಗಾರರೇ ಎಂದು ಪ್ರಶ್ನಿಸಿದರು.

Read More
Next Story