
ಕೋಗಿಲು ಸಂತ್ರಸ್ತರಿಗೆ ಸರ್ಕಾರದಿಂದ ವಸತಿ ಭಾಗ್ಯ; ಆದರೂ ಷರತ್ತುಗಳಿವೆ...
ಉದ್ಯೋಗಕ್ಕಾಗಿ ನಗರಕ್ಕೆ ವಲಸೆ ಬರುವ ಅನೇಕರು, ಬೇರೆಡೆ ಸ್ವಂತ ಮನೆಗಳಿದ್ದರೂ ಸರ್ಕಾರಿ ಜಾಗದಲ್ಲಿ ಗುಡಿಸಲುಗಳನ್ನು ನಿರ್ಮಿಸಿಕೊಂಡಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಹೀಗಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಲಿದೆ.
ಯಲಹಂಕದ ಕೋಗಿಲು ತ್ಯಾಜ್ಯ ವಿಲೇವಾರಿ ಜಾಗದಲ್ಲಿ ನಡೆದ ಒತ್ತುವರಿ ತೆರವು ಕಾರ್ಯಾಚರಣೆಯಿಂದ ಸಂಕಷ್ಟಕ್ಕೀಡಾದ ಸಂತ್ರಸ್ತರ ಪುನರ್ವಸತಿಗೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ, ಸಂತ್ರಸ್ತರಿಗೆ ರಾಜೀವ್‌ಗಾಂಧಿ ವಸತಿ ನಿಗಮದಡಿ ಮನೆಗಳನ್ನು ನೀಡಲು ತೀರ್ಮಾನಿಸಲಾಗಿದೆ.
ಕೋಗಿಲು ಬಡಾವಣೆ ಅಕ್ರಮ ನಿರ್ಮಾಣ ತೆರವು ಸಂಬಂಧ ಕಾವೇರಿಯಲ್ಲಿ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಸತಿ ಸಚಿವ ಜಮೀರ್ ಅಹ್ಮದ್ ಖಾನ್, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಸುದೀರ್ಘವಾಗಿ ಚರ್ಚೆ ನಡೆಸಿದ ಬಳಿಕ ಅರ್ಹ ಫಲಾನುಭವಿಗಳಿಗೆ ರಾಜೀವ್‌ಗಾಂಧಿ ವಸತಿ ನಿಗಮದಡಿ ಮನೆಗಳನ್ನು ನೀಡುವ ಕುರಿತು ತೀರ್ಮಾನಿಸಲಾಗಿದೆ.
ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ನೈಜ ಫಲಾನುಭವಿಗಳನ್ನು ಗುರುತಿಸುವ ಕೆಲಸ ಮಾಡಲಾಗುವುದು. ಉದ್ಯೋಗದ ನಿಮಿತ್ತ ನಗರಕ್ಕೆ ವಲಸೆ ಬರುವ ಅನೇಕರು, ಬೇರೆಡೆ ಸ್ವಂತ ಮನೆಗಳಿದ್ದರೂ ನಗರದ ಸರ್ಕಾರಿ ಜಾಗಗಳಲ್ಲಿ ಗುಡಿಸಲುಗಳನ್ನು ನಿರ್ಮಿಸಿಕೊಂಡಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ, ಪ್ರತಿಯೊಬ್ಬ ಸಂತ್ರಸ್ತನ ಆಧಾರ್ ಕಾರ್ಡ್ ಮತ್ತು ಮೂಲ ದಾಖಲೆಗಳನ್ನು ಪರಿಶೀಲಿಸಲು ನಿರ್ಧರಿಸಲಾಗಿದೆ. ಇದು ಕೇವಲ ಪುನರ್ವಸತಿ ಪ್ರಕ್ರಿಯೆಯಲ್ಲ, ಬದಲಾಗಿ ಸರ್ಕಾರದ ಸೌಲಭ್ಯಗಳು ದುರುಪಯೋಗವಾಗದಂತೆ ತಡೆಯುವ ಶಿಸ್ತುಬದ್ಧ ಕ್ರಮವಾಗಿದೆ ಎಂದು ತಿಳಿಸಿದರು.
ವಸತಿಹೀನರಿಗೆ ಸೂರು ಕಲ್ಪಿಸುವ ಭರವಸೆಯ ಜೊತೆಗೆ, ಈ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಭದ್ರತೆಗೆ ಸರ್ಕಾರ ಆದ್ಯತೆ ನೀಡಿದೆ. ಯಾರಿಗೆ ನಿಜವಾಗಿಯೂ ವಾಸಕ್ಕೆ ಮನೆ ಇಲ್ಲವೊ ಅವರಿಗೆ ಮುಖ್ಯಮಂತ್ರಿಗಳ 1 ಲಕ್ಷ ವಸತಿ ಯೋಜನೆಯಲ್ಲಿ ಮನೆ ನೀಡಲಾಗುವುದು. ಇದಕ್ಕೆ ಅವರು ಒಂದೂವರೆಯಿಂದ ಎರಡು ಲಕ್ಷ ಹಣ ಪಾವತಿಸಬೇಕು. ಇದಕ್ಕೆ ಸಾಲ ಸೌಲಭ್ಯ ಕಲ್ಪಿಸುವ ಜವಾಬ್ದಾರಿಯನ್ನು ವಸತಿ ಸಚಿವ ಜಮೀರ್ ಅಹ್ಮದ್ ಅವರಿಗೆ ವಹಿಸಲಾಗಿದೆ. ನಾವು ಮನೆ ನೀಡುವ ಮುನ್ನ, ಅವರು ಯಾರು, ಎಲ್ಲಿಂದ ಬಂದಿದ್ದಾರೆ ಎಂದೆಲ್ಲಾ ಆಧಾರ್ ಹಾಗೂ ಇತರೆ ದಾಖಲೆ ಪರಿಶೀಲಿಸುತ್ತೇವೆ. ಅಲ್ಲಿಯವರೆಗೆ ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು. ಮಾನವೀಯತೆ ದೃಷ್ಟಿಯಿಂದ ಸರ್ಕಾರ ಈ ತೀರ್ಮಾನ ಕೈಗೊಂಡಿದೆ ಎಂದು ತಿಳಿಸಿದರು.
ಸಂತ್ರಸ್ತರು ಎಲ್ಲಿಂದ ಬಂದಿದ್ದಾರೆ ಮತ್ತು ಅವರ ಹಿನ್ನೆಲೆ ಏನು ಎಂಬ ಬಗ್ಗೆ ದಾಖಲೆಗಳ ಪರಿಶೀಲನೆ ನಡೆಸಲಾಗುವುದು. ನಗರದ ಭದ್ರತೆಯ ದೃಷ್ಟಿಯಿಂದ ಮತ್ತು ಅಕ್ರಮ ವಲಸಿಗರನ್ನು ಗುರುತಿಸುವ ನಿಟ್ಟಿನಲ್ಲಿ ಈ ಕ್ರಮ ಅನಿವಾರ್ಯವಾಗಿದೆ. ಪುನರ್ವಸತಿ ಕಲ್ಪಿಸುವ ಮುನ್ನ ಪೂರ್ಣ ಪ್ರಮಾಣದ ತನಿಖೆ ನಡೆಸುವುದರಿಂದ ಭವಿಷ್ಯದಲ್ಲಿ ಉಂಟಾಗಬಹುದಾದ ಕಾನೂನು ತೊಡಕುಗಳನ್ನು ತಡೆಯಬಹುದು .ದಾಖಲೆಗಳ ಪರಿಶೀಲನೆ ಮತ್ತು ಮನೆ ಹಂಚಿಕೆಯ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಸಂತ್ರಸ್ತರನ್ನು ಬೀದಿಗೆ ಹಾಕದೆ, ಅವರಿಗೆ ತಾತ್ಕಾಲಿಕ 'ಪರ್ಯಾಯ ವ್ಯವಸ್ಥೆ' ಕಲ್ಪಿಸಲು ಸರ್ಕಾರ ಮುಂದಾಗಿದೆ. ಮಾನವೀಯತೆ ದೃಷ್ಟಿಯಿಂದ ಸರ್ಕಾರ ಈ ತೀರ್ಮಾನ ಕೈಗೊಂಡಿದೆ ಎಂದು ಹೇಳಿದರು.
ಸಂತ್ರಸ್ತರಿಗೆ ಬೈಯ್ಯಪ್ಪನಹಳ್ಳಿಯಲ್ಲಿ ಮನೆಗಳು: ಸಿಎಂ
ತ್ಯಾಜ್ಯ ವಿಲೇವಾರಿ ಜಾಗದಲ್ಲಿ 167 ಅಕ್ರಮ ಶೆಡ್‌ಗಳ ತೆರವುಗೊಳಿಸಿದ ಸರ್ಕಾರ, ನೈಜ ಸಂತ್ರಸ್ತರಿಗೆ ಸಮೀಪದ ಬೈಯ್ಯಪ್ಪನಹಳ್ಳಿಯ ಬಹುಮಹಡಿ ಕಟ್ಟಡದಲ್ಲಿ ಮನೆಗಳನ್ನು ಹಂಚುವ ತೀರ್ಮಾನ ಕೈಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಕಾವೇರಿ’ಯಲ್ಲಿ ನಡೆದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಡಿಸೆಂಬರ್ 20ರಂದು ನೋಟಿಸ್ ನೀಡಿದ ನಂತರ ತೆರವುಗೊಳಿಸಲಾಯಿತು ಎಂದರು.
ಕಸ್ ವಿಲೇವಾರಿ ಉದ್ದೇಶಕ್ಕೆ 15 ಎಕರೆ ಜಮೀನು (ಬಂಡೆ ಕ್ವಾರಿ ಸಹ) ಪಾಲಿಕೆಗೆ ಹಸ್ತಾಂತರವಾಗಿತ್ತು. 2020-21ರಿಂದ ನಡೆದ ಒತ್ತುವರಿಗೆ ಕಂದಾಯ ಇಲಾಖೆ, ತಹಶಿಲ್ದಾರರು, ಶಿರಸ್ಥೆದಾರರು ಗಮನಿಸದಿರುವುದನ್ನು ಖಂಡಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುತ್ತೇವೆ ಎಂದು ಸಿಎಂ ಎಚ್ಚರಿಸಿದರು. ವಸತಿ ಸಚಿವ ಜಮೀರ್ ಅಹ್ಮದ್ ಖಾನ್, ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಅವರನ್ನು ಸ್ಥಳಕ್ಕೆ ಕಳುಹಿಸಿದ್ದರು; ಡಿಸಿಎಂ ಡಿ.ಕೆ. ಶಿವಕುಮಾರ್ ಇಂದು ಭೇಟಿ ನೀಡಿದ್ದಾರೆ.
ಬೈಯ್ಯಪ್ಪನಹಳ್ಳಿ ಸರ್ವೇ ನಂ.23ರಲ್ಲಿ 1,087 ಮನೆಗಳಿವೆ (ಕೋಗಿಲುನಿಂದ 7 ಕಿ.ಮೀ. ದೂರ). ಒಂದು ಮನೆಗೆ 11.20 ಲಕ್ಷ ರೂಪಾಯಿ ವೆಚ್ಚ; ರಾಜ್ಯ-ಕೇಂದ್ರ ಸಬ್ಸಿಡಿ ಹಾಗೂ ಜಿಬಿಎಯ 5 ಲಕ್ಷ ರೂಪಾಯಿ ನೆರವಿನೊಂದಿಗೆ ಜನರಲ್ ವರ್ಗಕ್ಕೆ 2.5 ಲಕ್ಷ ರೂಪಾಯಿ, ಎಸ್‌ಸಿಎಸ್‌ಟಿಗೆ 1.70 ಲಕ್ಷ ರೂಪಾಯಿ ಸಾಲ. ಎರಡು ದಿನಗಳಲ್ಲಿ ಅರ್ಹರ ಪಟ್ಟಿ ತಯಾರಿಸಿ, ಜನವರಿ 1ರಂದು ಮನೆಗಳು ಹಂಚುವ ಜವಾಬ್ದಾರಿ ಜಮೀರ್ ಅಹ್ಮದ್ ಅವರಿಗೆ. ಕೆ.ಸಿ. ವೇಣುಗೋಪಾಲ್, ಶಾಸಕ ಕೃಷ್ಣ ಬೈರೇಗೌಡ ಅವರೊಂದಿಗೆ ಚರ್ಚಿಸಿ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿದ್ದರೂ ನಿವಾಸಿಗಳು ಸಹಕರಿಸಿಲ್ಲ.
ಯಾವುದೇ ಸರ್ಕಾರಿ ಜಾಗದಲ್ಲಿ ಒತ್ತುವರಿ ಆಗದಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟು ಸೂಚನೆ ನೀಡಿದ್ದೇನೆ; ಒಂದು ಮನೆ ಕಟ್ಟಿದರೆ ಅವರೇ ಹೊಣೆಗಾರರು ಎಂದು ಸ್ಪಷ್ಟಪಡಿಸಿ, 1 ಲಕ್ಷ ಮನೆ ಯೋಜನೆಯೇ ಬಡವರ ಸೂರಿಗೆಂದು ಮಾನವೀಯತೆ ದೃಷ್ಟಿಯಿಂದ ಪರ್ಯಾಯ ವ್ಯವಸ್ಥೆ ಮಾಡುತ್ತೇವೆ ಎಂದರು. ಇದು ಒಂದು ಪ್ರಕರಣಕ್ಕೆ ಮಾತ್ರ; ಇನ್ನುಮುಂದೆ ಕಠಿಣ ಕ್ರಮ ಎಂದು ಎಚ್ಚರಿಕೆ ನೀಡಿದ್ದಾರೆ.

