
ಸಂಸತ್ ಕಲಾಪದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿದರು.
ಸಂಸತ್ತಿನಲ್ಲಿ ರಾಜ್ಯದ ಧ್ವನಿಯಾದ ಈರಣ್ಣ ಕಡಾಡಿ: ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಮೆಚ್ಚುಗೆ
ಸಕ್ಕರೆ ರಫ್ತಿಗೆ ಸಕಾಲದಲ್ಲಿ ಅನುಮತಿ ನೀಡಬೇಕು ಮತ್ತು ಎಥೆನಾಲ್ ಉತ್ಪಾದನೆಯ ಪ್ರಮಾಣವನ್ನು ಹೆಚ್ಚಿಸಬೇಕು ಎಂಬ ರಾಜ್ಯ ಸರ್ಕಾರದ ಬೇಡಿಕೆಗಳನ್ನೇ ಸಂಸದ ಕಡಾಡಿ ಅವರು ಸಂಸತ್ತಿನಲ್ಲಿ ಪ್ರಸ್ತಾಪಿಸಿದ್ದಾರೆ.
ಕಬ್ಬು ಬೆಳೆಗಾರರ ಸಂಕಷ್ಟದ ಕುರಿತು ಸಂಸತ್ ಕಲಾಪದಲ್ಲಿ ಧ್ವನಿ ಎತ್ತಿ, ಕೇಂದ್ರ ಸರ್ಕಾರದ ಗಮನ ಸೆಳೆದ ಬಿಜೆಪಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರ ನಡೆಗೆ ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಬ್ಬು ಬೆಳೆಗಾರರ ಸಮಸ್ಯೆಯನ್ನು ರಾಜಕೀಯವಾಗಿ ಬಳಸಿಕೊಳ್ಳದೆ, ವಾಸ್ತವ ಸಂಗತಿಗಳನ್ನು ಸದನದ ಮುಂದಿಟ್ಟ ಕಡಾಡಿ ಅವರ ಕ್ರಮ ಸ್ವಾಗತಾರ್ಹವಾಗಿದ್ದು, ರಾಜ್ಯ ಸರ್ಕಾರವನ್ನು ಟೀಕಿಸುವ ಬಿಜೆಪಿ ನಾಯಕರು ಇದನ್ನು ಗಮನಿಸಬೇಕು ಎಂದು ಸಚಿವರು ಹೇಳಿದ್ದಾರೆ.
ಸಕ್ಕರೆ ಎಂಎಸ್‌ಪಿ (ಕನಿಷ್ಠ ಬೆಂಬಲ ಬೆಲೆ) ಹೆಚ್ಚಳ ಮಾಡಬೇಕು, ಸಕ್ಕರೆ ರಫ್ತಿಗೆ ಸಕಾಲದಲ್ಲಿ ಅನುಮತಿ ನೀಡಬೇಕು ಮತ್ತು ಎಥೆನಾಲ್ ಉತ್ಪಾದನೆಯ ಪ್ರಮಾಣವನ್ನು ಹೆಚ್ಚಿಸಬೇಕು ಎಂಬ ರಾಜ್ಯ ಸರ್ಕಾರದ ಬೇಡಿಕೆಗಳನ್ನೇ ಸಂಸದ ಕಡಾಡಿ ಅವರು ಸಂಸತ್ತಿನಲ್ಲಿ ಪ್ರಸ್ತಾಪಿಸಿದ್ದಾರೆ. ಕೇಂದ್ರ ಸರ್ಕಾರವು ಕಬ್ಬಿನ ಎಫ್‌ಆರ್‌ಪಿ (ನ್ಯಾಯಯುತ ಮತ್ತು ಲಾಭದಾಯಕ ಬೆಲೆ) ಹೆಚ್ಚಿಸಿದೆಯಾದರೂ, 2019ರಿಂದ ಸಕ್ಕರೆಯ ಎಂಎಸ್‌ಪಿಯನ್ನು ಪರಿಷ್ಕರಿಸಿಲ್ಲ. ಈ ಅಂಶವನ್ನು ಕಡಾಡಿ ಅವರು ಎತ್ತಿ ಹಿಡಿದಿರುವುದು ರಾಜ್ಯದ ರೈತರ ಹಿತದೃಷ್ಟಿಯಿಂದ ಮಹತ್ವದ್ದಾಗಿದೆ ಎಂದು ಶಿವಾನಂದ ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.
ಬದ್ಧತೆಗೆ ಧನ್ಯವಾದ
ಕಬ್ಬು ಬೆಳೆಗಾರರ ಹೋರಾಟದ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಕರೆದಿದ್ದ ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ರೈತ ಮುಖಂಡರ ಸಭೆಯಲ್ಲಿಯೂ ಈರಣ್ಣ ಕಡಾಡಿ ಭಾಗವಹಿಸಿದ್ದರು. ಆ ಸಂದರ್ಭದಲ್ಲಿಯೂ ರಾಜಕಾರಣ ಮಾಡದೆ, ಕೇಂದ್ರ ಸರ್ಕಾರ ಕೈಗೊಳ್ಳಬೇಕಾದ ನಿರ್ಧಾರಗಳ ಬಗ್ಗೆ ಮುಖ್ಯಮಂತ್ರಿಗಳು ವ್ಯಕ್ತಪಡಿಸಿದ ಅಭಿಪ್ರಾಯಕ್ಕೆ ಅವರು ಸಹಮತ ಸೂಚಿಸಿದ್ದರು. ಈಗ ಸಂಸತ್ತಿನಲ್ಲೂ ಅದೇ ಬದ್ಧತೆಯನ್ನು ಪ್ರದರ್ಶಿಸಿರುವುದಕ್ಕೆ ಅವರಿಗೆ ಧನ್ಯವಾದ ಸಲ್ಲಿಸುವುದಾಗಿ ಸಚಿವರು ತಿಳಿಸಿದ್ದಾರೆ.
ವೇಳೆ ರಾಜ್ಯ ಸರ್ಕಾರದ ವಿರುದ್ಧದ ಟೀಕೆಗಳಿಗೆ ಉತ್ತರಿಸಿದ ಸಚಿವರು, ಸರ್ಕಾರ ಸಕ್ಕರೆ ಉದ್ಯಮದ ಲಾಬಿಗೆ ಮಣಿದಿದೆ ಎಂಬ ಬಿಜೆಪಿ ನಾಯಕರ ಆರೋಪದಲ್ಲಿ ಹುರುಳಿಲ್ಲ ಎಂದು ತಿರುಗೇಟು ನೀಡಿದರು. ಒಂದು ವೇಳೆ ಲಾಬಿಗೆ ಮಣಿದಿದ್ದರೆ, ಕಳೆದ ಹಂಗಾಮಿಗಿಂತ ಈ ಬಾರಿ ಪ್ರತಿ ಟನ್ ಕಬ್ಬಿಗೆ 300 ರೂ. ಹೆಚ್ಚುವರಿ ದರ ಕೊಡಿಸಲು ಸಾಧ್ಯವಾಗುತ್ತಿತ್ತೇ ಎಂದು ಪ್ರಶ್ನಿಸಿದರು. ಕೇಂದ್ರ ಸರ್ಕಾರವು ಈರಣ್ಣ ಕಡಾಡಿ ಅವರು ಮುಂದಿಟ್ಟಿರುವ ಬೇಡಿಕೆಗಳನ್ನು ಈಡೇರಿಸಿದರೆ, ರೈತರಿಗೆ ಇನ್ನಷ್ಟು ಉತ್ತಮ ಬೆಲೆ ನೀಡಲು ಮತ್ತು ಸಕ್ಕರೆ ಉದ್ಯಮವನ್ನು ಉಳಿಸಲು ಸಾಧ್ಯವಾಗುತ್ತದೆ ಎಂದು ಶಿವಾನಂದ ಪಾಟೀಲ್ ಪ್ರತಿಪಾದಿಸಿದ್ದಾರೆ.

