Opposition Leader R. Ashok is guaranteed an opposition seat for BJP if he does not change
x

ಸಚಿವ ಎಂ.ಬಿ. ಪಾಟೀಲ್‌ ಹಾಗೂ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌

ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌ ಬದಲಾಯಿಸದಿದ್ದರೆ ಬಿಜೆಪಿಗೆ ವಿರೋಧ ಪಕ್ಷ ಸ್ಥಾನವೇ ಗ್ಯಾರಂಟಿ

2019ರಲ್ಲಿನ ವರದಿಯಂತೆ ಉಪ ಲೋಕಾಯುಕ್ತರು ರಾಜ್ಯದಲ್ಲಿ ಶೇ.61ರಷ್ಟು ಭ್ರಷ್ಟಾಚಾರವಿದೆ ಎಂದು ಹೇಳಿದ್ದರು. ಆದರೆ ಇದನ್ನು ತಿಳಿಯದೆ ಆರ್‌. ಅಶೋಕ್‌ ಸರ್ಕಾರದ ವಿರುದ್ಧ ಹೇಳಿಕೆ ನೀಡಿರುವುದು ಹಾಸ್ಯಸ್ಪದ ಎಂದು ಸಚಿವ ಎಂ.ಬಿ. ಪಾಟೀಲ್‌ ಹೇಳಿದ್ದಾರೆ.


Click the Play button to hear this message in audio format

ಬಿಜೆಪಿಯ ಹೈಕಮಾಂಡ್‌ ವಿಧಾನಸಭಾ ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌ ಅವರನ್ನು ಆದಷ್ಟು ಬೇಗ ಬದಲಾಯಿಸಬೇಕು. ಇಲ್ಲದಿದ್ದರೆ ಬಿಜೆಪಿ ಶಾಶ್ವತವಾಗಿ ವಿರೋಧ ಪಕ್ಷದ ಸ್ಥಾನದಲ್ಲಿ ಕೂರುವುದು ಗ್ಯಾರಂಟಿ ಎಂದು ಸಚಿವ ಎಂ.ಬಿ. ಪಾಟೀಲ್‌ ವ್ಯಂಗ್ಯವಾಡಿದ್ದಾರೆ.

ಶುಕ್ರವಾರ(ಡಿ.5) ಕೆಐಎಡಿಬಿಯ ನೂತನ ಕೇಂದ್ರ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, 2019ರಲ್ಲಿನ ವರದಿಯಂತೆ ಉಪ ಲೋಕಾಯುಕ್ತರು ರಾಜ್ಯದಲ್ಲಿ ಶೇ.61ರಷ್ಟು ಭ್ರಷ್ಟಾಚಾರವಿದೆ ಎಂದು ಹೇಳಿದ್ದರು. ಆದರೆ ಇದ್ಯಾವುದನ್ನು ಅರಿಯದ ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಅಜ್ಞಾನದಿಂದ, ಬೇಜವಬ್ದಾರಿಯುತವಾಗಿ ಹೇಳಿಕೆ ನೀಡಿರುವುದು ಹಾಸ್ಯಸ್ಪದ. ಆದಷ್ಟು ಬೇಗ ಆರ್‌. ಅಶೋಕ್‌ ಅವರನ್ನು ಬದಲಾವಣೆ ಮಾಡಬೇಕು ಎಂದು ತಿಳಿಸಿದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನ ಚರ್ಚೆಯಾಗಿಲ್ಲ

ಪಕ್ಷದಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಪ್ರಾಥಮಿಕ ಹಂತದಲ್ಲಿ ಯಾವುದೇ ಚರ್ಚೆಯಾಗಿಲ್ಲ. ಅಧ್ಯಕ್ಷ ಸ್ಥಾನದ ಕುರಿತು ಹೈಕಮಾಂಡ್‌ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಆತ್ಮೀಯರ ಮದುವೆ ಸಮಾರಂಭಕ್ಕೆ ಹೋಗಿದ್ದಾಗ ಡಿಸಿಎಂ ಡಿ.ಕೆ. ಶಿವಕುಮಾರ್‌ ಭೇಟಿಯಾಗಿ, ಜೊತೆಯಲ್ಲಿ ಊಟ ಮಾಡಿದ್ದೇವೆ. ಆನಂತರ ಅವರು ಬೇರೆ ಕಾರ್ಯಕ್ರಮಕ್ಕೆ ಹೋದರು. ನಾವು ನಮ್ಮ ಮನೆಗೆ ಬಂದೆವು. ಪ್ರತ್ಯೇಕವಾಗಿ 15 ನಿಮಿಷ ಮಾತನಾಡಿರಬಹುದು. ಆದರೆ ಯಾವುದೇ ರಾಜಕೀಯ ಚರ್ಚೆಗಳು ನಡೆದಿಲ್ಲ ಎಂದರು.

ಮಾಲೂರು ಜೆಡಿಎಸ್‌ ನಾಯಕರು ಕಾಂಗ್ರೆಸ್‌ಗೆ

ಮಾಲೂರಿನ ಜೆಡಿಎಸ್ ನಾಯಕರು ಈ ಮೊದಲು ನಮ್ಮ ಪಕ್ಷದ ಸಂಘಟನೆ ಜೊತೆ ಗುರುತಿಸಿಕೊಂಡಿದ್ದರು. ಮಧ್ಯ ಬಿಟ್ಟು ಹೋಗಿದ್ದರು ಮತ್ತೆ ವಾಪಸ್ ಬಂದಿದ್ದಾರೆ. ಅವರು ನಮ್ಮ ಸಂಘಟನೆಯಲ್ಲಿ ಇವತ್ತಿಗೂ ಕೆಲಸ ಮಾಡುತ್ತಿದ್ದಾರೆ. ಶಾಸಕರು ನಮ್ಮ ಪಕ್ಷಕ್ಕೆ ಸೇರಿಸುವ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.

ಅವಿಶ್ವಾಸ ನಿರ್ಣಯದಿಂದ ಯಾವುದೇ ಪ್ರಯೋಜನ ಇಲ್ಲ

ಸಿಎಂ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಗುರುವಾರ(ಡಿ.5) ಸಚಿವರ ಸಭೆ ನಡೆಸಿದ್ದು, ಬೆಳಗಾವಿ ಅಧಿವೇಶನದಲ್ಲಿ ಏನೇನು ಮಾಡಬೇಕು ಎಂದು ತಿಳಿಸಿದ್ದಾರೆ. ಸಚಿವರು, ಶಾಸಕರು ಕಡ್ಡಾಯವಾಗಿ ಇರಬೇಕು ಅಂತ ಹೇಳಿದ್ದಾರೆ. ಬಿಜೆಪಿಯವರು ಅವಿಶ್ವಾಸ ನಿರ್ಣಯ ಮಂಡಿಸುವುದರಿಂದ ಏನು ಪ್ರಯೋಜನವಾಗುವುದಿಲ್ಲ. ಸಿಎಂ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ನಡುವಿನ ಕದನ ವಿರಾಮ ತಾತ್ಕಾಲಿಕವೋ ಪೂರ್ಣಾವಧಿಯೋ ಗೊತ್ತಿಲ್ಲ. ನಮ್ಮ ಪ್ರಕಾರ ಕದನ ನಿಂತಿದೆ. ಹೈಕಮಾಂಡ್‌ ಹೇಳಿಕೆಗೆ ಬದ್ಧವಾಗಿರಬೇಕು ಎಂಬುದು ಸಿಎಂ ಹಾಗೂ ಡಿಸಿಎಂಗೆ ಅನ್ವಯಿಸುತ್ತದೆ. ನಮಗೆ ಅನ್ವಯಿಸುವುದಿಲ್ಲ ಎಂದರು.

ಪಕ್ಷದ ಹೈಕಮಾಂಡ್ ನಾಯಕರು ನಾಯಕತ್ವದ ಗೊಂದಲ ಕುರಿತು ಒಂದು ಹಂತಕ್ಕೆ ತರುವ ಪ್ರಯತ್ನ ಮಾಡಿದ್ದಾರೆ. ಹೀಗಿರುವಾಗ ಕೆಲವು ನಾಯಕರು ವ್ಯತಿರಿಕ್ತ ಹೇಳಿಕೆ ಕೊಡಬಾರದು ಎಂದು ಮಿಥುನ್ ರೈ ಹಾಗೂ ಐವಾನ್ ಡಿಸೋಜಾಗೆ ಎಐಸಿಸಿ ನೋಟಿಸ್ ನೀಡಿರುವುದನ್ನು ಸಮರ್ಥಿಸಿಕೊಂಡರು.

ಡಿಸಿಎಂ ಬಿಟ್ಟೇ ಕಾರ್ಯಕ್ರಮ ಉದ್ಘಾಟಿಸಿದ ಸಿಎಂ

ರಾಜ್ಯ ಸರ್ಕಾರದ ಎಲ್ಲಾ ಕಾರ್ಯಕ್ರಮಗಳನ್ನೂ ಜೊತೆಯಾಗಿಯೇ ಉದ್ಘಾಟಿಸುತ್ತಿದ್ದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌, ಶುಕ್ರವಾರ(ಡಿ.5) ಕೆಐಎಡಿಬಿಯ ನೂತನ ಕೇಂದ್ರ ಕಚೇರಿ ಉದ್ಘಾಟಿಸುವ ವೇಳೆ ಒಟ್ಟಿಗೆ ಕಾಣಿಸಿಕೊಳ್ಳಲಿಲ್ಲ. ಕಾರ್ಯಕ್ರಮಕ್ಕೆ ಮೊದಲೇ ಆಗಮಿಸಿದ ಸಿಎಂ ಸಿದ್ದರಾಮಯ್ಯ, ಮಂಡ್ಯಕ್ಕೆ ಪ್ರವಾಸ ಕೈಗೊಳ್ಳಬೇಕಾದ ಕಾರಣದಿಂದ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರನ್ನು ಬಿಟ್ಟೇ ನೂತನ ಕಟ್ಟಡವನ್ನು ಉದ್ಘಾಟಿಸಿದರು. ನಂತರ ಆಗಮಿಸಿದ ಡಿ.ಕೆ.ಶಿವಕುಮಾರ್‌ ಸಿಎಂ ಇಷ್ಟು ಬೇಗ ಹೋದರೆ ಎಂದು ಪ್ರಶ್ನಿಸಿದ್ದು, ಸಿಎಂ ಹಾಗೂ ಡಿಸಿಎಂ ನಡುವೆ ಮತ್ತೆ ಅಂತರ ಏರ್ಪಟ್ಟಿದೆ ಎಂಬ ಗೊಂದಲ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

Read More
Next Story