
Internal Reservation| ಒಳ ಮೀಸಲಾತಿ ರಕ್ಷಣೆಗೆ ಮಸೂದೆ: ಅಲೆಮಾರಿಗಳ ಪಾಲಿಗೆ ಮತ್ತೆ ಗೊಂದಲ
ಒಳ ಮೀಸಲಾತಿ ಸಂಬಂಧ ನಾಗಮೋಹನ್ ದಾಸ್ ಆಯೋಗ ಹೇಳಿದ್ದೊಂದು, ಸರ್ಕಾರ ಮಾಡಿದ್ದೊಂದು! ತನ್ನ ನಿರ್ಧಾರ ಸಮರ್ಥಿಸಿಕೊಳ್ಳಲು ಮಸೂದೆ ಜಾರಿ. ಅಂತೂ ಗೊಂದಲವೋ ಗೊಂದಲ!
ಒಳ ಮೀಸಲಾತಿಗೆ ಕಾನೂನಿನ ಬಲ ತುಂಬಲು ರಾಜ್ಯ ಸರ್ಕಾರವು ʼಕರ್ನಾಟಕ ಅನುಸೂಚಿತ ಜಾತಿಗಳ ಉಪ ವರ್ಗೀಕರಣ ಮಸೂದೆʼ ಅಂಗೀಕರಿಸಿದೆ. ನ್ಯಾ. ನಾಗಮೋಹನ್ ದಾಸ್ ಆಯೋಗದ ವರದಿ ಆಧರಿಸಿ ಹಂಚಿಕೆ ಮಾಡಿರುವ 6:6:5 ಮೀಸಲಾತಿ ಸೂತ್ರದಂತೆಯೇ ಮಸೂದೆ ಮಂಡನೆ ಮಾಡಿ, ಅಂಗೀಕಾರ ಪಡೆದಿದೆ. ಇದರ ಬೆನ್ನಲ್ಲೇ ಅಲೆಮಾರಿಗಳಿಂದ ಪ್ರಬಲ ವಿರೋಧ ವ್ಯಕ್ತವಾಗಿದೆ.
ಅಲೆಮಾರಿಗಳಿಗೆ ಒಳ ಮೀಸಲಾತಿಯಲ್ಲೇ ಪರೋಕ್ಷವಾಗಿ ಮತ್ತೊಂದು ಒಳ ಮೀಸಲು ನೀಡುವ ಅಂಶವನ್ನು ಮಸೂದೆಯಲ್ಲಿ ಸೇರಿಸಿದರೂ ಸರ್ಕಾರದ ಕಸರತ್ತು ಅಲೆಮಾರಿಗಳಲ್ಲಿ ಸಂಭ್ರಮ ತಂದಿಲ್ಲ, ಬದಲಾಗಿ ಆಕ್ರೋಶ ಹೆಚ್ಚಿಸಿದೆ.
ʼಪ್ರವರ್ಗ-ಸಿʼ ಗುಂಪಿನಲ್ಲಿ 59 ಅಲೆಮಾರಿ ಜಾತಿಗಳನ್ನು ಒಳಗೊಂಡ 63 ಜಾತಿಗಳಿಗೆ ಶೇ5 ರಷ್ಟು ಮೀಸಲಾತಿ ಒದಗಿಸಲಾಗಿದೆ. ಈ ಮೀಸಲಾತಿ ಪ್ರಕಾರ ʼಪ್ರವರ್ಗ ಸಿʼ ಗುಂಪಿಗೆ ಹಂಚಿಕೆಯಾಗುವ ಐದು ಹುದ್ದೆಗಳಲ್ಲಿ ಒಂದು ಹುದ್ದೆಯನ್ನು ಅಲೆಮಾರಿಗಳಿಗೆ ತೆಗೆದಿರಿಸಬೇಕು. ಒಂದು ವೇಳೆ ಆ ಸಮುದಾಯಗಳಲ್ಲಿ ಹುದ್ದೆಗೆ ಅರ್ಹರಾದವರು ಇಲ್ಲದಿದ್ದ ಪಕ್ಷದಲ್ಲಿ ಅದನ್ನು ಸ್ಪೃಶ್ಯ ಸಮುದಾಯಗಳಿಗೆ ವರ್ಗಾಯಿಸಬಹುದಾಗಿದೆ. ಸ್ಪೃಶ್ಯ ಜಾತಿಗಳನ್ನು ಓಲೈಸಲು ಸರ್ಕಾರ ಅನುಸರಿಸಿದ ಈ ವಾಮಮಾರ್ಗವು ಅಲೆಮಾರಿಗಳ ಕಣ್ಣು ಕೆಂಪಾಗಿಸಿದೆ.
ಅಲೆಮಾರಿಗಳಲ್ಲಿ ತಣಿಯದ ಆಕ್ರೋಶ
ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೆ ಕಾನೂನು ಬಲ ತುಂಬುವ ಪ್ರಯತ್ನ ನಡೆಸಿದರೂ ಅಲೆಮಾರಿಗಳು ಕ್ಯಾರೆ ಎನ್ನುತ್ತಿಲ್ಲ. ಸರ್ಕಾರದ ಕಣ್ಣೊರೆಸುವ ತಂತ್ರಕ್ಕೆ ಆಕ್ರೋಶ ಹೊರಹಾಕಿರುವ ಅಲೆಮಾರಿ ಸಮುದಾಯದ ನಾಯಕರು, ಯಾವುದೇ ಮಸೂದೆ, ಕಾಯ್ದೆ ಕಟ್ಟಳೆಗಳನ್ನು ತಂದರೂ ಸುಪ್ರೀಂಕೋರ್ಟ್ ತೀರ್ಪಿನಡಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮುಂದುವರಿಸುತ್ತೇವೆ. ಪ್ರತ್ಯೇಕ ಮೀಸಲಾತಿ ನೀಡದ ಹೊರತು ಹೋರಾಟ ನಿಲ್ಲುವುದಿಲ್ಲ ಎಂದು ಕಡ್ಡಿಮುರಿದಂತೆ ಹೇಳಿರುವುದು ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಮಸೂದೆ ಜಾರಿಗೂ ಮುನ್ನವೇ ವಿಘ್ನ ಎದುರಾದಂತಾಗಿದೆ.
ನ್ಯಾ. ನಾಗಮೋಹನ್‌ದಾಸ್ ಆಯೋಗದ ವರದಿಯಂತೆ ಮೀಸಲಾತಿ ನೀಡಬೇಕೆಂಬುದು ನಮ್ಮ ಒತ್ತಾಯ. ಒಂದು ವೇಳೆ ಈಗಿರುವ ʼಪ್ರವರ್ಗ –ಸಿʼ ಗುಂಪಿನಲ್ಲೇ ಅಲೆಮಾರಿಗಳನ್ನು ಪ್ರವರ್ಗ-ಸಿ(ಎ) ಎಂದು ವರ್ಗೀಕರಿಸಿ ಮೀಸಲಾತಿ ನೀಡಿದರೆ ನಮ್ಮ ಅಭ್ಯಂತರವಿಲ್ಲ. ಶೇ 1 ರಷ್ಟು ಪ್ರತ್ಯೇಕ ಮೀಸಲಾತಿ ನೀಡದ ಹೊರತು ನಾವು ಹೋರಾಟದಿಂದ ಸರಿಯುವ ಪ್ರಶ್ನೆಯೇ ಇಲ್ಲ. ಶೇ 1 ರಷ್ಟು ಮೀಸಲಾತಿಯಿಂದ ಯಾವುದೇ ಪ್ರಯೋಜನ ಇರುವುದಿಲ್ಲ ಎಂದಾದರೆ ಎಡಗೈ ಹಾಗೂ ಬಲಗೈ ಸಮುದಾಯಗಳು ತಲಾ ಅರ್ಧದಷ್ಟು ಮೀಸಲಾತಿ ಒದಗಿಸಿ, ಅಲೆಮಾರಿಗಳ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಅಲೆಮಾರಿ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಸಣ್ಣ ಮಾರಪ್ಪ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ರಾಜ್ಯ ಸರ್ಕಾರ ಅಲೆಮಾರಿಗಳಿಗೆ ಪ್ರತ್ಯೇಕವಾಗಿ ಮೀಸಲಾತಿ ನೀಡದ ಹೊರತು ನಾವು ಕಾನೂನು ಹೋರಾಟ ನಿಲ್ಲಿಸುವುದಿಲ್ಲ. ಈಗಾಗಲೇ ದೆಹಲಿ, ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರೂ ಸರ್ಕಾರಗಳು ನಮ್ಮ ಹೋರಾಟಕ್ಕೆ ಸೊಪ್ಪು ಹಾಕಿಲ್ಲ. ನಮಗೆ ನ್ಯಾಯಾಲಯದಲ್ಲೇ ಪರಿಹಾರ ಸಿಗಲಿದೆ. ಅದಕ್ಕಾಗಿ ಹೋರಾಟ ಮುಂದುವರಿಸುತ್ತೇವೆ ಎಂದು ಹೇಳಿದರು.
ವಿಧೇಯಕದಲ್ಲಿ ಏನಿದೆ?
101 ಪರಿಶಿಷ್ಟ ಜಾತಿಗಳಲ್ಲಿ ಆದಿ ದ್ರಾವಿಡ, ಆದಿ ಆಂಧ್ರ, ಆದಿ ಕರ್ನಾಟಕ 3 ಜಾತಿಗಳನ್ನು ಹೊರತುಪಡಿಸಿ 98 ಜಾತಿಗಳನ್ನು ಮೂರು ಪ್ರವರ್ಗಗಳಿಗೆ ವರ್ಗೀಕರಣ ಮಾಡಿ ಮೀಸಲಾತಿ ಹಂಚಿಕೆ ಮಾಡಲಾಗಿದೆ.
ಎಡಗೈ, ಬಲಗೈ ಮತ್ತು ಸ್ಪೃಶ್ಯ ಸಮುದಾಯಗಳಿಗೆ ಕ್ರಮವಾಗಿ ಶೇ.6, ಶೇ.6, ಮತ್ತು ಶೇ.5 ಮೀಸಲಾತಿ ನೀಡುವ ಮೂಲಕ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಲಾಗಿದೆ. ನಿವೃತ್ತ ನ್ಯಾ.ನಾಗಮೋಹನದಾಸ್ ಆಯೋಗದ ವರದಿಯ ಶಿಫಾರಸುಗಳ ಆಧಾರದ ಮೇಲೆ ಈ ವಿಧೇಯಕ ರೂಪಿಸಲಾಗಿದೆ.
ರಾಜ್ಯ ಸರ್ಕಾರದ ಆಗಸ್ಟ್ 2025ರ ಆದೇಶವನ್ನು ಕಾನೂನುಬದ್ಧಗೊಳಿಸಿ, ಮೂರು ದಶಕಗಳ ಒಳ ಮೀಸಲಾತಿ ಬೇಡಿಕೆಗೆ ನ್ಯಾಯ ಒದಗಿಸುವುದು, ಆಯೋಗಕ್ಕೆ ಹೊಸ ದತ್ತಾಂಶದ ಆಧಾರದ ಮೇಲೆ ಮೀಸಲಾತಿ ಪರಿಷ್ಕರಣೆಗೆ ಅಧಿಕಾರ ನೀಡುವುದು ತಿದ್ದುಪಡಿ ಕಾಯ್ದೆಯಲ್ಲಿದೆ.
ಒಳ ಮೀಸಲಾತಿ ಕಾರಣಕ್ಕೆ ತಡೆ ಹಿಡಿದಿರುವ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ (ಡಿಪಿಎಆರ್) ನೆರವಾಗಲಿದೆ. ಎಲ್ಲ ಇಲಾಖೆಗಳು ಮತ್ತು ಅವುಗಳ ಅಧೀನದ ಎಲ್ಲ ನಿಗಮ, ಮಂಡಳಿ, ಸಂಸ್ಥೆಗಳಲ್ಲಿ ಮುಂಬಡ್ತಿ ಪ್ರಕ್ರಿಯೆಗೆ ಹಸಿರು ನಿಶಾನೆ ಸಿಗಲಿದೆ.
ಹೆಚ್ಚಳವಾಗದ ಒಟ್ಟು ಮೀಸಲಾತಿ
ಬೆಳಗಾವಿ ಅಧಿವೇಶನದಲ್ಲಿ ಪರಿಶಿಷ್ಟ ಜಾತಿಗಳ ಒಟ್ಟು ಮೀಸಲಾತಿಯನ್ನು ಶೇ 17 ರಿಂದ 18 ಕ್ಕೆ ಹೆಚ್ಚಿಸಿ ಶೇ1 ಮೀಸಲಾತಿಯನ್ನು ಅಲೆಮಾರಿಗಳಿಗೆ ಒದಗಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿತ್ತು. ಆದರೆ, ಹೈಕೋರ್ಟ್ನಲ್ಲಿ ಪರಿಶಿಷ್ಟ ಜಾತಿ, ಪಂಗಡದ ಒಟ್ಟು ಮೀಸಲಾತಿ ಏರಿಕೆಗೆ ತಡೆ ಇರುವ ಹಿನ್ನೆಲೆಯಲ್ಲಿ ಪ್ರಸ್ತಾಪ ಕೈ ಬಿಟ್ಟು ಈಗಿರುವ ಶೇ 17 ರಷ್ಟು ಮೀಸಲಾತಿಯಲ್ಲೇ ಅಲೆಮಾರಿಗಳಿಗೆ ನ್ಯಾಯ ಒದಗಿಸುವ ಕಸರತ್ತು ನಡೆಸಿದೆ.
ಮೂಗಿಗೆ ತುಪ್ಪ ಸವರುವ ಕೆಲಸ
ಅಲೆಮಾರಿಗಳಿಗೆ ಐದು ಹುದ್ದೆಗಳಲ್ಲಿ ಒಂದು ಹುದ್ದೆಯನ್ನು ಮೀಸಲಿಡಲು ಪ್ರಸ್ತಾಪಿಸಿರುವ ಅನುಸೂಚಿತ ಜಾತಿಗಳ ಉಪ ವರ್ಗೀಕರಣ ವಿಧೇಯಕವು ಮೂಗಿಗೆ ತುಪ್ಪ ಸವರುವ ಪ್ರಯತ್ನವಾಗಿದೆ. ಈಗಾಗಲೇ ರೋಸ್ಟರ್ ಬಿಂದುಗಳನ್ನು ನೀಡಲಾಗಿದೆ. ಯಾವುದೇ ನೇಮಕಾತಿ ಪ್ರಕ್ರಿಯೆಯಲ್ಲಿ ಒಳ ಮೀಸಲಾತಿಗೆ ಅನುಗುಣವಾಗಿ ಹುದ್ದೆ ಹಂಚಿಕೆ ಮಾಡುವಾಗ ನಾಲ್ಕು ಹಂತಗಳನ್ನು ದಾಟಿ ಐದನೇ ಹಂತದಲ್ಲಿ ಅಲೆಮಾರಿಗಳಿಗೆ ಬರಲಾಗುತ್ತಿದೆ. ಉದಾಹರಣೆಗೆ ನೇಮಕಾತಿಯಲ್ಲಿ 100 ಹುದ್ದೆಗಳ ಪರಿಶಿಷ್ಟ ಜಾತಿಗಳಿಗೆ ಮೀಸಲಾದರೆ ನಾಲ್ಕು ಹಂತಗಳಲ್ಲಿ ವರ್ಗೀಕರಣವಾಗಿ ಉಳಿದರೆ ಅಲೆಮಾರಿಗಳಿಗೆ ಸಿಗುತ್ತದೆ. ಆಗೊಮ್ಮೆ ಸಿಕ್ಕರೂ ಒಂದೆರಡು ಹುದ್ದೆ ಮಾತ್ರ ಸಿಗಲಿದೆ. ಜನಸಂಖ್ಯೆಗೆ ಅನುಗುಣವಾದ ಪ್ರಾತಿನಿಧ್ಯ ಸಿಗುವುದಿಲ್ಲ. ಹಾಗಾಗಿ ಸರ್ಕಾರ ಮಸೂದೆಯನ್ನು ವಿರೋಧಿಸುತ್ತೇವೆ ಎಂದು ಅಲೆಮಾರಿ ಸಮುದಾಯದ ಮುಖಂಡ ಹಾಗೂ ಹೈಕೋರ್ಟ್ ವಕೀಲ ಎಚ್.ಸಿ. ಮಂಜುನಾಥ್ ಅವರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಒಟ್ಟು ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದ ಪ್ರಕರಣ ಜ.21ರಂದು ವಿಚಾರಣೆಗೆ ಬರಲಿದೆ. ಜ.30ಕ್ಕೆ ಒಳ ಮೀಸಲಾತಿಗೆ ಸಂಬಂಧಿಸಿ ಅಲೆಮಾರಿಗಳು ಸಲ್ಲಿಸಿರುವ ಅರ್ಜಿ ವಿಚಾರಣೆ ಇದೆ. ಮೀಸಲಾತಿ ಹೆಚ್ಚಳದ ಆದೇಶ ನೋಡಿಕೊಂಡು ನಾವು ಸಲ್ಲಿಸಿರುವ ರಿಟ್ ಅರ್ಜಿಯನ್ನು ತಿದ್ದುಪಡಿ ಮಾಡಿ ಸಲ್ಲಿಸುತ್ತೇವೆ. ಮಸೂದೆ ಜಾರಿಗೂ ಬಿಡುವುದಿಲ್ಲ ಎಂದು ಎಚ್ಚರಿಸಿದರು.
2025 ಆಗಸ್ಟ್ ತಿಂಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನ್ಯಾ. ನಾಹಮೋಹನ್ ದಾಸ್ ನೇತೃತ್ವದ ಆಯೋಗವು ಒಳ ಮೀಸಲಾತಿ ವರದಿ ಸಲ್ಲಿಸಿತ್ತು. ಪರಿಶಿಷ್ಟ ಜಾತಿಯ 101 ಉಪ ಪಂಗಡಗಳಿಗೆ ಸಾಮಾಜಿಕ, ಆರ್ಥಿಕ ಹಿಂದುಳಿದಿರುವಿಕೆ ಆಧಾರದ ಮೇಲೆ 5 ಗುಂಪುಗಳನ್ನಾಗಿ ವಿಂಗಡಿಸಿ, ಪ್ರತಿ ವರ್ಗಕ್ಕೆ ವೈಜ್ಞಾನಿಕವಾಗಿ ಮೀಸಲಾತಿ ಹಂಚಿಕೆ ಮಾಡಿತ್ತು.
ಆ ಪ್ರಕಾರ ಅತಿ ಹಿಂದುಳಿದ ಸಮುದಾಯಗಳಿರುವ ಪ್ರವರ್ಗ-ಎ ಗೆ ಕ್ಕೆ ಶೇ 1 ರಷ್ಟು ಮೀಸಲಾತಿ, ಪ್ರವರ್ಗ -ಬಿ(ಎಡಗೈ) ಗೆ ಶೇ. 6, ಪ್ರವರ್ಗ -ಸಿ( ಬಲಗೈ)ಗೆ ಶೇ.5 , ಪ್ರವರ್ಗ-ಡಿ( ಸ್ಪೃಶ್ಯ)ಗೆ ಶೇ 4 ಹಾಗೂ ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಆದಿ ಆಂಧ್ರ ಜಾತಿಗಳ ಪ್ರವರ್ಗ -ಇ ಗೆ ಶೇ1 ರಷ್ಟು ಮೀಸಲಾತಿ ಒದಗಿಸಿತ್ತು. ರಾಜ್ಯ ಸರ್ಕಾರ ಈ ಶಿಫಾರಸುಗಳನ್ನು ಮಾರ್ಪಡಿಸಿ ಮೂರು ಗುಂಪುಗಳನ್ನು ರಚಿಸಿತ್ತು. ಅಲೆಮಾರಿ ಶೇ 1 ಮೀಸಲಾತಿಯನ್ನು ಸ್ಪೃಶ್ಯ ಜಾತಿಗಳಿಗೆ ಸೇರಿಸಿತ್ತು.ಆದಿ ಕರ್ನಾಟಕ, ಆದಿ ಆಂಧ್ರ ಹಾಗೂ ಆದಿ ದ್ರಾವಿಡ ಜಾತಿಗಳ ಶೇ 1ಮೀಸಲಾತಿಯನ್ನು ಬಲಗೈ ಸಮುದಾಯಗಳಿರುವ ಪ್ರವರ್ಗ ಬಿಗೆ ಸೇರಿಸಿತ್ತು. ಆ ಮೂಲಕ ಮೂರು ಪ್ರವರ್ಗಗಳಿಗೆ 6:6:5 ಸೂತ್ರದಂತೆ ಮೀಸಲಾತಿ ಒದಗಿಸಿತ್ತು.

