
Reservation Part-1|ರಾಜ್ಯದಲ್ಲಿ ಇನ್ನೂ ಚಾಲ್ತಿಯಲ್ಲಿರೋದು ಶೇ.50 ಮೀಸಲಾತಿ? ಏನಿದು ಹೊಸ ಗೊಂದಲ!
ಚುನಾವಣೆ ಸಮಯದಲ್ಲಿ ʼವೋಟ್‌ಬ್ಯಾಂಕ್ʼ ಗಾಗಿ ಮೀಸಲಾತಿ ಹೆಚ್ಚಿಸಿದ ಹಿಂದಿನ ಬಿಜೆಪಿ ಸರ್ಕಾರದ ಆದೇಶವು ಕಡತಕ್ಕಷ್ಟೇ ಸೀಮಿತವಾಗಿದೆ. ಈಗಿನ ಕಾಂಗ್ರೆಸ್ ನೇತೃತ್ವದ ಸರ್ಕಾರ ಕೂಡ ಮೀಸಲಾತಿ ಹೆಚ್ಚಳ ಆದೇಶವನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ ನಡೆಸಿಲ್ಲ.
ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಮೀಸಲಾತಿ ಪ್ರಮಾಣ ಹೆಚ್ಚಿಸಿದರೂ ಅದರ ಲಾಭ ಸಮುದಾಯಗಳಿಗೆ ಸಿಗದಂತಾಗಿದೆ. ಮೀಸಲಾತಿ ಹೆಚ್ಚಳದಲ್ಲಿ ಸರ್ಕಾರಗಳ ʼರಾಜಕೀಯ ನಡೆʼಯಿಂದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳು ಮೀಸಲಾತಿ ಹೆಚ್ಚಳ ಲಾಭ ಕಾಣದೇ ಭ್ರಮನಿರಸನಗೊಂಡಿವೆ.
ಚುನಾವಣೆ ಸಮಯದಲ್ಲಿ ʼವೋಟ್‌ಬ್ಯಾಂಕ್ʼ ಗಾಗಿ ಮೀಸಲಾತಿ ಹೆಚ್ಚಿಸಿದ ಹಿಂದಿನ ಬಿಜೆಪಿ ಸರ್ಕಾರದ ಆದೇಶವು ಕಡತಕ್ಕಷ್ಟೇ ಸೀಮಿತವಾಗಿದೆ. ಈಗಿನ ಕಾಂಗ್ರೆಸ್ ನೇತೃತ್ವದ ಸರ್ಕಾರ ಕೂಡ ಮೀಸಲಾತಿ ಹೆಚ್ಚಳ ಆದೇಶವನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ ನಡೆಸಿಲ್ಲ. ಇದರ ಪರಿಣಾಮ, ಪರಿಶಿಷ್ಟರಿಗೆ ಹೆಚ್ಚುವರಿ ಮೀಸಲಾತಿಯ ಲಾಭ ಸಿಗದೇ ಹಳೆಯ ಮೀಸಲಾತಿ ಆಧಾರದಲ್ಲೇ ಸೌಲಭ್ಯ ಪಡೆಯುತ್ತಿದ್ದಾರೆ.
2023 ರ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಅಂದಿನ ಬಿಜೆಪಿ ಸರ್ಕಾರವು ಪರಿಶಿಷ್ಟ ಜಾತಿಯ ಒಟ್ಟು ಮೀಸಲಾತಿಯನ್ನು ಶೇ 15 ರಿಂದ 17ಕ್ಕೆ ಹೆಚ್ಚಿಸಿತು. ಪರಿಶಿಷ್ಟ ಪಂಗಡದವರ ಮೀಸಲಾತಿಯನ್ನು ಶೇ 3 ರಿಂದ 7 ಕ್ಕೆ ಹೆಚ್ಚಿಸಿತು. ಒಟ್ಟಾರೆ ಪರಿಶಿಷ್ಟರ ಶೇ 6 ರಷ್ಟು ಹೆಚ್ಚುವರಿ ಮೀಸಲಾತಿಗೆ ಸಂಬಂಧಿಸಿದಂತೆ ಬಿಜೆಪಿ ಸರ್ಕಾರವು ಬೆಳಗಾವಿ ಅಧಿವೇಶನದಲ್ಲಿ ಪ್ರತ್ಯೇಕ ವಿಧೇಯಕ ಮಂಡಿಸಿ, ಅನುಮೋದನೆ ಪಡೆದಿತ್ತು. ಜತೆಗೆ ಗೆಜೆಟ್ ಅಧಿಸೂಚನೆ ಸಹ ಹೊರಡಿಸಿತ್ತು.
ಇನ್ನೇನು ಚುನಾವಣೆಗೆ ಎರಡು ದಿನ ಬಾಕಿ ಇರುವಂತೆ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಮೀಸಲಾತಿ ವಿಧೇಯಕಕ್ಕೆ ಕಾನೂನು ಬಲ ನೀಡಲು ಸಂವಿಧಾನದ ಶೆಡ್ಯೂಲ್ 9ಕ್ಕೆ ಸೇರಿಸುವಂತೆ ಕೇಂದ್ರ ಸರ್ಕಾರವನ್ನು ಕೋರಲಾಯಿತು. 2023 ಮಾ.24 ರಂದು ಅಂದಿನ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಆದರೆ, ಪ್ರಸ್ತಾವನೆಯನ್ನು 9ನೇ ಶೆಡ್ಯೂಲ್‌ಗೆ ಸೇರಿಸಿರಲಿಲ್ಲ. ಹಾಗಾಗಿ, ಕರ್ನಾಟಕದ ಶೇ 56 ರಷ್ಟು ಮೀಸಲಾತಿಯು ನ್ಯಾಯಾಂಗದ ಪರಿಶೀಲನೆಗೆ ಒಳಪಟ್ಟಿದೆ.
ಸರ್ಕಾರಗಳು ಜನರಿಗೆ ಏನೇ ಆಶ್ವಾಸನೆ ನೀಡಿದರೂ ಉದ್ಯೋಗ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಈ ಹಿಂದಿನ ಮೀಸಲಾತಿಯೇ ಚಾಲ್ತಿಯಲ್ಲಿದೆ. ಶೇ 56 ರಷ್ಟು ಮೀಸಲಾತಿ ವಿಚಾರ ನ್ಯಾಯಾಲಯದಲ್ಲಿರುವ ಕಾರಣ ಹೊಸ ನೇಮಕಾತಿಗಳಿಗೆ ತಡೆ ನೀಡಲಾಗಿದೆ. ಇದರಿಂದ ಯುವ ಜನರು ಇನ್ನಷ್ಟು ದಿನಗಳ ಕಾಲ ಉದ್ಯೋಗ ನೇಮಕಾತಿಗಳಿಗೆ ಪರಿತಪಿಸಬೇಕಾಗಿದೆ.
ರಾಜ್ಯ ಸರ್ಕಾರಗಳು ರಾಜಕೀಯ ಲಾಭಕ್ಕಾಗಿ ಮೀಸಲಾತಿ ಹೆಚ್ಚಳ ಮಾಡಿದರೂ ಸಾಂವಿಧಾನಾತ್ಮಕ ರಕ್ಷಣೆ ಹಾಗೂ ಕಾನೂನು ಮಾನ್ಯತೆ ಇಲ್ಲದ ಹೊರತು ಯಾವುದೇ ಪ್ರಯೋಜನವಿಲ್ಲ. ಪರಿಷ್ಕೃತ ಮೀಸಲಾತಿಗೆ ಕಾನೂನು ರಕ್ಷಣೆ ಸಿಗಬೇಕಾದರೆ ಅದು ಸಂವಿಧಾನದ 9ನೇ ಶೆಡ್ಯೂಲ್‌ನಲ್ಲಿ ಸೇರ್ಪಡೆಯಾಗಬೇಕು. ಈ ರೀತಿ ಸೇರ್ಪಡೆಯಾಗಲು ಸಂಸತ್ತಿನಲ್ಲಿ ಪ್ರಸ್ತಾವನೆ ಅಂಗೀಕಾರಗೊಂಡು ರಾಷ್ಟ್ರಪತಿ ಒಪ್ಪಿಗೆ ಬೇಕಾಗುತ್ತದೆ.
ಸಂವಿಧಾನ ತಜ್ಞರು ಹೇಳುವುದೇನು?
ದೇಶದಲ್ಲಿ ಶಾಸನ ರೂಪಿಸುವವರ ಅದಕ್ಷತೆ, ಅಪ್ರಾಮಾಣಿಕ ಆಡಳಿತದಿಂದ ಮೀಸಲಾತಿಯು ಇತ್ತೀಚೆಗೆ ಪ್ರಾಮುಖ್ಯತೆ ಕಳೆದುಕೊಳ್ಳುತ್ತಿದೆ. ಸಂವಿಧಾನದ ಕಲಂ 15(4) ರಲ್ಲಿ ಶೈಕ್ಷಣಿಕ ಮೀಸಲಾತಿ, ಕಲಂ 16(4) ರಲ್ಲಿ ಉದ್ಯೋಗ ಮೀಸಲಾತಿ ನೀಡಲಾಗಿದೆ. ಕಲಂ 330 ಹಾಗೂ 330(2) ರಲ್ಲಿ ರಾಜಕೀಯ ಮೀಸಲಾತಿ ಒದಗಿಸಲಾಗಿದೆ.
"ಸಮುದಾಯಗಳ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಸ್ಥಿತಿಗತಿ ಗುರುತಿಸಿ ಆದ್ಯತೆ ನೀಡುವುದು ಸರ್ಕಾರದ ಪರಮಾಧಿಕಾರ. 1992 ರಲ್ಲಿ ಇಂದ್ರ ಸಾಹ್ನಿ ಪ್ರಕರಣದಲ್ಲಿ ಉಲ್ಲೇಖಿಸಿರುವ ಮೆರಿಟ್ ಪದದ ಅರ್ಥ ಯಾರಿಗೂ ಗೊತ್ತಿಲ್ಲ. ಪರಿಶಿಷ್ಟರ ನೇಮಕಾತಿಯಲ್ಲಿ ಮೆರಿಟ್ ಪಾಲನೆ ಯಾವ ರೀತಿ ಆಗಿದೆ ಎಂಬುದು ನ್ಯಾಯಾಲಯಗಳಿಗೂ ಗೊತ್ತಿದೆ ಎಂದು ಹೈಕೋರ್ಟ್ ವಕೀಲ ಶಿವರುದ್ರಪ್ಪ ಅವರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ಒಟ್ಟು ಮೀಸಲಾತಿ ಶೇ 50 ದಾಟಬಾರದು ಎಂದು ಸುಪ್ರೀಂಕೋರ್ಟ್ ಹೇಳಿದೆ. ಆದರೆ, ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಶೇ 10 ರಷ್ಟು ಮೀಸಲಾತಿ ಒದಗಿಸುವಾಗ ಸುಪ್ರೀಂಕೋರ್ಟ್ ಹಾಗೂ ಸಂಸತ್ತಿಗೆ ಮೀಸಲಾತಿ ಮಿತಿಯ ಅರಿವಿರಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಸೂಕ್ತ ಸಮರ್ಥನೆಯೇ ಪರಿಹಾರ
ರಾಜ್ಯ ಸರ್ಕಾರಗಳು ಪರಿಶಿಷ್ಟರ ಮತಗಳನ್ನು ಸೆಳೆಯುವ ಸಲುವಾಗಿ ಆತುರಾತುರವಾಗಿ ಮೀಸಲಾತಿ ಹೆಚ್ಚಿಸಿವೆ. ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಒದಗಿಸಿದ ಶೇ 6 ರಷ್ಟು ಮೀಸಲಾತಿಗೆ ಈಗ ನ್ಯಾಯಾಲಯ ತಕರಾರು ತೆಗೆದಿದೆ. ಮೀಸಲಾತಿ ಹೆಚ್ಚಳವನ್ನು ಸಮರ್ಥಿಸಿಕೊಳ್ಳಲು ತನ್ನ ಮುಂದೆಯೇ ಸಾಕಷ್ಟು ಉಲ್ಲೇಖಗಳಿವೆ. ಅವುಗಳಿಗೆ ರಾಜ್ಯ ಸರ್ಕಾರವು ಕಾನೂನು ತಜ್ಞರು ಸಲಹೆ ಪಡೆಯಬೇಕು. ಪವಿತ್ರಾ ಪ್ರಕರಣದಲ್ಲಿ ಐತಿಹಾಸಿಕ ತೀರ್ಪು ಬರುವಂತೆ ಶ್ರಮಿಸಿದವರಿದ್ದಾರೆ. ಅವರೊಂದಿಗೆ ಸಮಾಲೋಚನೆ ನಡೆಸಿ, ಸಲಹೆ ಪಡೆಯುವ ಮೂಲಕ ನ್ಯಾಯಾಲಯಕ್ಕೆ ಸಮರ್ಥನೆ ನೀಡಬೇಕು ಎಂದು ಹೈಕೋರ್ಟ್ ವಕೀಲ ಶಿವರುದ್ರಪ್ಪ ತಿಳಿಸಿದರು.
2017ರಲ್ಲಿ "ಬಿ.ಕೆ. ಪವಿತ್ರಾ ಮತ್ತು ಕೇಂದ್ರ ಸರ್ಕಾರ" ಪ್ರಕರಣದಲ್ಲಿ ಮೀಸಲಾತಿ ಆಧಾರಿತ ಬಡ್ತಿ ಮತ್ತು ಸೇವಾ ಹಿರಿತನಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿತ್ತು. ಕರ್ನಾಟಕದಲ್ಲಿ ಚಾಲ್ತಿಯಲ್ಲಿದ್ದ ಮೀಸಲಾತಿ ಕಾಯ್ದೆ 2002 ಮತ್ತು 2018 ರ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಸುಪ್ರೀಂಕೋರ್ಟ್ ಪರಿಶೀಲನೆಗೆ ಒಳಪಡಿಸಿತು.
ಆರಂಭದಲ್ಲಿ 2002 ರ ಮೀಸಲಾತಿ ಕಾಯ್ದೆಯನ್ನು ಅಸಾಂವಿಧಾನಿಕ ಎಂದು ಹೇಳಿ ಇಡೀ ಕಾಯ್ದೆಯಲ್ಲಿ ಅಮಾನತು ಮಾಡಿತು. ಆಗ 40ಸಾವಿರ ಪರಿಶಿಷ್ಟ ಜಾತಿಯವರ ಬಡ್ತಿಗೆ ಪೆಟ್ಟು ಬಿದ್ದಿತು. ಆಗ ಅಂದಿನ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿದ್ದ ರತ್ನಪ್ರಭಾ ನೇತೃತ್ವದಲ್ಲಿ ಸಮಿತಿ ರಚಿಸಿ ಅಧ್ಯಯನ ನಡೆಸಲಾಯಿತು. ಸಾಕಷ್ಟು ಸಲಹೆಗಳನ್ನು ನಾವು ನೀಡಿದೆವು. ಆ ವರದಿ ಆಧಾರದ ಮೇಲೆ 2018 ರಲ್ಲಿ ಹೊಸ ಮೀಸಲಾತಿ ಕಾಯ್ದೆ ರೂಪಿಸಲಾಯಿತು. ಆದರೂ, ಹೊಸ ಕಾಯ್ದೆಯ ಸಿಂಧುತ್ವವನ್ನು ಕೆಲವರು ಪ್ರಶ್ನಿಸಿದ್ದರು. ಸುಪ್ರೀಂಕೋರ್ಟ್ ನಾವು ನೀಡಿದ ಅಂಕಿ ಅಂಶಗಳ ಆಧಾರದ ಮೇಲೆ ಬಡ್ತಿಗಳಲ್ಲಿ ಮೀಸಲಾತಿ ನೀಡಿತು ಎಂದು ವಿವರಿಸಿದರು.
2018 ರ ಕಾಯ್ದೆಯ ಅನುಷ್ಠಾನಕ್ಕೆ ರತ್ನಪ್ರಭಾ ಸಮಿತಿ ಒದಗಿಸಿರುವ ಸಮರ್ಪಕ ದತ್ತಾಂಶ ಪರಿಗಣಿಸುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿತು. ಈಗ ಅದೇ ರೀತಿಯಲ್ಲಿ ಶೇ 56 ಮೀಸಲಾತಿಗೆ ಸರ್ಕಾರ ಸೂಕ್ತ ಸಮರ್ಥನೆ ಒದಗಿಸಿದರೆ ಹೆಚ್ಚುವರಿ ಮೀಸಲಾತಿಯ ಲಾಭ ಪರಿಶಿಷ್ಟರಿಗೆ ಸಿಗಲಿದೆ ಎಂದು ಶಿವರುದ್ರಪ್ಪ ಹೇಳಿದರು.
9ನೇ ಶೆಡ್ಯೂಲ್‌ಗೆ ಮೀಸಲಾತಿ ಹೆಚ್ಚಳ ಸೇರ್ಪಡೆ ಕಡ್ಡಾಯವೇನಲ್ಲ. ರಾಜಕಾರಣಿಗಳು ಅಜ್ಞಾನದ ಕೊರತೆಯಿಂದ ಇಂತಹ ವದಂತಿ ಹಬ್ಬಿಸುತ್ತಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಸುಪೀಂಕೋರ್ಟ್ ಶೇ 10 ರಷ್ಟು ಮೀಸಲಾತಿ ಒದಗಿಸುವ ಮೀಸಲಾತಿ ಮಿತಿಯ ಚರ್ಚೆಯಾಗಿಲ್ಲ. 9ನೇ ಶೆಡ್ಯೂಲ್‌ಗೆ ಸೇರಿಸುವುದರಿಂದ ಕಾನೂನು ಮಾನ್ಯತೆ ಹೊಂದಲಿದೆ ಎಂಬುದು ಸುಳ್ಳು. ತಮಿಳುನಾಡು ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿನ ಸಾಮಾಜಿಕ, ಶೈಕ್ಷಣಿಕ ಪರಿಸ್ಥಿತಿಗಳು ಬೇರೆ ಇದ್ದವು. ಹಾಗಾಗಿ ಆ ರಾಜ್ಯಗಳಲ್ಲಿ ಮೀಸಲಾತಿಯನ್ನು ಕಾನೂನಿನ ಪರಿಶೀಲನೆಗೆ ಅವಕಾಶ ಇಲ್ಲದಂತೆ 9ನೇ ಶೆಡ್ಯೂಲ್‌ಗೆ ಸೇರಿಸಲಾಯಿತು.
ಕರ್ನಾಟಕದಲ್ಲಿ ಹೆಚ್ಚುವರಿ ಮೀಸಲಾತಿ ಸಮರ್ಥಿಸಿಕೊಳ್ಳಲು ಪವಿತ್ರಾ ಪ್ರಕರಣವಿದೆ. ಆ ಪ್ರಕರಣದಲ್ಲಿ ಕಾರ್ಯ ನಿರ್ವಹಿಸಿರುವ ತಜ್ಞರ ಸಲಹೆ, ಅಭಿಪ್ರಾಯ ಪಡೆಯಬೇಕು. ಆದರೆ, ಸಿಎಂ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಅಂಟಿ ಕೂತಿದ್ದಾರೆ. ಅಗತ್ಯ ಸಮರ್ಥನೆ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಶಿವರುದ್ರಪ್ಪ ಒತ್ತಾಯಿಸಿದರು.
ರಾಜ್ಯ ಸರ್ಕಾರ ಸಾಮಾಜಿಕ ನ್ಯಾಯ ಪಾಲಿಸುವಲ್ಲಿ ಎಡವಿದೆ. ಪವಿತ್ರಾ ಪ್ರಕರಣದಲ್ಲಿ ಸತೀಶ್ ಜಾರಕಿಹೊಳಿ ಹಾಗೂ ಕಾಗೋಡು ತಿಮ್ಮಪ್ಪ ಅವರ ಕಾಳಜಿಯಿಂದಾಗಿ 2018 ರ ಮೀಸಲಾತಿ ಕಾಯ್ದೆ ಜಾರಿಯಾಯಿತು. ಆಗಲೂ ಸಿದ್ದರಾಮಯ್ಯ ಅವರು ಅಷ್ಟೇನು ಪ್ರೋತ್ಸಾಹ ನೀಡಿರಲಿಲ್ಲ. ಈಗ ಅವರೇ ಮುಖ್ಯಮಂತ್ರಿಯಾಗಿದ್ದಾರೆ. ಆದರೆ, ರಾಜ್ಯ ಸರ್ಕಾರ ತನ್ನ ವೈಫಲ್ಯಗಳನ್ನು ಆತ್ಮಾವಲೋಕನ ಮಾಡಿಕೊಳ್ಳುತ್ತಿಲ್ಲ. ಸಮಾಜ ಹಾಗೂ ಯುವಜನಾಂಗದ ಮೇಲೆ ಆಡಳಿತವು ಪ್ರತಿಕೂಟ ಪರಿಣಾಮ ಬೀರುತ್ತಿದೆ ಎಂದು ಕಿಡಿಕಾರಿದರು.
ಮೀಸಲಾತಿಗೆ ಮಿತಿಯೇ ಅಸಮಂಜಸ
"ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯ ಮೀಸಲಾತಿ ವ್ಯವಸ್ಥೆ ಇದೆ. ತಮಿಳುನಾಡಿನಲ್ಲಿ ಶೇ 69 ಇದ್ದರೆ, ಈಶಾನ್ಯ ರಾಜ್ಯಗಳಲ್ಲಿ ಶೇ 75 ರಷ್ಟಿದೆ. ಸಂವಿಧಾನದಲ್ಲಿ ಇಂತಿಷ್ಟೇ ಮೀಸಲಾತಿ ಇರಬೇಕೆಂದು ಎಲ್ಲಿಯೂ ನಿಗದಿಪಡಿಸಿಲ್ಲ. ಹಾಗಾಗಿ ಕರ್ನಾಟಕದ ಶೇ 56 ರಷ್ಟು ಮೀಸಲಾತಿಗೆ ನಿಯಂತ್ರಣ ಹಾಕುವಂತಿಲ್ಲ. ರಾಜ್ಯ ಸರ್ಕಾರ ಕಾನೂನು ಹೋರಾಟದ ಮೂಲಕ ಮನವರಿಕೆ ಮಾಡಿಕೊಡಬೇಕು ಎಂದು ಕರ್ನಾಟಕ ರಾಜ್ಯ ಎಸ್ಸಿ/ಎಸ್ಟಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರಯ್ಯ ಅವರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
1992 ರಲ್ಲಿ ಇಂದ್ರ ಸಾಹ್ನಿ ಹಾಗೂ ಕೇಂದ್ರ ಸರ್ಕಾರದ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ನ 9ಮಂದಿ ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು ಮೀಸಲಾತಿಯು ಶೇ 50ರ ಮಿತಿ ದಾಟುವಂತಿಲ್ಲ ಎಂದು ಹೇಳಿದೆ. ಆದರೆ, ಇದೇ ನ್ಯಾಯಾಲಯವು, ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ 10ರಷ್ಟು ಮೀಸಲಾತಿ ಒದಗಿಸಿದೆ. ಆಗ ಇಂದ್ರ ಸಾಹ್ನಿ ಪ್ರಕರಣವನ್ನು ಏಕೆ ಪರಿಗಣಿಸಿಲ್ಲ. 1992ರಿಂದ ದೇಶದ ಜನಸಂಖ್ಯೆ ಸಾಕಷ್ಟು ಬದಲಾಗಿದೆ. ಹೀಗಿರುವಾಗ ಮೀಸಲಾತಿಗೆ ಮಿತಿ ಹೇರುವುದು ಅಸಮಂಜಸ. ಮೀಸಲಾತಿ ವಿಚಾರದಲ್ಲಿ ಪರಿಶಿಷ್ಟರಿಗೊಂದು ನ್ಯಾಯ, ಮೇಲ್ವರ್ಗದವರಿಗೊಂದು ನ್ಯಾಯ ಎಂಬುದಿಲ್ಲ ಎಂದು ಹೇಳಿದರು.
ಕಾಂಗ್ರೆಸ್‌ನ ವಿಧಾನ ಪರಿಷತ್ ಮಾಜಿ ಸದಸ್ಯ ವಿ.ಎಸ್.ಉಗ್ರಪ್ಪ 'ದ ಫೆಡರಲ್ ಕರ್ನಾಟಕ' ದ ಜೊತೆ ಮಾತನಾಡಿ,ಪರಿಶಿಷ್ಟ ಜಾತಿ ಹಾಗೂ ಪಂಗಡಗಳಿಗೆ ಮೀಸಲಾತಿ ಹೆಚ್ಚಿಸಿರುವ ಕಾರಣ ಒಟ್ಟು ಮೀಸಲಾತಿ ಪ್ರಮಾಣ ಶೇ 56ಕ್ಕೆ ಏರಿಕೆಯಾಗಿದ್ದು, ನ್ಯಾಯಾಲಯದಲ್ಲಿದೆ. ಮೀಸಲಾತಿ ಹೆಚ್ಚಳದಿಂದ ಆಗಿರುವ ಅನುಕೂಲ ಅಷ್ಟಕ್ಕಷ್ಟೇ. ಮೀಸಲಾತಿ ಹೆಚ್ಚಳ ಸಾಕಷ್ಟು ಗೊಂದಲ ಸೃಷ್ಟಿಸಿದೆ. ಸರ್ಕಾರ ಹಾಗೂ ನ್ಯಾಯಾಲಯದಲ್ಲಿ ಮೀಸಲಾತಿ ಗೊಂದಲ ಮುಂದುವರಿದಿರುವ ಕಾರಣ ಪರಿಶಿಷ್ಟರ ಗೋಳು ಹೇಳತೀರದಾಗಿದೆ. ಇಲ್ಲಿ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎಂಬುದೇ ತಿಳಿಯದಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಕೂಡಲೇ ಶೇ 56 ಮೀಸಲಾತಿ ಕುರಿತಂತೆ ಮೇಲ್ಮನವಿ ಸಲ್ಲಿಸಿ, ಪರಿಶಿಷ್ಟರ ಉದ್ಯೋಗ ಹಾಗೂ ಶೈಕ್ಷಣಿಕ ಮೀಸಲಾತಿಗೆ ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದರು.

