
Reservation Part-3 | ಬೇರೆ ರಾಜ್ಯಗಳಲ್ಲಿ ಮಿತಿ ದಾಟಿದ ಮೀಸಲಾತಿಗೆ ಇದೆಯೇ ಕಾನೂನು ಬಲ?
ಮೀಸಲಾತಿ ಶೇ 50 ಮೀರದಂತೆ ಸುಪ್ರೀಂಕೋರ್ಟ್ 1992ರಲ್ಲಿ ಸ್ಪಷ್ಟ ತೀರ್ಪು ನೀಡಿದೆ. ತಮಿಳುನಾಡಿನಲ್ಲಿ ಮೀಸಲಾತಿ ಶೇ 69 ರಷ್ಟಿದ್ದು, ಸಂವಿಧಾನದ 9ನೇ ಶೆಡ್ಯೂಲ್‌ಗೆ ಸೇರಿ ರಕ್ಷಣೆ ಪಡೆದಿದೆ. ಆದರೆ..ಕರ್ನಾಟಕ?
ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಸಂವಿಧಾನದಡಿ ಒದಗಿಸಿರುವ ಮೀಸಲಾತಿ ಪ್ರಮಾಣ ಭಿನ್ನವಾಗಿದೆ. ದೇಶವ್ಯಾಪಿ ಮೀಸಲಾತಿ ಮಿತಿ ಶೇ 50 ಮೀರದಂತೆ ಸುಪ್ರೀಂಕೋರ್ಟ್ 1992 ರಲ್ಲಿ ಇಂದ್ರ ಸಾಹ್ನಿ ಪ್ರಕರಣದಲ್ಲಿ ಸ್ಪಷ್ಟ ತೀರ್ಪು ನೀಡಿದರೂ ಬಹುತೇಕ ರಾಜ್ಯಗಳಲ್ಲಿ ಮೀಸಲಾತಿಯು ಶೇ 50 ರ ಮಿತಿ ದಾಟಿದೆ. ಆದರೆ, ತಮಿಳುನಾಡಿನಲ್ಲಿ ಮೀಸಲಾತಿ ಶೇ 69 ರಷ್ಟಿದ್ದು, ಸಂವಿಧಾನದ 9ನೇ ಶೆಡ್ಯೂಲ್‌ಗೆ ಸೇರಿದ ಬಳಿಕ ನ್ಯಾಯಾಂಗ ಪರಿಶೀಲನೆಯಿಂದ ರಕ್ಷಣೆ ಪಡೆದಿದೆ.
ತಮಿಳುನಾಡಿನಲ್ಲಿ ಶೇ 69, ಉತ್ತರ ಪ್ರದೇಶದಲ್ಲಿ ಶೇ 60, ಬಿಹಾರದಲ್ಲಿ ಶೇ 65, ಕರ್ನಾಟಕದಲ್ಲಿ ಶೇ 56 ರಷ್ಟು ಮೀಸಲಾತಿ ಇದೆ. ಕೇಂದ್ರ ಸರ್ಕಾರ ಪರಿಶಿಷ್ಟರಿಗೆ ಶೇ 15, ಪರಿಶಿಷ್ಟ ಪಂಗಡದವರಿಗೆ ಶೇ 7.5, ಒಬಿಸಿಗಳಿಗೆ ಶೇ 27, ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಶೇ 10 ಮೀಸಲಾತಿ ಸೇರಿ ಒಟ್ಟು ಮೀಸಲಾತಿ ಪ್ರಮಾಣ ಶೇ 59.5 ಇದೆ.
1992 ರಲ್ಲಿ ಇಂದಿರಾ ಸಾಹ್ನಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್, ವಿಶೇಷ ಸಂದರ್ಭ ಹೊರತುಪಡಿಸಿ ಒಟ್ಟು ಮೀಸಲಾತಿ ಶೇ 50 ಮೀರಬಾರದು ಎಂದು ತೀರ್ಪು ನೀಡಿತ್ತು. ಆದರೆ, 2019 ರಲ್ಲಿ ಇದೇ ಸುಪ್ರೀಂಕೋರ್ಟ್, ಆರ್ಥಿಕ ದುರ್ಬಲ ವರ್ಗಗಳಿಗೆ ಶೇ 10 ರಷ್ಟು ಮೀಸಲಾತಿಯನ್ನು ಒಪ್ಪಿಕೊಂಡ ನಂತರ ಶೇ 50 ರಷ್ಟು ಮೀಸಲಾತಿ ಮಿತಿ ಕಡ್ಡಾಯವಲ್ಲ ಎಂಬ ಚರ್ಚೆಗಳು ಮುನ್ನೆಲೆಗೆ ಬಂದಿವೆ. ಹಾಗಾಗಿ ಅನೇಕ ರಾಜ್ಯಗಳು ತಮ್ಮ ಮೀಸಲಾತಿ ಕಾಯ್ದೆಗಳನ್ನು ಸಂವಿಧಾನದ 9ನೇ ಶೆಡ್ಯೂಲ್‌ಗೆ ಸೇರಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುತ್ತಿವೆ.
ಯಾವ ರಾಜ್ಯದಲ್ಲಿ ಹೇಗಿದೆ ಮೀಸಲಾತಿ?
ತೆಲಂಗಾಣದಲ್ಲಿ ಒಟ್ಟು ಮೀಸಲಾತಿ ಶೇ 67 ರಷ್ಟಿದೆ. ಮೀಸಲಾತಿ ಪ್ರಮಾಣ ಶೇ 50 ರ ಮಿತಿ ಮೀರಿದ ಹಿನ್ನೆಲೆಯಲ್ಲಿ ಕಾನೂನಾತ್ಮಕ ಸಮಾಲುಗಳನ್ನು ಎದುರಿಸುತ್ತಿದೆ. 9ನೇ ಶೆಡ್ಯೂಲ್‌ಗೆ ಸೇರಿಸಲು ಬೇಡಿಕೆ ಇಟ್ಟಿದ್ದು, ಅದು ನ್ಯಾಯಾಲಯದ ಪರಿಶೀಲನೆಯಲ್ಲಿದೆ.
ಮಹಾರಾಷ್ಟ್ರದಲ್ಲಿ ಮರಾಠ ಸಮುದಾಯಕ್ಕೆ ಮೀಸಲಾತಿ ನೀಡುವ ಪ್ರಯತ್ನದಿಂದಾಗಿ ಒಟ್ಟು ಮೀಸಲಾತಿ ಶೇ 50 ಕ್ಕಿಂತ ಹೆಚ್ಚಾಗಿತ್ತು. ಆದರೆ, ಸುಪ್ರೀಂಕೋರ್ಟ್ 2021 ಮೇ ತಿಂಗಳಲ್ಲಿ ಶೇ 50 ರ ಮೀಸಲಾತಿ ಮಿತಿ ಉಲ್ಲೇಖಿಸಿ ಮರಾಠಾ ಮೀಸಲಾತಿ ರದ್ದುಗೊಳಿಸಿತ್ತು.
ಬಿಹಾರದಲ್ಲಿ ಇತ್ತೀಚೆಗೆ ಮೀಸಲಾತಿಯನ್ನು ಶೇ 50 ರಿಂದ ಶೇ 65 ಕ್ಕೆ ಹೆಚ್ಚಿಸಲು ಕಾನೂನು ಜಾರಿಗೊಳಿಸಲಾಗಿದೆ. ಆದರೆ, ಪಾಟ್ನಾ ಹೈಕೋರ್ಟ್ ಈ ಕಾನೂನನ್ನು ರದ್ದುಗೊಳಿಸಿದೆ.
ಉತ್ತರ ಪ್ರದೇಶದಲ್ಲಿ ಒಟ್ಟು ಮೀಸಲಾತಿ ಶೇ 60ರವರೆಗೆ ತಲುಪಿದೆ. ಜಾರ್ಖಂಡ್‌ನಲ್ಲಿ ಮೀಸಲಾತಿ ಪ್ರಮಾಣ ಶೇ 77 ಕ್ಕೆ ಹೆಚ್ಚಿಸಲಾಗಿದೆ. ಇದನ್ನು 9ನೇ ಶೆಡ್ಯೂಲ್‌ಗೆ ಸೇರಿಸಲು ಕೇಂದ್ರ ಸರ್ಕಾರದ ಅನುಮೋದನೆಗೆ ಕಳುಹಿಸಿಕೊಡಲಾಗಿದೆ.
ಛತ್ತೀಸ್‌ಗಢದಲ್ಲಿ ಮೀಸಲಾತಿ ಶೇ 58 ದಾಟಿತ್ತು. ಆದರೆ, ಹೈಕೋರ್ಟ್ ಅದನ್ನು ರದ್ದುಪಡಿಸಿತ್ತು. ಇದರ ವಿರುದ್ಧ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಈಗ ಹೈಕೋರ್ಟ್ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಲಾಗಿದೆ.
ತಮಿಳುನಾಡಿನಲ್ಲಿ ಮೀಸಲಾತಿ ರಕ್ಷಣೆ ಸಿಕ್ಕಿದ್ದು ಹೇಗೆ?
'ತಮಿಳುನಾಡು ಹಿಂದುಳಿದ ಜಾತಿಗಳ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ (ಶಿಕ್ಷಣ ಸಂಸ್ಥೆ ಹಾಗೂ ಸರ್ಕಾರಿ ನೇಮಕಾತಿಯಲ್ಲಿ ಮೀಸಲಾತಿ) ಕಾಯ್ದೆ, 1993 ಅನ್ನು ಸಂವಿಧಾನದ 9ನೇ ಪರಿಚ್ಛೇದದಲ್ಲಿ ಸೇರಿಸಲಾಗಿದೆ. ಈ ಮೂಲಕ ಈ ಕಾಯ್ದೆಯ ಸಿಂಧುತ್ವವನ್ನು ಯಾರೂ ನ್ಯಾಯಾಲಯದಲ್ಲಿ ಪ್ರಶ್ನಿಸದಂತೆ ಮಾಡಲಾಗಿದೆ. ಡಿಎಂಕೆ ಹಾಗೂ ಎಐಎಡಿಎಂಕೆ ಪಕ್ಷಗಳ ರಾಜಕೀಯ ಇಚ್ಛಾಶಕ್ತಿಯಿಂದ ಇದು ಸಾಧ್ಯವಾಗಿದೆ.
1971ಕ್ಕೂ ಮೊದಲು ತಮಿಳುನಾಡಿನ ಮೀಸಲಾತಿ ಶೇ 41ರಷ್ಟು ಇತ್ತು. ಹಿಂದುಳಿದ ವರ್ಗಗಳಿಗೆ ಶೇ 25ರಷ್ಟು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಶೇ 16ರಷ್ಟು ಮೀಸಲಾತಿ ಇತ್ತು. ಅಣ್ಣಾದೊರೈ ಅವರ ಬಳಿಕ 1969ರಲ್ಲಿ ಡಿಎಂಕೆಯ ಎಂ. ಕರುಣಾನಿಧಿ ಮುಖ್ಯಮಂತ್ರಿಯಾದಾಗ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಸಟ್ಟನಾಥನ್ ಸಮಿತಿ ರಚಿಸಿದರು. ಈ ಸಮಿತಿಯ ಶಿಫಾರಸ್ಸಿನ ಮೇಲೆ ಮೀಸಲಾತಿ ಪ್ರಮಾಣವನ್ನು ಶೇ 49ಕ್ಕೆ ಹೆಚ್ಚಿಸಿತು. ಎಐಎಡಿಎಂಕೆಯ ಎಂ.ಜಿ. ರಾಮಚಂದ್ರನ್ ಅವರು ಮೀಸಲಾತಿಯನ್ನು ಶೇ 68ಕ್ಕೆ ಹೆಚ್ಚಿಸಿದರು. 1989ಎಲ್ಲಿ ಡಿಎಂಕೆಯ ಕರುಣಾನಿಧಿ ಅವರು ಮತ್ತೊಮ್ಮೆ ಅಧಿಕಾರಕ್ಕೆ ಬಂದು ಮೀಸಲಾತಿಯನ್ನು ಶೇ 69ಕ್ಕೆ ಏರಿಸಿದರು.
1993 ನವೆಂಬರ್‌ನಲ್ಲಿ ವಿಶೇಷ ಅಧಿವೇಶನ ಕರೆದು ತಮಿಳುನಾಡಿನ ಮೀಸಲಾತಿ ನೀತಿಯನ್ನು ಯಥಾಸ್ಥಿತಿ ಮುಂದುವರಿಸಲು ಸಂವಿಧಾನಕ್ಕೆ ತಿದ್ದುಪಡಿ ತರಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು ಎಂಬ ನಿರ್ಣಯಕ್ಕೆ ಅನುಮೋದನೆ ಪಡೆಯಿತು. ಆಗ ಕೇಂದ್ರದಲ್ಲಿ ನರಸಿಂಹರಾವ್ ಅವರು ಪ್ರಧಾನಿಯಾಗಿದ್ದರು. ಆಗಲೇ ರಾಜ್ಯ ಸರ್ಕಾರವು ತಮಿಳುನಾಡು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ಜಾತಿಗಳ (ಶಿಕ್ಷಣ ಸಂಸ್ಥೆ ಹಾಗೂ ಸರ್ಕಾರಿ ನೇಮಕಾತಿಯಲ್ಲಿ ಮೀಸಲಾತಿ) ಮಸೂದೆ- 1993 ಮಂಡಿಸಿತು. ರಾಷ್ಟ್ರಪತಿ ಅಂಕಿತಕ್ಕೂ ಕಳುಹಿಸಲಾಗಿತ್ತು.
ಜಯಲಲಿತಾ ಅವರು ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರದ ಮೇಲೆ ಒತ್ತಡ ಹೇರಲು ಸರ್ವಪಕ್ಷಗಳ ನಾಯಕರ ನಿಯೋಗವನ್ನು ದೆಹಲಿಗೆ ಕೊಂಡೊಯ್ದಿದ್ದರು. ಪರಿಣಾಮ ರಾಷ್ಟ್ರಪತಿಗಳ ಒಪ್ಪಿಗೆ ದೊರೆತು ಸಂವಿಧಾನದ ಒಂಬತ್ತನೇ ಪರಿಚ್ಛೇಧದಲ್ಲಿ ಸೇರ್ಪಡೆಯಾಯಿತು.
9ನೇ ಶೆಡ್ಯೂಲ್ ಹೇಳುವುದೇನು?
ಭಾರತದ ಸಂವಿಧಾನದ 9ನೇ ಶೆಡ್ಯೂಲ್ ಒಂದು ಕಾನೂನು ನಿಬಂಧನೆಯಾಗಿದ್ದು, ಇದು ಕೆಲವು ಕೇಂದ್ರ ಮತ್ತು ರಾಜ್ಯ ಕಾನೂನುಗಳನ್ನು ನ್ಯಾಯಾಂಗ ಪರಿಶೀಲನೆಯಿಂದ ರಕ್ಷಿಸುತ್ತದೆ. ಇದನ್ನು 1951 ರಲ್ಲಿ ಮೊದಲ ಸಾಂವಿಧಾನಿಕ ತಿದ್ದುಪಡಿಯ ಮೂಲಕ ಸೇರಿಸಲಾಯಿತು, ಮುಖ್ಯವಾಗಿ ಭೂಸುಧಾರಣೆಗಳಂತಹ ಕಾನೂನುಗಳು ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದರೂ ಸಹ ನ್ಯಾಯಾಲಯಗಳಲ್ಲಿ ಪ್ರಶ್ನಿಸುವುದನ್ನು ತಡೆಯಲು ಇದು ಉದ್ದೇಶಿಸಲಾಗಿತ್ತು. ಈ ಶೆಡ್ಯೂಲ್ನಲ್ಲಿ ಪಟ್ಟಿ ಮಾಡಲಾದ ಕಾನೂನುಗಳು ನ್ಯಾಯಾಂಗದ ಹಸ್ತಕ್ಷೇಪದಿಂದ ಹೊರತಾಗಿರುತ್ತವೆ, ಆದಾಗ್ಯೂ, 2007 ರಲ್ಲಿ ಐ.ಆರ್. ಕೊಯೆಲ್ಹೋ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ನ ತೀರ್ಪಿನ ಪ್ರಕಾರ, ಅವು ಸಂವಿಧಾನದ ಮೂಲ ರಚನೆಯನ್ನು ಉಲ್ಲಂಘಿಸಿದರೆ ಪ್ರಶ್ನಿಸಬಹುದು.
ಆದರೆ, ಕಾನೂನು ತಜ್ಞರು ಹೇಳುವುದೇ ಬೇರೆ. ಯಾವುದೇ ಮೀಸಲಾತಿ ಹೆಚ್ಚಳವನ್ನು 9 ನೇ ಶೆಡ್ಯೂಲ್‌ಗೆ ಸೇರಿಸುವುದು ಅಗತ್ಯವಲ್ಲ. ಸುಪ್ರೀಂಕೋರ್ಟ್ ತೀರ್ಪು ನೀಡಿರಬಹುದು. ಆದರೆ, ಸುಪ್ರೀಂಕೋರ್ಟ್ ಪರಮೋಚ್ಛ ಅಲ್ಲ. ಸುಪ್ರೀಂಕೋರ್ಟ್ ಕೂಡ ಸಂವಿಧಾನದ ಆಧಾರದ ಮೇಲೆಯೇ ಕಾರ್ಯ ನಿರ್ವಹಿಸುತ್ತದೆ. ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಶೇ10 ರಷ್ಟು ಮೀಸಲಾತಿ ಒದಗಿಸುವುದಾದರೆ, ಒಟ್ಟು ಮೀಸಲಾತಿ ಏಕೆ ಏರಿಕೆ ಮಾಡಬಾರದು. ಆದರೆ, ಸರ್ಕಾರಗಳು ಅದಕ್ಕೆ ಸೂಕ್ತ ಸಮರ್ಥನೆ ನೀಡಬೇಕು ಎಂದು ಹೈಕೋರ್ಟ್ ವಕೀಲ ಶಿವರುದ್ರಪ್ಪ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ತಮಿಳುನಾಡಿನ ಮಾದರಿಯು ಅಂದಿನ ಪರಿಸ್ಥಿತಿಗೆ ಅನುಗುಣವಾಗಿತ್ತು. 9 ನೇ ಶೆಡ್ಯೂಲ್‌ಗೆ ಸೇರಿಸಿದ ಮಾತ್ರಕ್ಕೆ ಪ್ರಶ್ನಿಸಬಾರದು ಎನ್ನುವಂತಿಲ್ಲ. ಈ ಹಿಂದೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳೇ ಪ್ರಕರಣವೊಂದರಲ್ಲಿ 9ನೇ ಶೆಡ್ಯೂಲ್ ಗೆ ಸೇರಿದ ಅಂಶಗಳನ್ನು ಪರಿಶೀಲಿಸಬಹುದು ಎಂದು ತೀರ್ಪು ನೀಡಿದ್ದಾರೆ. ಹಾಗಾಗಿ, ಸರ್ಕಾರವನ್ನು ಪ್ರತಿನಿಧಿಸುವವರು ತಜ್ಞರಿಂದ ಅಭಿಪ್ರಾಯ ಪಡೆದು, ಸೂಕ್ತ ಕಾನೂನು ಅಂಶಗಳೊಂದಿಗೆ ಕೇಂದ್ರ ಸರ್ಕಾರ ಹಾಗೂ ನ್ಯಾಯಾಲಯಗಳಿಗೆ ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು.
9ನೇ ಶೆಡ್ಯೂಲ್ ಮಹತ್ವವೇನು?
ನ್ಯಾಯಾಂಗ ಪರಿಶೀಲನೆಯಿಂದ ಮೀಸಲಾತಿಯು ರಕ್ಷಣೆ ಪಡೆಯಲಿದೆ. 9 ನೇ ಪರಿಚ್ಛೇಧದಲ್ಲಿರುವ ಮೀಸಲಾತಿಯನ್ನು ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದಿಲ್ಲ. ಭೂಸುಧಾರಣೆಗಳಿಗೆ ಸಂಬಂಧಿಸಿದ ಕಾನೂನುಗಳನ್ನು ರಕ್ಷಿಸಬಹುದು. ಮೂಲಭೂತ ಹಕ್ಕುಗಳ ಉಲ್ಲಂಘನೆಯ ಸವಾಲು ಎದುರಿಸುವುದಿಲ್ಲ.
1951ರ ಮೊದಲ ಸಂವಿಧಾನ ತಿದ್ದುಪಡಿಯ ಮೂಲಕ ಸಂವಿಧಾನಕ್ಕೆ 9ನೇ ಪರಿಚ್ಛೇಧ ಸೇರಿಸಲಾಯಿತು. ಕಲಂ 31B ಅನ್ನು ಇದರೊಂದಿಗೆ ಸೇರಿಸಲಾಯಿತು. ಇದು ಶೆಡ್ಯೂಲ್ನಲ್ಲಿ ಸೇರಿಸಲಾದ ಯಾವುದೇ ಕಾನೂನು ಅಥವಾ ನಿಯಂತ್ರಣವನ್ನು ಪ್ರಶ್ನಿಸುವುದಿಲ್ಲ ಎಂದು ಹೇಳಿದೆ.
ಆರಂಭದಲ್ಲಿ 13 ಕಾನೂನುಗಳನ್ನು ಈ ಪರಿಚ್ಛೇಧಕ್ಕೆ ಸೇರಿಸಲಾಗಿತ್ತು. ನಂತರದ ತಿದ್ದುಪಡಿಗಳ ಮೂಲಕ ಪ್ರಸ್ತುತ ಶೆಡ್ಯೂಲ್ ಅಡಿ ಸುಮಾರು 284 ಕಾನೂನುಗಳನ್ನು ಪಟ್ಟಿ ಮಾಡಲಾಗಿದೆ. ಇದು ಭೂಸುಧಾರಣೆ, ಆರ್ಥಿಕ ನೀತಿಗಳು ಮತ್ತು ಇತರ ಸಾಮಾಜಿಕ-ಆರ್ಥಿಕ ಕ್ರಮಗಳನ್ನು ಒಳಗೊಂಡಿದೆ.
2007 ರಲ್ಲಿ ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ 9ನೇ ಶೆಡ್ಯೂಲ್‌ನಲ್ಲಿರುವ ಕಾನೂನುಗಳನ್ನು ಸಂವಿಧಾನದ ಮೂಲ ರಚನೆ ಉಲ್ಲಂಘಿಸಿದರೆ ಪ್ರಶ್ನಿಸಬಹುದು ಎಂದು ನಿರ್ಧರಿಸಲಾಯಿತು.

