Reservation Part-2 | ಪರಿಶಿಷ್ಟರ ಮೀಸಲಾತಿ ಹೆಚ್ಚಳಕ್ಕೆ ತಡೆ: ಒಳ ಮೀಸಲಾತಿಯ ಭವಿಷ್ಯ ಏನು?
x

Reservation Part-2 | ಪರಿಶಿಷ್ಟರ ಮೀಸಲಾತಿ ಹೆಚ್ಚಳಕ್ಕೆ ತಡೆ: ಒಳ ಮೀಸಲಾತಿಯ ಭವಿಷ್ಯ ಏನು?

ವೋಟು ಹೆಚ್ಚಿರುವ ಸಮುದಾಯಗಳಿಗೆ ಸರ್ಕಾರ ತಲೆಬಾಗಿದೆ. 4-5 ಲಕ್ಷ ಇರುವ ಮತದಾರರನ್ನು ಕಡೆಗಣಿಸಿ ದೊಡ್ಡ ಸಮುದಾಯಗಳನ್ನು ಓಲೈಸಿದೆ. ನಿಜವಾದ, ಅರ್ಹರಿಗೆ ಮೀಸಲಾತಿ ಸಿಗಬೇಕು. ಬಹುಸಂಖ್ಯಾತರ ಪರವಾಗಿರುವ ಸರ್ಕಾರಗಳಿಂದ ಬಡವರಿಗೆ ಸೌಲಭ್ಯ ದಕ್ಕುತ್ತಿಲ್ಲ ಎಂಬುದು ಕಾನೂನು ತಜ್ಞರ ಅಭಿಮತವಾಗಿದೆ.


ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಿಸಿರುವ "ಕರ್ನಾಟಕ ಎಸ್‌ಸಿ/ ಎಸ್‌ಟಿ (ಉದ್ಯೋಗ ನೇಮಕಾತಿ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ) ಕಾಯ್ದೆ-2022"ಕ್ಕೆ ಹೈಕೋರ್ಟ್‌ ತಡೆ ನೀಡಿರುವ ಕಾರಣ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಯೂ ಅತಂತ್ರವಾಗಿ ಸ್ಥಗಿತಗೊಂಡಿದೆ.

ಮೀಸಲಾತಿಗೆ ಸಂಬಂಧಿಸಿದಂತೆ ಮಂಡಲ್ ಆಯೋಗದ ವರದಿಯಿಂದ ಹಿಡಿದು ಈಗಿನ ಎಲ್ಲಾ ವರದಿಗಳವರೆಗೂ ಸಾಮಾಜಿಕ ನ್ಯಾಯದ ಸಿದ್ಧಾಂತವನ್ನು ಪ್ರತಿಪಾದಿಸಲಾಗಿದೆ. ಆದರೆ, ಸರ್ಕಾರಗಳು ವೋಟ್‌ಬ್ಯಾಂಕ್‌ಗಾಗಿ ವರದಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂಬ ಆರೋಪ ಕೇಳಿ ಬರುತ್ತಿದೆ. ಸರ್ಕಾರದ ಇಚ್ಛಾಶಕ್ತಿ ಕೊರತೆ, ನ್ಯಾಯಾಲಯದ ಹಸ್ತಕ್ಷೇಪಗಳಿಂದಾಗಿ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳು ಬವಣೆ ಅನುಭವಿಸುವಂತಾಗಿದೆ.

"ಒಳ ಮೀಸಲಾತಿ ಆದೇಶಕ್ಕೆ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇರಿಸಿರುವ ಕಾನೂನು ತಜ್ಞರು ಹಾಗೂ ಹೋರಾಟಗಾರರ ಆಕ್ಷೇಪವಿದೆ. ನ್ಯಾ.ನಾಗಮೋಹನ್‌ ದಾಸ್‌ ನೇತೃತ್ವದ ವರದಿ ಜಾರಿ ಮಾಡುವುದಾದರೆ ಮಾಡಲಿ ಎಂದು ಹೈಕೋರ್ಟ್‌ ವಕೀಲರಾದ ಶಿವರುದ್ರಪ್ಪ ಅವರು ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ಒಳ ಮೀಸಲಾತಿ ಜಾರಿಗೆ ಬಿಡಲ್ಲ

ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಮೀಸಲಾತಿ ಹೆಚ್ಚಳವು ನ್ಯಾಯಾಲಯದ ಪರಿಶೀಲನೆಯಲ್ಲಿದೆ. ಇದು ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿ ಆದೇಶದ ಮೇಲೂ ಪರಿಣಾಮ ಬೀರಲಿದೆ. ಸುಪ್ರೀಂಕೋರ್ಟ್‌ ಮಾರ್ಗಸೂಚಿಯಂತೆ ಒಳ ಮೀಸಲಾತಿ ಜಾರಿಗೊಳಿಸಿಲ್ಲ. ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ಅವರು ಅತ್ಯಂತ ವೈಜ್ಞಾನಿಕ ರೀತಿಯಲ್ಲಿ ಒಳ ಮೀಸಲಾತಿ ವರದಿ ನೀಡಿದ್ದರು. ಆದರೆ, ರಾಜ್ಯ ಸರ್ಕಾರ ಹಿಂದುಳಿದಿರುವಿಕೆ ಕಡೆಗಣಿಸಿ, ಅತ್ಯಂತ ಮುಂದುವರಿದ ಸಮುದಾಯಗಳೊಂದಿಗೆ ಹಿಂದುಳಿದವರನ್ನು ಸೇರಿಸಿ, ಸಾಮಾಜಿಕ ನ್ಯಾಯಕ್ಕೆ ತಿಲಾಂಜಲಿ ಇಟ್ಟಿದೆ. ಇದೇ ಕಾರಣದಿಂದ ಒಳ ಮೀಸಲಾತಿ ಆದೇಶ ಊರ್ಜಿತವಾಗಲು ಬಿಡುವುದಿಲ್ಲ ಎಂದು ಶಿವರುದ್ರಪ್ಪ ಹೇಳಿದರು.

ರಾಜ್ಯ ಸರ್ಕಾರಿ‌ ಎಸ್ ಸಿ/ಎಸ್ ಟಿ ನೌಕರರ ಸಂಘದ ಚಂದ್ರಶೇಖರಯ್ಯ ಮಾತನಾಡಿ,ಕರ್ನಾಟಕ ಸರ್ಕಾರಕ್ಕೆ ಮೀಸಲಾತಿ ಸಮಸ್ಯೆ ಬಗೆಹರಿಸಬೇಕೆಂಬ ಕಾಳಜಿ ಇಲ್ಲ. ಒಳ ಮೀಸಲಾತಿ ವಿಚಾರದಲ್ಲೂ ಇದೇ ಎಡವಟ್ಟುಗಳನ್ನು ಮಾಡಿದೆ. ರೋಸ್ಟರ್‌ ಬಿಂದುಗಳನ್ನು ಸರಿಯಾಗಿ ಮಾಡಿಲ್ಲ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಳಿಕ ಸಮಾಜ ಕಲ್ಯಾಣ ಇಲಾಖೆ ನನ್ನ ಸಲಹೆ ಕೇಳಿತ್ತು. ಅದರಂತೆ 100 ಬಿಂದುಗಳಿಗೆ ರೋಸ್ಟರ್‌ ವ್ಯವಸ್ಥೆ ಒದಗಿಸಲಾಗಿದೆ. ಪರಿಷ್ಕೃತ ರೋಸ್ಟರ್‌ ಜಾರಿ ಮಾಡುವ ಕುರಿತು ಇಲಾಖೆ ಅಧಿಕಾರಿಗಳು ಕೂಡ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಒಳ ಮೀಸಲಾತಿ ಸಮಸ್ಯೆ ಬಗೆಹರಿಸುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೂಲಕ ಪತ್ರ ಬರೆಸಿದರೂ ಸರ್ಕಾರ ಸ್ಪಂದಿಸಿಲ್ಲ ಎಂದು ದೂರಿದರು.

"ವೋಟು ಹೆಚ್ಚಿರುವ ಸಮುದಾಯಗಳಿಗೆ ಸರ್ಕಾರ ತಲೆಬಾಗಿದೆ. 4-5 ಲಕ್ಷ ಇರುವ ಮತದಾರರನ್ನು ಕಡೆಗಣಿಸಿ ದೊಡ್ಡ ಸಮುದಾಯಗಳನ್ನು ಓಲೈಸಿದೆ. ನಿಜವಾದ, ಅರ್ಹರಿಗೆ ಮೀಸಲಾತಿ ಸಿಗಬೇಕು. ಬಹುಸಂಖ್ಯಾತರ ಪರವಾಗಿರುವ ಸರ್ಕಾರಗಳಿಂದ ಬಡವರಿಗೆ ಸೌಲಭ್ಯ ದಕ್ಕುತ್ತಿಲ್ಲ ಎಂದು ನಿವೃತ್ತ ನ್ಯಾಯಮೂರ್ತಿಯೊಬ್ಬರು ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ಒಳ ಮೀಸಲಾತಿ ಜಾರಿಯನ್ನು ಸರ್ಕಾರ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಿಲ್ಲ. ರಾಜ್ಯ ಸರ್ಕಾರವು ಒಳ ಮೀಸಲಾತಿ ವರದಿ ಒಪ್ಪಿದ್ದರೂ ಶಿಫಾರಸುಗಳನ್ನು ಪರಿಷ್ಕರಿಸಿತು. ಸಮಾನರೊಂದಿಗೆ ಸಮಾನರನ್ನೇ ಹಾಕಬೇಕು. ಅಸಮಾನರನ್ನು ಅಸಮಾನರೊಟ್ಟಿಗೆ ಸೇರಿಸಬೇಕು. ಆದರೆ, ಇದಕ್ಕೆ ತದ್ವಿರುದ್ಧವಾದ ನಿರ್ಧಾರ ಕೈಗೊಂಡ ಕಾರಣ ಒಳ ಮೀಸಲಾತಿ ಜಾರಿ ಗೊಂದಲದಲ್ಲಿ ಸಿಲುಕಿದೆ ಎಂದು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಪರಿಶಿಷ್ಟ ಜಾತಿ-ಪಂಗಡದ ಮೀಸಲಾತಿ ಹೆಚ್ಚಳ ಹಾಗೂ ಒಳ ಮೀಸಲಾತಿ ಗೊಂದಲಗಳನ್ನು ಸುಲಭವಾಗಿ ಪರಿಹರಿಸಬಹುದು. ರಾಜ್ಯ ಸರ್ಕಾರ ಕಾನೂನು ತಜ್ಞರ ಜತೆ ಸಮಾಲೋಚನೆ ನಡೆಸಬೇಕು. ಸರಿಯಾದ ಸಮರ್ಥನೆಗಳನ್ನು ನೀಡುವ ಮೂಲಕ ಸಮಸ್ಯೆ ಬಗೆಹರಿಸಬಹುದಾಗಿದೆ ಎಂದು ಹೇಳಿದರು.

ಪರಿಷ್ಕೃತ ಮೀಸಲಾತಿ ರೋಸ್ಟರ್‌ಗೆ ಆಕ್ಷೇಪ

'ಪರಿಷ್ಕೃತ ಮೀಸಲಾತಿ ರೋಸ್ಟರ್'ಗೆ ರಾಜ್ಯ ಸರ್ಕಾರಿ ಎಸ್ಸಿ, ಎಸ್ಟಿ ನೌಕರರ ಸಂಘ ಆಕ್ಷೇಪ ವ್ಯಕ್ತಪಡಿಸಿತ್ತು. 2022ರ ಡಿ. 28ರ ಆದೇಶದಲ್ಲಿ 100 ರೋಸ್ಟರ್ ಬಿಂದುಗಳಲ್ಲಿ ರೋಸ್ಟರ್‌ ನಿಗದಿಪಡಿಸಿತ್ತು. ಪರಿಶಿಷ್ಟ ಜಾತಿಯವರಿಗೆ ನೇರ ನೇಮಕಾತಿ ಮತ್ತು ಬಡ್ತಿ ನೀಡುವ ಸಂದರ್ಭದಲ್ಲಿ ಮೀಸಲಾತಿ ದೊರೆಯದಂತೆ ಹಾಗೂ ಈ ವರ್ಗದವರು ಮುಖ್ಯವಾಹಿನಿಗೆ ಬರುವುದನ್ನು ತಡೆಯುವ ಉದ್ದೇಶದಿಂದ ರೋಸ್ಟರ್ ಬಿಂದುಗಳನ್ನು ನಿಗದಿಪಡಿಸಲಾಗಿದೆ ಎಂದು ಸಂಘ ತಕರಾರು ತೆಗೆದಿತ್ತು.

ಯಾವ ಪ್ರವರ್ಗಕ್ಕೆ ಯಾವ 'ರೋಸ್ಟರ್ ಬಿಂದು'

ಕರ್ನಾಟಕ ಸರ್ಕಾರ ಮೀಸಲಾತಿಯಡಿ ವಿವಿಧ ಸಮುದಾಯಗಳಿಗೆ ರೋಸ್ಟರ್‌ ಬಿಡುಗಡೆ ಮಾಡಿದೆ. 1- ಪ್ರವರ್ಗ ಎ, 9-ಪ್ರವರ್ಗ ಬಿ, 15- ಪ್ರವರ್ಗ ಸಿ, 23- ಪ್ರವರ್ಗ ಎ, 27-ಪ್ರವರ್ಗ ಬಿ, 33- ಪ್ರವರ್ಗ ಸಿ, 41- ಪ್ರವರ್ಗ ಎ, 46-ಪ್ರವರ್ಗ ಬಿ, 49- ಪ್ರವರ್ಗ ಸಿ, 53- ಪ್ರವರ್ಗ ಎ, 59-ಪ್ರವರ್ಗ ಬಿ, 67- ಪ್ರವರ್ಗ ಸಿ, 75- ಪ್ರವರ್ಗ ಎ, 81-ಪ್ರವರ್ಗ ಬಿ, 89- ಪ್ರವರ್ಗ ಸಿ, 93- ಪ್ರವರ್ಗ ಎ, 96-ಪ್ರವರ್ಗ ಬಿಗೆ ನೀಡಲಾಗಿದೆ.

ರೋಸ್ಟರ್‌ ವ್ಯವಸ್ಥೆಯಂತೆ ಮೀಸಲಾತಿಯನ್ನೂ ಸೂಚಿಸಿದೆ. ಪ್ರವರ್ಗ-1ಕ್ಕೆ ಶೇ 4, ಪ್ರವರ್ಗ-2ಎಗೆ ಶೇ 15, ಪ್ರವರ್ಗ-2ಬಿಗೆ ಶೇ 04, ಪ್ರವರ್ಗ-3ಎ ಗೆ ಶೇ 04, ಪ್ರವರ್ಗ-3ಬಿಗೆ ಶೇ 05, ಪರಿಶಿಷ್ಟ ಜಾತಿಯ ಪ್ರವರ್ಗ ಎ ಗೆ ಶೇ 06, ಪ್ರವರ್ಗ ಬಿ ಗೆ 06, ಪ್ರವರ್ಗ ಸಿ ಗೆ 05 ಮೀಸಲಾತಿ ಇದೆ. ಪರಿಶಿಷ್ಟ ಪಂಗಡಕ್ಕೆ ಶೇ 07, ಸಾಮಾನ್ಯ ಅರ್ಹತೆ ಶೇ 44 ರಷ್ಟು ಮೀಸಲಾತಿಯನ್ನು ನೀಡಲಾಗುತ್ತಿದೆ.

ಮೀಸಲಾತಿ ಹೆಚ್ಚಳಕ್ಕೆ ಸಂವಿಧಾನದ ಬಲ ಅಗತ್ಯ

ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಮೀಸಲಾತಿ ಹೆಚ್ಚಳಕ್ಕೆ ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳದ ಕಾಯ್ದೆ ಜಾರಿ ಮಾಡಿದರೂ ಅದನ್ನು ಸಂವಿಧಾನದ 9ನೇ ಶೆಡ್ಯೂಲ್‌ಗೆ ಸೇರಿಸಬೇಕು. ಸಂವಿಧಾನದ ಅನುಮೋದನೆ ದೊರೆತರೆ ಮೀಸಲಾತಿಯು ಪ್ರಶ್ನಾತೀತವಾಗಿರಲಿದೆ.

ರಾಜ್ಯ ಸರ್ಕಾರ ಮೀಸಲಾತಿ ಹೆಚ್ಚಳದ ಆದೇಶಗಳು ಎಷ್ಟು ಸಮಂಜಸ, ಕಾನೂನು ಮಾನ್ಯತೆ ಹೊಂದಿವೆಯೇ, ಮೀಸಲಾತಿ ಅನ್ವಯ ನೇಮಕಾತಿಗಳು ನಡೆದರೆ ಸಿಂಧುತ್ವ ಹೊಂದಿರುತ್ತದೆಯೇ ಎಂಬ ಜಿಜ್ಞಾಸೆಗಳು ಎದುರಾಗಿವೆ. ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿಯನ್ನು ಶೇ.50 ರಿಂದ 56ಕ್ಕೆ ಹೆಚ್ಚಿಸಿ 2023ರಲ್ಲಿ ಬಿಜೆಪಿ ಸರ್ಕಾರ ಕಾಯ್ದೆ ರೂಪಿಸಿತ್ತು. ಪ್ರಸ್ತುತ, ಮೀಸಲಾತಿ ಹೆಚ್ಚಳಕ್ಕೆ ಹೈಕೋರ್ಟ್ ತಡೆ ನೀಡಿದೆ. ಮೀಸಲಾತಿ ಹೆಚ್ಚಳವು ಸುಪ್ರೀಂಕೋರ್ಟ್ ತೀರ್ಪಿನ ಉಲ್ಲಂಘನೆಯಾಗಿದೆ. ಜತೆಗೆ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗದ ಒಪ್ಪಿಗೆ ಪಡೆದಿಲ್ಲ ಎಂದು ಅರ್ಜಿದಾರರು ನ್ಯಾಯಾಲಯದಲ್ಲಿ ವಾದಿಸಿದ್ದರು.

ಪರಿಶಿಷ್ಟ ಜಾತಿಗೆ ಶೇ.15 ರಿಂದ 17 ಮತ್ತು ಪರಿಶಿಷ್ಟ ಪಂಗಡಕ್ಕೆ ಶೇ. 3 ರಿಂದ ಶೇ.7ರ ವರೆಗೂ ಮೀಸಲು ಹೆಚ್ಚಳ ಮಾಡಿ ಒಟ್ಟು ಮೀಸಲಾತಿಯನ್ನು ಶೇ 56ಕ್ಕೆ ಹೆಚ್ಚಿಸಲಾಗಿದೆ. 2023ರ ಜನವರಿ 12 ರಂದು ಹೊರಡಿಸಿದ್ದ ಕಾಯ್ದೆಯ ಗೆಜೆಟ್ ಅಧಿಸೂಚನೆ ರದ್ದು ಮಾಡಬೇಕು ಎಂದು ಕೋರಿ ಡಾ. ಅಂಬೇಡ್ಕರ್ ಪರಿಶಿಷ್ಟ ಜಾತಿಗಳ ಒಕ್ಕೂಟದ ರಾಜ್ಯಾಧ್ಯಕ್ಷ ಮಹೇಂದ್ರ ಕುಮಾರ್ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲು ಹೆಚ್ಚಳ ಮಾಡುವ ಸಂದರ್ಭದಲ್ಲಿ ಸಂವಿಧಾನದ ಪರಿಚ್ಛೇದ 338 ಎ (9)ರ ಪ್ರಕಾರ ರಾಷ್ಟ್ರೀಯ ಪರಿಶಿಷ್ಟ ಜಾತಿಗಳು ಮತ್ತು 338 ಬಿ(9) ರ ಪ್ರಕಾರ ರಾಷ್ಟ್ರೀಯ ಪಂಗಡಗಳ ಆಯೋಗದ ಒಪ್ಪಿಗೆ ಪಡೆಯುವುದು ಕಡ್ಡಾಯ. ಆದರೆ, ಯಾವುದೇ ಅನುಮತಿ ಪಡೆಯದೆ ಮೀಸಲು ಹೆಚ್ಚಿಸಿರುವುದು ಸಂವಿಧಾನಬಾಹಿರ. ಆದ್ದರಿಂದ ಕಾಯ್ದೆಯನ್ನು ಅಸಾಂವಿಧಾನಿಕ ಎಂದು ಘೋಷಿಸಬೇಕು ಎಂದು ಅರ್ಜಿದಾರರ ಮನವಿ ಮಾಡಿದ್ದರು.

ಹೈಕೋರ್ಟ್‌ ಹೇಳಿದ್ದೇನು?

ಶೇ.56ರ ಮೀಸಲಾತಿ ಅನ್ವಯ ಯಾವುದೇ ಹೊಸ ನೇಮಕಾತಿ ಪ್ರಕ್ರಿಯೆಗೆ ಅಧಿಸೂಚನೆ ಪ್ರಕಟಿಸದಂತೆ ಹೈಕೋರ್ಟ್ ಈಚೆಗೆ ಆದೇಶ ನೀಡಿದೆ. ಇದೇ ವೇಳೆ 3,644 ಹುದ್ದೆಗಳ ಷರತ್ತುಬದ್ಧ ಅನುಮತಿ ನೀಡಿದ್ದು, ಇನ್ನು ಮುಂದೆ ಹೊಸ ನೇಮಕಾತಿ ನಡೆಸದಂತೆ ಸೂಚಿಸಿದೆ. ಈಗ ರಾಜ್ಯ ಸರ್ಕಾರ ಹೈಕೋರ್ಟ್‌ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದೆ.

"ಬಿಜೆಪಿ ಸರ್ಕಾರದ ಅವಧಿಯಲ್ಲಿ ಪರಿಶಿಷ್ಟ ಜಾತಿಗಳಿಗೆ ಶೇ 17, ಪರಿಶಿಷ್ಟ ಪಂಗಡಗಳಿಗೆ ಶೇ 7 ರಷ್ಟು ಮೀಸಲಾತಿ ಒದಗಿಸಲಾಗಿತ್ತು. ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಯು 2022ರ ಪರಿಶಿಷ್ಟ ಜಾತಿ/ಪಂಗಡದ ಕಾಯ್ದೆಯನ್ನು ರದ್ದು ಮಾಡಿಲ್ಲ. ಕೇವಲ ಇಲಾಖೆಯೊಂದರಲ್ಲಿ ಶೇ 17 ರಷ್ಟು ಮೀಸಲಾತಿ ಅಡಿಯಲ್ಲಿ ಪಡೆದಿದ್ದ ಉದ್ಯೋಗ ನೇಮಕಾತಿಯನ್ನು ತಪ್ಪು ಎಂದು ಹೇಳಿದೆ. ಆದರೆ, ಮಾಧ್ಯಮಗಳು ಇಡೀ ಮೀಸಲಾತಿ ಹೆಚ್ಚಳ ಕಾಯ್ದೆಯನ್ನೇ ರದ್ದು ಮಾಡಲಾಗಿದೆ ಎಂದು ಬಿಂಬಿಸುತ್ತಿವೆ. ಅದು ಸುಳ್ಳು. ಕೆಎಟಿ ತನ್ನ ತೀರ್ಪಿನಲ್ಲಿ ಎಲ್ಲಿಯೂ ವರದಿ ತಿರಸ್ಕರಿಸಿಲ್ಲ, ಸರ್ಕಾರದ ಆದೇಶವನ್ನು ಪ್ರಶ್ನೆ ಮಾಡಿಲ್ಲ. ಇಂತಹ ಕ್ಷುಲ್ಲಕ ವಿಚಾರಕ್ಕೆ ಸೂಕ್ತ ಸಮರ್ಥನೆ ನೀಡಿದ್ದರೆ ಗೊಂದಲವೇ ಉದ್ಭವಿಸುತ್ತಿರಲಿಲ್ಲ ಎಂದು ನಿವೃತ್ತ ನ್ಯಾಯಮೂರ್ತಿಯೊಬ್ಬರು ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದ್ದಾರೆ.

ಕೆಎಟಿಗೆ ಆದೇಶ ರದ್ದು ಮಾಡುವ ಅಧಿಕಾರವಿಲ್ಲ

ಕರ್ನಾಟಕ ಆಡಳಿತಾತ್ಮಕ ನ್ಯಾಯಾಧೀಕರಣಕ್ಕೆ ಸರ್ಕಾರದ ಆದೇಶ ರದ್ದು ಮಾಡುವ ಅಧಿಕಾರವಿಲ್ಲ. 2022 ರ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಕಾಯ್ದೆಯನ್ನು ರದ್ದು ಮಾಡುವುದು ಯಾವುದೇ ಪ್ರಾಧಿಕಾರ, ನ್ಯಾಯಾಧೀಕರಣ, ಸಿವಿಲ್ ಹಾಗೂ ಕ್ರಿಮಿನಲ್ ನ್ಯಾಯಾಲಯಗಳಿಗೆ ಸರ್ಕಾರದ ಆದೇಶ ಅಥವಾ ಕಾಯ್ದೆ ರದ್ದು ಮಾಡುವ ಅಧಿಕಾರ ಇರುವುದಿಲ್ಲ. ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್‌ಗೆ ಮಾತ್ರ ಅಂತಹ ಅಧಿಕಾರ ಇರಲಿದೆ. ಅದರಲ್ಲೂ ರಿಟ್ ಅರ್ಜಿಗಳ ಮೂಲಕ ಅಂತಹ ಅಧಿಕಾರ ಚಲಾಯಿಸಬಹುದು ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟರು.

Read More
Next Story