
ಕೋಗಿಲು ಕ್ರಾಸ್‌ನಲ್ಲಿ ಒತ್ತುವರಿ ತೆರವು ಮಾಡಿರುವ ಸರ್ಕಾರ
ಕೋಗಿಲು ಲೇಔಟ್ ಒತ್ತುವರಿ: ಮನೆ ಹಂಚಿಕೆಗೆ ಪರದಾಟ; 250 ಅರ್ಜಿಗಳಲ್ಲಿ ಕೇವಲ 27 ಮಾತ್ರ ಅರ್ಹ
ಸರ್ಕಾರದ ಘೋಷಣೆ ಹೊರಬೀಳುತ್ತಿದ್ದಂತೆಯೇ ನೈಜ ಸಂತ್ರಸ್ತರಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ, ಅಂದರೆ ಸುಮಾರು 250ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದವು. ಇದು ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಕೋಗಿಲು ಲೇಔಟ್ ಒತ್ತುವರಿ ತೆರವು ಕಾರ್ಯಾಚರಣೆ ಬಳಿಕ ನಿರಾಶ್ರಿತರಿಗೆ ಮನೆ ನೀಡುವುದಾಗಿ ಘೋಷಿಸಿದ್ದ ರಾಜ್ಯ ಸರ್ಕಾರಕ್ಕೆ ಇದೀಗ ಸಂಕಷ್ಟ ಎದುರಾಗಿದೆ. ಮೂರು ವಾರಗಳ ಹಿಂದಷ್ಟೇ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂತ್ರಸ್ತರಿಗೆ ಸೂರು ಕಲ್ಪಿಸುವ ಭರವಸೆ ನೀಡಲಾಗಿತ್ತಾದರೂ, ತಾಂತ್ರಿಕ ಮತ್ತು ಕಾನೂನು ತೊಡಕುಗಳಿಂದಾಗಿ ಪ್ರಕ್ರಿಯೆ ವಿಳಂಬವಾಗುತ್ತಿದೆ.
ಸರ್ಕಾರದ ಘೋಷಣೆ ಹೊರಬೀಳುತ್ತಿದ್ದಂತೆಯೇ ನೈಜ ಸಂತ್ರಸ್ತರಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ, ಅಂದರೆ ಸುಮಾರು 250ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದವು. ಇದು ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಅರ್ಹ ಫಲಾನುಭವಿಗಳನ್ನು ಗುರುತಿಸುವುದು ಸವಾಲಾಗಿದೆ.
ಆಯ್ಕೆಗೆ ಜರಡಿ ಹಿಡಿದ ಅಧಿಕಾರಿಗಳು: 167ರಲ್ಲಿ 27 ಮಂದಿಗಷ್ಟೇ 'ಯೋಗ'
ಮನೆ ಕಳೆದುಕೊಂಡವರಿಗಿಂತ ಹೊಸಬರೇ ತಮಗೂ ಮನೆ ಬೇಕೆಂದು ಪಟ್ಟು ಹಿಡಿದು ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಯಾವುದೇ ಕಾನೂನು ತೊಡಕು ಎದುರಾಗಬಾರದೆಂದು ಎಚ್ಚೆತ್ತ ಸರ್ಕಾರ, ಒತ್ತುವರಿದಾರರ ಅರ್ಜಿಗಳನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿದೆ. ಒಟ್ಟು 167 ಒತ್ತುವರಿದಾರರ ಪೈಕಿ ಕೇವಲ 27 ಜನರು ಮಾತ್ರ ಸರ್ಕಾರಿ ಮನೆ ಪಡೆಯಲು ಅರ್ಹರು ಎಂದು ಗುರುತಿಸಲಾಗಿದೆ.
ಪ್ರತಿಯೊಂದು ಕುಟುಂಬದಿಂದ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ವಿದ್ಯುತ್ ಬಿಲ್, ಪಡಿತರ ಚೀಟಿ ಹಾಗೂ ತಾತ್ಕಾಲಿಕ ಆದೇಶದ ಪ್ರತಿ ಸೇರಿದಂತೆ ಐದು ಪ್ರಮುಖ ದಾಖಲೆಗಳನ್ನು ಸಂಗ್ರಹಿಸಿ, ಕಠಿಣ ಪರಿಶೀಲನೆಯ ನಂತರವಷ್ಟೇ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.
ಪೊಲೀಸ್ ಕಾವಲಿನಲ್ಲಿ ಫಲಾನುಭವಿಗಳ ಪಟ್ಟಿ!
ಸದ್ಯ ಆಯ್ಕೆಯಾಗಿರುವ 27 ಜನರ ಹಿನ್ನೆಲೆ ಪರಿಶೀಲನೆಗಾಗಿ ಕಡತವನ್ನು ಪೊಲೀಸ್ ಇಲಾಖೆಗೆ ರವಾನಿಸಲಾಗಿದೆ. ಮನೆ ಪಡೆಯುತ್ತಿರುವವರು ಮೂಲತಃ ಎಲ್ಲಿಯವರು? ಅವರು ಅಕ್ರಮ ವಲಸಿಗರಾ? ಅಥವಾ ಸ್ಥಳೀಯರೇ? ಮತ್ತು ಅವರ ಹಿನ್ನೆಲೆ ಏನು ಎಂಬಿತ್ಯಾದಿ ಅಂಶಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಪೊಲೀಸ್ ಪರಿಶೀಲನಾ ವರದಿ ಬಂದ ಬಳಿಕವಷ್ಟೇ ಕಡತ ಜಿಲ್ಲಾಧಿಕಾರಿಗಳ ಕೈ ಸೇರಲಿದ್ದು, ನಂತರ ಜಿಲ್ಲಾಧಿಕಾರಿಗಳು ವಸತಿ ನಿಗಮಕ್ಕೆ ಅಂತಿಮ ವರದಿ ನೀಡಲಿದ್ದಾರೆ. ಸದ್ಯ ಪೊಲೀಸ್ ತನಿಖೆ ಅಂತಿಮ ಹಂತದಲ್ಲಿದೆ ಎಂದು ಮೂಲಗಳು ತಿಳಿಸಿವೆ.
ಕಾನೂನು ಸಮರಕ್ಕೆ ಬಿಜೆಪಿ ಎಚ್ಚರಿಕೆ
ಸರ್ಕಾರದ ಈ ನಡೆಗೆ ಪ್ರತಿಪಕ್ಷ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ಕೋಗಿಲು ಲೇಔಟ್ ಒತ್ತುವರಿ ಪ್ರಕರಣದ ಬಿಜೆಪಿ ಸತ್ಯಶೋಧನಾ ಸಮಿತಿಯ ಅಧ್ಯಕ್ಷರೂ ಆಗಿರುವ ಶಾಸಕ ಎಸ್.ಆರ್. ವಿಶ್ವನಾಥ್ 'ದ ಫೆಡರಲ್ ಕರ್ನಾಟಕ'ಕ್ಕೆ ಪ್ರತಿಕ್ರಿಯಿಸಿ, ಸರ್ಕಾರದ ನಡೆಗೆ ಎಚ್ಚರಿಕೆ ನೀಡಿದ್ದಾರೆ.
"ವಲಸಿಗರು ಹಾಗೂ ಅಕ್ರಮ ಒತ್ತುವರಿದಾರರಿಗೆ ಮನೆ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ. ಸರ್ಕಾರ ಮನೆ ಹಂಚಿಕೆ ಮಾಡುವುದನ್ನೇ ನಾವು ಕಾಯುತ್ತಿದ್ದೇವೆ. ಒಂದು ವೇಳೆ ಅನರ್ಹರಿಗೆ ಅಥವಾ ವಲಸಿಗರಿಗೆ ಮನೆ ನೀಡಿದರೆ, ದಾಖಲೆಗಳ ಸಮೇತ ಕಾನೂನು ಹೋರಾಟ ನಡೆಸುತ್ತೇವೆ," ಎಂದು ವಿಶ್ವನಾಥ್ ಎಚ್ಚರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಅಳೆದು ತೂಗಿ ಹೆಜ್ಜೆ ಇಡುತ್ತಿದೆ.
ಸಚಿವ ಕೃಷ್ಣ ಬೈರೇಗೌಡ ಬಿಗಿ ಪಟ್ಟು
ಒತ್ತುವರಿ ತೆರವು ವಿವಾದದ ಸಂದರ್ಭದಲ್ಲಿ ಬ್ಯಾಟರಾಯನಪುರ ಕ್ಷೇತ್ರದ ಶಾಸಕ ಹಾಗೂ ಸಚಿವ ಕೃಷ್ಣ ಬೈರೇಗೌಡ ವಿದೇಶದಲ್ಲಿದ್ದರು. ಅವರ ಅನುಪಸ್ಥಿತಿಯಲ್ಲಿ ಸಿಎಂ ಸಿದ್ದರಾಮಯ್ಯ ಸಭೆ ನಡೆಸಿ ಬಹುತೇಕ ಎಲ್ಲರಿಗೂ ಮನೆ ನೀಡುವ ನಿರ್ಧಾರಕ್ಕೆ ಬಂದಿದ್ದರು. ಆದರೆ, ಸ್ವದೇಶಕ್ಕೆ ಮರಳಿದ ಬಳಿಕ ಸಭೆ ನಡೆಸಿದ ಕೃಷ್ಣ ಬೈರೇಗೌಡ, ಕಾನೂನು ಬಾಹಿರವಾಗಿ ಮನೆ ಹಂಚಿಕೆ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಮುಂದೆ ಯಾವುದೇ ಕಾನೂನು ತೊಡಕು ಅಥವಾ ಅಪವಾದಗಳು ಬಾರದಂತೆ ಎಚ್ಚರವಹಿಸಬೇಕು. ಎಲ್ಲಾ ಮಾನದಂಡಗಳನ್ನು ಅನುಸರಿಸಿಯೇ ಅರ್ಹರಿಗೆ ಮಾತ್ರ ಮನೆ ನೀಡಬೇಕು ಎಂದು ಸಚಿವರು ಪಟ್ಟು ಹಿಡಿದಿರುವುದರಿಂದ ಹಂಚಿಕೆ ಪ್ರಕ್ರಿಯೆ ವಿಳಂಬವಾಗಿದೆ.
ಕೋಗಿಲು ಪ್ರಕರಣಕ್ಕೆ ಸಂಬಂಧಿಸಿದಂತೆ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಅವರೊಂದಿಗೆ ʼದ ಫೆಡರಲ್ ಕರ್ನಾಟಕʼ ಸಂದರ್ಶನ ನಡೆಸಿರುವ ವಿಡಿಯೋ ಇಲ್ಲಿದೆ.

