
ಸಚಿವ ಸಂಪುಟ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.
ಜ.22 ರಿಂದ ವಿಧಾನ ಮಂಡಲ ಜಂಟಿ ಅಧಿವೇಶನ; ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ
ಕೇಂದ್ರ ಸರ್ಕಾರ ಜಾರಿ ಮಾಡಿರುವ ವಿಬಿಜಿ ರಾಮ್ ಜಿ ಕಾಯ್ದೆಗೆ ರಾಜ್ಯ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿದ್ದು,ಈ ಕುರಿತು ಅಧಿವೇಶನದಲ್ಲಿ ಚರ್ಚಿಸಲು ತೀರ್ಮಾನಿಸಲಾಗಿದೆ.
ವರ್ಷದ ಮೊದಲ ವಿಧಾನಮಂಡಲದ ಜಂಟಿ ಅಧಿವೇಶನ ಇದೇ ಜ.22 ರಿಂದ 31ರವರೆಗೆ ನಡೆಸಲು ವಿಶೇಷ ಸಚಿವ ಸಂಪುಟ ಸಭೆ ಮಹತ್ವದ ತೀರ್ಮಾನ ಕೈಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಬುಧವಾರ ನಡೆದ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದ್ದು, ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡುವ ಮೂಲಕ ಉಭಯ ಸದನಗಳ ಕಲಾಪಕ್ಕೆ ಚಾಲನೆ ನೀಡಲಿದ್ದಾರೆ.
ಕೇಂದ್ರ ಸರ್ಕಾರ ಜಾರಿ ಮಾಡಿರುವ ವಿಬಿಜಿ ರಾಮ್ ಜಿ ಕಾಯ್ದೆಗೆ ರಾಜ್ಯ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿದ್ದು,ಕಾಯ್ದೆಯಿಂದ ರಾಜ್ಯದ ಗ್ರಾಮೀಣ ಪ್ರದೇಶದ ಜನರ ಮೇಲೆ ಬೀರುವ ಗಂಭೀರ ಪರಿಣಾಮಗಳ ಕುರಿತು ಅಧಿವೇಶನದಲ್ಲಿ ಚರ್ಚಿಸಿ ನಿರ್ಣಯ ತೆಗೆದುಕೊಳ್ಳಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ವಿಧಾನಮಂಡಲದ ಅಧಿವೇಶನ ನಡೆಸುವ ಸಂಬಂಧ ರಾಜ್ಯಪಾಲರಿಗೆ ಮಾಹಿತಿ ನೀಡಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಅವರು ಸಭೆಯ ಬಳಿಕ ಮಾಧ್ಯಮಗಳಿಗೆ ತಿಳಿಸಿದರು.
ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ಮನರೇಗಾ) ಯೋಜನೆಯನ್ನು ರದ್ದುಗೊಳಿಸಿ, ಅದರ ಬದಲಿಗೆ 'ವಿಬಿ ಜಿ ರಾಮ್ ಜಿ' ಕಾಯ್ದೆ ತಂದಿದೆ. ಈ ಕಾಯ್ದೆಯ ವಿರುದ್ಧ ಹೋರಾಟ ತೀವ್ರಗೊಳಿಸಲು ಕಾಂಗ್ರೆಸ್ ನೇತೃತ್ವದ ಸರ್ಕಾರ ನಿರ್ಧರಿಸಿದೆ.
ವಿಬಿ ಜಿ ರಾಮ್ ಜಿ ವಿಧೇಯಕದಿಂದ ರಾಜ್ಯ ಹಾಗೂ ಗ್ರಾಮೀಣ ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯ, ಗುತ್ತಿಗೆದಾರರ ಹಸ್ತಕ್ಷೇಪದ ಬಗ್ಗೆ ಚರ್ಚಿಸಲು ಎರಡು ದಿನ ಮೀಸಲಿಡಲಾಗುವುದು ಎಂದು ಹೇಳಲಾಗಿದೆ.
ಮನರೇಗಾ ಮರುಸ್ಥಾಪನೆಗೆ ಪಟ್ಟು
"ಕೇಂದ್ರ ಸರ್ಕಾರ ಮನರೇಗಾ ಯೋಜನೆಯನ್ನು ರದ್ದುಪಡಿಸಿ, ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ಜಾರಿಗೊಳಿಸಿರುವುದು ದೇಶಕ್ಕೆ ಮತ್ತು ಗ್ರಾಮೀಣ ಬದುಕಿಗೆ ಮಾರಕವಾಗಿದೆ. ಈ ಹೊಸ ಕಾಯ್ದೆಯನ್ನು ತಕ್ಷಣವೇ ಹಿಂಪಡೆದು, ಹಳೆಯ ಮನರೇಗಾ ಯೋಜನೆಯನ್ನೇ ಮರುಸ್ಥಾಪಿಸಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ನಿಲ್ಲದು, ಎಂದು ಡಿಸಿಎಂ ಸ್ಪಷ್ಟಪಡಿಸಿದರು. ಈ ಬಗ್ಗೆ ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಗಿದೆ ಎಂದರು.
ಜ.26 ರಿಂದ ಬೃಹತ್ ಪಾದಯಾತ್ರೆ
ಹೋರಾಟವನ್ನು ತೀವ್ರಗೊಳಿಸುವ ಭಾಗವಾಗಿ ಜನವರಿ 26 ರಿಂದ ಫೆಬ್ರವರಿ 2ರವರೆಗೆ ರಾಜ್ಯಾದ್ಯಂತ ತಾಲ್ಲೂಕು ಮಟ್ಟದಲ್ಲಿ 5ಕಿ.ಮೀ. ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಉದ್ಯೋಗ ಚೀಟಿ (Job Card) ಹೊಂದಿರುವ ಕಾರ್ಮಿಕರ ಜೊತೆಗೂಡಿ ನಡೆಯಲಿರುವ ಈ ಪಾದಯಾತ್ರೆಯಲ್ಲಿ ರಾಷ್ಟ್ರೀಯ ನಾಯಕರೂ ಭಾಗವಹಿಸಲಿದ್ದಾರೆ. ಅಲ್ಲದೆ, ಗ್ರಾಮ ಪಂಚಾಯತಿ, ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲೂ ಪ್ರತಿಭಟನೆಗಳನ್ನು ಆಯೋಜಿಸಲಾಗುವುದು ಎಂದು ಶಿವಕುಮಾರ್ ಮಾಹಿತಿ ನೀಡಿದ್ದರು.

