ಕೋಗಿಲು ಲೇಔಟ್ ಒತ್ತುವರಿದಾರರಲ್ಲಿ ರೋಹಿಂಗ್ಯಾಗಳು; ಅಕ್ರಮದ ಸೂತ್ರಧಾರ ಕಂದಾಯ ಸಚಿವರ ಆಪ್ತ?
x

ಯಲಹಂಕದ ಕೋಗಿಲು ಲೇಔಟ್‌

ಕೋಗಿಲು ಲೇಔಟ್ ಒತ್ತುವರಿದಾರರಲ್ಲಿ ರೋಹಿಂಗ್ಯಾಗಳು; ಅಕ್ರಮದ ಸೂತ್ರಧಾರ ಕಂದಾಯ ಸಚಿವರ ಆಪ್ತ?

ಕೋಗಿಲು ಲೇಔಟ್ ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಬಿಜೆಪಿಯ ಸತ್ಯಶೋಧನಾ ಸಮಿತಿಯು ಸೋಮವಾರ ಸಮಗ್ರ ವರದಿಯನ್ನು ಬಿಜೆಪಿ ರಾಜ್ಯಾಧ್ಯಕ್ಷರಿಗೆ ಸಲ್ಲಿಸಿದೆ.


Click the Play button to hear this message in audio format

ಕೋಗಿಲು ಲೇಔಟ್ ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಬಿಜೆಪಿಯ ಸತ್ಯಶೋಧನಾ ಸಮಿತಿಯು ಹಲವು ಲೋಪಗಳನ್ನು ಪತ್ತೆ ಮಾಡಿದೆ. ಕಳೆದ ಎರಡು ವರ್ಷಗಳಲ್ಲಿ ಸರ್ಕಾರಿ ಜಾಗದಲ್ಲಿ ವ್ಯವಸ್ಥಿತವಾಗಿ ಅಕ್ರಮವಾಗಿ ಮನೆಗಳನ್ನು ನಿರ್ಮಿಸಿಕೊಳ್ಳಲಾಗಿದೆ ಎಂದು ಸಮಿತಿ ಹೇಳಿದೆ. ಬಿಜೆಪಿ ರಾಜ್ಯಾಧ್ಯಕ್ಷರಿಗೆ ಸಲ್ಲಿಸಿರುವ ಸಮಗ್ರ ವರದಿಯಲ್ಲಿ ಹಲವು ವಿಚಾರಗಳನ್ನು ಸಮಿತಿ ಉಲ್ಲೇಖಿಸಿದೆ.

ವರದಿಯಲ್ಲಿ ಏನಿದೆ?

ಯಲಹಂಕದ ಕೋಗಿಲು ಲೇಔಟ್‌ ಸರ್ವೇ ನಂಬರ್‌ 99 ರಲ್ಲಿನ ಫಕೀರ್‌ ಕಾಲೋನಿ ನ್ಯೂ ಮತ್ತು ವಾಸಿಂ ಲೇಔಟ್‌ಗಳಲ್ಲಿ ಅಕ್ರಮವಾಗಿ ಮನೆಗಳನ್ನು ನಿರ್ಮಿಸಲಾಗಿದೆ. ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಮೀಸಲಿಟ್ಟಿದ್ದ ಜಾಗವನ್ನು ಅತಿಕ್ರಮಿಸಿ ಈ ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಈ ಪ್ರದೇಶದಲ್ಲಿ ಒಟ್ಟು 167 ಕುಟುಂಬಗಳು ವಾಸವಿದ್ದವು. 135 ಮುಸ್ಲಿಂ, 31 ಹಿಂದೂ ಹಾಗೂ ಒಂದು ಕ್ರೈಸ್ತ ಕುಟುಂಬ ವಾಸವಿತ್ತು. ಈ ಕುಟುಂಬಗಳು ಪಡೆದಿರುವ ಆಧಾರ್‌ ಕಾರ್ಡ್‌, ಮತದಾರರ ಗುರುತಿನ ಚೀಟಿ ಹಾಗೂ ರೇಷನ್‌ ಕಾರ್ಡ್‌ ವಿಳಾಸ ಹಾಗೂ ವಿವರಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ ಎಂದು ವರದಿ ಬೊಟ್ಟು ಮಾಡಿದೆ.

135 ಮುಸ್ಲಿಂ ಕುಟುಂಬಗಳಲ್ಲಿ ಬಾಂಗ್ಲಾದೇಶ ಅಥವಾ ರೋಹಿಂಗ್ಯಾ ಅಕ್ರಮ ವಲಸಿಗರು ಇರುವ ಸಾಧ್ಯತೆಯಿದ್ದು, ಅವರನ್ನು ಪತ್ತೆ ಹಚ್ಚುವ ಜವಾಬ್ದಾರಿ ಜಿಲ್ಲಾಡಳಿತದ ಮೇಲಿದೆ ಎಂದು ಹೇಳಿದೆ. ಸುಳ್ಳು ಜಾತಿ ಮತ್ತು ಆದಾಯ ಪ್ರಮಾಣಪತ್ರಗಳನ್ನು ಆಧರಿಸಿ ಅಕ್ರಮ ವಲಸಿಗರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುನರ್ವಸತಿ ಘೋಷಿಸಿರುವುದು ರಾಜ್ಯದ ಜನತೆಗೆ ಮಾಡಿದ ವಂಚನೆ ಎಂದು ಸತ್ಯಶೋಧನಾ ಸಮಿತಿ ವಾಗ್ದಾಳಿ ನಡೆಸಿದೆ. ಕೇವಲ ಅಲ್ಪಸಂಖ್ಯಾತರ ಓಲೈಕೆ ಮತ್ತು ಮತ ಬ್ಯಾಂಕ್ ರಾಜಕಾರಣಕ್ಕಾಗಿ ಕಾಂಗ್ರೆಸ್ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ವರದಿಯಲ್ಲಿ ಆರೋಪಿಸಿದೆ.

ಕೃಷ್ಣಬೈರೇಗೌಡರ ಆಪ್ತನೇ ಸೂತ್ರಧಾರ

ಬ್ಯಾಟರಾಯನಪುರ ಕ್ಷೇತ್ರದ ಶಾಸಕ ಕೃಷ್ಣಬೈರೇಗೌಡ ಅವರ ಆಪ್ತ ಎನ್ನಲಾದ ವಸೀಂ ಎಂಬಾತನೇ ಈ ಅಕ್ರಮ ಬಡಾವಣೆ ನಿರ್ಮಾಣದ ಹಿಂದಿನ ಸೂತ್ರಧಾರ. ಈತ ಪ್ರತಿ ಕುಟುಂಬದಿಂದ 3 ರಿಂದ 5 ಲಕ್ಷ ರೂ. ಪಡೆದು ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ವಾಸಿಸಲು ಅವಕಾಶ ಮಾಡಿಕೊಟ್ಟಿದ್ದ ಎಂಬ ಸಂಗತಿಯನ್ನು ಸತ್ಯಶೋಧನಾ ಸಮಿತಿ ಉಲ್ಲೇಖಿಸಿದೆ.

ಕಂದಾಯ ಸಚಿವರಾಗಿರುವ ಕೃಷ್ಣಬೈರೇಗೌಡರು ತಮ್ಮ ಕಣ್ಣೆದುರೇ ಇಷ್ಟೆಲ್ಲಾ ಅಕ್ರಮ ನಡೆಯುತ್ತಿದ್ದರೂ ಮೌನ ವಹಿಸಿರುವುದು. ಯಾವುದೇ ಕ್ರಮ ಕೈಗೊಳ್ಳದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಸಮಿತಿ ಟೀಕಿಸಿದೆ.

ಘಟನೆ ನಡೆದು 15 ದಿನಗಳಾದರೂ ವಸೀಂ ವಿರುದ್ಧ ಯಾವುದೇ ಎಫ್‌ಐಆರ್ ದಾಖಲಾಗಿರಲಿಲ್ಲ. ಆದರೆ, ಸಾರ್ವಜನಿಕರ ತೀವ್ರ ಒತ್ತಡದ ಹಿನ್ನೆಲೆಯಲ್ಲಿ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಇದು ಸಮಿತಿಯ ಅನುಮಾನಗಳನ್ನು ದೃಢಪಡಿಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸಮಿತಿಯ ಆಗ್ರಹ ಏನು?

ಕೋಗಿಲು ಲೇಔಟ್ ನಲ್ಲಿ ನಡೆದ ತೆರವು ಕಾರ್ಯಾಚರಣೆಯಲ್ಲಿ ಮನೆ ಕಳೆದುಕೊಂಡ ಒತ್ತುವರಿದಾರರಿಗೆ ರಾಜೀವ್‌ ಗಾಂಧಿ ವಸತಿ ನಿಗಮದಡಿ ಪುನರ್ವಸತಿ ಕಲ್ಪಿಸಲು ಕಾನೂನಿನಲ್ಲಿ ಯಾವುದೇ ಅವಕಾಶವಿಲ್ಲ. ನಿಯಮ ಬಾಹಿರವಾಗಿ ಪುನರ್ವಸತಿ ಕಲ್ಪಿಸಿದರೆ ಭವಿಷ್ಯದಲ್ಲಿ ಇದೊಂದು ಪೂರ್ವ ನಿದರ್ಶನವಾಗಲಿದೆ. ಸರ್ಕಾರದ ಕ್ರಮದಿಂದ ಒತ್ತುವರಿದಾರರು ಮನಸೋ ಇಚ್ಛೆ ಸರ್ಕಾರಿ ಜಾಗಗಳಲ್ಲಿ ಶೆಡ್‌ಗಳನ್ನು ನಿರ್ಮಿಸಿಕೊಳ್ಳುವ ಆತಂಕವಿದೆ. ಬಳಿಕ ಒತ್ತುವರಿ ತೆರವಿನ ವೇಳೆ ಆ ಜಾಗದಲ್ಲಿ ಪಕ್ಕಾ ಮನೆಗಳಿದ್ದವು ಎಂದು ವಾದಿಸಿ ಸರ್ಕಾರದ ಮೇಲೆ ಹಕ್ಕು ಚಲಾಯಿಸುತ್ತಾರೆ. ಹಾಗಾಗಿ ಒತ್ತುವರಿದಾರರಿಗೆ ಯಾವುದೇ ಪುನರ್ವಸತಿ ಕಲ್ಪಿಸಬಾರದು ಎಂದು ಸಮಿತಿ ಆಗ್ರಹಿಸಿದೆ.

ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ನೇತೃತ್ವದ ಸತ್ಯಶೋಧನಾ ಸಮಿತಿಯಲ್ಲಿ ತಮ್ಮೇಶ್ ಗೌಡ, ಮಾಳವಿಕಾ ಅವಿನಾಶ್, ಭಾಸ್ಕರ್ ರಾವ್, ದಾಸರಹಳ್ಳಿ ಶಾಸಕ ಮುನಿರಾಜು, ಎಸ್. ಹರೀಶ್ ಹಾಗೂ ಕೆ.ಎಸ್. ನವೀನ್ ಸದಸ್ಯರಾಗಿದ್ದರು.

Read More
Next Story