Crimes are rampant at CMs residence, BJP demands change of police officers
x

ಸಿಎಂ ಸಿದ್ದರಾಮಯ್ಯ, ಮೈಸೂರು ಪೊಲೀಸ್‌ ಕಮಿಷನರ್‌ ಸೀಮಾ ಲಾಟ್ಕರ್‌ ಹಾಗೂ ಬಿಜೆಪಿ ನಾಯಕ ರಘು ಕೌಟಿಲ್ಯ

ಸಿಎಂ ತವರಲ್ಲೇ ಅಪರಾಧ ಕೃತ್ಯ ಹೆಚ್ಚಳ; ಪೊಲೀಸ್‌ ಅಧಿಕಾರಿಗಳ ಎತ್ತಂಗಡಿಗೆ ಬಿಜೆಪಿ ಆಗ್ರಹ

ನಾಡಹಬ್ಬ ದಸರಾದಲ್ಲಿ ಬಲೂನು ಮಾರಲು ಬಂದ ಅಲೆಮಾರಿ ಕುಟುಂಬದ ಹತ್ತು ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ ಬರ್ಬರವಾಗಿ ಕೊಲೆ ಮಾಡಿರುವ ಪ್ರಕರಣ ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತದ್ದು ಎಂದು ಬಿಜೆಪಿ ನಾಯಕ ರಘು ಕೌಟಿಲ್ಯ ತಿಳಿಸಿದ್ದಾರೆ.


Click the Play button to hear this message in audio format

ಸಾಂಸ್ಕೃತಿಕ ನಗರಿ ಮೈಸೂರು ಪ್ರಸ್ತುತ ಅಪರಾಧಿಗಳ ತಾಣವಾಗುತ್ತಿದೆ. ಪದೇ ಪದೇ ಅಪರಾಧ ಕೃತ್ಯಗಳು ನಡೆಯುತ್ತಿದ್ದು, ಕಾನೂನು ಸುವ್ಯವಸ್ಥೆ ಸಂಪೂರ್ಣ ನೆಲಕಚ್ಚಿದೆ. ಕೂಡಲೇ ರಾಜ್ಯ ಸರ್ಕಾರ ಪೊಲೀಸ್ ಅಧಿಕಾರಿಗಳನ್ನು ಎತ್ತಂಗಡಿ ಮಾಡಿ, ಕಾನೂನು ಸುವ್ಯವಸ್ಥೆ ಬಿಗಿಗೊಳಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ಶನಿವಾರ ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರಾಜ್ಯ ಬಿಜೆಪಿ ಹಿಂದುಳಿದ ಮೋರ್ಚಾದ ಅಧ್ಯಕ್ಷ ರಘು ಕೌಟಿಲ್ಯ, ನಾಡಹಬ್ಬ ದಸರಾದಲ್ಲಿ ಬಲೂನು ಮಾರಲು ಬಂದ ಅಲೆಮಾರಿ ಕುಟುಂಬದ ಹತ್ತು ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಇದು ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವ ಘಟನೆ. ಈ ಪೈಶಾಚಿಕ ಘಟನೆ ಅತ್ಯಂತ ಖಂಡನೀಯ ಎಂದು ಆಕ್ರೋಶ ಹೊರಹಾಕಿದ್ದಾರೆ.

ನಗರದಲ್ಲಿ ಆತಂಕಕಾರಿ ಬೆಳವಣಿಗೆ

ಇತ್ತೀಚಿಗೆ “ಸಾಂಸ್ಕೃತಿಕ ನಗರ ಮೈಸೂರು ಅಪರಾಧ ನಗರವಾಗಿ ಮಾರ್ಪಡುತ್ತಿದೆ” ನಾಡಹಬ್ಬ ದಸರಾ ಸಡಗರ ಮರೆಯುವ ಮುನ್ನವೇ ಸಾಲು ಸಾಲು ಕೊಲೆ, ಅತ್ಯಾಚಾರದ ಘಟನೆಗಳು ನಡೆಯುತ್ತಿವೆ. ಶಾಂತಿ ಸುವ್ಯವಸ್ಥೆ ಹಾಗೂ ಸುರಕ್ಷಿತ ನಗರವೆಂದು ಖ್ಯಾತಿ ಪಡೆದಿದ್ದ ಮೈಸೂರಿನಲ್ಲಿ ಇತ್ತೀಚೆಗೆ ಡ್ರಗ್ಸ್‌ ಫ್ಯಾಕ್ಟರಿ ಪತ್ತೆಯಾಗಿತ್ತು. ಇದು ಅತ್ಯಂತ ಕಳವಳಕಾರಿ ಎಂದು ಹೇಳಿದ್ದಾರೆ.

ಸಿಎಂ ತವರಲ್ಲೇ ಅತ್ಯಂತ ಹೇಯ ಕೃತ್ಯ

ಇತ್ತೀಚೆಗೆ ವಸ್ತುಪ್ರದರ್ಶನ ಮೈದಾನದ ಬಳಿ ಯುವಕನ ಕೊಲೆಯಾಗಿತ್ತು. ಈಗ ಅದೇ ಸ್ಥಳದಲ್ಲಿ ಹತ್ತು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಲಾಗಿದೆ. ಸ್ವತಃ ಮುಖ್ಯಮಂತ್ರಿ ತವರು ಜಿಲೆಯಲ್ಲಿ ಕೊಲೆ, ಸುಲಿಗೆ, ಬಾಲಕಿ ಮೇಲಿನ ಅತ್ಯಾಚಾರ ಸೇರಿದಂತೆ ಹಲವು ಪ್ರಕರಣಗಳು ನಡೆದಿರುವುದು ನಾಚಿಕೆಗೇಡು.

ಕಾಂಗ್ರೆಸ್ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಕೂಡಲೇ ಸರ್ಕಾರ ಮೈಸೂರಿನ ಪೊಲೀಸ್ ವ್ಯವಸ್ಥೆಯನ್ನು ಅಮೂಲಾಗ್ರವಾಗಿ ಬದಲಿಸಿ ಕಾನೂನು ಬಿಗಿಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.

ಏನಿದು ಘಟನೆ ?

ಕಲಬುರಗಿ ಮೂಲದ ದಂಪತಿಯ ನಾಲ್ವರು ಮಕ್ಕಳಲ್ಲಿ ಮೃತ ಬಾಲಕಿಯೂ ಒಬ್ಬಳಾಗಿದ್ದಳು. ಕುಟುಂಬವು ದಸರಾ ವೇಳೆ ಬಲೂನ್‌ ಮಾರಾಟಕ್ಕಾಗಿ ಮೈಸೂರಿಗೆ ಬಂದಿತ್ತು. ಮಗು ತನ್ನ ಕುಟುಂಬದವರೊಂದಿಗೆ ತಾತ್ಕಾಲಿಕ ಶೆಡ್‌ನಲ್ಲಿ ಮಲಗಿತ್ತು. ಬೆಳಿಗ್ಗೆ ಸುಮಾರು 4 ಗಂಟೆಗೆ ಮಳೆ ಬರುವಾಗ ತಾಯಿ ಎಚ್ಚರಗೊಂಡು ತನ್ನ ಮಕ್ಕಳಲ್ಲಿ ಒಬ್ಬಳು ಕಾಣೆಯಾಗಿರುವುದನ್ನು ಗಮನಿಸಿದರು. ಈ ವೇಳೆ ಮಗುವಿಗಾಗಿ ಹುಡುಕಾಟ ನಡೆಸಿದಾಗ ಶೆಡ್‌ನಿಂದ ಸುಮಾರು 50 ಮೀಟರ್ ದೂರದಲ್ಲಿ ಬಾಲಕಿಯ ಶವ ಪತ್ತೆಯಾಗಿತ್ತು.

ತನಿಖೆಯ ವೇಳೆ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಶಂಕಿತನ ಗುರುತು ಪತ್ತೆಯಾದ್ದರಿಂದ ಪೊಲೀಸರು ಕೊಳ್ಳೆಗಾಲದಲ್ಲಿ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದರು.

Read More
Next Story