
ಬಳ್ಳಾರಿಯಲ್ಲಿ ಬ್ಯಾನರ್ ಸಂಘರ್ಷ: ಭರತ್ ರೆಡ್ಡಿ ಕರೆ ಸ್ವೀಕರಿಸಲು ನಿರಾಕರಿಸಿದ ಸಿದ್ದರಾಮಯ್ಯ
ಭರತ್‌ರೆಡ್ಡಿ ಗಲಾಟೆ ಬಗೆಹರಿಸಲು ಸಚಿವ ಜಮೀರ್ ಅಹ್ಮದ್ ಖಾನ್ ಮಧ್ಯಸ್ಥಿಕೆಯನ್ನೂ ತಳ್ಳಿಹಾಕಿದ ಸಿದ್ದರಾಮಯ್ಯ, ಶಾಸಕರ ನಡೆಯನ್ನು ಬಹಿರಂಗವಾಗಿಯೇ ಖಂಡಿಸಿರುವುದು ಕಾಂಗ್ರೆಸ್ ವಲಯದಲ್ಲಿ ಸಂಚಲನ ಮೂಡಿಸಿದೆ.
ಗಣಿ ನಾಡು ಬಳ್ಳಾರಿಯಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣದ ವೇಳೆ ನಡೆದ ಬ್ಯಾನರ್ ಸಂಘರ್ಷ ಹಾಗೂ ಗುಂಡಿನ ದಾಳಿಯ ಘಟನೆ ಈಗ ರಾಜ್ಯ ರಾಜಕಾರಣದಲ್ಲಿ ಕಂಪನ ಸೃಷ್ಟಿಸಿದೆ. ಈ ಘಟನೆಯಿಂದ ತೀವ್ರ ಅಸಮಾಧಾನಗೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಸ್ವಪಕ್ಷದ ಶಾಸಕ ನಾರಾ ಭರತ್ ರೆಡ್ಡಿ ಅವರ ವಿರುದ್ಧವೇ ಗರಂ ಆಗಿದ್ದಾರೆ. ಭರತ್‌ರೆಡ್ಡಿ ಗಲಾಟೆ ಬಗೆಹರಿಸಲು ಸಚಿವ ಜಮೀರ್ ಅಹ್ಮದ್ ಖಾನ್ ಮಧ್ಯಸ್ಥಿಕೆಯನ್ನೂ ತಳ್ಳಿಹಾಕಿದ ಸಿದ್ದರಾಮಯ್ಯ, ಶಾಸಕರ ನಡವಳಿಕೆಯನ್ನು ಬಹಿರಂಗವಾಗಿಯೇ ಖಂಡಿಸಿರುವುದು ಕಾಂಗ್ರೆಸ್ ವಲಯದಲ್ಲಿ ಸಂಚಲನ ಮೂಡಿಸಿದೆ.
ದಶಕಗಳ ಕಾಲ ರಾಜಕಾರಣ ಮಾಡಿರುವ ಸಿದ್ದರಾಮಯ್ಯ ಸೌಜನ್ಯದ ರಾಜಕಾರಣ ಮಾಡಿದ್ದಾರೆ. ಬಳ್ಳಾರಿಯ ಘಟನೆಯ ಬಗ್ಗೆ ಸಚಿವ ಜಮೀರ್ ಅಹ್ಮದ್ ಅವರಿಂದ ಮಾಹಿತಿ ಪಡೆಯುವಾಗ ಸಿದ್ದರಾಮಯ್ಯ ತೀವ್ರವಾಗಿ ಕಿಡಿಕಾರಿದ್ದಾರೆ. "ನನ್ನ ಇಡೀ ರಾಜಕೀಯ ಜೀವನದಲ್ಲಿ ಇಂತಹ ಕ್ಷುಲ್ಲಕ ಕಾರಣಕ್ಕೆ ಇಷ್ಟೊಂದು ದೊಡ್ಡ ಗಲಾಟೆ ನಡೆದಿದ್ದನ್ನು ನೋಡಿರಲಿಲ್ಲ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ವಿಶೇಷವೆಂದರೆ, ಜನಾರ್ದನ ರೆಡ್ಡಿ ರಾಜಕೀಯವಾಗಿ ಸಿದ್ದರಾಮಯ್ಯ ಅವರ ವಿರೋಧಿಯಾಗಿದ್ದರೂ, "ಅವರ ಮನೆ ಮುಂದೆ ಹೋಗಿ ಬ್ಯಾನರ್ ಕಟ್ಟುವುದು ತಪ್ಪು" ಎಂದು ನೇರವಾಗಿ ಹೇಳಿದ್ದಾರೆ. ಎದುರಾಳಿಯ ಖಾಸಗಿ ಜಾಗ ಅಥವಾ ನಿವಾಸದ ಬಳಿ ಪ್ರಚೋದನಾತ್ಮಕವಾಗಿ ವರ್ತಿಸುವುದು ರಾಜಕೀಯ ನೈತಿಕತೆಯಲ್ಲ ಎಂಬುದು ಸಿದ್ದರಾಮಯ್ಯ ನಿಲುವು. "ಬ್ಯಾನರ್ ವಿಚಾರಕ್ಕೆ ಇಷ್ಟೆಲ್ಲಾ ರಾದ್ಧಾಂತ ಆಗಬೇಕಿರಲಿಲ್ಲ" ಎಂಬ ಅವರ ಮಾತು ಶಾಸಕ ಭರತ್ ರೆಡ್ಡಿ ಅವರ ಅತಿರೇಕದ ನಡವಳಿಕೆಗೆ ಸಾಕ್ಷಿಯಾಗಿದೆ ಎಂಬ ಮಾತುಗಳು ರಾಜಕೀಯದಲ್ಲಿ ಕೇಳಿಬಂದಿವೆ.
ಪ್ರಕರಣದಲ್ಲಿ ಗಮನಾರ್ಹ ಸಂಗತಿಯೆಂದರೆ, ಸ್ವಪಕ್ಷದ ಶಾಸಕರ ಜೊತೆ ಮಾತನಾಡಲು ಮುಖ್ಯಮಂತ್ರಿಗಳು ನಿರಾಕರಿಸಿದ್ದು. ಸಚಿವ ಜಮೀರ್ ಅಹ್ಮದ್ ಅವರು ಶಾಸಕ ಭರತ್ ರೆಡ್ಡಿ ಅವರಿಗೆ ದೂರವಾಣಿ ಕರೆ ಮಾಡಿ ಮುಖ್ಯಮಂತ್ರಿ ಜೊತೆ ಮಾತನಾಡಿಸಲು ಪ್ರಯತ್ನಿಸಿದರು. ಆದರೆ, ಸಿದ್ದರಾಮಯ್ಯ ಅವರು "ನಾನು ಭರತ್ ರೆಡ್ಡಿ ಜೊತೆ ಮಾತನಾಡುವುದಿಲ್ಲ" ಎಂದು ಕಠಿಣವಾಗಿ ಹೇಳಿ ಕರೆಯನ್ನು ನಿರಾಕರಿಸಿದ್ದಾರೆ. ಇದು ಶಾಸಕರಿಗೆ ನೀಡಿದ ದೊಡ್ಡ ಮಟ್ಟದ ಎಚ್ಚರಿಕೆಯಾಗಿದೆ. ಸರ್ಕಾರದ ವರ್ಚಸ್ಸಿಗೆ ಧಕ್ಕೆ ತರುವ ಇಂತಹ ಘಟನೆಗಳನ್ನು ತಾವು ಸಹಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ.
ಡಿ.ಕೆ. ಶಿವಕುಮಾರ್ ಬಣದಲ್ಲಿ ಗುರುತಿಸಿಕೊಂಡಿದ್ದಾರೆ.
ರಾಜಕೀಯ ವಲಯದ ಮೂಲಗಳ ಪ್ರಕಾರ, ಭರತ್ ರೆಡ್ಡಿ ಅವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಭರತ್ ರೆಡ್ಡಿ ತಂದೆ ಸೂರ್ಯನಾರಾಯಣ ರೆಡ್ಡಿ ಅವರು ಹಿಂದೆ ಜೆಡಿಎಸ್‌ನಲ್ಲಿದ್ದರು, ನಂತರ ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಬಳ್ಳಾರಿಯಲ್ಲಿ ಅಧಿಪತ್ಯ ಸ್ಥಾಪಿಸಲು ಈ ಬಣವು ಜನಾರ್ದನ ರೆಡ್ಡಿ ಅವರಂತಹ ಹಳೆಯ ಶಕ್ತಿಗಳನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ಜಮೀರ್ ಅವರು ಭರತ್ ರೆಡ್ಡಿ ಪರವಾಗಿ ವಕಾಲತ್ತು ವಹಿಸುತ್ತಿರುವುದು ಮತ್ತು ಸಿಎಂ ಅದನ್ನು ತಿರಸ್ಕರಿಸುತ್ತಿರುವುದು ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಬಣಗಳ ನಡುವಿನ ಆಂತರಿಕ ಸಮರಕ್ಕೂ ಸಾಕ್ಷಿಯಾಗುತ್ತಿದೆಯೇ ಎಂಬ ಅನುಮಾನ ಮೂಡಿಸಿದೆ ಎಂಬ ಮಾತುಗಳು ಕೇಳಿಬಂದಿವೆ.
ಕ್ಷುಲ್ಲಕ ವಿಚಾರಕ್ಕೆ ಪ್ರತಿಷ್ಠೆಯ ಬಲಿ
ಬ್ಯಾನರ್ ಕಟ್ಟುವುದು ಒಂದು ಅತ್ಯಂತ ಸಾಮಾನ್ಯ ವಿಚಾರ. ಆದರೆ, ಬಳ್ಳಾರಿಯ ರಾಜಕೀಯ ಪಾರುಪತ್ಯದ ಹಪಾಹಪಿಯಿಂದಾಗಿ ಇದು ಒಂದು ಹತ್ಯೆ ಸಂಚಿನ ಸ್ವರೂಪ ಪಡೆದುಕೊಂಡಿದೆ. ಭರತ್ ರೆಡ್ಡಿ ಅವರು ಜನಾರ್ದನ ರೆಡ್ಡಿ ಅವರ ಅಸ್ತಿತ್ವಕ್ಕೆ ಸವಾಲು ಹಾಕಲು ಅವರ ಮನೆ ಮುಂದೆಯೇ ಬ್ಯಾನರ್ ಕಟ್ಟಲು ಪ್ರಚೋದನೆ ನೀಡಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಆಡಳಿತರೂಢ ಶಾಸಕರೇ ಇಂತಹ ಗೂಂಡಾಗಿರಿಯಲ್ಲಿ ತೊಡಗಿಕೊಂಡರೆ ವಿರೋಧ ಪಕ್ಷಗಳಿಗೆ ದೊಡ್ಡ ಅಸ್ತ್ರ ಸಿಕ್ಕಂತಾಗುತ್ತದೆ. ಗುಂಡಿನ ದಾಳಿ ಮತ್ತು ಪೆಟ್ರೋಲ್ ಬಾಂಬ್ ಬಳಕೆಯು ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಸಂದೇಶ ನೀಡುತ್ತದೆ. ಒಂದು ಅಭಿವೃದ್ಧಿ ಅಥವಾ ಧಾರ್ಮಿಕ ಕಾರ್ಯಕ್ರಮ (ವಾಲ್ಮೀಕಿ ಪುತ್ಥಳಿ ಅನಾವರಣ) ಹಿಂಸಾಚಾರಕ್ಕೆ ವೇದಿಕೆಯಾಗಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸುತಾರಾಂ ಇಷ್ಟವಾಗಿಲ್ಲ ಎಂದು ಹೇಳಲಾಗಿದೆ.
ನಾರಾ ಭರತ್‌ರೆಡ್ಡಿ ಹಿನ್ನೆಲೆ
ಬಳ್ಳಾರಿ ನಗರದ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಅವರು ಕೇವಲ ಒಬ್ಬ ಜನಪ್ರತಿನಿಧಿಯಾಗಿ ಮಾತ್ರವಲ್ಲದೆ, ದಶಕಗಳ ಕಾಲದ ರಾಜಕೀಯ ಪರಂಪರೆ ಮತ್ತು ಬೃಹತ್ ಉದ್ಯಮ ಸಾಮ್ರಾಜ್ಯದ ವಾರಸುದಾರರಾಗಿ ಗುರುತಿಸಿಕೊಂಡಿದ್ದಾರೆ. ಇವರ ಹಿನ್ನೆಲೆಯು ಕರ್ನಾಟಕ ಮತ್ತು ಆಂಧ್ರಪ್ರದೇಶದ ಗಡಿಭಾಗದ 'ಗಣಿ ರಾಜಕಾರಣ'ದೊಂದಿಗೆ ಬೆಸೆದುಕೊಂಡಿದೆ. ಭರತ್ ರೆಡ್ಡಿ ಅವರ ತಂದೆ ನಾರಾ ಸೂರ್ಯನಾರಾಯಣ ರೆಡ್ಡಿ ಬಳ್ಳಾರಿ ಜಿಲ್ಲೆಯ ರಾಜಕಾರಣದ ಹಳೆಯ ಮತ್ತು ಪ್ರಭಾವಿ ನಾಯಕರು. ಮೂಲತಃ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ರಾಯದುರ್ಗಂ ತಾಲೂಕಿನವರಾದ ಈ ಕುಟುಂಬವು ದಶಕಗಳ ಹಿಂದೆಯೇ ಬಳ್ಳಾರಿಗೆ ವಲಸೆ ಬಂದು ನೆಲೆಸಿತು. ಸೂರ್ಯನಾರಾಯಣ ರೆಡ್ಡಿ ಅವರು ಜೆಡಿಎಸ್ ಪಕ್ಷದಿಂದ ಕುರುಗೋಡು ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ನಂತರ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಅವರು ಕಾಂಗ್ರೆಸ್ ಸೇರ್ಪಡೆಯಾದರು. ತಂದೆಯ ರಾಜಕೀಯ ಚಾಣಾಕ್ಷತನ ಮತ್ತು ಜಿಲ್ಲೆಯ ಮೇಲಿನ ಹಿಡಿತವೇ ಭರತ್ ರೆಡ್ಡಿ ಅವರಿಗೆ ಭದ್ರವಾದ ಅಡಿಪಾಯ ಹಾಕಿಕೊಟ್ಟಿತು.
ಭರತ್ ರೆಡ್ಡಿ ಅವರು ಸಕ್ರಿಯ ರಾಜಕಾರಣಕ್ಕೆ ಪ್ರವೇಶಿಸಿದ್ದು ಯುವ ಕಾಂಗ್ರೆಸ್ ಮೂಲಕ. 2023ರ ವಿಧಾನಸಭಾ ಚುನಾವಣೆಯಲ್ಲಿ ಬಳ್ಳಾರಿ ನಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದ ಇವರು, ಬಿಜೆಪಿಯ ಪ್ರಭಾವಿ ನಾಯಕ ಜಿ. ಸೋಮಶೇಖರ ರೆಡ್ಡಿ ಅವರನ್ನು ಸೋಲಿಸುವ ಮೂಲಕ ಇಡೀ ರಾಜ್ಯದ ಗಮನ ಸೆಳೆದರು. ಎರಡು ದಶಕಗಳ ಕಾಲ ಬಳ್ಳಾರಿಯಲ್ಲಿ ಅಧಿಪತ್ಯ ಸ್ಥಾಪಿಸಿದ್ದ 'ರೆಡ್ಡಿ ಸಹೋದರರ' ಕೋಟೆಯನ್ನು ಭೇದಿಸಿದ್ದು ಇವರ ರಾಜಕೀಯ ಜೀವನದ ಅತಿ ದೊಡ್ಡ ಮೈಲಿಗಲ್ಲು. ಪ್ರಸ್ತುತ ಇವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆಪ್ತ ಬಣದಲ್ಲಿ ಗುರುತಿಸಿಕೊಂಡಿದ್ದಾರೆ.
ಉದ್ಯಮದಲ್ಲಿ ಆಂಧ್ರದ ನಂಟು
ಭರತ್ ರೆಡ್ಡಿ ಕುಟುಂಬದ ಆರ್ಥಿಕ ಶಕ್ತಿಯು ಕೇವಲ ಕರ್ನಾಟಕಕ್ಕೆ ಸೀಮಿತವಾಗಿಲ್ಲ. ಇವರ ಕುಟುಂಬವು ಆಂಧ್ರಪ್ರದೇಶದ ಒಂಗೋಲ್ ಮತ್ತು ಚಿಮಕುರ್ತಿ ಭಾಗದಲ್ಲಿ ಬೃಹತ್ ಗ್ರಾನೈಟ್ ಗಣಿಗಾರಿಕೆ ಉದ್ಯಮವನ್ನು ಹೊಂದಿದೆ. ಸೂರ್ಯನಾರಾಯಣ ರೆಡ್ಡಿ ಅವರಿಗೆ ಆಂಧ್ರದ ಮಾಜಿ ಮುಖ್ಯಮಂತ್ರಿ ದಿವಂಗತ ವೈ.ಎಸ್. ರಾಜಶೇಖರ ರೆಡ್ಡಿ ಅವರ ತಂದೆ ವೈ.ಎಸ್. ರಾಜಾ ರೆಡ್ಡಿ ಅವರೊಂದಿಗೆ ನಿಕಟ ವ್ಯವಹಾರಿಕ ಸಂಬಂಧವಿತ್ತು. ಈ ವೈಎಸ್‌ಆರ್ ಸಂಪರ್ಕ ಮತ್ತು ರಾಯಲಸೀಮೆ ಭಾಗದ ಪ್ರಭಾವಿ ನಾಯಕರೊಂದಿಗಿನ ಒಡನಾಟವು ಭರತ್ ರೆಡ್ಡಿ ಅವರಿಗೆ ಆರ್ಥಿಕವಾಗಿ ಮತ್ತು ರಾಜಕೀಯವಾಗಿ ದೊಡ್ಡ ಬಲ ನೀಡಿದೆ. ಗ್ರಾನೈಟ್ ಉದ್ಯಮದ ಜೊತೆಗೆ ರಿಯಲ್ ಎಸ್ಟೇಟ್ ಮತ್ತು ಕೃಷಿ ಕ್ಷೇತ್ರದಲ್ಲಿಯೂ ಇವರ ಕುಟುಂಬಕ್ಕೆ ದೊಡ್ಡ ಹೂಡಿಕೆಗಳಿವೆ.
ಅಧಿಕಾರಕ್ಕಾಗಿ ಹೋರಾಟ, ಎದುರಾದ ಸವಾಲು
ಬಳ್ಳಾರಿಯಲ್ಲಿ ಗಾಲಿ ಜನಾರ್ದನ ರೆಡ್ಡಿ ಅವರ ಕುಟುಂಬದ ಪ್ರಭಾವವನ್ನು ಸಂಪೂರ್ಣವಾಗಿ ಅಳಿಸಿಹಾಕಿ, ತಮ್ಮ ಕುಟುಂಬದ ಹಳೆಯ ಪಾರುಪತ್ಯವನ್ನು ಮರುಸ್ಥಾಪಿಸುವುದು ಭರತ್ ರೆಡ್ಡಿ ಅವರ ಪ್ರಮುಖ ಗುರಿಯಾಗಿದೆ. ಇತ್ತೀಚೆಗೆ ನಡೆದ ಬ್ಯಾನರ್ ಸಂಘರ್ಷವು ಈ 'ಅಧಿಕಾರ ಹೋರಾಟ'ದ ಒಂದು ಭಾಗವೇ ಆಗಿದೆ. ಜನಾರ್ದನ ರೆಡ್ಡಿ ಅವರಂತಹ ಪ್ರಭಾವಿ ನಾಯಕರ ವಿರುದ್ಧ ನೇರ ಸಂಘರ್ಷಕ್ಕೆ ಇಳಿಯುವ ಮೂಲಕ ಭರತ್ ರೆಡ್ಡಿ ತಾವೊಬ್ಬ 'ಆಕ್ರಮಣಕಾರಿ ನಾಯಕ' ಎಂಬ ಸಂದೇಶವನ್ನು ನೀಡುತ್ತಿದ್ದಾರೆ.
1990ರ ದಶಕದ ಕೊನೆಯಲ್ಲಿ ಗಾಲಿ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಜೋಡಿ ಬಳ್ಳಾರಿಯಲ್ಲಿ ಉದಯಿಸುವ ಮೊದಲು, ನಾರಾ ಸೂರ್ಯನಾರಾಯಣ ರೆಡ್ಡಿ ಅವರಂತಹ ನಾಯಕರು ಜಿಲ್ಲೆಯಲ್ಲಿ ಪ್ರಭಾವಶಾಲಿಯಾಗಿದ್ದರು. 2004 ರಿಂದ 2011ರ ಅವಧಿಯಲ್ಲಿ ಜನಾರ್ದನ ರೆಡ್ಡಿ ಅವರ 'ಓಬುಲಪುರಂ ಮೈನಿಂಗ್ ಕಂಪನಿ' ಮೂಲಕ ಬಳ್ಳಾರಿಯಲ್ಲಿ ಅತಿಮಾನುಷ ಶಕ್ತಿಯಾಗಿ ಬೆಳೆದರು. ಇದು ನಾರಾ ಕುಟುಂಬದ ಪ್ರಭಾವವನ್ನು ಸ್ವಲ್ಪ ಮಟ್ಟಿಗೆ ಕುಗ್ಗಿಸಿತ್ತು. ನಾರಾ ಭರತ್ ರೆಡ್ಡಿ ಅವರು ಕಾಂಗ್ರೆಸ್‌ನಿಂದ ಶಾಸಕರಾಗಿ ಆಯ್ಕೆಯಾದ ನಂತರ, ತಮ್ಮ ಕುಟುಂಬದ ಹಳೆಯ ಪಾರುಪತ್ಯವನ್ನು ಮರುಸ್ಥಾಪಿಸಲು ಮುಂದಾಗಿದ್ದಾರೆ. ಜನಾರ್ದನ ರೆಡ್ಡಿ ಅವರ ಅಸ್ತಿತ್ವವನ್ನೇ ಅಳಿಸಿಹಾಕಬೇಕು ಎಂಬ ಹಠ ಭರತ್ ರೆಡ್ಡಿ ಅವರಲ್ಲಿ ಎದ್ದು ಕಾಣುತ್ತಿದೆ.
ಬಳ್ಳಾರಿ ಅಧಿಪತ್ಯಕ್ಕಾಗಿ 'ದಾಯಾದಿ' ಸಮರ
ಒಂದು ಕಾಲದಲ್ಲಿ ಗಣಿ ಉದ್ಯಮದಲ್ಲಿ ಜೊತೆಜೊತೆಯಾಗಿ ಹೆಜ್ಜೆ ಹಾಕಿದ್ದ ಜಿ. ಜನಾರ್ದನ ರೆಡ್ಡಿ ಮತ್ತು ನಾರಾ ಸೂರ್ಯನಾರಾಯಣ ರೆಡ್ಡಿ ಅವರ ಕುಟುಂಬಗಳ ನಡುವೆ ಈಗ 'ದಾಯಾದಿ' ಕಲಹ ಶುರುವಾಗಿದೆ. ಬಳ್ಳಾರಿ ನಗರದ ಸಿರುಗುಪ್ಪ ರಸ್ತೆಯಲ್ಲಿ ನಡೆದ ಬ್ಯಾನರ್ ಸಂಘರ್ಷವು ಈ ಹಳೇ ಗೆಳೆಯರ ನಡುವಿನ ಹೊಸ ಯುದ್ಧವನ್ನು ಜಗಜ್ಜಾಹೀರು ಮಾಡಿದೆ. ಬಳ್ಳಾರಿಯಲ್ಲಿ ಗಣಿಗಾರಿಕೆ ಅಬ್ಬರದಿಂದ ನಡೆಯುತ್ತಿದ್ದ ಕಾಲದಲ್ಲಿ ಜನಾರ್ದನ ರೆಡ್ಡಿ ಮತ್ತು ಸೂರ್ಯನಾರಾಯಣ ರೆಡ್ಡಿ ಅವರ ನಡುವೆ ಅದ್ಭುತ ಹೊಂದಾಣಿಕೆಯಿತ್ತು. ಇಬ್ಬರೂ ಗಣಿ ಉದ್ಯಮದ ಏರಿಳಿತಗಳನ್ನು ಜೊತೆಯಾಗಿಯೇ ಕಂಡವರು. ಕುಟುಂಬಗಳು ಬೇರೆಯಾಗಿದ್ದರೂ, ವ್ಯವಹಾರದ ಹಿತಾಸಕ್ತಿ ಮಾತ್ರ ಒಂದೇ ಆಗಿತ್ತು. ಅಂದು ರೆಡ್ಡಿ ಸಹೋದರರ ಅಬ್ಬರಕ್ಕೆ ಸೂರ್ಯನಾರಾಯಣ ರೆಡ್ಡಿ ಅವರು ಬೆನ್ನೆಲುಬಾಗಿ ನಿಂತಿದ್ದರು. ಜಿಲ್ಲೆಯ ಗಣಿ ಲಾಬಿಯಲ್ಲಿ ಈ ಇಬ್ಬರು ನಾಯಕರ ಒಕ್ಕೂಟವು ಅಪ್ರತಿಮ ಶಕ್ತಿಯಾಗಿತ್ತು.
2011ರಲ್ಲಿ ಲೋಕಾಯುಕ್ತ ವರದಿ ಹಾಗೂ ಅಕ್ರಮ ಗಣಿಗಾರಿಕೆ ಹಗರಣವು ಬಳ್ಳಾರಿಯ ಚಿತ್ರಣವನ್ನೇ ಬದಲಿಸಿತು. ಜನಾರ್ದನ ರೆಡ್ಡಿ ಜೈಲು ಪಾಲಾದರು. ಸುಪ್ರೀಂ ಕೋರ್ಟ್ ಅವರಿಗೆ ಬಳ್ಳಾರಿ ಜಿಲ್ಲೆ ಪ್ರವೇಶಿಸಲು ನಿಷೇಧ ಹೇರಿತು. ರೆಡ್ಡಿ ಅವರ ಈ ಅನುಪಸ್ಥಿತಿಯೇ ದಶಕಗಳ ಕಾಲದ ಗೆಳೆತನದಲ್ಲಿ ಬಿರುಕು ಮೂಡಲು ಕಾರಣವಾಯಿತು. ಜನಾರ್ದನ ರೆಡ್ಡಿ ಬಂಧನವಾದ ಬಳಿಕ ಒಂದಾಗಿದ್ದ ವ್ಯವಹಾರಗಳು ಛಿದ್ರವಾದವು. ಲಾಭದ ಹಂಚಿಕೆ ಮತ್ತು ಆಸ್ತಿಗಳ ವಿಚಾರದಲ್ಲಿ ಮನಸ್ತಾಪಗಳು ಶುರುವಾದವು. ಅಂದು ಜೊತೆಯಾಗಿದ್ದವರು ತಮ್ಮ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹಾದಿ ಬೇರೆ ಮಾಡಿಕೊಂಡರು.
ಜನಾರ್ದನ ರೆಡ್ಡಿ ಅವರು ಬಳ್ಳಾರಿಯಿಂದ ದೂರವಿದ್ದ ಹತ್ತು ವರ್ಷಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಒಂದು ದೊಡ್ಡ 'ರಾಜಕೀಯ ಶೂನ್ಯ' ಸೃಷ್ಟಿಯಾಯಿತು. ಈ ಅವಕಾಶವನ್ನು ಸೂರ್ಯನಾರಾಯಣ ರೆಡ್ಡಿ ಅವರ ಪುತ್ರ ನಾರಾ ಭರತ್ ರೆಡ್ಡಿ ಸಮರ್ಥವಾಗಿ ಬಳಸಿಕೊಂಡರು. ಆಂಧ್ರಪ್ರದೇಶದ ಪ್ರಭಾವಿ ಉದ್ಯಮಿಗಳ ಬೆಂಬಲ ಮತ್ತು ತಂದೆಯ ಹಳೆಯ ಸಂಪರ್ಕಗಳನ್ನು ಬಳಸಿಕೊಂಡು ಭರತ್ ರೆಡ್ಡಿ ಬಲಿಷ್ಠರಾದರು. ಹಳೆಯ 'ರೆಡ್ಡಿ ಸಾಮ್ರಾಜ್ಯ'ದ ನೆರಳಿನಿಂದ ಹೊರಬಂದು ಸ್ವತಂತ್ರ ಶಕ್ತಿಯಾಗಿ ಬೆಳೆದರು.

