
ಬಳ್ಳಾರಿ ಸಂಘರ್ಷ: ನ್ಯಾಯಾಂಗ ಅಥವಾ ಸಿಬಿಐ ತನಿಖೆಗೆ ಬಿಜೆಪಿ ನಾಯಕರ ಪಟ್ಟು
ಬಳ್ಳಾರಿ ಘಟನೆ ವೇಳೆ ನಡೆದ ಗುಂಡಿನ ದಾಳಿ ಪೊಲೀಸರಿಂದ ನಡೆದಿದ್ದಲ್ಲ, ಬದಲಾಗಿ ಖಾಸಗಿ ವ್ಯಕ್ತಿಗಳಿಂದ ನಡೆದಿದೆ. ಪೆಟ್ರೋಲ್ ಬಾಂಬ್ ತಂದವರು ಯಾರು ಎಂಬುದು ಇಡೀ ರಾಜ್ಯಕ್ಕೆ ತಿಳಿಯಬೇಕು ಎಂದು ಮಾಜಿ ಸಚಿವ ಶ್ರೀರಾಮುಲು ಆಗ್ರಹಿಸಿದ್ದಾರೆ.
ಬಳ್ಳಾರಿ ನಗರದಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ನಡೆದ ಬ್ಯಾನರ್ ತೆರವು ವಿಚಾರವು ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇಡೀ ಪ್ರಕರಣವನ್ನು ಹೈಕೋರ್ಟ್ ನ್ಯಾಯಮೂರ್ತಿಗಳು ಅಥವಾ ಸಿಬಿಐ ಮೂಲಕ ತನಿಖೆ ನಡೆಸಬೇಕೆಂದು ಬಿಜೆಪಿ ಶಾಸಕ ಬಿ. ಶ್ರೀರಾಮುಲು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬಳ್ಳಾರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟನೆಯಲ್ಲಿ ಯುವಕನ ಸಾವಿಗೆ ಕಾಂಗ್ರೆಸ್ ಕಾರ್ಯಕರ್ತರ ದಾಂಧಲೆಯೇ ಕಾರಣ ಎಂದು ಗಂಭೀರ ಆರೋಪಿಸಿದರು. ಪ್ರಕರಣದ ಸುತ್ತ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಮತ್ತು ಆರೋಪ-ಪ್ರತ್ಯಾರೋಪಗಳು ಜಿಲ್ಲೆಯಲ್ಲಿ ಬಿಗುವಿನ ವಾತಾವರಣ ನಿರ್ಮಿಸಿವೆ ಎಂದು ಹೇಳಿದರು.
ಕಾಂಗ್ರೆಸ್ ನಾಯಕ ನಾರಾ ಭರತ್ ರೆಡ್ಡಿ ಬೆಂಬಲಿಗರು ಪೆಟ್ರೋಲ್ ಬಾಂಬ್ ಮತ್ತು ರಿವಾಲ್ವರ್‌ಗಳೊಂದಿಗೆ ಜನಾರ್ದನ ರೆಡ್ಡಿ ನಿವಾಸದತ್ತ ನುಗ್ಗಿದ್ದಾರೆ. ಇದು ಕೇವಲ ಬ್ಯಾನರ್ ವಿಚಾರವಲ್ಲ, ಇದೊಂದು ವ್ಯವಸ್ಥಿತ ಸಂಚು. ಈ ಘಟನೆಯಲ್ಲಿ ಮೃತಪಟ್ಟ ಯುವಕನ ಸಾವು ನಮಗೆ ನೋವು ತಂದಿದೆ. ಪೊಲೀಸರು ಈ ಸಾವಿನ ನೈಜ ಕಾರಣವನ್ನು ಪತ್ತೆಹಚ್ಚಬೇಕು. ಪೆಟ್ರೋಲ್ ಬಾಂಬ್ ತಂದವರು ಯಾರು ಎಂಬುದು ಇಡೀ ರಾಜ್ಯಕ್ಕೆ ತಿಳಿಯಬೇಕಿದೆ. ಅಲ್ಲದೆ, ಈ ಪ್ರಕರಣದಲ್ಲಿ ವಾಲ್ಮೀಕಿ ಸಮುದಾಯವನ್ನು ವಿನಾಕಾರಣ ಎಳೆದು ತರುತ್ತಿರುವುದು ಸರಿಯಲ್ಲ. ಸಮುದಾಯವನ್ನು ಗುರಿ ಮಾಡುವುದು ಬೇಡ. ಗಲಾಟೆ ಆರಂಭಕ್ಕೆ ಯಾರು ಕಾರಣ?, ಯಾವ ಉದ್ದೇಶದಿಂದ ಅಸ್ತ್ರಗಳೊಂದಿಗೆ ಬಂದಿದ್ದರು ಎಂಬ ಬಗ್ಗೆ ತನಿಖೆಯ ಆಗಬೇಕು ಎಂದು ಆಗ್ರಹಿಸಿದರು.
ಘಟನೆಯ ವೇಳೆ ನಡೆದ ಗುಂಡಿನ ದಾಳಿ ಪೊಲೀಸರಿಂದ ನಡೆದಿದ್ದಲ್ಲ, ಬದಲಾಗಿ ಖಾಸಗಿ ವ್ಯಕ್ತಿಗಳಿಂದ ನಡೆದಿದೆ. ಸಾಮಾನ್ಯವಾಗಿ ಇಂತಹ ಸಂದರ್ಭದಲ್ಲಿ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಗಾಳಿಯಲ್ಲಿ ಗುಂಡು ಹಾರಿಸುತ್ತಾರೆ. ಆದರೆ, ಇಲ್ಲಿ ನಡೆದಿದ್ದು ಪೊಲೀಸರ ಗುಂಡಿನ ದಾಳಿಯಲ್ಲ. ಇದು ಕಾಂಗ್ರೆಸ್ ನಾಯಕರ ಬೆಂಬಲದೊಂದಿಗೆ ಬಂದಿದ್ದ ಖಾಸಗಿ ವ್ಯಕ್ತಿಗಳು ನಡೆಸಿದ ಗುಂಡಿನ ದಾಳಿ. ಬಳ್ಳಾರಿಯ ಅಶಾಂತಿಗೆ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ಅವರ ಬೆಂಬಲಿಗರೇ ನೇರ ಹೊಣೆ. ಪೆಟ್ರೋಲ್ ಬಾಂಬ್ ಮತ್ತು ರಿವಾಲ್ವರ್‌ಗಳೊಂದಿಗೆ ಜನಾರ್ದನ ರೆಡ್ಡಿ ಅವರ ನಿವಾಸದತ್ತ ನುಗ್ಗಿದ ಗೂಂಡಾಗಳು ಯಾರು?, ಅವರ ಹಿಂದೆ ಯಾರಿದ್ದಾರೆ ಎನ್ನುವುದು ಬಹಿರಂಗವಾಗಬೇಕು ಎಂದು ಒತ್ತಾಯಿಸಿದರು.
ತಮ್ಮ ಮನೆಯ ಎದುರಿನ ಖಾಲಿ ಜಾಗದಲ್ಲಿ ಬ್ಯಾನರ್ ಕಟ್ಟಬೇಡಿ ಎಂದು ಶಾಸಕ ಜನಾರ್ದನ ರೆಡ್ಡಿ ಅವರು ಮೊದಲೇ ಸೂಚಿಸಿದ್ದರು. ಆದರೂ ಕೂಡ ಉದ್ದೇಶಪೂರ್ವಕವಾಗಿ ಪ್ರಚೋದನೆ ನೀಡಲು ಕಾಂಗ್ರೆಸ್ ಕಾರ್ಯಕರ್ತರು ಅಲ್ಲಿ ಬ್ಯಾನರ್ ಅಳವಡಿಸಲು ಮುಂದಾಗಿದ್ದಾರೆ. ರೆಡ್ಡಿ ಅವರ ಎಚ್ಚರಿಕೆಯನ್ನೂ ಮೀರಿ ಬ್ಯಾನರ್ ಕಟ್ಟಲು ಬಂದಿದ್ದು ಗಲಾಟೆಗೆ ನಾಂದಿ ಹಾಡಿದೆ. ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ದಾಂಧಲೆಯಿಂದಲೇ ಈ ಸಾವು ಸಂಭವಿಸಿದೆ. ಮೃತ ಯುವಕ ಯಾವ ಪಕ್ಷದವನು ಎನ್ನುವುದು ಮುಖ್ಯವಲ್ಲ, ಆತನ ಸಾವಿಗೆ ಕಾರಣರಾದವರನ್ನು ಪತ್ತೆ ಹಚ್ಚಿ ಶಿಕ್ಷಿಸಬೇಕು. ಕಾಂಗ್ರೆಸ್ ನಾಯಕರು ವಾಲ್ಮೀಕಿ ಸಮುದಾಯದ ಹೆಸರನ್ನು ಬಳಸಿಕೊಂಡು ರಾಜಕೀಯ ಮಾಡುತ್ತಿದ್ದಾರೆ. ಸಮುದಾಯವನ್ನು ವಿನಾಕಾರಣ ಪ್ರಕರಣದ ಮಧ್ಯೆ ಎಳೆದು ತರುವುದು ಸರಿಯಲ್ಲ ಎಂದು ಹೇಳಿದರು.
ಶಾಸಕ ಜನಾರ್ದನ ರೆಡ್ಡಿ ಮಾತನಾಡಿ, ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ಹಾಗೂ ಅವರ ತಂದೆ ನನ್ನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದಾರೆ. ರೌಡಿಗಳನ್ನು ನನ್ನ ಮನೆಗೆ ಕಳುಹಿಸಿ ಗುಂಡು ಹಾರಿಸಿದ್ದಾರೆ. ಜಿಲ್ಲೆಯಲ್ಲಿ ಬಿಜೆಪಿ ಬಲಿಷ್ಠವಾಗುತ್ತಿರುವುದನ್ನು ಸಹಿಸದ ಕಾಂಗ್ರೆಸ್ ನಾಯಕರು ಇಂತಹ ಅಡ್ಡದಾರಿ ಹಿಡಿದಿದ್ದಾರೆ ಎಂದು ಆರೋಪಿಸಿದರು. ಈ ಹೇಳಿಕೆಗೆ ಧ್ವನಿಗೂಡಿಸಿದ ಶ್ರೀರಾಮುಲು, ಜನಾರ್ದನ ರೆಡ್ಡಿ ಅವರ ರಕ್ಷಣೆ ಮತ್ತು ಬೆಂಬಲಕ್ಕೆ ನಾವು ಗಟ್ಟಿಯಾಗಿ ನಿಲ್ಲುತ್ತೇವೆ ಎಂದು ಸ್ಪಷ್ಟಪಡಿಸಿದರು.
ಬಳ್ಳಾರಿಯ ವಾಲ್ಮೀಕಿ ವೃತ್ತದಲ್ಲಿ ಜ.3ರಂದು ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ನಿಮಿತ್ತ ಕಾಂಗ್ರೆಸ್ ಕಾರ್ಯಕರ್ತರು ನಗರದಾದ್ಯಂತ ಬ್ಯಾನರ್‌ಗಳನ್ನು ಅಳವಡಿಸುತ್ತಿದ್ದರು. ಸಿರುಗುಪ್ಪ ರಸ್ತೆಯಲ್ಲಿರುವ ಶಾಸಕ ಜಿ. ಜನಾರ್ದನ ರೆಡ್ಡಿ ಅವರ ನಿವಾಸದ ಎದುರಿನ ಖಾಲಿ ನಿವೇಶನದಲ್ಲಿ ಬ್ಯಾನರ್ ಅಳವಡಿಸಲು ಮುಂದಾದಾಗ, ಜನಾರ್ದನ ರೆಡ್ಡಿ ಅವರ ಭದ್ರತಾ ಸಿಬ್ಬಂದಿ ಇದನ್ನು ತಡೆದಿದ್ದಾರೆ. ಈ ಸಣ್ಣ ವಿಚಾರವು ವಿಕೋಪಕ್ಕೆ ತಿರುಗಿ, ಎರಡೂ ಗುಂಪುಗಳ ನಡುವೆ ಭೀಕರ ಘರ್ಷಣೆ ನಡೆದಿದೆ. ಈ ವೇಳೆ ಗುಂಡಿನ ದಾಳಿ ಕೂಡ ನಡೆದಿದೆ ಎಂದು ವರದಿಯಾಗಿದೆ.

