R. Ashok demands a fair investigation into the murder of MLA Janardhana Reddy
x
ಬಳ್ಳಾರಿ ಸಂಘರ್ಷದ ಬಗ್ಗೆ ಆರ್‌. ಅಶೋಕ್‌ ಮಾತನಾಡಿದರು.

ಜನಾರ್ದನ ರೆಡ್ಡಿ ಹತ್ಯೆಗೆ ಸಂಚು... ನ್ಯಾಯಾಂಗ ತನಿಖೆ ಆಗಲಿ: ಆರ್‌.ಅಶೋಕ್‌ ಆಗ್ರಹ

ಬಳ್ಳಾರಿಯಲ್ಲಿರುವ ಶಾಸಕ ಜನಾರ್ದನ ರೆಡ್ಡಿ ಅವರ ಮನೆ ಬಳಿ ಒತ್ತಾಯಪೂರ್ವಕವಾಗಿ ಬ್ಯಾನರ್ ಏಕೆ ಕಟ್ಟಬೇಕಾಗಿತ್ತು? ಶಾಸಕ ನಾ.ರಾ. ಭರತ್‌ ರೆಡ್ಡಿಯ ಉದ್ಧಟತನವೇ ಇಷ್ಟೆಲ್ಲಾ ಸಂಭವಿಸಲು ಕಾರಣ ಎಂದು ಆರ್‌. ಅಶೋಕ್‌ ಕಿಡಿಕಾರಿದ್ದಾರೆ


Click the Play button to hear this message in audio format

ಹೊಸ ವರ್ಷದ ಸಂಭ್ರಮದಲ್ಲಿದ್ದ ಗಣಿ ಜಿಲ್ಲೆ ಬಳ್ಳಾರಿಯಲ್ಲಿ ನಡೆದ ಗುಂಡಿನ ದಾಳಿ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ದಾಳಿ ನಡೆದ ಬೆನ್ನಲ್ಲೇ ತಮ್ಮ ಕೊಲೆಗೆ ರಾಜಕೀಯ ವಿರೋಧಿಗಳು ಸಂಚು ರೂಪಿಸಿದ್ದಾರೆ ಎಂದು ಶಾಸಕ ಜನಾರ್ದನ ರೆಡ್ಡಿ ಆಘಾತಕಾರಿ ಹೇಳಿಕೆ ನೀಡಿದ್ದರು. ಇದೀಗ ವಿಪಕ್ಷ ನಾಯಕ ಆರ್‌. ಅಶೋಕ್‌ ಕೂಡ ಇದೇ ಆರೋಪವನ್ನು ಮಾಡುವ ಮೂಲಕ ಕಾಂಗ್ರೆಸ್‌ ವಿರುದ್ಧ ಬೊಟ್ಟು ಮಾಡಿ ತೋರಿಸಿದ್ದಾರೆ. ಶಾಸಕ ಜನಾರ್ದನ ರೆಡ್ಡಿಯನ್ನು ಕೊಲೆ ಮಾಡಲು ಸಂಚು ರೂಪಿಸಲಾಗಿತ್ತು. ಆದರೆ ಆ ಗುಂಡು ಕಾಂಗ್ರೆಸ್‌ ಕಾರ್ಯಕರ್ತನಿಗೆ ತಗುಲಿದೆ ಎಂದು ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌ ಆರೋಪಿಸಿದ್ದಾರೆ.

ಶುಕ್ರವಾರ (ಜ.2) ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬಳ್ಳಾರಿಯಲ್ಲಿ ವರ್ಷದ ಆರಂಭದಲ್ಲೇ ರಕ್ತಚರಿತ್ರೆಯಾಗಿದ್ದು ಇದಕ್ಕೆ ಸರ್ಕಾರವೇ ಕಾರಣ. ಈ ಘಟನೆಗೆ ಶಾಸಕ ನಾ.ರಾ.‌ ಭರತ್ ರೆಡ್ಡಿ ಕಾರಣ, ಅವರ ಮೇಲೆ ಎಫ್‌ಐಆರ್ ದಾಖಲಾಗಬೇಕು ಎಂದು ಆಗ್ರಹಿಸಿದ್ದಾರೆ. ಬಳ್ಳಾರಿಯಲ್ಲಿರುವ ಶಾಸಕ ಜನಾರ್ದನ ರೆಡ್ಡಿ ಅವರ ಮನೆ ಬಳಿ ಒತ್ತಾಯಪೂರ್ವಕವಾಗಿ ಬ್ಯಾನರ್ ಏಕೆ ಕಟ್ಟಬೇಕಾಗಿತ್ತು? ಶಾಸಕ ನಾ.ರಾ. ಭರತ್‌ ರೆಡ್ಡಿಯ ಉದ್ಧಟತನವೇ ಈ ಘಟನೆ ಸಂಭವಿಸಲು ಕಾರಣ. ಈ ಘಟನೆಯ ಕುರಿತು ಸರ್ಕಾರ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಶಾಸಕ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅವರಿಗೆ ಪ್ರಾಣಾಪಾಯವಿದೆ. ಕೂಡಲೇ ಅವರಿಗೆ ಪೊಲೀಸ್ ರಕ್ಷಣೆ ಕೊಡಬೇಕು. ಮನೆಗೆ ಅಕ್ರಮವಾಗಿ ನುಗ್ಗಿದ ಕಾಂಗ್ರೆಸ್ಸಿನವರನ್ನು ಕೂಡಲೇ ಗೂಂಡಾ ಕಾಯ್ದೆಯಡಿ ಬಂಧಿಸಬೇಕು. ಬಳ್ಳಾರಿಯಲ್ಲಿ ಸಂಭವಿಸಿರುವ ಸಾವಿಗೆ ಶಾಸಕ ಭರತ್ ರೆಡ್ಡಿಯೇ ಕಾರಣ. ಕೂಡಲೇ ಅವರನ್ನು ಬಂಧಿಸಬೇಕು. ಕಾಂಗ್ರೆಸ್‌ ಗೂಂಡಾಗಳು ಜನಾರ್ಧನ ರೆಡ್ಡಿ ಮತ್ತು ಶ್ರೀರಾಮುಲು ಅವರ ಮೇಲೆ ಗುಂಡಿನ ದಾಳಿ ಮಾಡಿರುವುದು ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿದೆ ಎಂದರು.

ಆಂಧ್ರ ಮಾದರಿ ದಾಳಿ

ಹೊಸ ವರ್ಷಾಚರಣೆ ವೇಳೆ ಮುಖ್ಯಮಂತ್ರಿಗಳು ದುರ್ಘಟನೆ ನಡೆಯದಂತೆ ಪೊಲೀಸರು ನೋಡಲಿದ್ದಾರೆಂದು ಭರವಸೆಯ ಮಾತಾಡಿದ್ದರು. ಅವರು ಹೇಳಿದ ಒಂದೇ ದಿನಕ್ಕೆ ಬಳ್ಳಾರಿಯಲ್ಲಿ ಗುಂಡಿನ ದಾಳಿ ನಡೆದಿದ್ದು, ಇದು ರಾಜ್ಯದ ಕಾನೂನು ಸುವ್ಯವಸ್ಥೆ ಕುಸಿತಕ್ಕೆ ಕೈಗನ್ನಡಿ. ಒಂದೆಡೆ ಪೊಲೀಸರು ಕಳ್ಳತನ ಮಾಡಿ ಸಿಕ್ಕಿ ಹಾಕಿಕೊಳ್ಳುತ್ತಿದ್ದಾರೆ. ಆಂಧ್ರ ಮಾದರಿಯ ರಕ್ತ ಚರಿತ್ರೆ ಕರ್ನಾಟಕಕ್ಕೂ ಕಾಲಿಟ್ಟಿದೆ. ರಾಜಕೀಯವಾಗಿ ಗುಂಡು ಹಾರಿಸುವ ಸಂಸ್ಕೃತಿ ಕರ್ನಾಟಕದಲ್ಲಿ ಇರಲಿಲ್ಲ, ಇದೀಗ ಅದಕ್ಕೂ ನಾಂದಿ ಹಾಡಿದ್ದಾರೆ ಎಂದು ತಿಳಿಸಿದರು.

ವಿಧಾನಪರಿಷತ್‌ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಶಾಸಕ ಭರತ್‌ ರೆಡ್ಡಿ ಮತ್ತು ಕಾರ್ಯಕರ್ತರ ವಿರುದ್ಧ ದೂರು ದಾಖಲಿಸಬೇಕಿತ್ತು. ಆದರೆ, ಜನಾರ್ಧನ ರೆಡ್ಡಿ ಮತ್ತು ಶ್ರೀರಾಮುಲು ಅವರ ಮೇಲೆ ದೂರು ದಾಖಲಿಸಲಾಗಿದೆ. ಅವರು ಯಾವ ರೀತಿ ಇದರಲ್ಲಿ ಭಾಗಿಯಾಗಿದ್ದಾರೆ. ಗುಂಡು ಹಾರಿಸಿದ್ದು ಯಾರು ಎಂದು ಪ್ರಶ್ನಿಸಿದ್ದಾರೆ. ಎಲ್ಲಾ ಘಟನೆ ನಡೆದಿರುವುದು ಕಾಂಗ್ರೆಸ್ಸಿನವರಿಂದಲೇ ಹೊರತು ಇದು ಬಿಜೆಪಿ ಶಾಸಕರ ಕಡೆಯಿಂದ ಆಗಿಲ್ಲ. ಆದ್ದರಿಂದ ಈ ಗೂಂಡಾವರ್ತನೆಯನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಏನಿದು ಘಟನೆ ?

ಶಾಸಕ ಜನಾರ್ದನ ರೆಡ್ಡಿ ಅವರ ಮನೆ ಎದುರಿನ ಜಾಗದಲ್ಲಿ ಬ್ಯಾನ‌ರ್ ಕಟ್ಟುವ ವಿಚಾರಕ್ಕೆ ಮೊದಲಿಗೆ ಜಗಳ ಆರಂಭವಾಗಿದೆ. ಶಾಸಕ ಭರತ್‌ ರೆಡ್ಡಿ ಆಪ್ತ ಸತೀಶ್ ರೆಡ್ಡಿ ಅವರು ಜನಾರ್ದನ ರೆಡ್ಡಿ ಅವರ ಮನೆ ಎದುರು ರಸ್ತೆಯಲ್ಲಿ ಬ್ಯಾನ‌ರ್ ಕಟ್ಟಿಸಿದರು. ಆಗ ಮಾಜಿ ಸಚಿವ ಶ್ರೀರಾಮುಲು ಅಡ್ಡ ಬಂದರು. ಈ ಕಾರಣಕ್ಕೆ ಎರಡು ಬಣಗಳ ನಡುವೆ ಮೊದಲಿಗೆ ಮಾತಿನ ಚಕಮಕಿ ನಡೆದು, ನಂತರ ಕಲ್ಲು ತೂರಾಟ ನಡೆದಿತ್ತು.

ಹತ್ಯೆಗೆ ಸಂಚು ಎಂದ ಶಾಸಕ ಜನಾರ್ದನ ರೆಡ್ಡಿ

ಈ ಬಗ್ಗೆ ಮಾತನಾಡಿರುವ ಜನಾರ್ದನ ರೆಡ್ಡಿ, ಬಳ್ಳಾರಿ‌ ನಗರ ಶಾಸಕ ನಾರಾ ಭರತ್ ರೆಡ್ಡಿ, ಅವರ ಆಪ್ತ ಸತೀಶ್ ರೆಡ್ಡಿ ಹಾಗೂ ಭರತ್ ರೆಡ್ಡಿ ತಂದೆ ನಾರಾ ಸೂರ್ಯನಾರಾಣ ರೆಡ್ಡಿಯಿಂದ ನನ್ನ ಹತ್ಯೆಗೆ ಸಂಚು ನಡೆಸಿದ್ದಾರೆ. ಬ್ಯಾನರ್ ಗಲಾಟೆ ನೆಪದಲ್ಲಿ ನಮ್ಮ ನಿವಾಸದ ಮುಂದೆ ಗನ್ ಮ್ಯಾನ್ಗಳಿಂದ ಗುಂಡಿನ ದಾಳಿ ನಡೆಸಿದ್ದಾರೆ. ಗಂಗಾವತಿಯಿಂದ ಕಾರಿನಲ್ಲಿ ಬಂದು ಇಳಿಯುತ್ತಿದ್ದಂತೆ, ಗನ್‌ಮ್ಯಾನ್‌ಗಳು ಫೈರಿಂಗ್ ನಡೆಸಿದರು ಎಂದು ಗಂಭೀರ ಆರೋಪ ಮಾಡಿದ್ದರು.

ವಾಲ್ಮೀಕಿ ಪುತ್ಥಳಿ ಪ್ರತಿಷ್ಟಾಪನೆ ಹೆಸರಲ್ಲಿ ಊರಿಗೆ ಬೆಂಕಿ ಹಚ್ಚಲು ಹೊರಟಿದ್ದಾರೆ. ಕೊಲೆಗಡುಕರನ್ನು ಹಿಂದಿಟ್ಟುಕೊಂಡು ನಾರಾ ಭರತ್ ರೆಡ್ಡಿ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದ ಜನಾರ್ದನ ರೆಡ್ಡಿ, ಗಾಳಿಯಲ್ಲಿ ಹಾರಿಬಿದ್ದ ಗುಂಡನ್ನು ಮಾಧ್ಯಮಗಳಿಗೆ ತೋರಿಸಿದ್ದರು.

ಖಾಸಗಿ ಬಂದೂಕಿನಿಂದ ಗುಂಡೇಟು

ಇನ್ನು ಘಟನೆ ಬಗ್ಗೆ ಬಳ್ಳಾರಿ ಎಸ್ಪಿ ರಂಜಿತ್ ಬಂಡಾರು ಮಾಹಿತಿ ಹಂಚಿಕೊಂಡಿದ್ದಾರೆ. ಕಾಂಗ್ರೆಸ್‌ ಕಾರ್ಯಕರ್ತ ರಾಜಶೇಖರ್ ಅವರ ಸಾವಿಗೆ ಖಾಸಗಿ ಶಸ್ತ್ರಾಸ್ತ್ರದಿಂದ ಹಾರಿಸಲಾದ ಗುಂಡು ಕಾರಣ ಎಂಬುದು ಪ್ರಾಥಮಿಕ ತನಿಖೆಯ ವರದಿಯಲ್ಲಿ ಬಯಲಾಗಿದೆ. ರಾಜಶೇಖರ್ ಅವರಿಗೆ ತಗುಲಿರುವ ಗುಂಡು ಯಾವುದೋ ಖಾಸಗಿ ಗನ್‌ನಿಂದ ಬಂದಿರುವುದು ದೃಢಪಟ್ಟಿದೆ ಎಂದು ತಿಳಿಸಿದ್ದರು.

ಮೂರು ತಂಡಗಳಿಂದ ತನಿಖೆ

ಘಟನೆಯ ತೀವ್ರತೆಯನ್ನು ಪರಿಗಣಿಸಿ ಪೊಲೀಸರು ಸ್ವಯಂಪ್ರೇರಿತವಾಗಿ (Suo Motu) ಪ್ರಕರಣ ದಾಖಲಿಸಿಕೊಂಡಿದ್ದು, ಸಮಗ್ರ ತನಿಖೆ ಕೈಗೊಂಡಿದ್ದಾರೆ. ಪ್ರಕರಣದ ನಿಷ್ಪಕ್ಷಪಾತ ತನಿಖೆಗಾಗಿ ಮೂರು ಪ್ರತ್ಯೇಕ ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಗುಂಡು ಹಾರಿಸಿದ ವ್ಯಕ್ತಿ ಯಾರು ಮತ್ತು ಆ ಶಸ್ತ್ರಾಸ್ತ್ರ ಯಾರಿಗೆ ಸೇರಿದ್ದು ಎಂಬುದನ್ನು ಪತ್ತೆಹಚ್ಚಲು ಈ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ. ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳು ಮತ್ತು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ಸಂಗ್ರಹಿಸಲಾಗುತ್ತಿದ್ದು, ಶೀಘ್ರದಲ್ಲೇ ಸತ್ಯಾಸತ್ಯತೆ ಹೊರಬರಲಿದೆ ಎಂದು ಎಸ್ಪಿ ಭರವಸೆ ನೀಡಿದ್ದಾರೆ.

11 ಜನರ ವಿರುದ್ಧ ಎಫ್‌ಐಆರ್ ದಾಖಲು

ಇನ್ನು ಘಟನೆಗೆ ಸಂಬಂಧಿಸಿದಂತೆ ಬಳ್ಳಾರಿಯ ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಜನಾರ್ದನ ರೆಡ್ಡಿ ಸೇರಿದಂತೆ ಒಟ್ಟು 11 ಜನರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲಾಗಿದೆ.

Read More
Next Story