
"ನನ್ನ ಹತ್ಯೆಗಾಗಿಯೇ 4 ಸುತ್ತು ಫೈರಿಂಗ್ ನಡೆಸಲಾಗಿದೆ": ಶಾಸಕ ಜನಾರ್ದನ ರೆಡ್ಡಿ ಆರೋಪ
ನನ್ನನ್ನು ರಾಜಕೀಯವಾಗಿ ಮತ್ತು ದೈಹಿಕವಾಗಿ ಮುಗಿಸಲೆಂದೇ ಈ ದಾಳಿ ಮಾಡಿಸಲಾಗಿದೆ ಎಂದು ಜನಾರ್ಧನ ರೆಡ್ಡಿ ಅವರು ಅವರು ಆಕ್ರೋಶ ವ್ಯಕ್ತಪಡಿಸಿದರು.
ಬಳ್ಳಾರಿ ನಗರದಲ್ಲಿ ಬ್ಯಾನರ್ ಅಳವಡಿಕೆ ವಿಚಾರವಾಗಿ ಗುರುವಾರ ರಾತ್ರಿ ನಡೆದ ಗಲಾಟೆ ಇದೀಗ ತಿರುವು ಪಡೆದುಕೊಂಡಿದೆ. ತಮ್ಮ ಹತ್ಯೆಗಾಗಿಯೇ ಈ ಸಂಚು ರೂಪಿಸಲಾಗಿದ್ದು, ವಿರೋಧಿ ಬಣದವರು ತಮ್ಮ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಗಂಗಾವತಿ ಶಾಸಕ ಹಾಗೂ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ.
ಬ್ಯಾನರ್ ಗಲಾಟೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಜನಾರ್ದನ ರೆಡ್ಡಿ, ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಮತ್ತು ಅವರ ತಂದೆ ಸೂರ್ಯನಾರಾಯಣ ರೆಡ್ಡಿ ವಿರುದ್ಧ ನೇರ ವಾಗ್ದಾಳಿ ನಡೆಸಿದರು. "ನನ್ನನ್ನು ರಾಜಕೀಯವಾಗಿ ಮತ್ತು ದೈಹಿಕವಾಗಿ ಮುಗಿಸಲೆಂದೇ ಈ ದಾಳಿ ಮಾಡಿಸಲಾಗಿದೆ," ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಘಟನೆಯ ವಿವರ
ಜನಾರ್ದನ ರೆಡ್ಡಿ ಅವರ ಹೇಳಿಕೆಯ ಪ್ರಕಾರ, ಅವರು ಗಂಗಾವತಿಯಿಂದ ಬಳ್ಳಾರಿಯ ತಮ್ಮ ನಿವಾಸಕ್ಕೆ ಆಗಮಿಸಿ ಕಾರಿನಿಂದ ಇಳಿಯುತ್ತಿದ್ದಂತೆಯೇ, ಶಾಸಕ ನಾರಾ ಭರತ್ ರೆಡ್ಡಿ ಅವರ ಆಪ್ತ ಸತೀಶ್ ರೆಡ್ಡಿ ಮತ್ತು ಅವರ ಗನ್ ಮ್ಯಾನ್ಗಳು ಅಲ್ಲಿಗೆ ಧಾವಿಸಿದ್ದಾರೆ. ಬ್ಯಾನರ್ ಗಲಾಟೆಯ ನೆಪದಲ್ಲಿ ಏಕಾಏಕಿ ತಮ್ಮ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
"ನನ್ನ ಮನೆಯ ಬಳಿ ಬಂದು ಬರೋಬ್ಬರಿ 4 ಸುತ್ತು ಗುಂಡು ಹಾರಿಸಿದ್ದಾರೆ. ಅದೃಷ್ಟವಶಾತ್ ನಾನು ಪ್ರಾಣಾಪಾಯದಿಂದ ಪಾರಾಗಿದ್ದೇನೆ," ಎಂದು ಹೇಳಿದ ಜನಾರ್ದನ ರೆಡ್ಡಿ, ಸ್ಥಳದಲ್ಲಿದ್ದ ಬುಲೆಟ್ ಒಂದನ್ನು ಮಾಧ್ಯಮಗಳ ಮುಂದೆ ಪ್ರದರ್ಶಿಸಿದರು.
'ವಾಲ್ಮೀಕಿ ಪ್ರತಿಮೆ ಹೆಸರಲ್ಲಿ ಬೆಂಕಿ
"ಜನವರಿ 3ರಂದು ನಡೆಯಲಿರುವ ವಾಲ್ಮೀಕಿ ಪ್ರತಿಮೆ ಅನಾವರಣದ ಪವಿತ್ರ ಕಾರ್ಯಕ್ರಮದ ಹೆಸರಿನಲ್ಲಿ ಬಳ್ಳಾರಿಗೆ ಬೆಂಕಿ ಹಚ್ಚುವ ಕೆಲಸವಾಗುತ್ತಿದೆ. ಕೊಲೆಗಡುಕರನ್ನು ಮುಂದಿಟ್ಟುಕೊಂಡು ದಬ್ಬಾಳಿಕೆ ನಡೆಸುತ್ತಿದ್ದಾರೆ. ಭರತ್ ರೆಡ್ಡಿ ಮತ್ತು ಅವರ ಆಪ್ತ ಸತೀಶ್ ರೆಡ್ಡಿಯೇ ಈ ಹತ್ಯಾ ಸಂಚಿನ ಸೂತ್ರಧಾರಿಗಳು," ಎಂದು ಜನಾರ್ದನ ರೆಡ್ಡಿ ಕಿಡಿಕಾರಿದರು.
ಈ ಘಟನೆಯಿಂದಾಗಿ ಬಳ್ಳಾರಿಯಲ್ಲಿ ಬೂದಿ ಮುಚ್ಚಿದ ಕೆಂಡದಂತಹ ವಾತಾವರಣ ನಿರ್ಮಾಣವಾಗಿದೆ. ಗುಂಡು ತಗುಲಿ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಮೃತಪಟ್ಟಿದ್ದಾರೆ ಎಂಬ ಮಾಹಿತಿಯೂ ಬಂದಿದೆ. ಘಟನೆ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಏರ್ಪಡಿಸಿದೆ.

