ಗಣಿ‌ನಾಡಿನ ಅಧಿಪತ್ಯಕ್ಕಾಗಿ ರೆಡ್ಡಿಗಳ ಕಾದಾಟ; ಮೊಳಗಿದ ಗುಂಡಿನ ಸದ್ದು
x

ಗಣಿ‌ನಾಡಿನ ಅಧಿಪತ್ಯಕ್ಕಾಗಿ ರೆಡ್ಡಿಗಳ ಕಾದಾಟ; ಮೊಳಗಿದ ಗುಂಡಿನ ಸದ್ದು

ಶಾಸಕ ಜನಾರ್ದನ ರೆಡ್ಡಿ, ಮಾಜಿ ಸಚಿವ ಶ್ರೀರಾಮುಲು, ಮಾಜಿ ಶಾಸಕ ಸೋಮಶೇಖರ್ ರೆಡ್ಡಿ, ಅಲಿಖಾನ್, ದಮ್ಮೂರ ಶೇಖರ್ ಸೇರಿ ಒಟ್ಟು 11 ಮಂದಿಯ ವಿರುದ್ಧ ಬ್ರೂಸ್ ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಅಕ್ರಮ ಗಣಿಗಾರಿಕೆಯಿಂದ ದೇಶಾದ್ಯಂತ ಸುದ್ದಿಯಾಗಿದ್ದ ಬಳ್ಳಾರಿ ಜಿಲ್ಲೆ ಇದೀಗ ಗಣಿದಣಿಗಳ ರಾಜಕೀಯ ಸಂಘರ್ಷಕ್ಕೆ ಅಖಾಡವಾಗಿ ಮಾರ್ಪಟ್ಟಿದೆ. ಜಿಲ್ಲೆಯ ಮೇಲೆ ಅಧಿಪತ್ಯ ಸ್ಥಾಪಿಸಲು ಕಾಂಗ್ರೆಸ್‌- ಬಿಜೆಪಿ ಗಣಿದಣಿಗಳ ಮಧ್ಯೆ ಸಮರ ಆರಂಭವಾಗಿದೆ. ಬ್ಯಾನರ್‌ ಅಳವಡಿಕೆಯ ಕ್ಷುಲ್ಲಕ ವಿಚಾರಕ್ಕಾಗಿ ನಡೆದ ಮಾರಾಮರಿಯಲ್ಲಿ ಗುಂಡಿನ ಸದ್ದು ಮೊಳಗಿದ್ದು, ಒಬ್ಬರನ್ನು ಬಲಿ ಪಡೆದಿದೆ.

ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಬಂದು, ರಾಜಕೀಯಕ್ಕೆ ಪುನರಾಗಮಿಸಿರುವ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಅವರು ಇದೀಗ ಬಳ್ಳಾರಿಗೆ ಪ್ರವೇಶ ಪಡೆದ ಬಳಿಕ ಅಧಿಪತ್ಯಕ್ಕಾಗಿ ಗಣಿದಣಿಗಳಲ್ಲೇ ಕಾದಾಟ ಆರಂಭವಾಗಿದೆ. ಈ ಹಿಂದೆ ತಮ್ಮ ಜೊತೆಯಲ್ಲೇ ವ್ಯವಹಾರ, ರಾಜಕೀಯ ನಡೆಸುತ್ತಿದ್ದ ಜನಾರ್ದನ ರೆಡ್ಡಿ ಆಪ್ತ ಸೂರ್ಯ ನಾರಾಯಣ ರೆಡ್ಡಿ ಹಾಗೂ ಅವರ ಪುತ್ರನಾದ ಶಾಸಕ ನಾರಾ ಭರತ್‌ ರೆಡ್ಡಿ ಕುಟುಂಬಗಳ ಮಧ್ಯೆ ಕ್ಷುಲ್ಲಕ ವಿಚಾರವೊಂದು ವೈಷಮ್ಯದ ಕಿಡಿ ಹೊತ್ತಿಸಿದೆ.

ಜ.3 ರಂದು ಬಳ್ಳಾರಿಯಲ್ಲಿ ವಾಲ್ಮಿಕಿ ಪುತ್ಥಳಿ ಅನಾವರಣ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಗುರುವಾರ ಬಳ್ಳಾರಿಯಲ್ಲಿ ಭಿತ್ತಿಪತ್ರ, ಬ್ಯಾನರ್‌ ಅಳವಡಿಸಲಾಗುತ್ತಿತ್ತು. ಬೆಳಿಗ್ಗೆ ಹಾಗೂ ರಾತ್ರಿ ಶಾಸಕ ಜನಾರ್ದನ ರೆಡ್ಡಿ‌ ನಿವಾಸದ ಎದುರು ಬ್ಯಾನರ್ ಕಟ್ಟುವಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ನಿರತರಾಗಿದ್ದರು. ಶಾಸಕ ಜನಾರ್ದನ ರೆಡ್ಡಿ ಅವರು ತಮ್ಮ ಮನೆಯ ಮುಂದೆ ಬ್ಯಾನರ್‌ ಕಟ್ಟುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇದೇ ವಿಚಾರವು ಬಿಜೆಪಿ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರ ಮಧ್ಯೆ ಪರಸ್ಪರ ಕಲ್ಲುತೂರಾಟಕ್ಕೆ ಕಾರಣವಾಗಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಶಾಸಕ ನಾರಾ ಭರತ್‌ ರೆಡ್ಡಿ ಆಪ್ತರಾದ ಸತೀಶ್‌ ರೆಡ್ಡಿ ಅಂಗರಕ್ಷಕರು ಗುಂಡು ಹಾರಿಸಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರೊಬ್ಬರಿಗೆ ಗುಂಡು ತಗುಲಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಘಟನೆಯ ಬೆನ್ನಲ್ಲೇ ಸ್ಥಳಕ್ಕೆ ಬಿಜೆಪಿ ಮಾಜಿ ಸಚಿವ ಶ್ರೀರಾಮುಲು ಆಗಮಿಸುತ್ತಿದ್ದಂತೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ. ಆಗ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ತಳ್ಳಾಟ-ನೂಕಾಟ ನಡೆದಿದೆ. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ನಿಭಾಯಿಸಲು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಸದ್ಯ ಇದೇ ವಿಚಾರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ.

ʼರಿಪಬ್ಲಿಕ್‌ ಬಳ್ಳಾರಿʼ ನೆನಪಿಸಿದ ಘಟನೆ

ಶಾಸಕ ಜನಾರ್ದನ ರೆಡ್ಡಿ ಮನೆಯ ಎದುರು ನಡೆದ ಘರ್ಷಣೆ ತೀವ್ರವಾಗುತ್ತಿದ್ದಂತೆ ಸ್ಥಳೀಯ ಶಾಸಕ ನಾರಾ ಭರತ್‌ ರೆಡ್ಡಿ ಸ್ಥಳಕ್ಕೆ ಭೇಟಿ ನೀಡಲು ಮುಂದಾಗಿದ್ದರು. ಈ ಮಾಹಿತಿ ತಿಳಿದ ರೆಡ್ಡಿ ಬೆಂಬಲಿಗರು ಕೈಯಲ್ಲಿ ದೊಣ್ಣೆಗಳನ್ನು ಹಿಡಿದು ನಿಂತಿದ್ದರು. ಇದು ಅಕ್ಷರಶಃ ರಿಪಬ್ಲಿಕ್‌ ಬಳ್ಳಾರಿಯನ್ನು ನೆನಪಿಸುವಂತಿತ್ತು.

ಈ ಹಿಂದೆ ಜನಾರ್ದನ ರೆಡ್ಡಿ ಸಚಿವರಾಗಿದ್ದಾಗ ಬಳ್ಳಾರಿಯಲ್ಲಿ ಯಾರೂ ಕೂಡ ಸರ್ಕಾರದ ವಿರುದ್ಧ ಸೊಲ್ಲೆತ್ತುತ್ತಿರಲಿಲ್ಲ. ಅಕ್ರಮ ಗಣಿಗಾರಿಕೆ ಮಿತಿ ಮೀರಿತ್ತು. ಅಂದಿನ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್‌, ಗಣಿದಣಿಗಳ ರಿಪಬ್ಲಿಕ್‌ ಬಳ್ಳಾರಿ ಎಂದು ಜರಿದಿತ್ತು. ಅಲ್ಲದೇ ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ನಡೆಸಿದ ಪರಿಣಾಮ 2013 ರಲ್ಲಿ ಗಣಿಧಣಿಗಳ ಆರ್ಭಟಕ್ಕೆ ತಾತ್ಕಾಲಿಕ ವಿರಾಮ ಹಾಕಿತ್ತು.

ಜನಾರ್ದನ ರೆಡ್ಡಿ ಅವರು ದೊಣ್ಣೆಗಳನ್ನು ಹಿಡಿದು ನಿಂತಿದ್ದನ್ನು ಗಮನಿಸಿದ ಪೊಲೀಸರು ಪೊಲೀಸರು ಮೊದಲು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಲು ಯತ್ನಿಸಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ಬಾರದಿದ್ದಾಗ ಗಾಳಿಯಲ್ಲಿ ಗುಂಡು ಹಾರಿಸಿದರು. ಇದೇ ವೇಳೆ ಮತ್ತೊಂದು ಕಡೆ ಹಾರಿಸಿದ ಗುಂಡು ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಅವರನ್ನು ಬಲಿ ಪಡೆಯಿತು.

ಗುಂಡಿನ ದಾಳಿ ಹಿಂದಿದೆಯೇ ವೈಷಮ್ಯ?

ಶಾಸಕ ನಾರಾ ಭರತ್ ರೆಡ್ಡಿ ಬೆಂಬಲಿಗರು ಜನಾರ್ದನ ರೆಡ್ಡಿ ಮನೆ ಎದುರು ಗುರುವಾರ ಬೆಳಿಗ್ಗೆಯಿಂದಲೇ ಭಿತ್ತಿಪತ್ರ, ಬ್ಯಾನರ್ ಹಾಕುವ ಕಸರತ್ತು ನಡೆಸಿದ್ದರು. ಬೆಳಿಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಬ್ಯಾನರ್ ಅಳವಡಿಸಲು ಮುಂದಾದಾಗ ಸ್ವತಃ ಜನಾರ್ದನ ರೆಡ್ಡಿ ಅವರೇ ವಿರೋಧ ವ್ಯಕ್ತಪಡಿಸಿ ಎಚ್ಚರಿಕೆ ಕೊಟ್ಟು ಕಳುಹಿಸಿದ್ದರು. ಆದರೆ, ರಾತ್ರಿ ಮತ್ತೆ ಕಾಂಗ್ರೆಸ್ ಕಾರ್ಯಕರ್ತರು ಬ್ಯಾನರ್ ಅಳವಡಿಸಿದಾಗ ಬಿಜೆಇ ಕಾರ್ಯಕರ್ತರು ತೆರವು ಮಾಡಿದ್ದು ಗಲಾಟೆಗೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.

ಗಂಗಾವತಿಯಿಂದ ವಾಪಸಾದ ಶಾಸಕ ಜನಾರ್ದನ ರೆಡ್ಡಿ ಬರುತ್ತಿದ್ದಂತೆ ಕಾರ್ಯಕರ್ತರ ನಡುವಿನ ಸಂಘರ್ಷ ವಿಪರೀತವಾಗಿದೆ. ಇದೇ ವೇಳೆ ಭರತ್ ರೆಡ್ಡಿ ಆಪ್ತ ಸತೀಶ್ ರೆಡ್ಡಿಯ ಅಂಗರಕ್ಷಕರು ಗುಂಡು ಹಾರಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಬಿಜೆಪಿ ನಾಯಕ ಶ್ರೀರಾಮುಲು ಕೂಡ ಸ್ಥಳಕ್ಕೆ ಧಾವಿಸಿದ್ದು, ಪರಿಸ್ಥಿತಿ ಮತ್ತಷ್ಟು ಉದ್ವಿಗ್ನವಾಗಿದೆ.

ಎರಡೂ ಕಡೆಯ ಕಾರ್ಯಕರ್ತರು ಪರಸ್ಪರ ಕಲ್ಲು ತೂರಾಟ ನಡೆಸಿದ್ದಾರೆ. ಈ ಗೊಂದಲದ ನಡುವೆ ಸಿಡಿದ ಗುಂಡು ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್‌ಗೆ ತಗುಲಿ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಇದು ಸೂರ್ಯನಾರಾಯಣ ರೆಡ್ಡಿ ಹಾಗೂ ಜನಾರ್ದನ ರೆಡ್ಡಿ ನಡುವಿನ ಹಳೆಯ ವೈಷಮ್ಯದಿಂದಲೇ ನಡೆದಿದೆ ಎಂದು ಮೂಲಗಳು ಹೇಳಿವೆ.

ಒಂದಾಗಿದ್ದವರು ದಾಯಾದಿಗಳಾದರೆ?

ಬಳ್ಳಾರಿಯಲ್ಲಿ ರಾಜಕೀಯ ಸಂಘರ್ಷ ಹೊಸದಲ್ಲ. ಅಕ್ರಮ ಗಣಿಗಾರಿಕೆ ಪ್ರಕರಣದ ಬಳಿಕ ಜನಾರ್ದನ ರೆಡ್ಡಿ ವಿರುದ್ಧ ರಾಜಕೀಯ ವಾತಾವರಣ ಬದಲಾಗಿದ್ದರೂ ಅವರ ಪ್ರಭಾವ ಕಡಿಮೆಯಾಗಿಲ್ಲ.

ಗಣಿಗಾರಿಕೆ ಹಗರಣದಲ್ಲಿ ಹೆಸರು ಕೇಳಿಬಂದ ಅನೇಕ ನಾಯಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು, ಬಳ್ಳಾರಿಯ ರಾಜಕಾರಣ ಇನ್ನೂ ಸೂಕ್ಷ್ಮ ಸ್ಥಿತಿಯಲ್ಲಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

ಸೂರ್ಯ ನಾರಾಯಣ ರೆಡ್ಡಿ ಹಾಗೂ ಜನಾರ್ದನರೆಡ್ಡಿ ಒಟ್ಟಾಗಿ ಗಣಿಗಾರಿಕೆ ನಡೆಸಿಕೊಂಡು ಬಂದವರು. ಕುಟುಂಬಗಳು ಬೇರೆಯಾದರೂ ವ್ಯವಹಾರ ಒಂದೇ ಆಗಿತ್ತು. ಗಣಿ ಹಗರಣದಲ್ಲಿ ರೆಡ್ಡಿ ಜೈಲು ಪಾಲಾದ ಬಳಿಕ ಜಿಲ್ಲೆಯ ರಾಜಕೀಯ ವಿದ್ಯಮಾನಗಳು ಬದಲಾದವು. ಒಂದಾಗಿದ್ದ ವ್ಯವಹಾರವೂ ಹೋಳಾಯಿತು.

ಜನಾರ್ದನ ರೆಡ್ಡಿಗೆ ಬಳ್ಳಾರಿ ಜಿಲ್ಲೆ ಪ್ರವೇಶಕ್ಕೆ ಸುಪ್ರೀಂಕೋರ್ಟ್ ನಿರಾಕರಿಸಿದ ಬಳಿಕ ಬಳ್ಳಾರಿ ಮೇಲೆ ಅಧಿಪತ್ಯ ಸ್ಥಾಪಿಸಲು ಹಲವು ನಾಯಕರು ಮುಂದಾದರು. ಚುನಾವಣೆಯಲ್ಲಿ ಗೆದ್ದು ಬೀಗಿದ ಸೂರ್ಯ ನಾರಾಯಣ ರೆಡ್ಡಿ ಅವರ ಪುತ್ರ ನಾರಾ ಭರತ್ ರೆಡ್ಡಿ ಅವರಿಗೆ ಆಂಧ್ರದಲ್ಲಿರುವ ಉದ್ಯಮಿಗಳ ಬೆಂಬಲವು ಸಿಕ್ಕಿತು. ಆದರೆ, ಇತ್ತೀಚೆಗೆ ಜನಾರ್ದನ ರೆಡ್ಡಿ ಬಳ್ಳಾರಿ ಪ್ರವೇಶಕ್ಕೆ ಅನುಮತಿ‌ ಪಡೆದ ಬಳಿಕ ಅಧಿಪತ್ಯ ಸ್ಥಾಪನೆಗಾಗಿ ಆರಂಭವಾಗಿದ್ದ ಸಮರ ಹೆಚ್ಚಾಯಿತು. ವಾಲ್ಮಿಕಿ ಪುತ್ಥಳಿ ಸ್ಥಾಪನೆ ಕಾರ್ಯಕ್ರಮದ ಮೂಲಕ ಅದು ಜಗಜ್ಜಾಹಿರಾಗಿದೆ.

ನನ್ನ ಹತ್ಯೆಗೆ ಸಂಚು- ಜನಾರ್ದನ ರೆಡ್ಡಿ ಆರೋಪ

ಘಟನಾ ಸ್ಥಳದಲ್ಲಿ ಪತ್ತೆಯಾದ ಬುಲೆಟ್ ಪ್ರದರ್ಶಿಸಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ, “ಇದು ನನ್ನ ಹತ್ಯೆಗೆ ರೂಪಿಸಿದ ಸಂಚು” ಎಂದು ಗಂಭೀರ ಆರೋಪ ಮಾಡಿದ್ದಾರೆ.

ಇದಕ್ಕೆ ತಿರುಗೇಟು ನೀಡಿದ ಶಾಸಕ ಭರತ್ ರೆಡ್ಡಿ,“ನನ್ನ ಮುಂದೆ ಇಂಥಾ ಚಿಲ್ಲರೆ ರಾಜಕೀಯ ನಡೆಯಲ್ಲ. ಜನಾರ್ದನ ರೆಡ್ಡಿ ಹತ್ಯೆಗೆ ಸಂಚು ಮಾಡುವ ಅಗತ್ಯ ನನಗಿಲ್ಲ. ಅವರು ಏನು ದೊಡ್ಡ ಪಾಳೆಗಾರರಾ?” ಎಂದು ಪ್ರಶ್ನಿಸಿರುವುದು ಇಬ್ಬರ ನಡುವಿನ ರಾಜಕೀಯ ವೈಷಮ್ಯಕ್ಕೆ ಸಾಕ್ಷಿಯಾಗಿದೆ.

ನಿಷೇಧಾಜ್ಞೆ ಜಾರಿ

ಬಳ್ಳಾರಿಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಮಾರಾಮರಿಯಿಂದ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಮುಂಜಾಗ್ರತಾ ಕ್ರಮವಾಗಿ ಜನಾರ್ದನ ರೆಡ್ಡಿ ನಿವಾಸದ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಅಲ್ಲದೇ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಘಟನೆಯನ್ನು ಖಂಡಿಸಿದ್ದು, ಶ್ರೀರಾಮುಲು ಕೂಡ ಕಾಂಗ್ರೆಸ್ ವಿರುದ್ಧ ಆರೋಪ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ನಾಯಕರು ಕೂಡ ಘಟನೆಗೆ ಜನಾರ್ದನ ರೆಡ್ಡಿಯೇ ಕಾರಣ ಎಂದು ಪ್ರತ್ಯಾರೋಪ ಮಾಡಿದ್ದು, ಇದು ರಾಜಕೀಯ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿದೆ.

ಬೆಂಗಳೂರಿನಲ್ಲಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ಬಳ್ಳಾರಿಯಲ್ಲಿ ವರ್ಷದ ಆರಂಭದಲ್ಲೇ ರಕ್ತ ಚರಿತ್ರೆಗೆ ಸರ್ಕಾರ ಮುನ್ನುಡಿ ಬರೆದಿದೆ. ಜನಾರ್ದನ ರೆಡ್ಡಿ ಅವರನ್ನು ಕೊಲೆ ಮಾಡಲು ಪ್ಲಾನ್ ಆಗಿತ್ತು. ಆದರೆ, ಗುಂಡು ಕಾಂಗ್ರೆಸ್ ಕಾರ್ಯಕರ್ತನಿಗೆ ತಗುಲಿದೆ. ಈ ಘಟನೆಗೆ ಶಾಸಕ ನಾ.ರಾ.‌ಭರತ್ ರೆಡ್ಡಿ ಅವರೇ ಕಾರಣ, ಇವರ ಮೇಲೂ ಎಫ್‌ಐಆರ್ ದಾಖಲಿಸಿ, ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.
11 ಮಂದಿಯ ವಿರುದ್ಧ ಎಫ್‌ಐಆರ್
ಘಟನೆ ಸಂಬಂಧ ಶಾಸಕ ಜನಾರ್ದನ ರೆಡ್ಡಿ, ಮಾಜಿ ಸಚಿವ ಶ್ರೀರಾಮುಲು, ಮಾಜಿ ಶಾಸಕ ಸೋಮಶೇಖರ್ ರೆಡ್ಡಿ, ಅಲಿಖಾನ್, ದಮ್ಮೂರ ಶೇಖರ್ ಸೇರಿದಂತೆ ಒಟ್ಟು 11 ಮಂದಿಯ ವಿರುದ್ಧ
ಬ್ರೂಸ್ ಪೇಟೆ ಪೊಲೀಸರು
ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಗೃಹಸಚಿವ ಡಾ. ಜಿ. ಪರಮೇಶ್ವರ್ ಅವರು ಘಟನೆಯ ಬಗ್ಗೆ ಶಾಸಕರಿಂದ ಮಾಹಿತಿ ಪಡೆದಿದ್ದು, ಕಾನೂನು ಕ್ರಮದ ಭರವಸೆ ನೀಡಿದ್ದಾರೆ. ಪ್ರಕರಣ ಸಂಬಂಧ ಖಾಸಗಿ ಗನ್​ಮ್ಯಾನ್​​ಗಳ 3 ಗನ್​ ಜಪ್ತಿ ಮಾಡಲಾಗಿದೆ. ಅವುಗಳನ್ನು ಪರಿಶೀಲನೆಗಾಗಿ ಎಫ್‌ಎಸ್‌ಎಲ್‌ ಪರೀಕ್ಷೆಗೆ ಕಳುಹಿಸಲಾಗಿದೆ.

ಜನಾರ್ದನರೆಡ್ಡಿಗೆ ನೀಡಿದ್ದ ಗನ್​ಮ್ಯಾನ್​ಗಳ ಗನ್ ಕೂಡ ಪರಿಶೀಲಿಸಲಾಗುತ್ತಿದೆ. ಅಂಗರಕ್ಷಕರ ಗನ್‌ನಿಂದಲೇ ಬುಲೆಟ್​ ಬಳಕೆ ಆಗದಿರುವುದು ಪತ್ತೆಯಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.

ಆಂಧ್ರದ ರೆಡ್ಡಿಗಳು ಬಳ್ಳಾರಿಗೆ ಬಂದಿದ್ದು ಹೇಗೆ?

ದಿವಂಗತ ಸಿಎಂ ವೈ.ಎಸ್. ರಾಜಶೇಖರರೆಡ್ಡಿ, ಅವರ ತಂದೆ ವೈ.ಎಸ್. ರಾಜಾರೆಡ್ಡಿ ಕಾಲದಿಂದಲೂ ಬಳ್ಳಾರಿ ಜಿಲ್ಲೆಯೊಂದಿಗೆ ಜನಾರ್ದನ ರೆಡ್ಡಿ ಹಾಗೂ ಸೂರ್ಯನಾರಾಯಣ ರೆಡ್ಡಿ ಬೆಸುಗೆ ಹೊಂದಿದ್ದಾರೆ. ಬಳ್ಳಾರಿಯಲ್ಲಿ ಗಣಿ ವ್ಯಾಪಾರಸ್ಥರೊಂದಿಗೆ ವೈ.ಎಸ್. ರಾಜಾರೆಡ್ಡಿ ಅವರು ಸಂಬಂಧ ಹೊಂದಿದ್ದರು. ಭಾಷಾವಾರು ಪ್ರಾಂತ್ಯ ವಿಂಗಡಣೆ ವೇಳೆ ನಾರಾ ಸೂರ್ಯನಾರಾಯಣರೆಡ್ಡಿ ಬಳ್ಳಾರಿಗೆ ಬಂದು ನೆಲೆ ನಿಂತರು. ಗ್ರಾನೈಟ್‌ ಗಣಿ ವ್ಯವಹಾರದ ಮೂಲಕ ರಾಜಕೀಯ ಪ್ರವೇಶಿಸಿದ್ದರು. ಸೂರ್ಯ ನಾರಾಯಣ ರೆಡ್ಡಿ ಅವರ ಪುತ್ರ ನಾರಾ ಭರತ್‌ ರೆಡ್ಡಿ ಈಗ ಬಳ್ಳಾರಿ ಶಾಸಕರಾಗಿದ್ದಾರೆ. ಈ ಕುಟುಂಬವು ಓಬಳಾಪುರಂ ಮೈನಿಂಗ್ ಕಂಪನಿಯ ಪ್ರವರ್ತಕರಲ್ಲಿ ಒಂದಾಗಿತ್ತು.

ಅದೇ ರೀತಿ ಕಾಳಹಸ್ತಿಯಲ್ಲಿ ಪೊಲೀಸ್‌ ಕಾನ್‌ಸ್ಟೆಬಲ್‌ ಪುತ್ರನಾದ ಜನಾರ್ದನ ರೆಡ್ಡಿ ಅವರ ಕುಟುಂಬ ಕೂಡ ಕಾಲಾ ನಂತರದಲ್ಲಿ ಬಳ್ಳಾರಿಗೆ ಬಂದು ನೆಲೆ ನಿಂತಿತು. ಗಾಲಿ ಜನಾರ್ದನ ರೆಡ್ಡಿ, ಸಹೋದರರಾದ ಕರುಣಾಕರರೆಡ್ಡಿ, ಸೋಮಶೇಖರರೆಡ್ಡಿ ಕೂಡ ಬಳ್ಳಾರಿಯಲ್ಲೇ ಬೆಳೆದರು. ರೆಡ್ಡಿ ತಮ್ಮ ಸಹೋದರರೊಂದಿಗೆ ಸೇರಿ ಗಣಿಗಾರಿಕೆ ಆರಂಭಿಸಿ ಆ ನಂತರ ರಾಜಕೀಯ ಪ್ರವೇಶಿಸಿದರು. ರೆಡ್ಡಿ ಸಹೋದರರು ಕೂಡ ವೈಎಸ್‌. ರಾಜಶೇಖರ ರೆಡ್ಡಿ ಅವರೊಂದಿಗೆ ವ್ಯವಹಾರಿಕ ಸಂಬಂಧ ಹೊಂದಿದ್ದರು. ಈ ರೀತಿಯಾಗಿ ಆಂಧ್ರದ ರೆಡ್ಡಿಗಳು ಬಳ್ಳಾರಿಯಲ್ಲಿ ಗಣಿಗಾರಿಕೆಯೊಂದಿಗೆ ರಾಜ್ಯ ರಾಜಕೀಯದಲ್ಲೂ ತೊಡಗಿಸಿಕೊಂಡರು.

Read More
Next Story