
ಎಂಟು ವರ್ಷಗಳಿಂದ ನಡೆಯದ ಎಪಿಎಂಸಿ ಚುನಾವಣೆ : ಮಧ್ಯವರ್ತಿಗಳಿಗೆ ಖುಷಿ, ರೈತರ ಸಂಕಟ
ರಾಜ್ಯದ ಸುಮಾರು 167 ಎಪಿಎಂಸಿಗಳು ಚುನಾಯಿತ ಪ್ರತಿನಿಧಿಗಳಿಲ್ಲದೆ ಕೇವಲ ಸರ್ಕಾರಿ ಆಡಳಿತಾಧಿಕಾರಿಗಳ (ಕೆಎಎಸ್ ಅಧಿಕಾರಿಗಳು ಅಥವಾ ತಹಶೀಲ್ದಾರರು) ಉಸ್ತುವಾರಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಇದು ರೈತರ ನೇರ ಪಾಲ್ಗೊಳ್ಳುವಿಕೆಯನ್ನು ಕಸಿದುಕೊಂಡಿದೆ.
ರಾಜ್ಯದ ಗ್ರಾಮೀಣ ಅರ್ಥವ್ಯವಸ್ಥೆಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು (ಎಪಿಎಂಸಿ) ನಿರ್ಣಾಯಕ ಪಾತ್ರ ವಹಿಸುತ್ತವೆ. ರೈತರು ತಾವು ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ಪಡೆಯಲು ಮತ್ತು ಮಧ್ಯವರ್ತಿಗಳ ಹಾವಳಿಯಿಂದ ತಪ್ಪಿಸಿಕೊಳ್ಳಲು ಈ ಮಾರುಕಟ್ಟೆಗಳು ವೇದಿಕೆಯಾಗಿವೆ. ಆದರೆ, ಕಳೆದ ಎಂಟು ವರ್ಷಗಳಿಂದ ರಾಜ್ಯದಲ್ಲಿ ಎಪಿಎಂಸಿಗಳಿಗೆ ಸಾರ್ವತ್ರಿಕ ಚುನಾವಣೆ ನಡೆಯದೆ ಇರುವುದು ಪ್ರಜಾಪ್ರಭುತ್ವದ ಆಶಯಗಳಿಗೆ ಮತ್ತು ಮಾರುಕಟ್ಟೆಗಳ ಆಡಳಿತಾತ್ಮಕ ದಕ್ಷತೆಗೆ ದೊಡ್ಡ ಹೊಡೆತ ನೀಡಿದೆ.
ರಾಜ್ಯದಲ್ಲಿ ಕೊನೆಯ ಬಾರಿಗೆ ಎಪಿಎಂಸಿಗಳಿಗೆ ಸಾರ್ವತ್ರಿಕ ಚುನಾವಣೆ ನಡೆದದ್ದು 2017ರ ಜನವರಿಯಲ್ಲಿ. ಅಂದು ಚುನಾಯಿತರಾದ ಸಮಿತಿಗಳ ಐದು ವರ್ಷಗಳ ಅಧಿಕಾರಾವಧಿಯು 2022ರ ಜನವರಿಗೆ ಅಂತ್ಯಗೊಂಡಿದೆ. ನಿಯಮದ ಪ್ರಕಾರ, ಅವಧಿ ಮುಗಿಯುವ ಮುನ್ನವೇ ಚುನಾವಣೆ ಪ್ರಕ್ರಿಯೆ ಆರಂಭವಾಗಬೇಕಿತ್ತು. ಆದರೆ, ಕಳೆದ ನಾಲ್ಕು ವರ್ಷಗಳಿಂದ ಚುನಾವಣೆ ನಡೆಯದ ಕಾರಣ, ರಾಜ್ಯದ ಸುಮಾರು 167 ಎಪಿಎಂಸಿಗಳು ಚುನಾಯಿತ ಪ್ರತಿನಿಧಿಗಳಿಲ್ಲದೆ ಕೇವಲ ಸರ್ಕಾರಿ ಆಡಳಿತಾಧಿಕಾರಿಗಳ (ಕೆಎಎಸ್ ಅಧಿಕಾರಿಗಳು ಅಥವಾ ತಹಶೀಲ್ದಾರರು) ಉಸ್ತುವಾರಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಇದು ರೈತರ ನೇರ ಪಾಲ್ಗೊಳ್ಳುವಿಕೆಯನ್ನು ಕಸಿದುಕೊಂಡಿದೆ.
2020ರ ಕಾನೂನು ತಿದ್ದುಪಡಿ ಮತ್ತು ಅದರ ಪ್ರಭಾವ
ಎಪಿಎಂಸಿ ಚುನಾವಣೆಗಳ ವಿಳಂಬಕ್ಕೆ ಮೊದಲ ದೊಡ್ಡ ಕಾರಣ 2020ರಲ್ಲಿ ಅಂದಿನ ಬಿಜೆಪಿ ಸರ್ಕಾರ ತಂದ ಕಾಯ್ದೆ ತಿದ್ದುಪಡಿ. ಕೇಂದ್ರ ಸರ್ಕಾರದ ಮಾದರಿ ಕಾಯ್ದೆಗೆ ಅನುಗುಣವಾಗಿ ತರಲಾದ ಈ ತಿದ್ದುಪಡಿಯು ಎಪಿಎಂಸಿಗಳ ಅಧಿಕಾರವನ್ನು ಗಣನೀಯವಾಗಿ ಕಡಿತಗೊಳಿಸಿತು. ರೈತರು ತಮ್ಮ ಉತ್ಪನ್ನಗಳನ್ನು ಎಪಿಎಂಸಿ ಆವರಣದ ಹೊರಗೂ ಎಲ್ಲಿ ಬೇಕಾದರೂ ಮಾರಾಟ ಮಾಡಲು ಅವಕಾಶ ನೀಡಲಾಯಿತು. ಎಪಿಎಂಸಿ ಮಾರುಕಟ್ಟೆ ಶುಲ್ಕ ಕೇವಲ ಮಾರುಕಟ್ಟೆ ಪ್ರಾಂಗಣದ ಒಳಗಿನ ವಹಿವಾಟಿಗೆ ಸೀಮಿತವಾಯಿತು. ಇದರಿಂದ ಎಪಿಎಂಸಿಗಳ ಆದಾಯ ಶೇ. 60-70 ರಷ್ಟು ಕುಸಿಯಿತು. ಆದಾಯವಿಲ್ಲದೆ ಸಿಬ್ಬಂದಿ ವೇತನ ಮತ್ತು ನಿರ್ವಹಣೆ ಕಷ್ಟವಾದಾಗ, ಚುನಾವಣೆ ನಡೆಸುವ ಬಗ್ಗೆ ಸರ್ಕಾರಗಳು ಆಸಕ್ತಿ ಕಳೆದುಕೊಂಡವು. ಮಾರುಕಟ್ಟೆಗಳು ಅಪ್ರಸ್ತುತವಾಗುತ್ತಿವೆ ಎಂಬ ಭಾವನೆ ರಾಜಕೀಯ ವಲಯದಲ್ಲಿ ಮೂಡಿತು.
2020ರ ಎಪಿಎಂಸಿ ಕಾಯ್ದೆ ತಿದ್ದುಪಡಿಯ ಮುಖ್ಯ ಉದ್ದೇಶ ಮಾರುಕಟ್ಟೆಯನ್ನು ಮುಕ್ತಗೊಳಿಸುವುದು ಎಂಬುದಾಗಿತ್ತು. ಆದರೆ, ಪ್ರಾಯೋಗಿಕವಾಗಿ ಇದು ಎಪಿಎಂಸಿಗಳ ನಿಯಂತ್ರಣಾ ಅಧಿಕಾರವನ್ನು ನಾಶಪಡಿಸಿತು. ಈ ಹಿಂದೆ ಇಡೀ ತಾಲೂಕು ಅಥವಾ ಜಿಲ್ಲೆ ಎಪಿಎಂಸಿ ವ್ಯಾಪ್ತಿಗೆ ಬರುತ್ತಿತ್ತು. ಆದರೆ ತಿದ್ದುಪಡಿಯ ನಂತರ, ಎಪಿಎಂಸಿಯ ಅಧಿಕಾರವು ಕೇವಲ ಅದರ ನಾಲ್ಕು ಗೋಡೆಗಳ ಒಳಗೆ ಮಾತ್ರ ಸೀಮಿತವಾಯಿತು. ರೈತರು ಮತ್ತು ವರ್ತಕರು ಎಪಿಎಂಸಿ ಮಾರುಕಟ್ಟೆಯ ಹೊರಗೆ ಎಲ್ಲಿ ಬೇಕಾದರೂ ವ್ಯಾಪಾರ ಮಾಡಲು ಅವಕಾಶ ನೀಡಲಾಯಿತು. ಇದಕ್ಕೆ ಯಾವುದೇ ಪರವಾನಗಿ ಅಥವಾ ಮಾರುಕಟ್ಟೆ ಶುಲ್ಕದ ಅಗತ್ಯವಿರಲಿಲ್ಲ. ತಿದ್ದುಪಡಿಯ ಮೊದಲು ಹೊರಗಿನ ವಹಿವಾಟಿನ ಮೇಲೂ ಸೆಸ್ ವಿಧಿಸಲಾಗುತ್ತಿತ್ತು. ತಿದ್ದುಪಡಿಯ ನಂತರ ಸೆಸ್ ಕೇವಲ ಪ್ರಾಂಗಣದ ಒಳಗಿನ ವಹಿವಾಟಿಗೆ ಸೀಮಿತವಾಯಿತು. ಇದರಿಂದ ವರ್ತಕರು ಸೆಸ್ ತಪ್ಪಿಸಲು ಮಾರುಕಟ್ಟೆಯ ಹೊರಗೇ ವ್ಯಾಪಾರ ನಡೆಸಲು ಆರಂಭಿಸಿದರು. ರಾಜ್ಯದ ಬಹುತೇಕ ಎಪಿಎಂಸಿಗಳ ಆದಾಯವು ಶೇ. 60 ರಿಂದ 70 ರಷ್ಟು ಕುಸಿಯಿತು. ಕೆಲವು ಸಣ್ಣ ಎಪಿಎಂಸಿಗಳಲ್ಲಿ ಕನಿಷ್ಠ ನಿರ್ವಹಣಾ ವೆಚ್ಚವನ್ನೂ ಭರಿಸಲಾಗದ ಸ್ಥಿತಿ ನಿರ್ಮಾಣವಾಯಿತು.
ರಾಜಕೀಯ ಸ್ಥಿತ್ಯಂತರ
2023ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ತನ್ನ ಚುನಾವಣಾ ಪ್ರಣಾಳಿಕೆಯಂತೆ 2020ರ ತಿದ್ದುಪಡಿಯನ್ನು ರದ್ದುಗೊಳಿಸಲು ನಿರ್ಧರಿಸಿತು. ಹಳೆಯ ಎಪಿಎಂಸಿ ಕಾಯ್ದೆಯನ್ನು ಮರುಸ್ಥಾಪಿಸುವ ಮೂಲಕ ಎಪಿಎಂಸಿಗಳಿಗೆ ಮರುಜೀವ ನೀಡಲು ಮುಂದಾಯಿತು. ವಿಧಾನಸಭೆಯಲ್ಲಿ ತಿದ್ದುಪಡಿ ಮಸೂದೆ ಅಂಗೀಕಾರವಾದರೂ, ವಿಧಾನ ಪರಿಷತ್‌ನಲ್ಲಿ ವಿರೋಧ ಪಕ್ಷಗಳ ಸಂಖ್ಯಾಬಲ ಹೆಚ್ಚಿದ್ದರಿಂದ ಮಸೂದೆ ವಿಳಂಬವಾಯಿತು. ಅಂತಿಮವಾಗಿ 2024ರ ಫೆಬ್ರವರಿಯಲ್ಲಿ 'ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ತಿದ್ದುಪಡಿ ಮಸೂದೆ' ಅಂಗೀಕಾರವಾಯಿತು. ಇದು ಎಪಿಎಂಸಿಗಳಿಗೆ ಹಳೆಯ ಅಧಿಕಾರ ಮತ್ತು ಆದಾಯದ ಮೂಲಗಳನ್ನು ಮರಳಿ ನೀಡಿತು.
ಯಾವುದೇ ಸಂಸ್ಥೆಗೆ ಚುನಾವಣೆ ನಡೆಯಬೇಕಾದರೆ ಅಲ್ಲಿ ಅಧಿಕಾರ ಮತ್ತು ಅನುದಾನ ಇರಬೇಕು. ಎಪಿಎಂಸಿಗಳ ಅಧಿಕಾರ ವ್ಯಾಪ್ತಿ ಕಡಿಮೆಯಾದಾಗ, ರಾಜಕೀಯ ಪಕ್ಷಗಳಿಗೆ ಮತ್ತು ಸ್ಥಳೀಯ ನಾಯಕರಿಗೆ ಎಪಿಎಂಸಿ ಸದಸ್ಯರಾಗುವ ಆಸಕ್ತಿ ಕಡಿಮೆಯಾಯಿತು. ಅಧಿಕಾರವೇ ಇಲ್ಲದ ಮಾರುಕಟ್ಟೆಗೆ ಚುನಾವಣೆ ಏಕೆ? ಎಂಬ ಭಾವನೆ ರಾಜಕೀಯ ವಲಯದಲ್ಲಿ ಮೂಡಿತು. ಅಂದಿನ ಸರ್ಕಾರವು ಈ ಮಾರುಕಟ್ಟೆಗಳು ಕಾಲಕ್ರಮೇಣ ಅಪ್ರಸ್ತುತವಾಗುತ್ತವೆ ಮತ್ತು ಖಾಸಗಿ ಮಾರುಕಟ್ಟೆಗಳೇ ಮುನ್ನೆಲೆಗೆ ಬರುತ್ತವೆ ಎಂದು ನಂಬಿತ್ತು. ಇದೇ ಕಾರಣಕ್ಕೆ 2022ರಲ್ಲಿ ಚುನಾಯಿತ ಮಂಡಳಿಗಳ ಅವಧಿ ಮುಗಿದರೂ, ಹೊಸ ಚುನಾವಣೆ ನಡೆಸುವ ಬಗ್ಗೆ ಯಾವುದೇ ಗಂಭೀರ ಆಲೋಚನೆ ಮಾಡಲಿಲ್ಲ.
ಚುನಾವಣೆ ವಿಳಂಬಕ್ಕೆ ತಾಂತ್ರಿಕ ಮತ್ತು ಆಡಳಿತಾತ್ಮಕ ಕಾರಣಗಳು
ಹೊಸ ಕಾಯ್ದೆ ಜಾರಿಗೆ ಬಂದ ನಂತರವೂ ಚುನಾವಣೆ ಘೋಷಣೆಯಾಗದಿರಲು ಹಲವಾರು ತಾಂತ್ರಿಕ ಕಾರಣಗಳು ಎದುರಾಗಿವೆ. ಕಳೆದ 8 ವರ್ಷಗಳಲ್ಲಿ ಜನಸಂಖ್ಯೆ ಮತ್ತು ಕೃಷಿ ವಲಯದಲ್ಲಿ ಬದಲಾವಣೆಗಳಾಗಿವೆ. ಹೊಸ ಕಾಯ್ದೆಯನ್ವಯ ಮತಕ್ಷೇತ್ರಗಳ ಗಡಿಗಳನ್ನು ಮರುಹೊಂದಿಸಬೇಕಿದೆ. ಹಿಂದುಳಿದ ವರ್ಗಗಳ ಮತ್ತು ಪರಿಶಿಷ್ಟ ಜಾತಿ/ಪಂಗಡಗಳ ಮೀಸಲಾತಿಯನ್ನು ಹೊಸದಾಗಿ ನಿಗದಿಪಡಿಸುವುದು ಸಂಕೀರ್ಣ ಪ್ರಕ್ರಿಯೆಯಾಗಿದೆ. ಇತ್ತೀಚಿನ ಸುಪ್ರೀಂ ಕೋರ್ಟ್ ತೀರ್ಪುಗಳ ಅನ್ವಯ ರಾಜಕೀಯ ಹಿಂದುಳಿದಿರುವಿಕೆಯನ್ನು ಆಧರಿಸಿ ಮೀಸಲಾತಿ ನೀಡಬೇಕಿರುವುದು ಸರ್ಕಾರಕ್ಕೆ ಸವಾಲಾಗಿದೆ. ಎಪಿಎಂಸಿ ಚುನಾವಣೆಯಲ್ಲಿ ರೈತರು ಮಾತ್ರ ಮತದಾರರಾಗಿರುತ್ತಾರೆ. ಪಹಣಿ ಆಧಾರಿತ ಮತದಾರರ ಪಟ್ಟಿಯನ್ನು ಅಪ್‌ಡೇಟ್ ಮಾಡುವುದು ಸಮಯ ತೆಗೆದುಕೊಳ್ಳುವ ಕೆಲಸವಾಗಿದೆ ಎಂದು ಮೂಲಗಳು ಹೇಳಿವೆ.
ಆಡಳಿತಾಧಿಕಾರಿಗಳ ಆಡಳಿತ
ಚುನಾಯಿತ ಸಮಿತಿ ಇಲ್ಲದೆ ಆಡಳಿತಾಧಿಕಾರಿಗಳ ಕೈಯಲ್ಲಿ ಅಧಿಕಾರ ಇರುವುದು ಮಿಶ್ರ ಪ್ರತಿಕ್ರಿಯೆಗೆ ಕಾರಣವಾಗಿದೆ. ರೈತರ ಸಮಸ್ಯೆಗಳನ್ನು ಆಲಿಸಲು ಜನಪ್ರತಿನಿಧಿಗಳಿಲ್ಲ. ಅಧಿಕಾರಿಗಳು ಕೇವಲ ನಿಯಮಗಳ ಪ್ರಕಾರ ನಡೆಯುತ್ತಾರೆ. ಆದರೆ ರೈತರ ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ವಿಫಲರಾಗುತ್ತಾರೆ. ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. ಸಮಿತಿಗಳಲ್ಲಿ ರೈತ ಪ್ರತಿನಿಧಿಗಳ ಬದಲು ಸರ್ಕಾರದ ನಾಮನಿರ್ದೇಶಿತ ವ್ಯಕ್ತಿಗಳ ಹಾವಳಿ ಹೆಚ್ಚಾಗಿದೆ ಎಂಬುದು ರೈತರ ಅಳಲಾಗಿದೆ. ಎಪಿಎಂಸಿಗಳಲ್ಲಿ ಕೆಲಸ ಮಾಡುವ ಸಾವಿರಾರು ಸಿಬ್ಬಂದಿಗಳ ವೇತನ ಪಾವತಿಸುವುದು ಸರ್ಕಾರಕ್ಕೆ ಹೊರೆಯಾಯಿತು. ಅನೇಕ ಕಡೆ ನಿವೃತ್ತಿ ವೇತನ ಮತ್ತು ದೈನಂದಿನ ನಿರ್ವಹಣಾ ವೆಚ್ಚಗಳಿಗೆ ಹಣವಿಲ್ಲದಂತಾಯಿತು. ರೈತರಿಗಾಗಿ ನಿರ್ಮಿಸಬೇಕಿದ್ದ ದಾಸ್ತಾನು ಮಳಿಗೆಗಳು, ರಸ್ತೆಗಳು ಮತ್ತು ಮೂಲಸೌಕರ್ಯ ಯೋಜನೆಗಳು ಸಂಪೂರ್ಣವಾಗಿ ಸ್ಥಗಿತಗೊಂಡವು. ಇಂತಹ ಆರ್ಥಿಕ ಸಂಕಷ್ಟದ ಸಮಯದಲ್ಲಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಚುನಾವಣೆ ನಡೆಸುವುದು ಸರ್ಕಾರಕ್ಕೆ ಅನಗತ್ಯವೆನಿಸಿತು.
ಈ ಬಗ್ಗೆ ದ ಫೆಡರಲ್ ಕರ್ನಾಟಕ ಜತೆ ಮಾತನಾಡಿದ ರಾಯಚೂರಿನ ರೈತ ಮುಖಂಡ ಮರಿಲಿಂಗಪ್ಪ, ಎಪಿಎಂಸಿ ಚುನಾವಣೆ ನಡೆಯದ ಕಾರಣ ರೈತರು ತಮ್ಮ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ. ಎಪಿಎಂಸಿ ಆಡಳಿತ ಮಂಡಳಿಯಲ್ಲಿ ರೈತರಿದ್ದರೆ ಅವರು ಬೆಲೆ ಕುಸಿತದ ಸಮಯದಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಬಲ್ಲರು. ಈಗ ಅದು ಸಾಧ್ಯವಾಗುತ್ತಿಲ್ಲ. ಸೌಲಭ್ಯಗಳ ಕೊರತೆ: ದಾಸ್ತಾನು ಮಳಿಗೆಗಳು, ಒಣಗಿಸುವ ಕಣಗಳು ಮತ್ತು ಶೀತಲೀಕರಣ ಘಟಕಗಳ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ. ಸರ್ಕಾರ ಅದಷ್ಟು ಬೇಗ ಎಪಿಎಂಸಿ ಚುನಾವಣೆಗಳನ್ನು ನಡೆಸಬೇಕು. ಖಾಸಗಿ ವ್ಯಕ್ತಿಗಳ ಹಾವಳಿಯಿಂದಾಗಿ ರೈತರಿಗೆ ಬೆಳೆದ ಬೆಳೆಗೆ ಸಮರ್ಪಕ ಬೆಲೆ ಸಿಗದಂತಾಗಿದೆ. ಅಲ್ಲದೇ, ಸಮಸ್ಯೆಗಳ ಕುರಿತು ಅಧಿಕಾರಿಗಳ ಬಳಿ ಹೇಳಿದರೆ ಕಾನೂನಿನ ನೆಪ ಹೇಳುತ್ತಾರೆ. ಜನಪ್ರತಿನಿಧಿಗಳಿದ್ದರೆ ರೈತರ ಸಮಸ್ಯೆಗೆ ಸ್ಪಂದನೆ ಸಿಗಲಿದೆ ಎಂದು ಹೇಳಿದರು.
ಜಿಲ್ಲಾ, ತಾಲೂಕು ಪಂಚಾಯತ್ ಚುನಾವಣೆ ಬಳಿಕ ಎಪಿಎಂಸಿ ಚುನಾವಣೆ
ರಾಜ್ಯದಲ್ಲಿ ಕಳೆದ ಎಂಟು ವರ್ಷಗಳಿಂದ ಬಾಕಿ ಉಳಿದಿರುವ ಎಪಿಎಂಸಿ (ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ) ಚುನಾವಣೆಯನ್ನು ಶೀಘ್ರದಲ್ಲೇ ನಡೆಸಲು ಸರ್ಕಾರ ಮುಂದಾಗಿದೆ. ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಗಳು ಮುಗಿದ ತಕ್ಷಣ, 1966ರ ಮೂಲ ಕಾಯ್ದೆಯನ್ವಯ ಎಪಿಎಂಸಿಗಳಿಗೂ ಚುನಾವಣೆ ನಡೆಸುವ ಸರ್ಕಾರದ ಈ ನಿರ್ಧಾರವು ಕೃಷಿ ವಲಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ. 2020ರಲ್ಲಿ ಹಿಂದಿನ ಸರ್ಕಾರ ತಂದಿದ್ದ ತಿದ್ದುಪಡಿಗಳು ಎಪಿಎಂಸಿಗಳ ಮೂಲ ಸ್ವರೂಪವನ್ನೇ ಬದಲಿಸಿದ್ದವು.
ಪ್ರಸ್ತುತ ಕಾಂಗ್ರೆಸ್ ಸರ್ಕಾರವು ಹಳೆಯ ಕಾಯ್ದೆಯನ್ನು ಮರುಸ್ಥಾಪಿಸಿರುವುದರಿಂದ, ಎಪಿಎಂಸಿಗಳಿಗೆ ಹಳೆಯ ಅಧಿಕಾರ, ಮಾರುಕಟ್ಟೆ ಶುಲ್ಕ ಸಂಗ್ರಹದ ಹಕ್ಕು ಮತ್ತು ಬಲಿಷ್ಠ ಆಡಳಿತ ಮಂಡಳಿಯನ್ನು ಹೊಂದುವ ಅವಕಾಶ ದೊರೆತಂತಾಗಿದೆ.
ರಾಜಕೀಯ ತಂತ್ರಗಾರಿಕೆ
ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಗಳ ನಂತರ ಎಪಿಎಂಸಿ ಚುನಾವಣೆ ನಡೆಸುವ ಸರ್ಕಾರದ ನಿರ್ಧಾರದ ಹಿಂದೆ ಎರಡು ಪ್ರಮುಖ ಕಾರಣಗಳಿವೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಬಳಸಲಾಗುವ ಮತದಾರರ ಪಟ್ಟಿ ಮತ್ತು ಯಾಂತ್ರಿಕ ವ್ಯವಸ್ಥೆಯನ್ನು ಎಪಿಎಂಸಿ ಚುನಾವಣೆಗಳಿಗೂ ಬಳಸಿಕೊಳ್ಳುವುದು ಸುಲಭವಾಗುತ್ತದೆ. ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಫಲಿತಾಂಶಗಳು ಸ್ಥಳೀಯ ನಾಯಕರ ಬಲಾಬಲವನ್ನು ನಿರ್ಧರಿಸುತ್ತವೆ. ಅದರ ಬೆನ್ನಲ್ಲೇ ಎಪಿಎಂಸಿ ಚುನಾವಣೆ ನಡೆಸುವುದರಿಂದ, ಅಧಿಕಾರಾರೂಢ ಪಕ್ಷಕ್ಕೆ ತನ್ನ ರಾಜಕೀಯ ಪ್ರಭಾವವನ್ನು ಮಾರುಕಟ್ಟೆ ಸಮಿತಿಗಳವರೆಗೂ ವಿಸ್ತರಿಸಲು ಅನುಕೂಲವಾಗುತ್ತದೆ ಎಂದು ಹೇಳಲಾಗಿದೆ.
ವಿಳಂಬಕ್ಕೆ ಮುಕ್ತಿ ಸಾಧ್ಯತೆ
2017ರ ನಂತರ ಚುನಾವಣೆ ನಡೆಯದ ಕಾರಣ, ಸುಮಾರು167 ಎಪಿಎಂಸಿಗಳು ಚುನಾಯಿತ ಪ್ರತಿನಿಧಿಗಳಿಲ್ಲದೆ ಸೊರಗಿದ್ದವು. ಅಧಿಕಾರಿಗಳ ಆಡಳಿತದಲ್ಲಿ ರೈತರ ಧ್ವನಿ ಅಷ್ಟಾಗಿ ಕೇಳಿಸುತ್ತಿರಲಿಲ್ಲ. ಸಚಿವರ ಇತ್ತೀಚಿನ ಹೇಳಿಕೆಯು ಆಡಳಿತಾಧಿಕಾರಿಗಳ ಸುಪರ್ದಿಯಿಂದ ಎಪಿಎಂಸಿಗಳನ್ನು ಮುಕ್ತಗೊಳಿಸಿ, ರೈತ ಪ್ರತಿನಿಧಿಗಳ ಕೈಗೆ ಅಧಿಕಾರ ನೀಡುವ ಭರವಸೆ ನೀಡಿದೆ. ಇದು ಮಾರುಕಟ್ಟೆಗಳಲ್ಲಿ ಪಾರದರ್ಶಕತೆ ಮತ್ತು ರೈತರ ಹಿತರಕ್ಷಣೆಗೆ ಸಹಕಾರಿಯಾಗಲಿದೆ. ಎಪಿಎಂಸಿ ಚುನಾವಣೆಗಳು ಕೇವಲ ರಾಜಕೀಯ ಪ್ರಕ್ರಿಯೆಯಲ್ಲ, ಅವು ರೈತರ ಬದುಕಿನ ಮೇಲೆ ನೇರ ಪರಿಣಾಮ ಬೀರುತ್ತವೆ. ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾದಾಗ ಅಥವಾ ಹಮಾಲಿಗಳ ಸಮಸ್ಯೆ ಎದುರಾದಾಗ ರೈತರು ತಮ್ಮ ಪ್ರತಿನಿಧಿಗಳ ಬಳಿ ದೂರು ನೀಡಬಹುದು. ಸಚಿವ ಶಿವಾನಂದ ಪಾಟೀಲರ ಹೇಳಿಕೆಯು ರೈತರಲ್ಲಿ ಹೊಸ ಭರವಸೆ ಮೂಡಿಸಿದ್ದು, ತಮ್ಮದೇ ಆದ ಆಡಳಿತ ಮಂಡಳಿ ಬರುವುದರಿಂದ ಮಾರುಕಟ್ಟೆಗಳಲ್ಲಿ ಮಧ್ಯವರ್ತಿಗಳ ಹಾವಳಿ ಕಡಿಮೆಯಾಗಬಹುದು ಎಂಬ ನಿರೀಕ್ಷೆಯಿದೆ.
ಎಪಿಎಂಸಿಗಳು 'ವೋಟ್ ಬ್ಯಾಂಕ್' ಕೊಂಡಿ
ಗ್ರಾಮೀಣ ರಾಜಕಾರಣದಲ್ಲಿ ಎಪಿಎಂಸಿಗಳು ಕೇವಲ ಮಾರುಕಟ್ಟೆಗಳಲ್ಲ, ಅವುಗಳನ್ನು 'ಗ್ರಾಮೀಣ ಸಂಸತ್ತು' ಎಂದೇ ಕರೆಯಲಾಗುತ್ತದೆ. ಜಿಲ್ಲಾ ಮತ್ತು ತಾಲೂಕು ಪಂಚಾಯತ್‌ಗಳಷ್ಟೇ ಸಮಾನವಾಗಿ ಎಪಿಎಂಸಿ ಚುನಾವಣೆಗಳು ರಾಜಕೀಯ ಪ್ರಾಮುಖ್ಯತೆ ಪಡೆದಿವೆ. ರಾಜ್ಯದ ಪ್ರತಿಯೊಬ್ಬ ಶಾಸಕ ಅಥವಾ ಸಚಿವರಿಗೆ ತಮ್ಮ ಕ್ಷೇತ್ರದಲ್ಲಿ ಎಪಿಎಂಸಿ ಮೇಲೆ ಹಿಡಿತ ಸಾಧಿಸುವುದು ಅತ್ಯಗತ್ಯವಾಗಿರುತ್ತದೆ. ಎಪಿಎಂಸಿ ಸದಸ್ಯರು ಹಳ್ಳಿಗಳ ರೈತರೊಂದಿಗೆ ನೇರ ಸಂಪರ್ಕ ಹೊಂದಿರುತ್ತಾರೆ. ಈ ಸದಸ್ಯರು ವಿಧಾನಸಭಾ ಚುನಾವಣೆಗಳ ಸಮಯದಲ್ಲಿ ಆಯಾ ಪಕ್ಷದ ಅಭ್ಯರ್ಥಿಗಳಿಗೆ 'ವೋಟ್ ಬ್ಯಾಂಕ್' ಸಿದ್ಧಪಡಿಸುವ ಪ್ರಮುಖ ಕೊಂಡಿಗಳಾಗಿರುತ್ತಾರೆ. ರಾಜ್ಯದ ಅನೇಕ ಪ್ರಭಾವಿ ನಾಯಕರು (ಸಚಿವರು, ಶಾಸಕರು) ತಮ್ಮ ರಾಜಕೀಯ ಜೀವನವನ್ನು ಎಪಿಎಂಸಿ ಸದಸ್ಯರಾಗಿ ಅಥವಾ ಅಧ್ಯಕ್ಷರಾಗಿ ಆರಂಭಿಸಿದವರಾಗಿದ್ದಾರೆ. ಮುಂದಿನ ದಿನದಲ್ಲಿ ರಾಜಕಾರಣಕ್ಕೆ ಬರುವವರಿಗೆ ಎಪಿಎಂಸಿ ಚುನಾವಣೆಯು ವೇದಿಕೆಯಾಗಲಿದೆ.
ಎಪಿಎಂಸಿಯಲ್ಲಿ ರಾಜಕೀಯವು ಕೇವಲ ರೈತರಿಂದ ನಡೆಯುವುದಿಲ್ಲ. ಇಲ್ಲಿ ವರ್ತಕರ ಪಾತ್ರ ದೊಡ್ಡದು. ಅನೇಕ ವರ್ತಕರು ಸ್ವತಃ ರಾಜಕೀಯ ಪಕ್ಷಗಳ ಪದಾಧಿಕಾರಿಗಳಾಗಿರುತ್ತಾರೆ. ವರ್ತಕರು ರೈತರಿಗೆ ಸಾಲ ನೀಡುವುದರಿಂದ, ರೈತರ ಮೇಲೆ ಅವರು ಒಂದು ರೀತಿಯ ಪ್ರಭಾವ ಹೊಂದಿರುತ್ತಾರೆ. ಚುನಾವಣಾ ಸಮಯದಲ್ಲಿ ಈ ಪ್ರಭಾವವನ್ನು ಮತಗಳಾಗಿ ಪರಿವರ್ತಿಸಲು ರಾಜಕೀಯ ಪಕ್ಷಗಳು ಇವರನ್ನು ಬಳಸಿಕೊಳ್ಳುತ್ತವೆ.
ಜಾತಿ ರಾಜಕಾರಣದ ಪ್ರಭಾವ
ಕರ್ನಾಟಕದ ಎಪಿಎಂಸಿಗಳಲ್ಲಿ ಪ್ರಾದೇಶಿಕವಾಗಿ ಪ್ರಬಲವಾಗಿರುವ ಜಾತಿಗಳ ಪ್ರಾಬಲ್ಯ ಹೆಚ್ಚಿರುತ್ತದೆ. ಉತ್ತರ ಕರ್ನಾಟಕದಲ್ಲಿ ಲಿಂಗಾಯತರು, ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗರು ಮತ್ತು ಇತರೆಡೆ ಆಯಾ ಭಾಗದ ಪ್ರಬಲ ಕೃಷಿಕ ಸಮುದಾಯಗಳು ಎಪಿಎಂಸಿಗಳ ಆಡಳಿತ ಮಂಡಳಿಯಲ್ಲಿ ಮೇಲುಗೈ ಸಾಧಿಸಲು ಪ್ರಯತ್ನಿಸುತ್ತವೆ.
ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ನಿಗದಿಪಡಿಸುವಾಗಲೂ ಸರ್ಕಾರದ ಮಟ್ಟದಲ್ಲಿ ದೊಡ್ಡ ಮಟ್ಟದ ರಾಜಕೀಯ ಲಾಬಿ ನಡೆಯುತ್ತದೆ. ಅಲ್ಲದೇ, ಎಪಿಎಂಸಿಗಳು ದೊಡ್ಡ ಮೊತ್ತದ ಹಣಕಾಸಿನ ವಹಿವಾಟು ನಡೆಸುತ್ತವೆ. ಮಾರುಕಟ್ಟೆ ಪ್ರಾಂಗಣದಲ್ಲಿ ರಸ್ತೆ ನಿರ್ಮಾಣ, ಗೋದಾಮುಗಳ ಕಟ್ಟಡ, ಹರಾಜು ಕಟ್ಟೆಗಳ ನಿರ್ವಹಣೆಯಂತಹ ಕೋಟ್ಯಂತರ ರೂಪಾಯಿಗಳ ಕಾಮಗಾರಿಗಳು ನಡೆಯುತ್ತವೆ. ಇವುಗಳ ಟೆಂಡರ್ ಪಡೆಯಲು ರಾಜಕೀಯ ಪ್ರಭಾವದ ಬಳಕೆ ನಡೆಯುತ್ತದೆ. ಮಾರುಕಟ್ಟೆ ಪ್ರಾಂಗಣದಲ್ಲಿ ಮಳಿಗೆಗಳನ್ನು ಅಥವಾ ನಿವೇಶನಗಳನ್ನು ಹಂಚಿಕೆ ಮಾಡುವ ಅಧಿಕಾರ ಆಡಳಿತ ಮಂಡಳಿಗೆ ಇರುತ್ತದೆ. ಇಲ್ಲಿ ತಮ್ಮ ಬೆಂಬಲಿಗರಿಗೆ ಸವಲತ್ತು ಒದಗಿಸುವುದು ದೊಡ್ಡ ರಾಜಕೀಯ ಹಿತಾಸಕ್ತಿಯಾಗಿರುತ್ತದೆ.

