FARMERS SUICIDE | ಎಪಿಎಂಸಿ ಕಾಯ್ದೆ ತಿದ್ದುಪಡಿ ರೈತರ ಬವಣೆಗೆ ಪರಿಹಾರವೇ?
x

FARMERS SUICIDE | ಎಪಿಎಂಸಿ ಕಾಯ್ದೆ ತಿದ್ದುಪಡಿ ರೈತರ ಬವಣೆಗೆ ಪರಿಹಾರವೇ?

ಕಾಂಗ್ರೆಸ್ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಿ ರೈತ ಸ್ನೇಹಿಯಾಗಿಸಿದೆ. ಇದರಿಂದ ರೈತರ ಬವಣೆಗೆ ಪರಿಹಾರ ಕಾಣುವುದೇ ಎನ್ನುವುದು ಎಲ್ಲರ ಪ್ರಶ್ನೆಯಾಗಿದೆ.


ವಿವಾದಿತ ಎಪಿಎಂಸಿ ಕಾಯ್ದೆ ವಿಚಾರ ಇದೀಗ ಮತ್ತೆ ಮುನ್ನಲೆಗೆ ಬಂದಿದೆ. ಬಿಜೆಪಿ ಅವಧಿಯಲ್ಲಿ ಜಾರಿಯಾಗಿದ್ದ ಕಾಯ್ದೆಯನ್ನು ಕಾಂಗ್ರೆಸ್ ಸರ್ಕಾರವು ಕಳೆದ ಅಧಿವೇಶನದಲ್ಲಿ ಹಿಂಪಡೆದಿದೆ. ಇದೀಗ ಮತ್ತೆ ಮೊದಲಿನ ಎಪಿಎಂಸಿ ಕಾಯ್ದೆಗೆ ಕೆಲವು ತಿದ್ದುಪಡಿ ತಂದು ಜಾರಿ ಮಾಡಲು ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿದೆ.

ಕೇಂದ್ರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಾಗ ಕೇಂದ್ರದ ನಾಯಕರನ್ನು ಮೆಚ್ಚಿಸಲು ಅಂದಿನ ಕರ್ನಾಟಕದ ಬಿಜೆಪಿ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಿ ರಾಜ್ಯದ ರೈತರನ್ನು ಸಂಕಷ್ಟಕ್ಕೆ ನೂಕಿತು. ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಲು ಈ ಕಾಯ್ದೆ ಜಾರಿಗೊಳಿಸಿದ್ದೂ ಒಂದು ಕಾರಣ ಎನ್ನುವುದು ರೈತರ, ಕೃಷಿ ತಜ್ಞರ ಅನಿಸಿಕೆ.

ಈಗ ಮತ್ತೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಿದೆ. ತಿದ್ದುಪಡಿಯಾದ ಈ ಮಸೂದೆ, ರೈತರ ಬವಣೆಗೆ ಪರಿಹಾರವಾಗುವುದೆ ಎನ್ನುವುದು ಎಲ್ಲರ ಪ್ರಶ್ನೆಯಾಗಿದೆ.

ಈ ಹಿಂದಿನ ರಾಜ್ಯ ಬಿಜೆಪಿ ಸರ್ಕಾರವು ಜಾರಿಗೊಳಿಸಿದ್ದ ರೈತ ವಿರೋಧಿ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಗೋ ಹತ್ಯೆ ನಿಷೇಧ ಕಾಯ್ದೆ ಇವೆಲ್ಲವೂ ರೈತರಿಗೆ ಅನಾನುಕೂಲವೇ ಆಗಿವೆ.

ಈ ಬಗ್ಗೆ ದ ಫೆಡರಲ್-ಕರ್ನಾಟಕದ ಜೊತೆ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಅವರು, ʼʼರಾಜ್ಯದಲ್ಲಿ ಬಿಜೆಪಿ ಸರ್ಕಾರವು ತನ್ನ ಆಡಳಿತಾವಧಿಯಲ್ಲಿ ಅನೇಕ ರೈತ ವಿರೋಧಿ ಕಾರ್ಯಗಳನ್ನು ಮಾಡಿದೆ. ಹೊಸ ಸರ್ಕಾರವು ಆ ತಪ್ಪುಗಳನ್ನು ಮಾಡಬಾರದು. ರೈತ ಪರವಾದ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಕ್ಕೊತ್ತಾಯ ಮಂಡಿಸಿದ್ದೇವೆ. ರೈತರ ಕೂಗನ್ನು ಅರ್ಥೈಸಿಕೊಳ್ಳುತ್ತಾರೆಂದು ನಂಬಿದ್ದೇವೆʼʼ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ʼʼಬಿಜೆಪಿ ಅವಧಿಯಲ್ಲಿ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಉಳುವವನೇ ಭೂ ಒಡೆಯ ಎಂಬ ಮಹತ್ವಾಕಾಂಕ್ಷೆಯ ಉದ್ದೇಶಕ್ಕೆ ಕೊಡಲಿ ಪೆಟ್ಟು ನೀಡಿ ಉಳ್ಳವನ ಪರವಾಗಿ ನಿರ್ಧಾರ ಪ್ರಕಟಿಸಿದ್ದು, ಯೋಜನೆಯ ಮೂಲ ಉದ್ದೇಶ ಮರೆಮಾಚಿದೆ. ಕಾರ್ಪೊರೇಟ್‌ ಪರವಾದ ಕಾಯ್ದೆ ಜಾರಿ ಮಾಡಿದೆ. ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ ಜಾರಿಗೆ ತಂದಿರುವುದರಿಂದ ಹೈನುಗಾರಿಕೆಗೆ ತೊಂದರೆಯಾಗಿದೆʼʼ ಎಂದರು.

ʼʼ2013ರ ಭೂಸ್ವಾಧೀನ ಕಾಯ್ದೆ ರೈತ ವಿರೋಧಿಯಾಗಿದ್ದು, ಅದನ್ನು ತಿದ್ದುಪಡಿ ಮಾಡಿ ರೈತಪರ ನಿಯಮ ರೂಪಿಸಬೇಕು. ಸಂಘ ಪರಿವಾರದವರಿಗೆ ನೀಡಿರುವ ಭೂಮಿಯನ್ನು ವಾಪಸ್‌ ಪಡೆಯಬೇಕುʼʼ ಎಂದು ಅವರು ಆಗ್ರಹಿಸಿದರು.

ದ ಫೆಡರಲ್ ಕರ್ನಾಟಕದೊಂದಿಗೆ ಮಾತನಾಡಿದ ಖೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷರಾದ ಡಾ. ಪ್ರಕಾಶ್ ಕಮ್ಮರಡಿ ಅವರು, ʼʼಮೊದಲಿದ್ದ ಎಪಿಎಂಸಿ ವ್ಯವಸ್ಥೆ ಸರಿಯಾಗಿತ್ತು ಎಂದು ಹೇಳಲಾಗುವುದಿಲ್ಲ, ಆದರೆ ಅದು ರೈತರಿಗೆ ಸ್ಪರ್ಧಾತ್ಮಕ ಬೆಲೆ ತಂದು ಕೊಡುತ್ತಿತ್ತು ಎನ್ನುವ ಕೊನೆಯ ಆಸೆಯಾಗಿತ್ತುʼʼ ಎಂದರು.

ʼʼಎಪಿಎಂಸಿ ಎನ್ನುವುದು ಆಡಳಿತಾತ್ಮಕ ವ್ಯವಸ್ಥೆ, ಅಲ್ಲಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವಂತಹ ವ್ಯಾಪರಸ್ಥರು, ಸಣ್ಣ ರೈತರು, ದೊಡ್ಡ ರೈತರು ಎಲ್ಲ ಸೇರಿ ತಮ್ಮದೆ ಆದ ಮಾರಾಟ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಈ ಎಪಿಎಂಸಿಗಳು ಸರ್ಕಾರದ ಮೇಲ್ವಿಚಾರಣೆಯಲ್ಲಿ ಕಾರ್ಯ ನಿರ್ವಹಿಸುತ್ತವೆ. ಅಲ್ಲಿ ಟೆಂಡರ್ ವ್ಯವಸ್ಥೆ ಮಾಡಲಾಗಿರುತ್ತದೆ. ನಮ್ಮ ರಾಜ್ಯ ಒಂದು ಹೆಜ್ಜೆ ಮುಂದೆ ಹೋಗಿ ಆನ್ಲೈನ್ ಟ್ರೇಡಿಂಗ್ ಕೂಡ ತಂದಿತ್ತು. ಹೊರಗಿನ ವ್ಯಾಪರಸ್ಥರ ಜೊತೆ ರೈತರು ವ್ಯವಹಾರ ಮಾಡಿದರೆ ಅಲ್ಲಿ ತೂಕದಲ್ಲಿ ಮೋಸ ನಡೆಯುವ ಸಾಧ್ಯತೆ ಇರುತ್ತದೆ. ಆದರೆ ಎಪಿಎಂಸಿಯಲ್ಲಿ ಎಲೆಕ್ಟ್ರಾನಿಕ್ ಮಷಿನ್ ಇರುವುದರಿಂದ ಆ ಸಮಸ್ಯೆ ಆಗುವುದಿಲ್ಲ. ಪೇಮೆಂಟ್ ಕೂಡ ಸರಿಯಾದ ಕ್ರಮದಲ್ಲಿ ಆಗುತ್ತದೆ. ಇದೆಲ್ಲವೂ ಸರ್ಕಾರದ ಹಿಡಿತದಲ್ಲಿ ಇರುತ್ತದೆ. ಬಿಜೆಪಿ ಸರ್ಕಾರ ಬಂದ್ಮೇಲೆ ಅಂಬಾನಿ, ಅದಾನಿ, ಪತಂಜಲಿ ಕಂಪನಿಗಳಿಗಾಗಿ ಎಪಿಎಂಸಿ ಕಾಯ್ದೆಯಲ್ಲಿನ 8ನೇ ಪರಿಚ್ಛೇದವನ್ನು ತಗೆದರು. 8 ಪರಿಚ್ಛೇದ ಪ್ರಕಾರ, ಎಪಿಎಂಸಿ ವ್ಯಾಪ್ತಿಯ ರೈತರಿಂದ ನೇರವಾಗಿ ಖರೀದಿ ಮಾಡಿದರೆ ಅದು ಅಕ್ರಮ ಎಂದು ಕರಿಸಿಕೊಳ್ಳುತ್ತದೆ. ಅದನ್ನು ತೆಗೆಯಬೇಕು ಎಂದು ಮೋದಿ ಸರ್ಕಾರ ಹೇಳಿತು. ಅದರಂತೆ ನಮ್ಮ ರಾಜ್ಯದಲ್ಲಿದ್ದ ಆಗಿನ ಬಿಜೆಪಿ ಸರ್ಕಾರ 8ನೇ ಪರಿಚ್ಛೇದವನ್ನು ತಗೆಯಿತು. ಅದನ್ನ ಈಗಿನ ಕಾಂಗ್ರೆಸ್ ಸರ್ಕಾರ ಮತ್ತೆ ಸೇರಿಸುತ್ತಿದೆ. ಅದರೊಟ್ಟಿಗೆ ಕೆಲವು ಬದಲಾವಣೆಗಳನ್ನು ತರುತ್ತೇವೆ ಎಂದು ಹೇಳುತ್ತಿದೆ" ಎಂದರು.

"ಹಳೆಯ ಎಪಿಎಂಸಿಯಿಂದ ರೈತರಿಗೆ ದೊಡ್ಡ ಲಾಭವೇನು ಇರಲಿಲ್ಲ. ಆಗ ಛಾವಣಿ ಸೋರುತ್ತಿತ್ತು, ಅದನ್ನ ರಿಪೇರಿ ಮಾಡುವ ಬದಲಿಗೆ ಬಿಜೆಪಿ ಸರ್ಕಾರ ಆ ಚಾವಣಿಯನ್ನೇ ತಗೆಯುವಂತಹ ಕೆಲಸ ಮಾಡಿತ್ತು. ಇದೀಗ ಕಾಂಗ್ರೆಸ್ ಸರ್ಕಾರ ಮತ್ತೆ ಹಳೆಯ ಸೋರುವ ಚಾವಣಿ ತಂದು ಅಲ್ಪಸ್ವಲ್ಪ ಸರಿಪಡಿಸಲು ಮುಂದಾಗಿದೆ" ಎಂದು ಪ್ರಕಾಶ್‌ ಅಭಿಪ್ರಾಯಪಟ್ಟರು.

ಎಪಿಎಂಸಿಯಲ್ಲಿನ ಸಮಸ್ಯೆಗಳ ಕುರಿತು ಮಾತನಾಡಿದ ಪ್ರಕಾಶ್ ಅವರು, "ಎಪಿಎಂಸಿಯಲ್ಲಿ ಭ್ರಷ್ಟಾಚಾರ ಇದೆ. ರೈತರಿಂದ ತೆರಿಗೆ ಸಂಗ್ರಹಿಸಬಾರದು ಎನ್ನುವ ನಿಯಮ ಇದೆ. ಆದರೆ ವ್ಯಾಪರಸ್ಥರ ತೆರಿಗೆಯನ್ನೂ ಸೇರಿಸಿ ರೈತರ ಮೇಲೆ ಹಾಕಲಾಗುತ್ತದೆ. ಎಪಿಎಂಸಿಯಲ್ಲಿ ಹೆಚ್ಚಾಗುತ್ತಿರುವ ರಾಜಕಾರಣ ಇವೆಲ್ಲವೂ ರಿಪೇರಿ ಆಗಬೇಕಿದೆ. ಎಪಿಎಂಸಿ ಎನ್ನುವುದು ಒಂದು ಭರವಸೆಯಾಗಿತ್ತು. ಈಗ ಬೆಂಬಲ ಬೆಲೆಯೂ ಇಲ್ಲ; ರೈತರಿಗೆ ಅನಕೂಲಕರವಾಗುವ ವಾತವಾರಣ ದೇಶದಲ್ಲಿ ಇಲ್ಲ ಎನ್ನುವುದು ನನ್ನ ಒಟ್ಟಾರೆ ಅಭಿಪ್ರಾಯ" ಎಂದು ಪ್ರಕಾಶ್ ಕಮ್ಮರಡಿ ತಿಳಿಸಿದರು.

Read More
Next Story